ಚಾಮುಂಡಿ ದಸರಾ ಬೇಡ, ಮಹಿಷ ದಸರಾ ಆಚರಿಸಲು ಸಜ್ಜಾದ ಪ್ರಗತಿಪರರು| ಮೈಸೂರಿನಲ್ಲಿ ನಿಷೇಧಾಜ್ಞೆ ಜಾರಿ| ಭಗವಾನ್ ಗೆ ಗೃಹಬಂಧನ, ಗೂಂಡಾಗಿರಿಗೆ ಬಗ್ಗಲ್ಲ ಅಂದ್ರು ಮಹೇಶ್ ಚಂದ್ರ ಗುರು
ಮೈಸೂರು[ಸೆ.27]: ಮಹಿಷ ದಸರಾ ಕುರಿತು ಧ್ವನಿ ಎತ್ತಿದ್ದ ಪ್ರಗತಿಪರ ಚಿಂತಕ ಕೆಎಸ್. ಭಗವಾನ್ ಗೆ ಸದ್ಯ ಗೃಹ ಬಂಧನದಲ್ಲಿದ್ದಾರೆ. ಮನೆಯಿಂದ ಹೊರ ಬರದಂತೆ ಕೆ ಎಸ್ ಭಗವಾನ್ ಗೆ ಪೊಲೀಸರ ಮನವಿ ಮಾಡಿಕೊಂಡಿದ್ದು, ಕೆ ಎಸ್ ಭಗವಾನ್ ಮನೆ ಮುಂದೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಚಾಮುಂಡಿ ದಸರಾ ಬೇಡ, ಎಂದು ಪ್ರಗತಿಪರರು ಮಹಿಷ ದಸರಾ ಆಚರಿಸಲು ಹೊರಟಿದ್ದರು. ಆದರೆ ಇದರ ವಿರುದ್ಧ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ನಿಷೇಧಾಜ್ಞೆ ವಿಧಿಸಲಾಗಿತ್ತು. ಹೀಗಿದ್ದರೂ ಕೆ. ಎಸ್. ಭಗವಾನ್ ಸೇರಿದಂತೆ ಪ್ರಗತಿಪರರು ನಿಷೇಧಾಜ್ಞೆ ನಡುವೆ ಮಹಿಷ ದಸರಾ ಆಚರಿಸಲು ಸಜ್ಜಾಗಿದ್ದರು. ಹೀಗಾಗಿ ಪೋಲಿಸ್ ಇಲಾಖೆ ಮಹಿಷ ದಸರಾ ನಡೆಯುವ ಸ್ಥಳಗಳಲ್ಲಿ ಹೆಚ್ಚಿನ ಸಿಬ್ಬಂದಿಗಳ ನಿಯೋಜಿಸಿದೆ. ಅಲ್ಲದೇ ಕುವೆಂಪುನಗರ ಉದಯರವಿ ರಸ್ತೆಯಲ್ಲಿರುವ ಭಗವಾನ್ ನಿವಾಸದೆದುರೂ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ, ಸುಮಾರು 1 ಸಾವಿರ ಮಂದಿ ಸಿಬ್ಬಂದಿಗಳನ್ನು ಪೋಲಿಸ್ ಇಲಾಖೆ ನಿಯೋಜಿಸಲಾಗಿದೆ. ಅರಮನೆಯ ಕೋಟೆ ಆಂಜನೇಯ ದೇವಸ್ಥಾನ, ಟೌನ್‌ಹಾಲ್, ಚಾಮುಂಡಿಬೆಟ್ಟ, ಅಂಬೇಡ್ಕರ್ ಉದ್ಯಾನವನ ಸೇರಿದಂತೆ ಹಲವೆಡೆ, 10 ಕೆ ಎಸ್.ಆರ್.ಪಿ. ತುಕಡಿ, 3 ಸಿ. ಆರ್. ತುಕಡಿ, 300 ಕ್ಕೂ ಹೆಚ್ಚು ಪೋಲಿಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಇನ್ನು ಈ ಸಂಬಂಧ ಆಕ್ರೋಶ ವ್ಯಕ್ತಪಡಿಸಿರುವ ಪ್ರೊ. ಮಹೇಶ್ ಚಂದ್ರ ಗುರು 'ಪ್ರತಾಪ್ ಸಿಂಹ ಚಾಮುಂಡೇಶ್ವರಿ ಬೆಟ್ಟದಲ್ಲಿ ವೇದಿಕೆ ತೆರವುಗೊಳಿಸಿದ್ದಾರೆ. ಇದು ಸಂಸದರ ಪುಂಡಾಟ ಅಂತ ನಾನು ಕರೆಯಬೇಕಾಗುತ್ತೆ. ಪ್ರತಾಪ್ ಸಿಂಹ ಯಾರು ಡಿಸಿನಾ, ಎಸ್ಪಿನಾ, ಹೋಂ ಮಿನಿಸ್ಟರ್, ಇಲ್ಲ ಚೀಫ್ ಆಪ್ ಪೊಲೀಸಾ, ಅತ ಒಬ್ಬ ಸಂಸದ. ಆದ್ರೆ ಇಂದು ಬೀದಿಗೂಂಡಾ ಅಂತ ಸಾಬೀತು ಪಡಿಸಿದ್ರು. ಇಂಥಾ ಗೂಂಡಾಗಿರಿಗೆ ನಾವು ಬಗ್ಗಲ್ಲ' ಎಂದಿದ್ದಾರೆ.
ಇಷ್ಟೇ ಅಲ್ಲದೇ 'ಈ ಮಹಿಷ ಸಂಸ್ಕೃತಿ ನಮ್ಮದು. ಪ್ರತಪ್ ಸಿಂಹ ಮೂಲಭೂತವಾದಿ ರಾಜಕಾರಣಿ. ಪ್ರತಾಪ್ ಸಿಂಹ ರಾಜಕೀಯವಾಗಿ 144 ಸೆಕ್ಷನ್ ಜಾರಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಂಸದ ಪ್ರತಾಪ್ ಸಿಂಹನಿಗೆ ಪಾಠ ಕಲಿಸಬೇಕಾಗುತ್ತದೆ. ಪೊಲೀಸರು ಪ್ರೊ. ಭಗವಾನ್ ಅವರನ್ನು ಮನೆಯಿಂದ ಹೊರಗೆ ಬರದಂತೆ ನೋಡಿಕೊಂಡಿದ್ದಾರೆ. ನಾನು ಮನೆ ಒಳಗೆ ಹೋಗಿದ್ರೆ ನನ್ನನ್ನೂ ಅಲ್ಲೇ ಕೂಡಿ ಹಾಕ್ತಿದ್ರು. ಇದು ಒಬ್ಬ ವ್ಯಕ್ತಿ ಮುಖ್ಯ ಅಲ್ಲ, ಇದು ಜನರ ಹಬ್ಬ ಎಲ್ಲರ ಹಿತ ಮುಖ್ಯ' ಎಂದಿದ್ದಾರೆ.
ಸೆ.27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: