ಪಶುವೈದ್ಯರಿಲ್ಲದೆ ನಲುಗುತ್ತಿದೆ ಕೊಡಗಿನ ಹೈನುಗಾರಿಕೆ, ಇಡೀ ಜಿಲ್ಲೆಯಲ್ಲಿವುದು ಬರೀ 17 ಪಶುವೈದ್ಯರು
ಕೊಡಗು ಜಿಲ್ಲೆಯಲ್ಲಿ ಪಶುವೈದ್ಯರ ಕೊರತೆ ಬಹಳ ತೀವ್ರವಾಗಿದೆ. ಐದು ತಾಲ್ಲೂಕುಗಳಿರುವ ಕೊಡಗು ಜಿಲ್ಲೆಯಲ್ಲಿ ಸಾವಿರಾರು ಜಾನುವಾರುಗಳಿದ್ದು, 40 ಕ್ಕೂ ಹೆಚ್ಚು ಪಶುವೈದ್ಯಕೀಯ ಚಿಕಿತ್ಸಾ ಕೇಂದ್ರಗಳಿವೆ. ಬರೋಬ್ಬರಿ 50 ಪಶುವೈದ್ಯರ ಅಗತ್ಯವಿದ್ದು, 33 ಪಶುವೈದ್ಯಕೀಯ ಚಿಕಿತ್ಸಾ ಕೇಂದ್ರಗಳಲ್ಲಿ ವೈದ್ಯರೇ ಇಲ್ಲದೆ ಖಾಲಿ ಇವೆ.
ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಫೆ.25): ಮಲೆನಾಡು, ಅರೆಮಲೆನಾಡು ಪ್ರದೇಶಗಳಿಂದ ಕೂಡಿರುವ ಕೊಡಗು ಜಿಲ್ಲೆಯಲ್ಲಿ ಪಶುವೈದ್ಯರ ಕೊರತೆ ಬಹಳ ತೀವ್ರವಾಗಿದೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆಗಳಿಲ್ಲದ ಕಾರಣ ರೈತರು ಹೈನುಗಾರಿಕೆಗೆ ಹಿಂದು ಮುಂದು ನೋಡುವಂತೆ ಆಗಿದೆ. ಐದು ತಾಲ್ಲೂಕುಗಳಿರುವ ಕೊಡಗು ಜಿಲ್ಲೆಯಲ್ಲಿ ಸಾವಿರಾರು ಜಾನುವಾರುಗಳಿದ್ದು, 40 ಕ್ಕೂ ಹೆಚ್ಚು ಪಶುವೈದ್ಯಕೀಯ ಚಿಕಿತ್ಸಾ ಕೇಂದ್ರಗಳಿವೆ. ನಿತ್ಯ ಹತ್ತಾರು ಜನರು ಸಾಕುನಾಯಿ, ಬೆಕ್ಕು, ಕೋಳಿ ಮತ್ತು ಜಾನುವಾರುಗಳ ಚಿಕಿತ್ಸೆಗಾಗಿ ಅವುಗಳಿಗೆ ಎಡತಾಕುತ್ತಾರೆ. ಅವುಗಳಿಗೆ ಬರೋಬ್ಬರಿ 50 ಪಶುವೈದ್ಯರ ಅಗತ್ಯವಿದ್ದು, 33 ಪಶುವೈದ್ಯಕೀಯ ಚಿಕಿತ್ಸಾ ಕೇಂದ್ರಗಳಲ್ಲಿ ವೈದ್ಯರೇ ಇಲ್ಲದೆ ಖಾಲಿ ಇವೆ. ಇದರಿಂದಾಗಿ ಜನರು ತಾವು ಪ್ರೀತಿಯಿಂದ ಸಾಕಿದ ವಿವಿಧ ಪ್ರಾಣಿಗಳಿಗೆ ಚಿಕಿತ್ಸೆ ಸಿಗದೆ ಪರದಾಡುವಂತೆ ಆಗಿದೆ. ಅರೆಮಲೆನಾಡಿನಂತಿರುವ ಕುಶಾಲನಗರ ತಾಲ್ಲೂಕಿನಲ್ಲಿ ರೈತರು ಕೃಷಿ ಜೊತೆಗೆ ಅತೀ ಹೆಚ್ಚು ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ವಿವಿಧ ತಳಿಯ ಜಾನುವಾರು ಸಾಕಾಣಿಕೆ ಜೊತೆಗೆ ಕೋಳಿ, ಹಂದಿ ಸಾಕಾಣಿಕೆ ಮಾಡಿ ಚಿಕ್ಕ ಆದಾಯ ಗಳಿಸುವ ಆಸೆ ಹೊಂದಿದ್ದಾರೆ.
ಆದರೆ ತಮ್ಮ ಸಾಕು ಪ್ರಾಣಿಗಳಿಗೆ ಯಾವುದಾದರೂ ಕಾಯಿಲೆ ಬಂತು ಎಂದರೆ ಅವುಗಳಿಗೆ ಚಿಕಿತ್ಸೆ ಕೊಡಿಸುವುದಕ್ಕೆ ವೈದ್ಯರಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ತಾವು ಸಾಕಿರುವ ಪ್ರಾಣಿಗಳಿಗೆ ಯಾವುದೇ ಕಾಯಿಲೆ ಬಂತೆಂದರೆ ಅವುಗಳಿಗೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪಿರುವ ಹಲವು ಘಟನೆಗಳಿವೆ.
ಹೀಗಾಗಿ ಇತ್ತೀಚೆಗೆ ಹೈನುಗಾರಿಕೆ ಮಾಡುವುದು ಕಷ್ಟದ ಕೆಲಸವಾಗಿದೆ ಎನ್ನುತ್ತಿದ್ದಾರೆ ರೈತರು. ಸಾವಿರಾರು, ಲಕ್ಷಾಂತರ ರೂಪಾಯಿ ವ್ಯಯಿಸಿ ಹಂದಿ, ಜಾನುವಾರು ತಂದು ಸಾಕಿರುತ್ತೇವೆ. ಆದರೆ ಯಾವುದಾದರೂ ಕಾಯಿಲೆ ಬಂತೆಂದರೆ ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಗದೆ ಸಾವನ್ನಪ್ಪಿದರೆ ಆ ನಷ್ಟವನ್ನು ನಾವು ತಡೆದುಕೊಳ್ಳಲು ಆಗುವುದಿಲ್ಲ.
ಹೀಗಾಗಿ ಹೈನುಗಾರಿಕೆ ಮಾಡುವುದು ಕಷ್ಟದ ಕೆಲಸ ಎನ್ನುವುದು ರೈತರ ಆತಂಕ. ಜಿಲ್ಲೆಯಲ್ಲಿರುವ ಪಶುವೈದ್ಯಕೀಯ ಚಿಕಿತ್ಸಾ ಕೇಂದ್ರಗಳು ಸುಸಜ್ಜಿತವಾಗಿವೆ. ಪಶುಗಳಿಗೆ ಬೇಕಾದ ಎಲ್ಲಾ ಚಿಕಿತ್ಸಾ ಸೌಲಭ್ಯಗಳು ಇವೆ. ಆದರೆ ವೈದ್ಯರೇ ಇಲ್ಲ. ಇದರಿಂದಾಗಿ ಆಸ್ಪತ್ರೆಗಳಲ್ಲಿ ಇರುವ ಔಷಧಿಗಳು ವ್ಯರ್ಥವಾಗುತ್ತಿವೆ. ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕರು ಸೇರಿ 18 ವೈದ್ಯರಿದ್ದು, ಒಬ್ಬೊಬ್ಬ ವೈದ್ಯರನ್ನು ಮೂರರಿಂದ ನಾಲ್ಕು ಪಶುವೈದ್ಯ ಆಸ್ಪತ್ರೆಗಳಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.
ಕೊಡಗಿನ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಒಬ್ಬ ಸಿಬ್ಬಂದಿಯೂ ಇಲ್ಲ, ಟೀ ತರುವುದಕ್ಕೂ ಪಿಡಿಓ ಹೋಗುವ ದುಃಸ್ಥಿತಿ!
ಅಂದರೆ ಒಬ್ಬ ವೈದ್ಯರು ಒಂದು ಪಶುವೈದ್ಯ ಚಿಕಿತ್ಸಾ ಕೇಂದ್ರಕ್ಕೆ ವಾರದಲ್ಲಿ ಒಂದು ದಿನ ಹೋಗುವುದು ತೀರಾ ಕಷ್ಟವಾಗಿದೆ. ತೀರಾ ತುರ್ತು ಚಿಕಿತ್ಸೆ ಬೇಕಾಗಿದೆ ಎಂದು ರೈತರು ಕರೆ ಮಾಡಿದಾಗಲೆಲ್ಲಾ ವೈದ್ಯರು ಒಂದು ಚಿಕಿತ್ಸಾ ಕೇಂದ್ರದಿಂದ ಮತ್ತೊಂದು ಚಿಕಿತ್ಸಾ ಕೇಂದ್ರದ ವ್ಯಾಪ್ತಿಯ ಹಳ್ಳಿಗಳಿಗೆ ತಲುಪಲು ಒಂದೆರಡು ಗಂಟೆಗಳು ಬೇಕಾಗುತ್ತವೆ. ಅಲ್ಲಿಯವರೆಗೆ ಜನರು ಕಾಯಬೇಕಾದ ಸ್ಥಿತಿ ಎನ್ನುತ್ತಾರೆ.
ವಿರಾಜಪೇಟೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಬ್ರೇಕ್ ಹಾಕಲು ಜೆಡಿಎಸ್ ಮಾಸ್ಟರ್ ಪ್ಲಾನ್
ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಸುರೇಶ್ ಭಟ್. ಚರ್ಮಗಂಟು ರೋಗ ಮತ್ತು ಕಾಲುಬಾಯಿ ಜ್ವರಗಳು ಬಂದಾಗ ಜಿಲ್ಲೆಯ ರೈತರು ಪಡಬಾರದ ಕಷ್ಟ ಅನುಭವಿಸಿದರು. ಅನಿವಾರ್ಯವಾಗಿ ಪ್ರತೀ ಮನೆ ಮನೆ ಬಳಿಗೆ ಹೋಗಿ ಲಂಪಿಸ್ಕಿನ್ ಚಿಕಿತ್ಸೆ ಕೊಟ್ಟಿದ್ದೇವೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಪಶುವೈದ್ಯಕೀಯ ವೈದ್ಯರಿಲ್ಲದೆ ಹೈನುಗಾರಿಕೆಗೆ ಪೆಟ್ಟು ಬೀಳುತ್ತಿದೆ ಎನ್ನುವುದು ಸತ್ಯ.