ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ಸಿನಿಂದ ನಗರದ ನೆಹರು ಮೈದಾನದಲ್ಲಿ ಜ. 2ರಂದು ಸಂಜೆ 4ಕ್ಕೆ ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಹುಬ್ಬಳ್ಳಿ (ಡಿ.25) : ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ಸಿನಿಂದ ನಗರದ ನೆಹರು ಮೈದಾನದಲ್ಲಿ ಜ. 2ರಂದು ಸಂಜೆ 4ಕ್ಕೆ ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ನ್ಯಾಯಾಧೀಕರಣ 13.6 ಟಿಎಂಸಿ ನೀರನ್ನು ರಾಜ್ಯಕ್ಕೆ ಹಂಚಿಕೆ ಮಾಡಿದೆ. ನಂತರ ಸುಪ್ರೀಂ ಕೋರ್ಚ್ ಆದೇಶದ ಪ್ರಕಾರ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಆದರೂ ನಮ್ಮ ಪಾಲಿನ ನೀರು ಪಡೆಯಲು ರಾಜ್ಯ ಸರ್ಕಾರ ಈ ವರೆಗೆ ಕಾಮಗಾರಿ ಪ್ರಾರಂಭಿಸಿಲ್ಲ ಎಂದು ಆರೋಪಿಸಿದರು.
Hubballi: ಮಹದಾಯಿ ಬಗ್ಗೆ ಮಾತಾಡಲು ಕಾಂಗ್ರೆಸ್‌ನವರಿಗೆ ನೈತಿಕತೆಯಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಯೋಜನೆ ವಿಳಂಬಕ್ಕೆ ಕಾಂಗ್ರೆಸ್ ಕಾರಣ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಈಗ ಕೇಂದ್ರ ಹಾಗೂ ರಾಜ್ಯದಲ್ಲಿ ಅವರದೇ ಡಬಲ್ ಎಂಜಿನ್ ಸರ್ಕಾರ ಇದ್ದರೂ ಯೋಜನೆ ಜಾರಿ ಮಾಡದೇ ನಮ್ಮ ಮೇಲೆ ಗೂಬೆ ಕುರಿಸುವುದು ಸರಿಯಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯೋಜನೆ ಅನುಷ್ಠಾನಕ್ಕೆ ಕ್ರಮವಹಿಸಲಾಗಿತ್ತು. ಎಲ್ಲ ಇಲಾಖೆಗಳ ಅನುಮತಿ ಪಡೆಯಲಾಗಿತ್ತು. ಬಿಜೆಪಿ ಸರ್ಕಾರ ಬಂದ ಬಳಿಕ ಅದನ್ನು ತಡೆಯಲಾಗಿತ್ತು. 3 ವರ್ಷದಿಂದ ಬಿಜೆಪಿ ಆಡಳಿತ ನಡೆಸುತ್ತಿದೆ. ಯೋಜನೆ ಡಿಪಿಆರ್ ತಯಾರಿಸಿ ಅದಕ್ಕೆ ಅನುಮೋದನೆ ನೀಡಿಲ್ಲ ಎಂದು ದೂರಿದರು.
ಯೋಜನೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದಾಗ ಇದ್ದ ಬಿಜೆಪಿಯವರ ಛಲ ಎಲ್ಲಿಗೆ ಹೋಗಿದೆ. ಯೋಜನೆ ಅನುಷ್ಠಾನದಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಬಿಜೆಪಿಯಿಂದ ಆಗುತ್ತಿರುವ ಮೋಸದ ಕುರಿತು ಪ್ರತಿಭಟನಾ ಸಭೆಯಲ್ಲಿ ರೈತರಿಗೆ ಮಾಹಿತಿ ನೀಡಲಾಗುವುದು. ಸಾವಿರಾರು ಸಂಖ್ಯೆಯಲ್ಲಿ, ಕಾಂಗ್ರೆಸ್ ಕಾರ್ಯಕರ್ತರು, ರೈತರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ಬೃಹತ್ ಪ್ರತಿಭಟನಾ ಸಭೆಗೆ ಎಐಸಿಸಿ ಕಾರ್ಯದರ್ಶಿ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಅನೇಕ ನಾಯಕರು ಭಾಗವಹಿಸುವರು. ರಾರಯಲಿಗೆ ಅಂದಾಜು 75 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿಲ್ಲ. ರಾಜ್ಯದ ನೀರಾವರಿ ಯೋಜನೆಗಳ ಜಾರಿಗೆ ಧ್ವನಿ ಎತ್ತುತ್ತಿಲ್ಲ. ಸುಳ್ಳಿಂದಲೇ ಸರ್ಕಾರ ನಡೆಸಲಾಗುತ್ತಿದೆ. ಕಮಿಷನ್‌ನಿಂದಲೇ ಸರ್ಕಾರ ನಡೆಯುತ್ತಿದೆ ಎಂದು ದೂರಿದರು.
Mahadayi water dispute: ಮಹದಾಯಿ ಹೋರಾಟಗಾರರಿಗೆ ತಪ್ಪದ ಕೋರ್ಟ್ ಅಲೆದಾಟ
ಸುದ್ದಿಗೋಷ್ಠಿಯಲ್ಲಿ ಧಾರವಾಡ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ, ಮಹಾನಗರ ಅಧ್ಯಕ್ಷ ಅಲ್ತಾಫ ಹಳ್ಳೂರ, ಶಾಸಕರಾದ ಪ್ರಸಾದ ಅಬ್ಬಯ್ಯ, ಕುಸುಮಾವತಿ ಶಿವಳ್ಳಿ, ಮಾಜಿ ಸಂಸದ ಐ.ಜಿ. ಸನದಿ, ಪ್ರಕಾಶಗೌಡ ಪಾಟೀಲ, ಎಫ್.ಎಚ್. ಜಕ್ಕಪ್ಪನವರ, ಅರವಿಂದ ಕಟಗಿ, ವಸಂತ ಲದ್ವಾ ಸೇರಿದಂತೆ ಇತರರು ಇದ್ದರು.