ಲಾಕ್‌ಡೌನ್ ಸಮಯದಲ್ಲಿ ರಾಜ್ಯದ ಲಕ್ಷಾಂತರ ಕುಟುಂಬಗಳು ಮದ್ಯ ನಿಷೇಧ ಮಾಡಿರುವ ಕಾರಣಕ್ಕೆ ನೆಮ್ಮದಿ ಕಂಡುಕೊಂಡಿದ್ದವು. ಇದೀಗ ಸರ್ಕಾರ ಆರ್ಥಿಕ ಲಾಭ ಮಾಡಿಕೊಳ್ಳಲು ಮದ್ಯ ಮಾರಾಟವನ್ನು ಆರಂಭಿಸಬಾರದು ಎಂದು ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಚಿತ್ರದುರ್ಗ(ಮೇ.05): ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾಡಿದ ಮದ್ಯ ನಿಷೇಧವನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗಬೇಕೆಂದು ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸ್ವಾಮೀಜಿ, ಕೊರೊನಾ ಸೋಂಕು ಇಡೀ ಜಗತ್ತನ್ನು ತಲ್ಲಣಗೊಳಿಸಿದ್ದು ದೇಶವಾಸಿಗಳು ಆತಂಕದಲ್ಲಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಶಕ್ತಿ ಮೀರಿ ಪ್ರಯತ್ನಿಸಿ ಭಾಗಶಃ ಯಶ ಕಾಣಲಾಗಿದೆ. ಮೂರನೇ ಹಂತದ ಲಾಕ್ ಡೌನ್ ವೇಳೆ ಆರ್ಥಿಕ ಚಟುವಟಿಕೆಗಳಿಗೆ ಒಪ್ಪಿಗೆ ನೀಡುವಾಗ ಮದ್ಯ ಮಾರಾಟಕ್ಕೂ ಅವಕಾಶ ನೀಡಿರುವುದು ವಿಷಾದನೀಯ ಎಂದಿದ್ದಾರೆ.
ಲಾಕ್‌ಡೌನ್ ಸಮಯದಲ್ಲಿ ರಾಜ್ಯದ ಲಕ್ಷಾಂತರ ಕುಟುಂಬಗಳು ಮದ್ಯ ನಿಷೇಧ ಮಾಡಿರುವ ಕಾರಣಕ್ಕೆ ನೆಮ್ಮದಿ ಕಂಡುಕೊಂಡಿದ್ದವು. ಸರ್ಕಾರ ನೀಡಿದ ನೆರವು ಪಡೆದ ಬಡ ಕುಟುಂಬಗಳು ಹೇಗೋ ಪರಿಸ್ಥಿತಿ ನಿಭಾಯಿಸಿದವು. ಈ ಸಂದರ್ಭದಲ್ಲಿ ಸರ್ಕಾರ ಶಾಶ್ವತವಾಗಿ ಮದ್ಯ ನಿಷೇಧ ಮಾಡಿದಲ್ಲಿ ಭವಿಷ್ಯದ ನಮ್ಮ ಜೀವನ, ಕುಟುಂಬದ ಭದ್ರತೆಯಿಂದ ಇರುತ್ತವೆ ಎಂದು ಲಕ್ಷಾಂತರ ಅಸಂಘಟಿತ ಕಾರ್ಮಿಕ ಕುಟುಂಬಗಳು, ಮಹಿಳೆಯರಂತೂ ಇದು ಹೀಗೆಯೇ ಮುಂದುವರಿಯಲಿ ಎಂದು ಬಯಸಿದ್ದರು. ಕುಡಿತದ ಚಟಕ್ಕೆ ದಾಸರಾಗಿದ್ದವರೂ ಕೂಡಾ ಅದರ ಹಿಡಿತದಿಂದ ಹೊರ ಬಂದು ಹೊಸ ಬದುಕು ಕಟ್ಟಿಕೊಳ್ಳಲು ಮಾನಸಿಕವಾಗಿ ಸಜ್ಜಾಗಿದ್ದರು.
ಡ್ಯೂಟಿಗೆ ಚಕ್ಕರ್; ಸ್ನೇಹಿತರ ಜೊತೆ ಎಣ್ಣೆ ಪಾರ್ಟಿಗೆ ಪೇದೆ ಹಾಜರ್.!
ಲಾಕ್‌ಡೌನ್‌ನಿಂದಾಗಿ ಬಡ ಕಾರ್ಮಿಕರು ಹೊರಗೆ ಬಂದರೂ ದುಡಿಯುವ ಅವಕಾಶವಿಲ್ಲ. ಈ ಪರಿಸ್ಥಿತಿ ಇನ್ನು ಆರೇಳು ತಿಂಗಳು ಮುಂದುವರಿಯಲಿದೆ. ಮದ್ಯಮಾರಾಟಕ್ಕೆ ಅವಕಾಶ ನೀಡಿದಲ್ಲಿ ಆದಾಯ ಮೂಲ ಇಲ್ಲದೇ ಮನೆಯಲ್ಲಿರುವ ದವಸ, ಧಾನ್ಯ ಜತೆಗೆ ಮನೆಯ ಸಾಮಾನು, ಆಸ್ತಿಪಾಸ್ತಿ ಮಾರಾಟ ಮಾಡಿ ಕುಡಿತಕ್ಕೆ ಮುಂದಾಗಬಹುದಾದ ಅಪಾಯ ಇದೆ. ವಿಶೇಷವಾಗಿ ಎಸ್ಸಿ, ಎಸ್ಟಿ, ಒಬಿಸಿ ಸಮುದಾಯದ ಬಡ ಕುಟುಂಬಗಳು ಬೀದಿಗೆ ಬೀಳಲಿವೆ.
ಈಗಾಗಲೇ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಮದ್ಯ ಮಾರಾಟ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನಾವು ಸಹಾ ಈ ಒತ್ತಾಯದ ಪರವಾಗಿ ಇದ್ದೇವೆ. ಮದ್ಯಪಾನ ವಿರೋಧಿಸಿ ನಡೆಯುವ ಜನಾಂದೋಲನ ಗಳಲ್ಲೂ ಭಾಗವಹಿಸಲಿದ್ದೇವೆ. ಮದ್ಯಪಾನ ನಿಷೇಧದ ಸಂದರ್ಭದಲ್ಲಿ ಆದಾಯ ಸಂಗ್ರಹದ ನೆಪ ಮುಂದೆ ಮಾಡುವುದು ಸರಿಯಲ್ಲ. ಸರ್ಕಾರ ಮನಸ್ಸು ಮಾಡಿ ಇಚ್ಛಾಶಕ್ತಿ ಪ್ರಕಟಿಸಿದಲ್ಲಿ ಮದ್ಯ ಮಾರಾಟದಿಂದ ಬರುವ ಆದಾಯವನ್ನು ನಾನಾ ಕಡೆ ಆಗುತ್ತಿರುವ ಸೋರಿಕೆ ತಡೆಗಟ್ಟಿ, ತಜ್ಞರ ಸಲಹೆ, ಸೂಚನೆ ಪಡೆದು ಹೆಚ್ಚಿಸಿಕೊಳ್ಳಬಹುದು.
ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವ ನಿರ್ಧಾರವನ್ನು ಮರುಪರಿಶೀಲಿಸಬೇಕು. ಮದ್ಯ ನಿಷೇಧದಿಂದ ಉಂಟಾಗಬಹುದಾದ ಸವಾಲುಗಳ ಪರಿಹಾರಕ್ಕೆ ನಾಡಿನ ಜನತೆ ನಿಮ್ಮ ಜೊತೆ ಇರುತ್ತದೆ ಎಂದು ಹೇಳಬಯಸುವುದಾಗಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.