* ಐತಿಹಾಸಿಕ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಕಾರ್ಣಿಕ ನುಡಿಯುತ್ತಿದ್ದ ಮಾಲತೇಶಪ್ಪ
* 31 ವರ್ಷಗಳ ಕಾಲ ಮೈಲಾರದ ಡೆಂಕಣ ಮರಡಿಯಲ್ಲಿ ದೈವವಾಣಿಯನ್ನೇ ನಂಬಿದ್ದ ಗೊರವಯ್ಯ
* ಮಾಲತೇಶಪ್ಪ ಅವರ ಅಗಲಿಕೆಗೆ ಗಣ್ಯರ ಸಂತಾಪ
ಹೂವಿನಹಡಗಲಿ(ಜೂ.23): ನಾಡಿನ ಐತಿಹಾಸಿಕ ಜಾತ್ರೆಯಲ್ಲಿ ಕಾರ್ಣಿಕ ನುಡಿಯುತ್ತಿದ್ದ ಮಾಲತೇಶಪ್ಪ ಕಾರ್ಣಿಕದ(67) ಮಂಗಳವಾರ ಬೆಳಗಿನ ಜಾವ ನಿಧನರಾದರು.
ಈ ಹಿಂದೆ 31 ವರ್ಷಗಳ ಕಾಲ ಮೈಲಾರದ ಡೆಂಕಣ ಮರಡಿಯಲ್ಲಿ ದೈವವಾಣಿ ಎಂದು ನಂಬಿರುವ ನುಡಿಯನ್ನು ತನ್ನ ಕಂಚಿನ ಕಂಠದಿಂದ ನುಡಿಯುತ್ತಿದ್ದರು. ಹಲವು ವರ್ಷಗಳಿಂದ ಪಾರ್ಶ್ವವಾಯು ಪೀಡಿತನಾಗಿದ್ದ ಮಾಲತೇಶಪ್ಪ, ಕಳೆದ 6- 7 ವರ್ಷಗಳಿಂದ ಕಾರ್ಣಿಕ ನುಡಿ ಹೇಳುವುದನ್ನು ನಿಲ್ಲಿಸಿದ್ದರು. ಬಳಿಕ ದೇವಸ್ಥಾನದ ವಂಶ ಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್, ಇವರ ಸಂಬಂಧಿಕರಿಗೆ ಕಾರ್ಣಿಕ ನುಡಿಯುವ ದೀಕ್ಷೆ ನೀಡಿದ್ದರು.
undefined
ಕಾರ್ಣಿಕಕ್ಕೆ ಮುನ್ನವೇ ಕಳಚಿ ಬಿದ್ದ ತ್ರಿಶೂಲ, ಮೈಲಾರ ಲಿಂಗೇಶ್ವರ ಜಾತ್ರೆಯಲ್ಲಿ ಅಪಶಕುನ.?
ಇವರ ಕುಟುಂಬ ಬಹಳ ಸಂಕಷ್ಟಕ್ಕೆ ಸಿಲುಕಿದಾಗ ನಾಡಿನ ಭಕ್ತರೆಲ್ಲ ಸಹಾಯಹಸ್ತ ಚಾಚುವ ಮೂಲಕ ಮನೆ ನಿರ್ಮಿಸಿಕೊಳ್ಳಲು ನೆರವಾಗಿದ್ದರು. ಆದರೆ ಮನೆ ಪೂರ್ಣಗೊಳ್ಳುವ ಮೊದಲೇ ಮಾಲತೇಶಪ್ಪ ಇಹಲೋಕ ತ್ಯಜಿಸಿದ್ದಾರೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ.
ಮೈಲಾರಲಿಂಗೇಶ್ವರ ದೇವಸ್ಥಾನದ ವಂಶ ಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್, ಅರ್ಚಕ ಪ್ರಮೋದ್ ಭಟ್, ಶಾಸಕ ಪಿ.ಟಿ. ಪರಮೇಶ್ವರನಾಯ್ಕ, ಮಾಜಿ ಶಾಸಕ ಬಿ. ಚಂದ್ರನಾಯ್ಕ, ನಂದಿಹಳ್ಳಿ ಹಾಲಪ್ಪ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.