ಭಾರತ ಮುಂಬರುವ ದಿನಗಳಲ್ಲಿ ವಿಶ್ವದ ಅಗ್ರಗಣ್ಯ ರಾಷ್ಟ್ರಗಳಲ್ಲಿ ಒಂದಾಗಲಿದ್ದು, ಭಾರತದ ಆರ್ಥಿಕ ಶಕ್ತಿಗೆ ಡಿಜಿಟಲ್‌ಕ್ರಾಂತಿ ಹೆಚ್ಚು ಬಲ ನೀಡಿದೆ. ಡಿಜಿಟಲ್ ಕ್ರಾಂತಿಯಿಂದ ಎಲ್ಲೆಡೆ ನಗದು ರಹಿತ ವ್ಯವಹಾರಗಳು ನಡೆಯುತ್ತಿವೆ. ಪಾರದರ್ಶಕತೆ, ನಿಖರ ಲೆಕ್ಕ ಸಿಗುತ್ತಿದೆ. ಡಿಜಿಟಲ್ ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ ವಿಪುಲ ಅವಕಾಶಗಳಿದ್ದು ಅವುಗಳನ್ನು ಬಳಸಿಕೊಳ್ಳಲು ತಂತ್ರಜ್ಞಾನ ಕಲಿಕೆ ಅನಿವಾರ್ಯ ಎಂದು ತುಮಕೂರು ವಾಣಿಜ್ಯ ಸಂಶೋಧನಾ ಮತ್ತು ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ. ಸುರೇಶ್.ಬಿ.ಕೆ.ನಾಯ್ಡು ಕರೆ ನೀಡಿದರು.
ಮಧುಗಿರಿ (ಡಿ.25): ಭಾರತ ಮುಂಬರುವ ದಿನಗಳಲ್ಲಿ ವಿಶ್ವದ ಅಗ್ರಗಣ್ಯ ರಾಷ್ಟ್ರಗಳಲ್ಲಿ ಒಂದಾಗಲಿದ್ದು, ಭಾರತದ ಆರ್ಥಿಕ ಶಕ್ತಿಗೆ ಡಿಜಿಟಲ್‌ಕ್ರಾಂತಿ ಹೆಚ್ಚು ಬಲ ನೀಡಿದೆ. ಡಿಜಿಟಲ್ ಕ್ರಾಂತಿಯಿಂದ ಎಲ್ಲೆಡೆ ನಗದು ರಹಿತ ವ್ಯವಹಾರಗಳು ನಡೆಯುತ್ತಿವೆ. ಪಾರದರ್ಶಕತೆ, ನಿಖರ ಲೆಕ್ಕ ಸಿಗುತ್ತಿದೆ. ಡಿಜಿಟಲ್ ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ ವಿಪುಲ ಅವಕಾಶಗಳಿದ್ದು ಅವುಗಳನ್ನು ಬಳಸಿಕೊಳ್ಳಲು ತಂತ್ರಜ್ಞಾನ ಕಲಿಕೆ ಅನಿವಾರ್ಯ ಎಂದು ತುಮಕೂರು ವಾಣಿಜ್ಯ ಸಂಶೋಧನಾ ಮತ್ತು ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ. ಸುರೇಶ್.ಬಿ.ಕೆ.ನಾಯ್ಡು ಕರೆ ನೀಡಿದರು.
ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ (College) ಸ್ನಾತಕ ಮತ್ತು ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗ. ಐ.ಕ್ಯೂ.ಎ.ಸಿ. ಮತ್ತು ಉದ್ಯೋಗಕೋಶದ ವತಿಯಿಂದ ಏರ್ಪಡಿಸಿದ್ದ ಡಿಜಿಟಲ್ ಪೇಮೆಂಟ್ಸ್ ಮತ್ತು ಹೂಡಿಕೆಯ ಅವಕಾಶಗಳು ಕುರಿತಾದ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಭಾರತದಲ್ಲಿ (india) ಡಿಜಿಟಲ್ ಕ್ರಾಂತಿಯು 2012 ರಿಂದ ಪ್ರಾರಂಭವಾಗಿದ್ದು, ಪ್ರಸಕ್ತ ವರ್ಷ 23 ಬಿಲಿಯನ್ ಡಿಜಿಟಲ್ ವ್ಯವಹಾರಗಳಾಗಿದ್ದು, ಅಂದಾಜು 38.3 ಲಕ್ಷ ಕೋಟಿ ರುಗಳ ವಹಿವಾಟು ನಡೆದಿದೆ. ನಗದು ವ್ಯವಹಾರಕ್ಕಿಂತ ಆನ್ಲೈನ್ ವ್ಯವಹಾರಕ್ಕೆ ಹೆಚ್ಚಿನ ಮನ್ನಣೆ ನೀಡುತ್ತಿದ್ದು, ಸರ್ಕಾರದ ಬಹುತೇಕ ಸವಲತ್ತುಗಳು ಡಿಜಿಟಲ್ ಮೂಲಕ ನಡೆಯುತ್ತಿವೆ. ಪ್ರತಿದಿನ ಲಕ್ಷಾಂತರ ಸಂಖ್ಯೆಯ ಪಾವತಿ ಮತ್ತು ಸ್ವೀಕೃತಿ ನಡೆಯುತ್ತಿದ್ದು, ನಿಖರ ವಹಿವಾಟು ನಡೆಯುತ್ತಿದೆ. ಆರ್ಥಿಕ ಕ್ರಾಂತಿಯಿಂದ ವಿಪುಲ ಉದ್ಯೋಗಾವಕಾಶಗಳು ಸೃಷ್ಠಿಯಾಗಿದ್ದು, ಅವುಗಳನ್ನು ತಮ್ಮದಾಗಿಸಿಕೊಳ್ಳಬೇಕೆಂದರು.
ಕಾರ್ಯಕ್ರಮ ಉದ್ಘಾಟಿಸಿದ ಐ.ಕ್ಯೂ.ಎ.ಸಿ. ಸಂಚಾಲಕ ಡಾ.ಅಶೋಕ್ ಮಾತನಾಡಿ, ಜನಸಾಮಾನ್ಯರೂ ಸಹ ಇಂದು ನಿರ್ಭೀತಿಯಿಂದ ನಗದು ರಹಿತ ವ್ಯವಹಾರ ಮಾಡುವ ತಂತ್ರಜ್ಞಾನ ಆವಿಷ್ಕಾರವಾಗಿದೆ. ಹೂಡಿಕೆ ಕ್ಷೇತ್ರ ಎಲ್ಲರಿಗೂ ಮುಕ್ತವಾಗಿದ್ದು ಪ್ರತಿಯೊಬ್ಬರೂ ತಮ್ಮ ಉಳಿತಾಯವನ್ನು ವಿವಿಧ ಹೂಡಿಕೆಗಳಲ್ಲಿ ಹೂಡಿಕೆ ಮಾಡಿ ಲಾಭಗಳಿಸಬಹುದು ಎಂದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ನರಸಿಂಹಮೂರ್ತಿ ಟಿ.ಎನ್. ಮಾತನಾಡಿ, ಜ್ಞಾನ ತಂತ್ರಜ್ಞಾನ ಕ್ಷೇತ್ರಗಳ ಬಲದಿಂದ ಭಾರತ 5 ಟ್ರಿಲಿಯನ್ ಆರ್ಥಿಕತೆಯತ್ತ ದಾಪುಗಾಲಿಡುತ್ತಿದ್ದು, ಯುವಜನರಿಗೆ ಬ್ಯಾಂಕಿಂಗ್, ಆರ್ಥಿಕ ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ ಅಪಾರ ಅವಕಾಶಗಳು ಲಭ್ಯವಾಗಲಿವೆ. ಸರ್ಕಾರವು ಎಲ್ಲ ಸ್ವೀಕೃತಿ ಪಾವತಿಗಳಲ್ಲಿ ನಗದು ರಹಿತ ವ್ಯವಹಾರಕ್ಕೆ ಮನ್ನಣೆ ನೀಡುತ್ತಿದೆಯೆಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಿ.ಎಸ್.ಮುನೀಂದ್ರಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಗಳಿಕೆಯತ್ತ ಗಮನಹರಿಸಬೇಕು. ಲಭ್ಯ ತಂತ್ರಜ್ಞಾನದ ಆವಿಷ್ಕಾರಗಳನ್ನು ಜೀವನದ ಅಭ್ಯುದಯಕ್ಕೆ ಬಳಸಿಕೊಳ್ಳಬೇಕು. ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ, ಡಿಜಿಟಲ್ ಕ್ರಾಂತಿಯ ಜ್ಞಾನವನ್ನರಿತು ವ್ಯವಹರಿಸಬೇಕು. ಆರ್ಥಿಕತೆ, ಹೂಡಿಕೆ, ಬ್ಯಾಂಕಿಂಗ್ ಕ್ಷೇತ್ರಗಳಲ್ಲಿರುವ ಸವಾಲುಗಳನ್ನು ಮನಗಂಡು ಅವುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾನಿಲಯದಿಂದ ಪಿ.ಹೆಚ್.ಡಿ. ಪದವಿ ಪಡೆದ ವಾಣಿಜ್ಯಶಾಸ್ತ್ರ ಅಧ್ಯಾಪಕರಾದ ಡಾ.ಲಕ್ಷ್ಮೀಪತಯ್ಯ ಮತ್ತು ಡಾ.ಸುರೇಶ್.ಬಿ.ಕೆ.ನಾಯ್ಡುರವರನ್ನು ಸನ್ಮಾನಿಸಲಾಯತು.
ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಸಂಚಾಲಕರಾದ ಬಿ.ಮಂಜುನಾಥ್ ಕಾರ್ಯಕ್ರಮ ನಿರೂಪಿಸಿ, ಡಾ.ಲಕ್ಷ್ಮೀಪತಯ್ಯ ಸ್ವಾಗತಿಸಿ, ಪುಟ್ಟರಾಜು ವಂದಿಸಿದರು. ಅಧ್ಯಾಪಕರಾದ ಡಾ.ಎಸ್.ಆರ್.ಹನುಮಂತರಾಯ, ರೇಖಾ.ಬಿ.ಎನ್, ಮಹಾಲಕ್ಷ್ಮೀ.ಎನ್, ನರಸಿಂಹರಾಜು, ತಿಪ್ಪೇಶ್, ವಿದ್ಯಾರ್ಥಿ ಪ್ರತಿನಿಧಿಗಳಾದ ಅನುಷಾ.ಎಂ.ಎನ್. ಶ್ರೀನಿವಾಸ್, ಮಂಜುನಾಥ್, ದಿಲೀಪ್, ಮನು ಹಾಜರಿದ್ದರು.