ಕೊಪ್ಪಳ ಜಿಲ್ಲೆಯಲ್ಲಿ ದೇವದಾಸಿ ಪದ್ದತಿ ಜೀವಂತ
ಹುಲಿಗಿಯ ಹುಲಿಗೆಮ್ಮ ದೇವಸ್ಥಾನದಲ್ಲಿ ಯುವತಿಗೆ ಮುತ್ತು ಕಟ್ಟಿದ ಕುಟುಂಬಸ್ಥರು
ಆರು ತಿಂಗಳ ನಂತರ ಬೆಳಕಿಗೆ ಬಂದ ಪ್ರಕರಣ
ಕೊಪ್ಪಳ (ಡಿ.28): ನಮ್ಮ ಮನೆಯಲ್ಲಿ ಯಾರಾದರೂ ಕುಟುಂಬ ಸದಸ್ಯರಿಗೆ ಅಥವಾ ಮಕ್ಕಳಿಗೆ ಅನಾರೋಗ್ಯ ಇದ್ದರೆ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತೇವೆ. ಆದರೆ, ಕೊಪ್ಪಳ ಜಿಲ್ಲೆಯಲ್ಲಿನ ಕುಟುಂಬವೊಂದು ತಮ್ಮ 21 ವರ್ಷದ ಯುವತಿಗೆ ಅನಾರೋಗ್ಯವಿದೆ ಎಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬದಲು ದೇವರ ಹೆಸರಿನಲ್ಲಿ ದೇವದಾಸಿಯನ್ನಾಗಿ ಮಾಡಿದ್ದಾರೆ. ಇಂತಹ ಮೂಢನಂಬಿಕೆಯ ಘಟನೆಯಿಂದ ಇಡೀ ಸಮಾಜವೇ ತಲೆ ತಗ್ಗಿಸುವಂತಾಗಿದೆ.
ಕೊಪ್ಪಳ ತಾಲೂಕು ವ್ಯಾಪ್ತಿಯ ಗ್ರಾಮವೊಂದರ ಈ ಯುವತಿಗೆ ಪದೇ ಪದೆ ಅನಾರೋಗ್ಯ ಕಾಡುತ್ತಿತ್ತು. ಇನ್ನು ಪೋಷಕರು ಅನಾರೋಗ್ಯಕ್ಕೆ ದೇವರ ಶಾಪವೇ ಕಾರಣ ಎಂದು ಭಾವಿಸಿದ್ದರು. ಅನಾರೋಗ್ಯವನ್ನು ತಡೆಗಟ್ಟಲು ದೇವದಾಸಿಯಾಗಿಸಿದರೆ ಗುಣಮುಖವಾಗುತ್ತಾಳೆ ಎಂಬ ಮೂಢನಂಬಿಕೆಯಿಂದ ಕುಟುಂಬದವರು ಯುವತಿಯನ್ನು 7 ತಿಂಗಳ ಹಿಂದೆ ಜಿಲ್ಲೆಯ ಪ್ರಮುಖ ದೇವಸ್ಥಾನವೊಂದಕ್ಕೆ ಕರೆದೊಯ್ದು ಪೂಜೆ ಸಲ್ಲಿಸಿದ್ದಾರೆ. ನಂತರ ವಿಧಿ ವಿಧಾನಗಳ ಮೂಲಕ ಹುಲಿಗಿಯ ಹುಲಿಗೆಮ್ಮ ದೇವಸ್ಥಾನದಲ್ಲಿ ಕುಟುಂಬಸ್ಥರು ಯುವತಿಗೆ ಮುತ್ತು ಕಟ್ಟಿಸಿ ದೇವದಾಸಿಯನ್ನಾಗಿ ಮಾಡಿದ್ದಾರೆ.
ದಲಿತ ಮುಖಂಡರಿಂದ ತನಿಖೆಗಾಗಿ ದೂರು: ಗ್ರಾಮದಲ್ಲಿ ಯುವತಿಯ ನಡವಳಿಕೆ, ವಿಚಿತ್ರ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದ ಗ್ರಾಮದ ದಲಿತ ಸಮುದಾಯದ ಮುಖಂಡರಿಗೆ ಸಂಶಯ ಕಾಡಿದೆ. ಮದುವೆ ವಯಸ್ಸಿಗೆ ಬಂದರೂ ಯುವತಿಗೆ ಮದುವೆ ಮಾಡದೇ ಇರುವುದು ಹಾಗೂ ಈ ಯುವತಿ ದೇವದಾಸಿಯರಂತೆ ಬಳೆ, ಸೀರೆ ಧರಿಸಿರುವುದು ಮತ್ತಷ್ಟು ಪುರಾವೆ ಒದಗಿಸಿವೆ. ಈ ಕುರಿತಂತೆ ದಲಿತ ಸಮುದಾಯದ ಕೆಲವು ಮುಖಂಡರು, ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಗಮನಕ್ಕೆ ದೇವದಾಸಿ ಪದ್ದತಿ ಜೀವಂತವಾಗಿರುವ ಬಗ್ಗೆ ತಿಳಿಸಿದ್ದಾರೆ.
ದೇವದಾಸಿ ಮಹಿಳೆಯರ ಸಮೀಕ್ಷೆಗೆ ನಿರ್ಧರಿಸುವುದು ಸ್ವಾಗತಾರ್ಹ: ದೇವದಾಸಿ ಮಹಿಳೆಯರ ವಿಮೋಚನಾ ಸಂಘ
ಯುವತಿಯ ತಂದೆ ತಾಯಿ ಬಂಧನ: ದೇವದಾಸಿ ಪುನರ್ವಸತಿ ಯೋಜನೆಯ ಪ್ರಭಾರಿ ಜಿಲ್ಲಾ ಯೋಜನಾಧಿಕಾರಿ ಪೂರ್ಣಿಮಾ ಅವರು, ಯುವತಿ ವಾಸಿಸುತ್ತಿರುವ ಗ್ರಾಮ ಹಾಗೂ ದೇವದಾಸಿ ಪಟ್ಟ ನೀಡಿದ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದಾಗ ಪ್ರಕರಣ ಬಹಿರಂಗವಾಗಿದೆ. ಕಳೆದ ಏಳು ತಿಂಗಳ ಹಿಂದೆ ನಡೆದಿದ್ದ ಘಟನೆ ಬಗ್ಗೆ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವತಿಯ ತಂದೆ, ತಾಯಿ ಹಾಗೂ ಅಕ್ಕನನ್ನು ಬಂಧಿಸಿದ್ದಾರೆ.
ಹುಲಿಗಿ ದೇವಸ್ಥಾನದಲ್ಲಿ ಮುತ್ತು ಕಟ್ಟಿದರು: ಕೊಪ್ಪಳ ತಾಲೂಕಿನ ಕುಟುಂಬವೊಂದು ಅನಾರೋಗ್ಯದ ನೆಪವೊಡ್ಡಿ ಯುವತಿಯೊಬ್ಬರನ್ನು ಹುಲಿಗೆಮ್ಮ ದೇವಸ್ಥಾನದಲ್ಲಿ ದೇವದಾಸಿ ಪದ್ಧತಿಗೆ ದೂಡಿರುವುದು ಪ್ರಾಥಮಿಕ ಹಂತದ ಪರಿಶೀಲನೆ ವೇಳೆ ರುಜುವಾತಾಗಿದೆ. ಯುವತಿಯನ್ನು ದೇವದಾಸಿ ಪದ್ಧತಿಗೆ ದೂಡಿದ ಆರೋಪ ಆಧರಿಸಿ ಯಮನೂರಪ್ಪ ಮುಂದಲಮನಿ, ಹುಲಿಗೆವ್ವ ಮುಂದಲಮನಿ, ಮೂಕಪ್ಪ ಹನುಮಪ್ಪ ಅವರ ವಿರುದ್ಧ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇವದಾಸಿ ಪದ್ಧತಿ ನಿಯಂತ್ರಣ: ಕರ್ನಾಟಕಕ್ಕೆ NHRC ನೋಟಿಸ್
ಕೊಪ್ಪಳದಲ್ಲಿದೆ ಹೆಚ್ಚು ಮೂಡನಂಬಿಕೆ: ಇಡೀ ಜಗತ್ತೇ ಆಧುನಿಕತೆ ಹಾಗೂ ವೈಜ್ಞಾನಿಕ ಯುಗವಾಗಿ ಬೆಳೆಯುತ್ತಿದೆ. ಆವಿಷ್ಕಾರ ಮತ್ತು ಸಂಶೋಧನೆಗಳು ಉತ್ತುಂಗಕ್ಕೆ ತಲುಪಿದ್ದು, ಬೇರೊಂದು ಗ್ರಹಕ್ಕೆ ಹೋಗುವಂತಾಗಿದೆ. ಆದರೆ, ರಾಜ್ಯದಲ್ಲಿ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿರುವ ಕೊಪ್ಪಳ ಜಿಲ್ಲೆಯ ಕೆಲವು ತಾಲೂಕುಗಳ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ದೇವದಾಸಿ ಪದ್ಧತಿ ಜೀವಂತವಾಗಿದೆ. ಇದಕ್ಕೆ ಈಗ ನಡೆದಿರುವ ದೇವದಾಸಿ ಪ್ರಕರಣ ಜ್ವಲಂತ ಉದಾಹರಣೆಯಾಗಿದೆ. ಇನ್ನು ಕಳೆದ ನಾಲ್ಕು ವರ್ಷಗಳ ಹಿಂದೆ ಕುಕನೂರು ಹಾಗೂ ಕುಷ್ಟಗಿ ತಾಲೂಕಿನಲ್ಲೂ ಇಂಥದೇ ಪ್ರಕರಣಗಳು ಬೆಳಕಿಗೆ ಬಂದಿದ್ದವು.