Border Dispute: ಮಹಾರಾಷ್ಟ್ರದ ಅಪ್ಪಟ್ಟ ಮರಾಠಿ ಹಳ್ಳಿಗಳಿಗೂ ಕರ್ನಾಟಕ ಸೇರುವ ಒಲವು

By Kannadaprabha NewsFirst Published Dec 10, 2022, 8:30 PM IST
Highlights

ಮೂಲಭೂತ ಸೌಕರ್ಯಗಳನ್ನು ನೀಡಿ, ಇಲ್ಲವೇ ಕರ್ನಾಟಕಕ್ಕೆ ಸೇರುತ್ತೇವೆ ಲಾತೂರ ಜಿಲ್ಲಾಧಿಕಾರಿಗೆ ಗ್ರಾಮಸ್ಥರ ಪತ್ರ

ಬೆಳಗಾವಿ(ಡಿ.10):  ನೆರೆಯ ಮಹಾರಾಷ್ಟ್ರದ ಸಾಂಗ್ಲಿ, ಸೊಲ್ಲಾಪುರ ಜಿಲ್ಲೆಯ ಕನ್ನಡಿಗರು ಹಳ್ಳಿಗಳನ್ನು ಕರ್ನಾಟಕಕ್ಕೆ ಸೇರ್ಪಡೆ ಮಾಡುವಂತೆ ಸರ್ಕಾರಕ್ಕೆ ಒತ್ತಡ ಮಾಡಿರುವ ಬೆನ್ನಹಿಂದೆಯೇ ಮಹಾರಾಷ್ಟ್ರದ ಅಪ್ಪಟ್ಟಮರಾಠಿ ಹಳ್ಳಿಗಳೇ ಇದೀಗ ಕರ್ನಾಟಕಕ್ಕೆ ಸೇರ್ಪಡೆಯಾಗುವ ಇಂಗಿತ ವ್ಯಕ್ತಪಡಿಸಿವೆ. ಅಲ್ಲದೇ, ಮಹಾರಾಷ್ಟ್ರ ಸರ್ಕಾರದ ವಿರುದ್ಧವೇ ಸಿಡಿದೆದಿದ್ದಾರೆ.

ಲಾತೂರ ಜಿಲ್ಲೆಯ ದೇವೋಣಿ ತಾಲೂಕಿನ 10ಕ್ಕೂ ಅಧಿಕ ಗ್ರಾಮಸ್ಥರು ತಮ್ಮನ್ನು ಕರ್ನಾಟಕ ರಾಜ್ಯಕ್ಕೆ ಸೇರ್ಪಡೆಗೊಳಿಸುವಂತೆ ಲಾತೂರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ನಮ್ಮ ಗ್ರಾಮಗಳೆಲ್ಲವೂ ಅಭಿವೃದ್ಧಿಯಿಂದ ವಂಚಿತಗೊಂಡಿವೆ. ಗ್ರಾಮದಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳಾದ ರಸ್ತೆ, ನೀರು, ಬೀದಿ ದೀಪ, ಸಾರ್ವಜನಿಕ ಶೌಚಾಲಯ, ಬಸ್‌ ಸೇರಿದಂತೆ ಇತರೆ ಸೌಲಭ್ಯಗಳೇ ಇಲ್ಲ. ನೆರೆಯ ಕರ್ನಾಟಕದ ಗ್ರಾಮಗಳಲ್ಲಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ನಮಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು, ಇಲ್ಲವೇ ನಮ್ಮನ್ನು ಕರ್ನಾಟಕ ರಾಜ್ಯಕ್ಕೆ ಸೇರ್ಪಡೆಮಾಡಬೇಕು. ಜೊತೆಗೆ ಬೊಂಬಳ್ಳಿ ಗ್ರಾಮವನ್ನು ಗ್ರಾಪಂ ಮಟ್ಟಕ್ಕೇರಿಸಬೇಕು. ಇಲ್ಲದಿದ್ದರೆ, ಡಿ.18 ರಂದು ನಿಗದಿಯಾಗಿರುವ ಗ್ರಾಪಂ ಚುನಾವಣೆ ಸೇರಿದಂತೆ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ: ತಕ್ಷಣ ಗಡಿ ಉಸ್ತುವಾರಿ ಸಚಿವರ ನೇಮಿಸಿ

ಕರ್ನಾಟಕ ರಾಜ್ಯದ ಗಡಿಯಿಂದ ಬೊಂಬಳಿ ಗ್ರಾಮ ಕೇವಲ 500 ಮೀಟರ್‌ ಅಂತರದಲ್ಲಿದೆ. ಭಾಲ್ಕಿ ವಿಧಾನಸಭಾ ಕ್ಷೇತ್ರ ಸಾಕಷ್ಟುಅಭಿವೃದ್ದಿಯಾಗಿದೆ. ಆದರೆ, ಮಹಾರಾಷ್ಟ್ರ ಸರ್ಕಾರ ನಮ್ಮ ಗ್ರಾಮಕ್ಕೆ ಒಂದೇ ಒಂದು ಶಾಲೆಯನ್ನು ಮಂಜೂರು ಮಾಡಲು ಸಿದ್ಧವಿಲ್ಲ. ಮಹಾರಾಷ್ಟ್ರ ಸರ್ಕಾರಕ್ಕೆ ನಮ್ಮ ಗ್ರಾಮಕ್ಕೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗದಿದ್ದರೆ, ಗ್ರಾಪಂ ಚುನಾವಣೆ ಬಹಿಷ್ಕರಿಸುತ್ತೇವೆ. ಚುನಾವಣೆ ಘೋಷಣೆ ಮಾಡಿರುವುದನ್ನು ನಾವು ಖಂಡಿಸುತ್ತೇವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ನ.23 ರಂದು ಬೊಂಬಳಿಯನ್ನು ಪ್ರತ್ಯೇಕ ಗ್ರಾಮ ಪಂಚಾಯಿತಿ ಮಾಡಬೇಕು ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿ ನಿರ್ದೇಶನ ಮೇರೆಗೆ ಅಲ್ಲಿನ ತಹಸಿಲ್ದಾರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದ್ದರು. ಅಲ್ಲದೇ ಪ್ರತ್ಯೇಕ ಪಂಚಾಯಿತಿ ರಚನೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರು. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಗ್ರಾಮಸ್ಥರು ಸಿಡಿದೆದಿದ್ದಾರೆ.
ಮುಂದಿನ ಎಲ್ಲ ಚುನಾವಣೆಗಳಿಗೂ ಬಹಿಷ್ಕಾರ ಹಾಕುತ್ತೇವೆ. ಸಾಧ್ಯವಾದರೆ ತಾಲೂಕು ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಆಮರಣ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ. ಸ್ವಾತಂತ್ರ್ಯ ದೊರೆತು 75 ವರ್ಷ ಕಳೆದರೂ ಗ್ರಾಮ ಅಭಿವೃದ್ಧಿಯಾಗಿಲ್ಲ. ಹೀಗಾಗಿ ಅಭಿವೃದ್ಧಿಯ ದೃಷ್ಟಿಯಿಂದ ಕರ್ನಾಟಕ ರಾಜ್ಯಕ್ಕೆ ಹೋಗಲು ಸಿದ್ಧರಿದ್ದೇವೆ ಎಂದು ಗ್ರಾಮದ 74 ಜನರು ಜಿಲ್ಲಾಧಿಕಾರಿಗೆ ಬರೆದ ಪತ್ರಕ್ಕೆ ಸಹಿ ಹಾಕಿದ್ದಾರೆ.

ಲೋಕಸಭೆಯಲ್ಲಿ ಪ್ರಸ್ತಾಪವಾದ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ

ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕು. ಬಸ್‌ ಪ್ರಯಾಣ ದರ ಕಡಿಮೆ ಮಾಡಬೇಕು. ಕರ್ನಾಟಕದಲ್ಲಿ ಕೊಡುವಂತೆ ರೈತರಿಗೆ ಆರ್ಥಿಕ ನೆರವು ನೀಡಬೇಕು. ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ಪೂರೈಕೆ ಮಾಡಬೇಕು ಎಂದು ಗ್ರಾಮದ ಜ್ಞಾನೋಬಾ ಕಾರಬಾರಿ, ದೇವಿದಾಸ ಧೋಂಡಿಬಾ, ಸೋಮಶೇಖರ ದಯಾನಂದ, ದೇವಿದಾಸ ಗೋವಿಂದರಾವ್‌, ಅಭಯ ಸೂರ್ಯವಂಶಿ ಆಗ್ರಹಿಸಿದ್ದಾರೆ.

ನಮ್ಮ ಗ್ರಾಮದಲ್ಲಿ ಕುಡಿಯುವ ನೀರಿಲ್ಲ, ರಸ್ತೆಯಿಲ್ಲ, ಬೀದಿ ದೀಪಗಳಿಲ್ಲ. ಎಲ್ಲ ಮೂಲಭೂತ ಸೌಲಭ್ಯಗಳಿಂದ ನಮ್ಮೆಲ್ಲ ಗ್ರಾಮಗಳು ವಂಚಿತಗೊಂಡಿವೆ. ಈ ಕುರಿತು ಹಲವಾರು ಬಾರಿ ಸಂಬಂಧಿತ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ, ನಾವು ಅಭಿವೃದ್ಧಿಗಾಗಿ ನಮ್ಮ ಹಳ್ಳಿಗಳನ್ನು ಕರ್ನಾಟಕ ರಾಜ್ಯಕ್ಕೆಸೇರ್ಪಡೆ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದೇವೆ ಅಂತ ಬೊಂಬಳ್ಳಿ ಗ್ರಾಮಸ್ಥ ಜ್ಞಾನೋಬಾ ಕಾರಬಾರಿ ತಿಳಿಸಿದ್ದಾರೆ.  
 

click me!