ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕುಸಿದು 6 ತಿಂಗಳಾದರೂ ಕಾಣದ ದುರಸ್ಥಿ, ಬಿಜೆಪಿಯಿಂದಲೇ ಆಕ್ರೋಶ

By Suvarna News  |  First Published Feb 26, 2023, 5:42 PM IST

ಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪ್ರಾಕೃತಿಕ ವಿಕೋಪ ನಡೆಯುತ್ತಲೇ ಇದೆ. ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಹಲವು ಕಡೆ ಹೆದ್ದಾರಿ ಕುಸಿಯುತ್ತಿದ್ದು,  ಸರಿಪಡಿಸಲು ಆಗಿಲ್ಲ ಎಂದು ಸ್ವತಃ ಬಿಜೆಪಿ ಕಾರ್ಯಕರ್ತರೇ ಆಕ್ರೋಶ ವ್ಯಕ್ತಪಡಿಸುವಂತೆ ಆಗಿದೆ.


ವರದಿ : ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಫೆ.26): ಕೇವಲ ಒಂದೇ ಗಂಟೆಯಲ್ಲಿ ಮೈಸೂರು, ಬೆಂಗಳೂರು ನಡುವೆ ಸಂಚಾರ ಮಾಡುವಂತಹ ರಸ್ತೆ ಉದ್ಘಾಟನೆಯ ಸಂಭ್ರಮದಲ್ಲಿರುವ ಸಂಸದರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಆರು ತಿಂಗಳ ಹಿಂದೆ ಕುಸಿದು ಹೋಗಿರುವ ಮತ್ತೊಂದು ರಾಷ್ಟ್ರೀಯ ಹೆದ್ದಾರಿಯನ್ನು ಸರಿಪಡಿಸಲು ಆಗಿಲ್ಲ ಎಂದು ಸ್ವತಃ ಬಿಜೆಪಿ ಕಾರ್ಯಕರ್ತರೇ ಆಕ್ರೋಶ ವ್ಯಕ್ತಪಡಿಸುವಂತೆ ಆಗಿದೆ. ಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪ್ರಾಕೃತಿಕ ವಿಕೋಪ ನಡೆಯುತ್ತಲೇ ಇದೆ. ಈ ವೇಳೆ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಮಡಿಕೇರಿಯಿಂದ ಸಂಪಾಜೆವರೆಗೆ ಹಲವು ಕಡೆಗಳಲ್ಲಿ ಹೆದ್ದಾರಿ ಕುಸಿಯುತ್ತಿರುವುದು, ಹೆದ್ದಾರಿ ಮೇಲೆ ಬೆಟ್ಟ ಕುಸಿಯುತ್ತಿರುವುದು ಗೊತ್ತೇ ಇದೆ. ಕಳೆದ ಒಂದು ವರ್ಷದ ಹಿಂದೆ ಮಳೆಗಾಲದಲ್ಲಿ ಮಡಿಕೇರಿ ತಾಲ್ಲೂಕಿನ ದೇವರಕೊಲ್ಲಿ ಸುಮಾರು 60 ಮೀಟರ್ ನಷ್ಟು ಉದ್ದದ  ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಎರಡು ಆಳಕ್ಕೆ ಕುಸಿದಿತ್ತು. ಕಳೆದ ಆರು ತಿಂಗಳ ಹಿಂದೆ ಮತ್ತೆ ಅದೇ ಸ್ಥಳದಲ್ಲಿಯೇ ಹೆದ್ದಾರಿ ಕುಸಿದಿತ್ತು.

ಮಂಗಳೂರು ಮಡಿಕೇರಿ ನಡುವೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಆಗಿರುವುದರಿಂದ ತಾತ್ಕಾಲಿಕವಾಗಿ ಪಕ್ಕದಲ್ಲಿಯೇ ಒಂದು ರಸ್ತೆಯನ್ನು ಸಿದ್ದಗೊಳಿಸಲಾಗಿತ್ತು. ಮಳೆಗಾಲ ಮುಗಿದ ಬಳಿಕ ರಸ್ತೆ ಕಾಮಗಾರಿ ಮಾಡುವುದಾಗಿ ಅಧಿಕಾರಿಗಳು, ಸಂಸದ ಪ್ರತಾಪ್ ಸಿಂಹ ಹೇಳಿದ್ದರು. ಸ್ವತಃ ಕೊಡಗಿಗೆ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನರ ಸಂಚಾರಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಿ ಕೂಡಲೇ ರಸ್ತೆ ದುರಸ್ಥಿ ಮಾಡಿಸಿ ಎಂದು ಸೂಚಿಸಿದ್ದರು. ಶಾಸಕ ಕೆ.ಜಿ. ಬೋಪಯ್ಯ ಮತ್ತು ಸಂಸದ ಪ್ರತಾಪ್ ಸಿಂಹ ಅವರು ಕೂಡ ಹಣ ಕೊರತೆಯಿಲ್ಲ ರಸ್ತೆಗಳ ದುರಸ್ಥಿ ಕಾರ್ಯಕ್ಕೆ ಸಾಕಷ್ಟು ಹಣ ಬಿಡುಗಡೆಯಾಗಿದ್ದು ಕೂಡಲೇ ಕಾಮಗಾರಿ ಮಾಡುವುದಾಗಿ ಭರವಸೆ ನೀಡಿದ್ದರು. 

Latest Videos

undefined

ಆದರೆ ರಸ್ತೆ ಕುಸಿದು ಆರು ತಿಂಗಳಾದರೂ ಇಂದಿಗೂ ರಸ್ತೆ ದುರಸ್ಥಿ ಮಾಡುವ ಗೋಜಿಗೆ ಹೋಗಿಲ್ಲ. ಪಕ್ಕದಲ್ಲಿ ಸಿದ್ದ ಮಾಡಿದ್ದ ತಾತ್ಕಾಲಿಕ ರಸ್ತೆಯಲ್ಲಿಯೇ ನಿತ್ಯ ನೂರಾರು ವಾಹನಗಳು ಓಡಾಡುತ್ತಿವೆ. ಕೇವಲ ಜೆಲ್ಲಿಕಲ್ಲು ಸುರಿದು ಮಾಡಿದ್ದ ರಸ್ತೆಯು ಈಗ ಹೊಂಡ ಗುಂಡಿಮಯವಾಗಿದ್ದು, ವಾಹನಗಳನ್ನು ಚಲಾಯಿಸುವುದು ತೀರ ಕಷ್ಟವಾಗಿ ವಾಹನ ಸವಾರರು ಹೈರಾಣಾಗುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರಾದ ಜೋಡುಪಾಲದ ಅನಂತ್ ಅವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ವಿರಾಜಪೇಟೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಬ್ರೇಕ್ ಹಾಕಲು ಜೆಡಿಎಸ್ ಮಾಸ್ಟರ್ ಪ್ಲಾನ್

ಯಾವುದೇ ಕೆಲಸಗಳಿಗೆ ಮಡಿಕೇರಿಗೆ ಬರಬೇಕಾಗಿದ್ದು, ಇದೇ ಕುಸಿದು ಹಾಳಾಗಿರುವ ರಸ್ತೆಯಿಂದಲೇ ಹೋಗಿ ಬರಬೇಕಾಗಿದೆ. ಒಂದು ವೇಳೆ ಮುಂದಿನ ಮಳೆಗಾಲದಲ್ಲಿ ಮತ್ತಷ್ಟು ಕುಸಿದು ಹೋದಲ್ಲಿ ನಮಗೆ ಓಡಾಡುವುದಕ್ಕೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಲಿ ಎನ್ನುವುದು ಸ್ಥಳೀಯರಾದ ಯತೀಶ್ ಅವರ ಅಸಮಾಧಾನ. ರಸ್ತೆ ಕುಸಿದ ಬಳಿಕ ಮಳೆಗಾಲ ಕಳೆಯುತ್ತಿದ್ದಂತೆ ಕಾಮಗಾರಿ ಮಾಡುತ್ತಿರುವುದಾಗಿ ನಾಲ್ಕು ತಿಂಗಳ ಹಿಂದೆಯೇ ಎಂಸಿಪಿಎಲ್ ಕಂಪೆನಿಯಿಂದ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ ಎನ್ನುವ ಫಲಕ ಮಾತ್ರ ಹಾಕಲಾಗಿದ್ದು, ಕಾಮಗಾರಿ ಮಾತ್ರ ಆರಂಭವಾಗಿಲ್ಲ.

ಪಶುವೈದ್ಯರಿಲ್ಲದೆ ನಲುಗುತ್ತಿದೆ ಕೊಡಗಿನ ಹೈನುಗಾರಿಕೆ, ಇಡೀ ಜಿಲ್ಲೆಯಲ್ಲಿವುದು ಬರೀ 17 ಪಶುವೈದ್ಯರು

ಇನ್ನು ಮೂರು ತಿಂಗಳು ಕಳೆದಲ್ಲಿ ಮತ್ತೆ ಮಳೆಗಾಲ ಆರಂಭವಾಗಲಿದ್ದು ಕಾಮಗಾರಿ ನಡೆಯದಿದ್ದರೆ, ಮಡಿಕೇರಿ ಮಂಗಳೂರು ನಡುವೆ ಸಂಪರ್ಕವೇ ಕಡಿತವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇನ್ನಾದರೂ ಸಂಸದರು, ಶಾಸಕರು ಇತ್ತ ಗಮನಹರಿಸಿ ಕೂಡಲೇ ಹೆದ್ದಾರಿ ದುರಸ್ಥಿಗೊಳಿಸಿ ಸಾವಿರಾರು ಜನರ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.

click me!