ಚಿಕ್ಕಮಗಳೂರು (ಡಿ.18): ಚಿಕ್ಕಮಗಳೂರು ಜಿಲ್ಲಾ ಬಿಜೆಪಿಯಲ್ಲಿ (BJP) ಮೇಜರ್ ಸರ್ಜರಿ ಮಾಡಲಾಗಿದೆ. ಇದಕ್ಕೆ ಕಾರಣವಾಗುತ್ತಿರುವುದು ಇತ್ತೀಚೆಗಷ್ಟೆ ನಡೆದ ವಿಧಾನ ಪರಿಷತ್ ಚುನಾವಣೆ (MLC Election). ವಿಧಾನ ಪರಿಚತ್ ಚುನಾವಣೆಯಲ್ಲಿ ಕೇವಲ 6 ಮತಗಳಿಂದ ಬಿಜೆಪಿ ಗೆಲುವು ಸಾಧಿಸಿದ್ದು ಈ ನಿಟ್ಟಿನಲ್ಲಿ ಸರ್ಜರಿ ನಡೆಸಲಾಗುತ್ತಿದೆ. ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಪ್ರಾಣೇಶ್ ಗೆ ಪ್ರಯಾಸದ ಗೆಲುವು ಸಿಕ್ಕಿತ್ತು. ಇದೀಗ ಈ ನಿಟ್ಟಿನಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದವರಿಗೆ ಕೊಕ್ ನೀಡಲಾಗುತ್ತಿದೆ. ಜಿಲ್ಲಾ ಬಿಜೆಪಿಯಲ್ಲಿ (BJP) ಮೇಜರ್ ಸರ್ಜರಿ ನಡೆಯುತ್ತಿದ್ದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸ್ಥಾನದಿಂದ ನಿರಂಜನ್ ಗೆ ಗೇಟ್ ಪಾಸ್ ನೀಡಲಾಗುತ್ತಿದೆ. ಅಲ್ಲದೇ ರೈತ ಮೋರ್ಚಾ ಕಾರ್ಯದರ್ಶಿ ಸ್ಥಾನದಿಂದ ಪೂರ್ಣೇಶ್ ಮೈಲಿಮನೆ ವಜಾ ಮಾಡಲಾಗಿದೆ.
ಜಿಲ್ಲಾ (Chikkamagaluru) ಎಸ್.ಸಿ ಮೋರ್ಚಾ ಕಾರ್ಯದರ್ಶಿ ಗಿರೀಶ್ ಹೆಸಗಲ್ ಗೂ ಕೊಕ್ ನೀಡಲಾಗಿದ್ದು, ಚುನಾವಣೆಯಲ್ಲಿ (Election) ಎಂ.ಕೆ ಪ್ರಾಣೇಶ್ ವಿರುದ್ಧ ಅಪಪ್ರಚಾರ ಮಾಡಿದ್ದಾರೆ ಪಕ್ಷ (BJP) ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಮೂವರನ್ನ ಜವಾಬ್ದಾರಿಯಿಂದ ಮುಕ್ತಿಗೊಳಿಸಿದ ಬಿಜೆಪಿ ಜಿಲ್ಲಾಧ್ಯಕ್ಷ (President) ಕಲ್ಮರುಡಪ್ಪ ಆದೇಶ ಹೊರಡಿಸಿದ್ದಾರೆ. ಮೂವರು ಮುಖಂಡರನ್ನು ಮುಲಾಜಿಲ್ಲದೆ ಹೊರಕ್ಕೆ ಕಳುಹಿಸಿದ್ದಾರೆ.
ಪರಿಷತ್ ಚುನಾವಣೆಯಲ್ಲಿ ಕೇವಲ 3 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಪ್ರಾಣೇಶ್ (Pranesh) ಗೆಲುವು ಸಾಧಿಸಿದ್ದು, 500 ಮತಗಳ ಅಂತರದಿಂದ ಜಯ ಸಾಧಿಸುವುದಾಗಿ ಹೇಳಿಕೊಂಡಿದ್ದರು. ಆದರೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ನಾಯಕಿ ವಿರುದ್ಧ ಪ್ರಯಾಸದ ಗೆಲುವು ಪಡೆದುಕೊಂಡಿದ್ದಕ್ಕೆ ಆಂತರಿಕ ಸರ್ಜರಿ ನಡೆದಿದೆ.
6 ಮತಗಳಿಂದ ಜಯ : ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ ಪ್ರಾಣೇಶ್ ಅವರು 6 ಮತಗಳ ಅಂತರದ ಪ್ರಯಾಸದ ಗೆಲುವು ದಾಖಲಿಸಿದ್ದಾರೆ. ಇದು ಈ ಚುನಾವಣೆಯಲ್ಲಿ ದಾಖಲಾದ ಅತೀ ಕನಿಷ್ಠ ಅಂತರದ ಗೆಲುವಾಗಿದೆ.
1188 ಮತಗಳನ್ನು ಪಡೆದ ಎಂ.ಕೆ ಪ್ರಾಣೇಶ್ ಅವರಿಗೆ ಅವರ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಎ.ವಿ ಗಾಯತ್ರಿ ಶಾಂತೇಗೌಡ ಅವರು 1182 ಮತಗಳನ್ನು ಪಡೆಯುವ ಮುಖಾಂತರ ಭಾರೀ ಪೈಪೋಟಿ ನೀಡಿದ್ದರು. ಆದರೆ ಕೊನೇ ಹಂತದಲ್ಲಿ ಪ್ರಾಣೇಶ್ ಜಯದ ನಗೆ ಬೀರಿದ್ದಾರೆ. ಇನ್ನು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಡಾ. ಸುಂದರೇಗೌಡ ಕೇವಲ 1 ಮತ ಪಡೆಯಲ್ಲಷ್ಟೇ ಶಕ್ತರಾದರು. ಪಕ್ಷೇತರ ಅಭ್ಯರ್ಥಿ ಬಿ.ಟಿ. ಚಂದ್ರಶೇಖರ್ ಹಾಗೂ ಜಿ.ಐ. ರೇಣುಕುಮಾರ್ ಅವರು ಶೂನ್ಯ ಮತ ಪಡೆದರೆ, 39 ಮತಗಳು ತಿರಸ್ಕೃತವಾಗಿವೆ.
ಜಿಲ್ಲೆಯಲ್ಲಿ ಒಟ್ಟಾರೆ 2417 ಮತಗಳ ಪೈಕಿ 2410 ಮತಗಳು ಚಲಾವಣೆಯಾಗಿವೆ. ಚುನಾವಣಾ ಕಾವು ಆರಂಭವಾದಾಗ ಕ್ಷೇತ್ರದಲ್ಲಿ ಬಿಜೆಪಿ ಅಲೆ ಇತ್ತು. ಆದರೆ, ಮತದಾನ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಪರ ಒಲವು ವ್ಯಕ್ತವಾಯಿತು. ತನ್ಮೂಲಕ ಬಿಜೆಪಿಯ (BJP) 500 ಮತಗಳ ಅಂತರ ಮತ್ತು ಕಾಂಗ್ರೆಸ್‌ನ (Congress) 200 ಮತಗಳ ಅಂತರದ ಗೆಲುವಿನ ಲೆಕ್ಕಾಚಾರವನ್ನು ಮತದಾರ ಪ್ರಭು ಬುಡಮೇಲು ಮಾಡಿದರು.