ಆಲಮಟ್ಟಿ-ಕುಷ್ಟಗಿ ನೂತನ ರೈಲು ಮಾರ್ಗಕ್ಕೆ ಶೀಘ್ರವೇ ಡಿಪಿಆರ್, ಚಿತ್ರದುರ್ಗವರೆಗೆ ವಿಸ್ತರಿಸುವಂತೆ ಒತ್ತಾಯ

Published : Dec 18, 2025, 07:23 PM IST
Pralhad Joshi

ಸಾರಾಂಶ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಒತ್ತಾಸೆಯಂತೆ, ಆಲಮಟ್ಟಿ-ಕುಷ್ಟಗಿ ನೂತನ ರೈಲು ಮಾರ್ಗದ  ಡಿಪಿಆರ್‌ ಇನ್ನೈದು ತಿಂಗಳಲ್ಲಿ ಸಿದ್ಧವಾಗಲಿದೆ. ಈ ಮಾರ್ಗವನ್ನು ಚಿತ್ರದುರ್ಗದವರೆಗೆ ವಿಸ್ತರಿಸುವಂತೆ ಒತ್ತಾಯಿಸಲಾಗಿದ್ದು, ಇದು ವಿಜಯಪುರ-ಬೆಂಗಳೂರು ನಡುವಿನ ಪ್ರಯಾಣದ ದೂರವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.

ನವದೆಹಲಿ: ಆಲಮಟ್ಟಿ-ಕುಷ್ಟಗಿ ನೂತನ ರೈಲು ಮಾರ್ಗಕ್ಕೆ ಇನ್ನೈದು ತಿಂಗಳಲ್ಲಿ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧವಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪ್ರಹ್ಲಾದ ಜೋಶಿ ಅವರಿಗೆ ಪತ್ರ ಬರೆದು ಸ್ಪಷ್ಟಪಡಿಸಿದ್ದಾರೆ. ಈ ರೈಲು ಮಾರ್ಗ ಕುರಿತು ಇಂದಷ್ಟೇ ಜೋಶಿ ಅವರು ಸಂಸತ್ ಭವನದಲ್ಲಿ ಅಶ್ವಿನಿ ವೈಷ್ಣವ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು, ರೈಲ್ವೆ ಸಚಿವರಿಂದ ತ್ವರಿತ ಸ್ಪಂದನೆ ದೊರೆತಿದೆ.

ಆಲಮಟ್ಟಿ - ಕುಷ್ಟಗಿ ನೂತನ ರೈಲ್ವೆ ಮಾರ್ಗದ ಸರ್ವೇ ಕಾರ್ಯ ಆಗಲೇ ಮುಗಿದಿದ್ದು, 2026ರ ಮೇ ಅಂತ್ಯದೊಳಗೆ ಡಿಪಿಆರ್‌ ತಯಾರಾಗಲಿದೆ ಎಂದು ಖುದ್ದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರೇ ಪ್ರಹ್ಲಾದ ಜೋಶಿ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.

ಈ ನೂತನ ರೈಲು ಮಾರ್ಗದ ಕುರಿತು ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಮತ್ತು ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ್ ಅವರು ಸಚಿವ ಪ್ರಹ್ಲಾದ ಜೋಶಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಈ ರೈಲು ಮಾರ್ಗದ ಅಗತ್ಯತೆ ಮನಗಂಡು ಸಚಿವ ಜೋಶಿ ಅವರು ಬುಧವಾರ ಸಂಸತ್ ಭವನದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಚರ್ಚಿಸಿ ಮನವರಿಕೆ ಮಾಡಿಕೊಟ್ಟಿದ್ದರು. ಇದೀಗ ಜೋಶಿ ಅವರ ಒತ್ತಾಸೆಯಂತೆ ರೈಲ್ವೆ ಸಚಿವರು ನೂತನ ರೈಲು ಮಾರ್ಗಕ್ಕೆ ಸಮ್ಮತಿ ಸೂಚಿಸಿದ್ದಾರೆ.

ಕೇಂದ್ರ ಸರ್ಕಾರ, ಕರ್ನಾಟಕದಲ್ಲಿ ರೈಲ್ವೆ ಸಂಪರ್ಕವನ್ನು ಹೆಚ್ಚು ಹೆಚ್ಚು ಕಲ್ಪಿಸುವ ಮೂಲಕ ವಾಣಿಜ್ಯೋದ್ಯಮ ಜತೆಗೆ ಸಂಚಾರ ಸುವ್ಯವಸ್ಥೆಗೂ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದಿರುವ ಪ್ರಹ್ಲಾದ ಜೋಶಿ, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ, ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಮಾರ್ಗದ ಸಮೀಕ್ಷೆ ಚಿತ್ರದುರ್ಗವರೆಗೆ ವಿಸ್ತರಿಸುವಂತೆ ಒತ್ತಾಯ

ಕೊಪ್ಪಳ: ಆಲಮಟ್ಟಿ–ಕುಷ್ಟಗಿ ರೈಲು ಮಾರ್ಗದ ಸಮೀಕ್ಷೆ ಚಿತ್ರದುರ್ಗವರೆಗೆ ವಿಸ್ತರಿಸುವಂತೆ ಒತ್ತಾಯಿಸಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್ ಗುರುವಾರ ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಆಲಮಟ್ಟಿ–ಕುಷ್ಟಗಿ ನಡುವಿನ ರೈಲು ಮಾರ್ಗದ ಸಮೀಕ್ಷೆ ಪೂರ್ಣಗೊಂಡಿರುವ ಬಗ್ಗೆ ಮಾಹಿತಿ ದೊರೆತಿದ್ದು, ಈ ಮಹತ್ವದ ಕಾರ್ಯದ ಹಿಂದೆ ನಿಮ್ಮ ನಿರಂತರ ಪ್ರಯತ್ನವಿರುವುದು ಮೆಚ್ಚುವಂತಹದ್ದು. ಅಂತೆಯೇ ಆಲಮಟ್ಟಿ–ಕುಷ್ಟಗಿ ರೈಲು ಮಾರ್ಗವನ್ನು ಮುಂದುವರೆಸಿ ಚಿತ್ರದುರ್ಗವರೆಗೆ ವಿಸ್ತರಿಸುವಂತೆ ಮಾಡಲು ತಾವು ಪ್ರಯತ್ನ ಮಾಡಬೇಕು.

ಈ ನಿಟ್ಟಿನಲ್ಲಿ ಕೇಂದ್ರ ರೈಲ್ವೆ ಸಚಿವರನ್ನು ಮನವೊಲಿಸಿ,ಕಾರ್ಯಗತವಾಗುವಂತೆ ಮಾಡಬೇಕು. ಈಗಾಗಲೇ ರೈಲ್ವೆ ಸಚಿವರು, ನಿಮಗೆ ಕಳುಹಿಸಿರುವ ಪತ್ರದಲ್ಲಿಯೂ ಆಲಮಟ್ಟಿ–ಕುಷ್ಟಗಿ ನಡುವಿನ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಉಲ್ಲೇಖಿಸಲಾಗಿದೆ. ಈ ರೈಲು ಮಾರ್ಗ ಚಿತ್ರದುರ್ಗವರೆಗೆ ವಿಸ್ತರಿಸಿದಲ್ಲಿ ವಿಜಯಪುರ (ಬಿಜಾಪುರ) ಮತ್ತು ಬೆಂಗಳೂರು ನಡುವಿನ ದೂರವು ಸುಮಾರು ೧೭೦ ಕಿಲೋಮೀಟರ್‌ಗಳಷ್ಟು ಕಡಿಮೆಯಾಗುತ್ತದೆ. ಇದರಿಂದ ಉತ್ತರ ಕರ್ನಾಟಕದ ಜನರಿಗೆ ಬೆಂಗಳೂರಿಗೆ ವೇಗವಾದ ಹಾಗೂ ಸುಲಭ ಪ್ರಯಾಣ ಸಾಧ್ಯವಾಗಲಿದೆ. ಜತೆಗೆ ವ್ಯಾಪಾರ, ಸಂಪರ್ಕ ವ್ಯವಸ್ಥೆ ಮತ್ತು ಒಟ್ಟಾರೆ ಆರ್ಥಿಕ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಲಿದೆ. ಆದ್ದರಿಂದ ಆಲಮಟ್ಟಿ–ಕುಷ್ಟಗಿ ರೈಲು ಮಾರ್ಗವನ್ನು ಚಿತ್ರದುರ್ಗವರೆಗೆ ವಿಸ್ತರಿಸುವುದನ್ನು ಪರಿಗಣಿಸಿ, ಮುಂದಿನ ಬಜೆಟ್ ಅಧಿವೇಶನದಲ್ಲಿ ಅಗತ್ಯ ಅನುದಾನ ಮಂಜೂರು ಮಾಡಲು ಕ್ರಮವಾಗುವಂತೆ ತಾವುಗಳು ಇಚ್ಛಾಶಕ್ತಿ ವಹಿಸಬೇಕೆಂದು ಮನವಿ ಮಾಡಿದರು.

PREV
Read more Articles on
click me!

Recommended Stories

ರಾಮನಗರದಲ್ಲಿದೆ ವಾರಸುದಾರರಿಲ್ಲದ 48.69 ಕೋಟಿ ರು! ಹಣ ವಾಪಸ್ ಹಿಂದಿರುಗಿಸಲು ನಿಮ್ಮ ಹಣ-ನಿಮ್ಮ ಹಕ್ಕು ಅಭಿಯಾನ
ಬೆಂಗಳೂರಲ್ಲಿ ಪಬ್‌ಗೆ ಬಂದಿದ್ದ ಹುಡುಗಿ ಫೋನ್ ನಂಬರ್ ಕೇಳಿದ ಉಮೇಶ; ಕೊಡದಿದ್ದಕ್ಕೆ ಹಲ್ಲೆ!