ನಾಯಿಗಳಿಗೆ ಬಿಸ್ಕತ್ ತಯಾರಿಸುವ ರಾಜ್ಯದ ಮೊದಲ ಮಾಂಸ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಗುದ್ದಲಿಪೂಜೆ

By Suvarna News  |  First Published Jul 4, 2022, 10:59 AM IST

ಪರಿಸರ ಮಾಲಿನ್ಯಕ್ಕೆ ಕಾರಣವಾಗಿದ್ದ ಮಾಂಸ ತ್ಯಾಜ್ಯವನ್ನು ಸಂಸ್ಕರಿಸಿ ಗೊಬ್ಬರ ಮತ್ತು ನಾಯಿಗಳಿಗೆ ಬಿಸ್ಕತ್ ತಯಾರಿಸುವ  ರಾಜ್ಯದಲ್ಲೇ ಮೊದಲ ಮಾಂಸ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ   ಗುದ್ದಲಿಪೂಜೆ ನಡೆದಿದೆ.


ವರದಿ : ಟಿ.ಮಂಜುನಾಥ್, ಹೆಬ್ಬಗೋಡಿ ಏಷ್ಯಾನೆಟ್ ಸುವರ್ಣನ್ಯೂಸ್

ಕೆ.ಆರ್.ಪುರ (ಜು.4): ಪರಿಸರ ಮಾಲಿನ್ಯಕ್ಕೆ ಕಾರಣವಾಗಿದ್ದ ಮಾಂಸ ತ್ಯಾಜ್ಯವನ್ನು ಸಂಸ್ಕರಿಸಿ ಗೊಬ್ಬರ ಮತ್ತು ನಾಯಿಗಳಿಗೆ ಬಿಸ್ಕತ್ ತಯಾರಿಸುವ  ರಾಜ್ಯದಲ್ಲೇ ಮೊದಲ ಮಾಂಸ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ  ಶಾಸಕ ಅರವಿಂದ ಲಿಂಬಾವಳಿ ಗುದ್ದಲಿಪೂಜೆ ನೆರವೇರಿಸಿದರು.

Tap to resize

Latest Videos

ನಂತರ ಮಾತನಾಡಿದ ಅವರು, ಬಾನಾ ಎಕೋವರ್ಕ್ ಎಂಬ ಕಂಪನಿ ಮಾಂಸದಂಗಡಿಗಳಲ್ಲಿ ಶೇಖರಣೆಯಾಗುವ ತ್ಯಾಜ್ಯವನ್ನು ಸಂಸ್ಕರಿಸುವ ಘಟಕದ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದು, ದಿನಕ್ಕೆ 5 ಟನ್ ನಷ್ಟು ಮಾಂಸ ತ್ಯಾಜ್ಯವನ್ನು ಸಂಸ್ಕರಣೆ ಮಾಡಲಿದೆ.
ಮಹದೇವಪುರ ಕ್ಷೇತ್ರದ ಕಣ್ಣೂರು ಪಂಚಾಯಿತಿಯ ಹೊಸೂರು ಬಂಡೆಯಲ್ಲಿ ಈ ಮಾಂಸದ ಸಂಸ್ಕರಣಾ ಘಟಕ ಸ್ಥಾಪನೆ ಮಾಡಲಾಗುವುದು ಎಂದರು.

ಮಹದೇವಪುರ ಕ್ಷೇತ್ರದಲ್ಲಿ ಶೇ.100 ರಷ್ಟು ಮಾಂಸದ ತ್ಯಾಜ್ಯ ಸಮಸ್ಯೆಯನ್ನು ಮುಕ್ತಗೊಳಿಸುವ ಯೋಜನೆ ಇದಾಗಿದ್ದು, ಈ ಘಟಕ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಮಾದರಿಯಾಗಲಿದೆ.

ಕ್ಷೇತ್ರದದಲ್ಲಿರುವ ಮಾಂಸದ ಅಂಗಡಿಗಳಿಗೆ ಬಾನಾ ಎಕೋವರ್ಕ್ಸ್ ಕಂಪನಿಯ ಕೋಲ್ಡ್ ಸ್ಟೋರ್ ವಾಹನಗಳು ಪ್ರತೀದಿನ ತೆರಳಿ ಮಾಂಸ ತ್ಯಾಜ್ಯವನ್ನು ಸಂಗ್ರಹಿಸಲಾಗುವುದು ಮತ್ತು ಇದಕ್ಕೆ ಯಾವುದೇ ರೀತಿಯಲ್ಲಿ ಹಣ ನೀಡುವಂತಿಲ್ಲ ಎಂದರು.

ಕೆಜಿಎಫ್‌: ತಂದೂರಿ ಚಿಕನ್‌ನಲ್ಲಿ ಹುಳು, ಕಕ್ಕಾಬಿಕ್ಕಿಯಾದ ಗ್ರಾಹಕ..!
  
ಮಾಂಸತ್ಯಾಜ್ಯದಿಂದ ಪರಿಸರಕ್ಕೆ ಹೆಚ್ಚಿನ ಹಾನಿ ಸಂಭವಿಸುತ್ತಿದ್ದು ಅದನ್ನು ತಪ್ಪಿಸುವ ಉದ್ದೇಶದಿಂದ ಸಂಸ್ಕರಣ ಘಟಕ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿದೆ. ಮಹದೇವಪುರ ಕ್ಷೇತ್ರದ ಗ್ರಾಮಾಂತರ ಭಾಗದಲ್ಲಿ ಸುಮಾರು ೨೨೦ ಮಾಂಸದ ಮಳಿಗೆಗಳಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಮಳಿಗೆಗಳಿವೆ. ಈ ಮಳಿಗೆಗಳು ಉತ್ಪತ್ತಿಯಾಗುವ ತ್ಯಾಜ್ಯವನ್ನು ಕೆರೆಯಂಗಳ, ರಸ್ತೆಬದಿ,ಚರಂಡಿ, ಕುಂಟೆಗಳಲ್ಲಿ ಬಿಸಾಡಿ ಪರಿಸರ ಹಾಳು ಮಾಡಲಾಗುತ್ತಿತ್ತು. ಇದೀಗ ಸಂಸ್ಕರಣಾ ಘಟಕದಿಂದ ಪರಿಸರ ನೈರ್ಮಲ್ಯ ಕಾಪಾಡಲು ಅನುಕೂಲವಾಗಲಿದೆ.

 ಈಗಾಗಲೇ ಬೆಳ್ಳಂದೂರು, ಬಿದರಹಳ್ಳಿ, ರಾಂಪುರ, ವರ್ತೂರು ಕೆರೆ ಸೇರಿದಂತೆ ಮಹದೇವಪುರ ಕ್ಷೇತ್ರದ ಹಲವು ಭಾಗಗಳಲ್ಲಿ ಈ ರೀತಿ ಮಾಂಸ ತ್ಯಾಜ್ಯ ಎಸೆದು ಪರಿಸರ ಹಾಳು ಮಾಡಿರುವುದನ್ನು ನೋಡಿದ್ದೇವೆ ಎಂದರು.

ಮಾಂಸ ತ್ಯಾಜ್ಯದಿಂದ ನಾಯಿಗಳಿಗೆ ಬಿಸ್ಕತ್  ತಯಾರಿಕೆ: ಮಹದೇವಪುರ ಕ್ಷೇತ್ರದಲ್ಲಿ ಉತ್ಪತ್ತಿಯಾಗವ ಎಲ್ಲಾ ಮಾಂಸದ ತ್ಯಾಜ್ಯವನ್ನು‌ ಸಂಸ್ಕರಣಾ ಘಟಕದಲ್ಲಿ ವೈಜ್ಞಾನಿಕವಾಗಿ ಮೂರು ವಿಭಾಗದಲ್ಲಿ ಪ್ರಕ್ರಿಯೆ ನಡೆದು ನಾಯಿಗಳಿಗೆ ನೀಡುವ ಆಹಾರದ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಆ ಕಂಪನಿಗಳಿಗೆ ರಾ ಫುಡ್(ಪ್ರೋಟೀನ್ ಒಳಗೊಂಡ) ಅನ್ನು  ನೀಡಲಾಗುತ್ತದೆ. ಇದರಿಂದ ನಾಯಿಗಳಿಗೆ ನೀಡುವ ಬಿಸ್ಕೆಟ್ ತಯಾರಿಕೆಯಲ್ಲಿ ಉತ್ತಮವಾದ ಪ್ರೋಟೀನ್‌ನೊಂದಿಗೆ ಬೆರೆಯಲಿದೆ. ಇನ್ನು ಐದೇ ತಿಂಗಳುಗಳಲ್ಲಿ 20 ಟನ್ ಪ್ರಾಣಿ ತ್ಯಾಜ್ಯ ನಿರ್ವಹಣೆ ಕಾರ್ಯ ಆರಂಭವಾಗಲಿದ್ದು, ಕ್ರಮೇಣವಾಗಿ ಅದನ್ನು 60 ಟನ್ ಸಾಮರ್ಥ್ಯಕ್ಕೆ ಹೆಚ್ಚಿಸಲಾಗುವುದು. ಒಂದೇ ಬಾರಿ 5 ಟನ್ ತ್ಯಾಜ್ಯವನ್ನು ಅನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿರುತ್ತದೆ ಎಂದರು.

ಎರಡೂವರೆ ಎಕರೆ ಜಾಗದಲ್ಲಿ ಸಂಸ್ಕರಣಾ ಘಟಕ: ಕಣ್ಣೂರು ಪಂಚಾಯಿತಿಯ ಹೊಸೂರು ಬಂಡೆಯಲ್ಲಿ ಸುಮಾರು ಎರಡೂವರೆ ಎಕರೆ ಜಾಗದಲ್ಲಿ ಕಸ ಸಂಸ್ಕರಣಾ ಘಟಕವನ್ನು ನಿರ್ಮಾಣ ಮಾಡಲಾಗಿದ್ದು,  ಅದರಲ್ಲಿ ೨೦ ಗುಂಟೆ ಜಾಗದಲ್ಲಿ ಬಾನಾ ಎಕೋವರ್ಕ್ಸ್ ಕಂಪನಿಯಿಂದ  ಮಾಂಸ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಕಾಮಗಾರಿ ಆರಂಭಿಸಲಾಗಿದೆ. ಕಣ್ಣೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ೧೨ ಗ್ರಾಮಗಳ ಕಸದ ಸಂಸ್ಕರಣೆಯನ್ನು ಈ ಘಟಕದಲ್ಲಿ ಮಾಡಲಾಗುತ್ತದೆ. 

ಚಾಮರಾಜನಗರ: ಕೊನೆಗೂ ಸಿಕ್ಕಿಬಿದ್ದ ಹುಲಿರಾಯ, ನಿಟ್ಟುಸಿರು ಬಿಟ್ಟ ಜನತೆ..!

ಪ್ರಮುಖ ಅಂಶಗಳು
1. 60 ಎಂಟಿ ಮಾಂಸ ತ್ಯಾಜ್ಯ ಸಂಸ್ಕರಣಾ ಘಟಕ
2. ಬಾನಾ ಎಕೋವರ್ಕ್ಸ್ನಿಂದ ಪಿಪಿಪಿ ಮಾದರಿ ನಿರ್ಮಾಣ
3. ತಲಾ 20 ಎಂಟಿ ಸಾಮರ್ಥ್ಯದ ಘಟಕಗಳಾಗಿ ಮೂರು ಹಂತದಲ್ಲಿ ಅಭಿವೃದ್ಧಿ
4. ಮಾಂಸದ ಅಂಗಡಿಗಳಿಂದ ಉಚಿತವಾಗಿ ಸಂಗ್ರಹ
5. ತ್ಯಾಜ್ಯಗಳಿಂದ ವೈಜ್ಞಾನಿಕವಾಗಿ ಪ್ರಾಣಿಕಗಳ ಆಹಾರ ತಯಾರಿಕೆ

ಸಂಸ್ಕರಣಾ ಘಟಕ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಂಗಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ಗ್ರಾಮಾಂತರ ಅಧ್ಯಕ್ಷ ನಟರಾಜ್, ಕಣ್ಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮುನಿ ಅಕ್ಕಯ್ಯಮ್ಮ, ಉಪಾಧ್ಯಕ್ಷರಾದ ಅಶೋಕ್, ಕೆ.ವಿ. ನಾಗರಾಜ್ ಮತ್ತಿತರರು ಇದ್ದರು.

click me!