
ದಕ್ಷಿಣ ಕನ್ನಡ (ಡಿ.18): ಧರ್ಮಸ್ಥಳದ ವಿರುದ್ಧ ಸುಳ್ಳು ಆರೋಪ, ಧಾರ್ಮಿಕ ಹೋರಾಟಗಳು ಮತ್ತು ಸಾಮಾಜಿಕ ಹೋರಾಟಗಳ ಮೂಲಕ ಸದಾ ಸುದ್ದಿಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಮತ್ತೆ ಗಡೀಪಾರು ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಬೆಳ್ತಂಗಡಿ ತಾಲೂಕಿನ ಉಜಿರೆ ಸೇರಿದಂತೆ ಪ್ರಮುಖ ಭಾಗಗಳಲ್ಲಿ ಪೊಲೀಸರು ಧ್ವನಿವರ್ಧಕಗಳ ಮೂಲಕ ಈ ಬಗ್ಗೆ ಸಾರ್ವಜನಿಕ ಪ್ರಕಟಣೆ ನೀಡಿದ್ದಾರೆ.
ಪುತ್ತೂರು ಸಹಾಯಕ ಆಯುಕ್ತೆ (AC) ಸ್ಟೆಲ್ಲಾ ವರ್ಗೀಸ್ ಅವರು ಈ ಗಡೀಪಾರು ಆದೇಶವನ್ನು ಹೊರಡಿಸಿದ್ದಾರೆ. ಪೊಲೀಸ್ ಇಲಾಖೆಯು ಸಲ್ಲಿಸಿದ ವರದಿಯ ಆಧಾರದ ಮೇಲೆ, ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಆದೇಶದನ್ವಯ ಡಿಸೆಂಬರ್ 16, 2025 ರಿಂದ ಸೆಪ್ಟೆಂಬರ್ 16, 2026 ರವರೆಗೆ ಅಂದರೆ ಒಟ್ಟು 10 ತಿಂಗಳ ಕಾಲ ಮಹೇಶ್ ಶೆಟ್ಟಿ ತಿಮರೋಡಿ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರವೇಶಿಸುವಂತಿಲ್ಲ.
ಗಡೀಪಾರು ಆದೇಶ ಜಾರಿಯಾದ ಬೆನ್ನಲ್ಲೇ ಪೊಲೀಸರು ಉಜಿರೆಯ ತಿಮರೋಡಿ ಗ್ರಾಮದಲ್ಲಿರುವ ಮಹೇಶ್ ಶೆಟ್ಟಿ ಅವರ ನಿವಾಸಕ್ಕೆ ತೆರಳಿದ್ದರು. ಆದರೆ ಅವರು ಮನೆಯಲ್ಲಿ ಇರದ ಕಾರಣ, ನಿಯಮದಂತೆ ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಲಾಗಿದೆ. ಗಡೀಪಾರು ಆದೇಶದ ಸುಳಿವು ಸಿಗುತ್ತಿದ್ದಂತೆಯೇ ತಿಮರೋಡಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ತಿಮರೋಡಿ ವಿರುದ್ಧ ಈ ಹಿಂದೆ ದಾಖಲಾಗಿದ್ದ ಪ್ರಕರಣಗಳ ಜೊತೆಗೆ, ಇತ್ತೀಚಿನ ಕೆಲವು ಹೊಸ ಪ್ರಕರಣಗಳನ್ನು ಪರಿಗಣಿಸಿ ಈ ಕಠಿಣ ಕ್ರಮ ಜರುಗಿಸಲಾಗಿದೆ. ಸಾರ್ವಜನಿಕ ಶಾಂತಿಗೆ ಭಂಗ ತರುವ ಸಾಧ್ಯತೆ ಇದೆ ಎಂಬ ಪೊಲೀಸ್ ವರದಿಯು ಈ ಆದೇಶಕ್ಕೆ ಪ್ರಮುಖ ಕಾರಣವಾಗಿದೆ. ಈ ಹಿಂದೆಯೂ ತಿಮರೋಡಿ ಅವರನ್ನು ಗಡೀಪಾರು ಮಾಡಲಾಗಿತ್ತು, ಈಗ ಮತ್ತೆ 10 ತಿಂಗಳ ಕಾಲ ಜಿಲ್ಲೆಯಿಂದ ಹೊರಗಿರುವಂತೆ ಸೂಚಿಸಿರುವುದು ಅವರ ಬೆಂಬಲಿಗರಲ್ಲಿ ಚರ್ಚೆಗೆ ಕಾರಣವಾಗಿದೆ.