ಬೆಳಿಗ್ಗೆ-ಸಂಜೆ ಮಹಿಳೆಯರನ್ನು ಪೀಡಿಸುತ್ತಿದ್ದ ಬೀದಿಕಾಮುಕನ ಬಂಧನ/ ಮಹಿಳೆಯರ ದೇಹ ಸ್ಪರ್ಶಿಸಿ ಪರಾರಿಯಾಗುತ್ತಿದ್ದ/ ಆರೋಪಿಯ ಮೇಲೆ ಹಲವು ಸಾರಿ ದೂರು ದಾಖಲಾಗಿತ್ತು.
ಮಣಿಪಾಲ[ನ. 16] ಕಳೆದ ಹಲವಾರು ದಿನಗಳಿಂದ ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯರನ್ನು ಪೀಡಿಸುತ್ತಿದ್ದ ಬೀದಿ ಕಾಮುಕನನ್ನು ಕೊನೆಗೂ ಬಂಧಿಸಲಾಗಿದೆ.
ವಿದ್ಯಾರತ್ನನಗರ, ಪೆರಂಪಳ್ಳಿರಸ್ತೆ, ಈಶ್ವರನಗರ, ಪ್ರಿಂಟಿಂಗ್ ಪ್ರೆಸ್ ರಸ್ತೆಯಲ್ಲಿ ಸಂಜೆ ಮತ್ತು ಮುಂಜಾನೆ ಒಂಟಿಯಾಗಿ ತಿರುಗಾಡುತ್ತಿದ್ದ ವಿದ್ಯಾರ್ಥಿನಿಯರನ್ನು ಹಾಗೂ ಮಹಿಳೆಯರನ್ನು ಪೀಡಿಸಿ, ಮಹಿಳೆಯರ ದೇಹ ಸ್ಪರ್ಶಿಸಿ ಆರೋಪಿ ಬೈಕಿನಲ್ಲಿ ಪರಾರಿಯಾಗುತ್ತಿದ್ದ, ಮಹಿಳೆಯರಿಗೆ ಮತ್ತು ಪೊಲೀಸರಿಗೆ ತಲೆನೋವಾಗಿದ್ದ ಆರೋಪಿ ಇದೀಗ ಬಲೆಗೆ ಬಿದ್ದಿದ್ದಾನೆ.
ಆರೋಪಿ ಹೆರ್ಗಾ ಗ್ರಾಮದ ಸಣ್ಣಕ್ಕಿಬೆಟ್ಟು ನಿವಾಸಿ ದೀಪಕ್ ನಾಯಕ್ ಎಂದು ಗುರುತಿಸಲಾಗಿದೆ. ಈತನ ಪೀಡನೆಯಿಂದ ಹಲವಾರು ದೂರುಗಳು ಮಣಿಪಾಲ ಠಾಣೆಯಲ್ಲಿ ದಾಖಲಾಗಿದ್ದು, ಈ ಬಗ್ಗೆ ವಿಶೇಷ ತಂಡ ರಚನೆ ಮಾಡಲಾಗಿತ್ತು. ಶುಕ್ರವಾರ ಈತನ ಬಗ್ಗೆ ಖಚಿತ ಮಾಹಿತಿ ಪಡೆದ ಮಣಿಪಾಲ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಯವರು ಆತನನ್ನು ಈಶ್ವರನಗರದಲ್ಲಿ ಬಂಧಿಸಿ, ಆತ ಪರಾರಿಯಾಗುತ್ತಿದ್ದ ಬೈಕನ್ನು ಜಪ್ತಿ ಮಾಡಿದ್ದಾರೆ.
ಬಟ್ಟೆ ಖರೀದಿಗೆಂದು ಬಂದು ಮಾಲಕಿಯ ತಬ್ಬಿಕೊಂಡ!
ಈತ ಸೆಂಟ್ರಲ್ ಇನ್ ವೆಸ್ಟಿಗೇಷನ್ ಸೆಕ್ಯೂರಿಟಿ ಸರ್ವಿಸ್ ಎಂಬ ಸಂಸ್ಥೆಯ ಮೂಲಕ ಉಡುಪಿಯ ಕೆನರಾ ಬ್ಯಾಂಕಿನ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಈತ ಪ್ರತಿದಿನ ರಾತ್ರಿ ತನ್ನ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಹೊರಟು ವಿದ್ಯಾರತ್ನ ನಗರ, ಪೆರಂಪಳ್ಳಿ ರಸ್ತೆ, ಈಶ್ವರನಗರದ ಬೀದಿ ದೀಪ ಉರಿಯದ ಪ್ರದೇಶಗಳಲ್ಲಿ ಚಲಿಸುತ್ತಾ ಒಂಟಿಯಾಗಿ ಮಾರ್ಗ ಮಧ್ಯೆ ಸಿಗುವ ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಪೀಡಿಸಿ, ದೇಹ ಸ್ಪರ್ಶಿಸಿ ಅಲ್ಲಿಂದ ಪರಾರಿಯಾಗುತ್ತಿದ್ದ.
ನಂತರ ರಾತ್ರಿ ಉಡುಪಿಗೆ ಬಂದು ಸೆಕ್ಯೂರಿಟಿ ಕೆಲಸ ಮುಗಿಸಿ ಬೆಳಿಗ್ಗೆ 6 ಗಂಟೆಗೆ ಮತ್ತೇ ಮಣಿಪಾಲದ ಪ್ರೆಸ್ ರಸ್ತೆಯಲ್ಲಿ ಬೆಳಗಿನ ಜಾವ ವಾಕ್ ಮಾಡುವ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗುತ್ತಿದ್ದ. ಈ ಬಗ್ಗೆ ಆರೋಪಿಯು ವಿಚಾರಣೆ ವೇಳೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಉಡುಪಿ ಎಸ್ಪಿ ನಿಷಾ ಜೇಮ್ಸ್ ತಿಳಿಸಿದ್ದಾರೆ.