* ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದ ಘಟನೆ
* ಸ್ಥಳ ಪರಿಶೀಲಿಸಿದ ಪೌರಾಯುಕ್ತರಿಗೆ ಸೂಚಿಸಿದ ಜಿಲ್ಲಾಧಿಕಾರಿ
* ಇಸ್ಲಾಂಪುರದ 200 ಮೀಟರ್ ಸುತ್ತಲೂ 144 ಸೆಕ್ಸನ್ ಜಾರಿ
ಗಂಗಾವತಿ(ಡಿ.18): ಪಟ್ಟಣದಲ್ಲಿ ಗುರುವಾರ ಹಿಂದೂಪರ ಸಂಘಟನೆಗಳು(Hindu Organizations) ಇಸ್ಲಾಂಪುರದಲ್ಲಿ ಬಿಪಿನ್ ರಾವತ್(Bipin Rawat) ಹೆಸರಿನಲ್ಲಿ ನಿರ್ಮಿಸಿರುವ ವೃತ್ತ ವಿವಾದಕ್ಕೆ ಕಾರಣವಾಗಿದ್ದು, ಇದು ಅಧಿಕೃತವೋ ಅಥವಾ ಅನಧಿಕೃತವೋ ಎಂಬುದರ ಮಾಹಿತಿ ನೀಡಲು ಜಿಲ್ಲಾಧಿಕಾರಿ ವಿಕಾಸ ಕಿಶೋರ ಸುರಳ್ಕರ್ ನಗರಸಭೆ ಆಯುಕ್ತರಿಗೆ 48 ಗಂಟೆಗಳ ಕಾಲಾವಕಾಶ ನೀಡಿದ್ದಾರೆ.
ಇತ್ತೀಚಿಗೆ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರ ಹೆಸರಿನಲ್ಲಿ ಗುರುವಾರ ಸಂಜೆ ವೃತ್ತವನ್ನು(Circle) ನಗರದಲ್ಲಿ ಶಾಸಕ ಪರಣ್ಣ ಮುನವಳ್ಳಿ ಅವರ ನೇತೃತ್ವದಲ್ಲಿ ಹಿಂದೂಪರ ಸಂಘಟನೆಗಳು ನಿರ್ಮಿಸಿದ್ದವು. ಇದಕ್ಕೆ ಅನ್ಯಕೋಮಿನ ಮುಖಂಡರು ವಿರೋಧಿಸಿದ್ದರು. ಇದರಿಂದ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿ ಬೂದಿ ಮುಚ್ಚಿದ ಕೆಂಡದಂತೆ ಇತ್ತು. ಮುಂಜಾಗ್ರತಾ ಕ್ರಮವಾಗಿ ಅಗತ್ಯ ಪೊಲೀಸ್(Police) ಸಿಬ್ಬಂದಿ ನಿಯೋಜಿಸಲಾಗಿತ್ತು. ತಹಸೀಲ್ದಾರ್ ಇಸ್ಲಾಂಪುರದ ಪ್ರದೇಶದ 200 ಮೀಟರ್ ಸುತ್ತಲು ಗುರುವಾರ ರಾತ್ರಿಯಿಂದ ಭಾನುವಾರದ ವರೆಗೆ 144 ಸೆಕ್ಸನ್ ಜಾರಿಗೊಳಿಸಿ ಆದೇಶ ಹೊರಡಿಸಿದ್ದರು.
ಈ ಹಿನ್ನೆಲೆಯಲ್ಲಿ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ವಿಕಾಸ ಕಿಶೋರ ಸುರಳ್ಕರ್ ಪರಿಶೀಲಿಸಿದರು. ಈ ವೇಳೆ ನಗರಸಭೆ ಮುಖ್ಯಾಧಿಕಾರಿಗೆ ರಾವತ್ ವೃತ್ತ ಸೇರಿದಂತೆ ನಗರದಲ್ಲಿರುವ ಎಲ್ಲ ವೃತ್ತಗಳನ್ನು ಪರಿಶೀಲಿಸಿ ಅಧಿಕೃತ ಹಾಗೂ ಅನಧಿಕೃತ ವೃತ್ತಗಳ ವರದಿ ನೀಡುವಂತೆ ಸೂಚಿಸಿದರು.
undefined
Shri Gavisiddeshwara Swamiji: ಕೊಪ್ಪಳದ ಜಲಋಷಿ ಪಟ್ಟಾಭಿಷೇಕಕ್ಕೆ 19 ವರ್ಷ..!
2015ರಲ್ಲಿ ಇಸ್ಲಾಂಪುರ ವೃತ್ತ:
ನಗರದ ಜಾಮೀಯಾ ಮಸೀದಿ(Jamia Masjid) ಮುಂಭಾಗದಲ್ಲಿ ಇಸ್ಲಾಂಪುರ ವೃತ್ತ ಎಂದು ಸೆ. 3, 2015ರಲ್ಲಿ ನಗರಸಭೆ ಅನುಮೋದನೆ ನೀಡಿದೆ. ನಗರಸಭೆ ಸಾಮಾನ್ಯ ಸಭೆಯಲ್ಲಿ ಮುಸ್ಲಿಂ ಪಂಚ ಕಮಿಟಿ ಸಲ್ಲಿಸಿದ ಮನವಿಗೆ ನಗರಸಭೆ ಸದಸ್ಯರು ಒಪ್ಪಿಗೆ ಸೂಚಿಸಿದ್ದರು. ಆದರೆ ಈ ವರೆಗೆ ವೃತ್ತ ಪ್ರಾರಂಭಿಸದೆ ಖಾಲಿ ಸ್ಥಳ ಬಿಡಲಾಗಿತ್ತು.
ವಿವಾದಿತ ರಾವತ್ ವೃತ್ತ(Controversial Rawat circle) ನಿರ್ಮಾಣದ ಸ್ಥಳದಲ್ಲಿ ಬಿಗುವಿನ ವಾತಾವರಣ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ತುಕಡಿ ನಿಯೋಜಿಸಲಾಗಿದೆ. ಜಿಲ್ಲಾಧಿಕಾರಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಶಾಂತತೆ ಕಾಪಾಡಲು ಕ್ರಮಕೈಗೊಂಡಿದ್ದಾರೆ.
ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರ ಹೆಸರಿನಲ್ಲಿ ನಿರ್ಮಿಸಿರುವ ವೃತ್ತ ವಿವಾದಕ್ಕೆ ಕಾರಣವಾಗಿದೆ. ಇದು ಅಧಿಕೃತವೂ, ಅನಧಿಕೃತವೂ ಎಂಬದನ್ನು ಪರಿಶೀಲಿಸಲು ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಲಾಗಿದೆ. ಅನಧಿಕೃತ ಇರುವ ವೃತ್ತಗಳನ್ನು ತೆರವು ಮಾಡಲಾಗುವುದು. ಅಲ್ಲದೇ ಇಸ್ಲಾಂಪುರ ಹೆಸರು ನಾಮಕರಣ ಮಾಡಿ ನಗರಸಭೆಯಲ್ಲಿ ಅನುಮೋದನೆ ಪಡೆದಿದ್ದರೆ ಅದು ಅಧಿಕೃತವಲ್ಲ. ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕು. ಈ ಬಗ್ಗೆ ಪರಿಶೀಲಿಸಲು ಪೌರಾಯುಕ್ತರಿಗೆ 48 ಗಂಟೆ ಕಾಲಾವಕಾಶ ನೀಡಲಾಗಿದೆ ಅಂತ ಜಿಲ್ಲಾಧಿಕಾರಿ ವಿಕಾಸ್ ಕಿಶೋರ ಸುರಳ್ಕರ್ ತಿಳಿಸಿದ್ದಾರೆ.
Singatalur Lift Irrigation Scheme: ಒಂಬತ್ತು ವರ್ಷದಿಂದ 90 ಟಿಎಂಸಿ ನೀರು ಪೋಲು..!
ಬಿಪಿನ್ ರಾವತ್ ಅವರ ಹೆಸರಿನಲ್ಲಿ ನಿರ್ಮಿಸಿರುವ ವೃತ್ತಕ್ಕೆ ಎಲ್ಲರು ಗೌರವ ನೀಡಬೇಕು. ಇಸ್ಲಾಂಪುರ ವೃತ್ತ ಎಂದು 2015ರಲ್ಲಿ ನಗರಸಭೆ ಅನುಮೋದನೆ ನೀಡಿದ ತಕ್ಷಣ ಅದು ಅಧಿಕೃತವಲ್ಲ. ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ನಗರಸಭೆ ಅನುಮೋದನೆ ಪಡೆದವರು 7 ವರ್ಷ ಏಕೆ ವೃತ್ತ ನಿರ್ಮಿಸಿರಲಿಲ್ಲ. ಈ ಪ್ರದೇಶ ರಾವತ್ ವೃತ್ತ ಆಗುವುದು ಖಚಿತ ಅಂತ ಶಾಸಕ ಪರಣ್ಣ ಮುನವಳ್ಳಿ(Paranna Munavalli) ಹೇಳಿದ್ದಾರೆ.
ನಗರದಲ್ಲಿ ಶಾಂತಿ ನೆಲೆಸಿದ್ದು ಚುನಾವಣೆ(Election) ಸಮೀಪಿಸುತ್ತಿರುವುದರಿಂದ ಬಿಜೆಪಿಗರು ದಿಢೀರನೆ ಬಿಪಿನ್ ರಾವತ್ ಅವರ ಹೆಸರಿನಲ್ಲಿ ವೃತ್ತ ನಿರ್ಮಿಸಿ ಅಶಾಂತಿ ಸೃಷ್ಟಿಸಲು ಮುಂದಾಗಿದ್ದಾರೆ. ಬಿಪಿನ್ ರಾವತ್ ಅವರ ಬಗ್ಗೆ ನಮಗೆ ಹಾಗೂ ಜನರಿಗೆ ಗೌರವ ಇದೆ. 2015ರಲ್ಲಿ ಇಸ್ಲಾಂಪುರ ವೃತ್ತವೆಂದು ನಾಮಕರಣ ಮಾಡಲು ನಗರಸಭೆ ಅನುಮೋದನೆ ನೀಡಿದೆ ಅಂತ ನಗರಸಭೆ ಸದಸ್ಯ ಮನೋಹರಸ್ವಾಮಿ ಮೂದೇನೂರು ತಿಳಿಸಿದ್ದಾರೆ.