ದೇಶೀಯ ಗೋಸಂಪತ್ತು ಇತ್ತೀಚಿನ ವರ್ಷಗಳಲ್ಲಿ ಅಳಿವಿನಂಚಿನಲ್ಲಿದ್ದು, ಇವುಗಳ ಸಂರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕಿದೆ. ಇವುಗಳ ಉತ್ಪನ್ನಗಳಲ್ಲಿ ಕುಟುಂಬ ಮತ್ತು ಸಮಾಜದ ಸಮೃದ್ಧ ಆರೋಗ್ಯ ಅಡಗಿದೆ ಎಂದು ತಾಲೂಕಿನ ಕೊನೇಹಳ್ಳಿ ಆಯುಷ್ ವೈದ್ಯಾಧಿಕಾರಿ ಹಾಗೂ ದೇಸೀ ಗವ್ಯೋತ್ಪನ್ನ ಪರಿವಾರದ ರುವಾರಿ ಡಾ. ಸುಮನಾ ತಿಳಿಸಿದರು.
ತಿಪಟೂರು : ದೇಶೀಯ ಗೋಸಂಪತ್ತು ಇತ್ತೀಚಿನ ವರ್ಷಗಳಲ್ಲಿ ಅಳಿವಿನಂಚಿನಲ್ಲಿದ್ದು, ಇವುಗಳ ಸಂರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕಿದೆ. ಇವುಗಳ ಉತ್ಪನ್ನಗಳಲ್ಲಿ ಕುಟುಂಬ ಮತ್ತು ಸಮಾಜದ ಸಮೃದ್ಧ ಆರೋಗ್ಯ ಅಡಗಿದೆ ಎಂದು ತಾಲೂಕಿನ ಕೊನೇಹಳ್ಳಿ ಆಯುಷ್ ವೈದ್ಯಾಧಿಕಾರಿ ಹಾಗೂ ದೇಸೀ ಗವ್ಯೋತ್ಪನ್ನ ಪರಿವಾರದ ರುವಾರಿ ಡಾ. ಸುಮನಾ ತಿಳಿಸಿದರು.
ತಾಲೂಕಿನ ದೇಸೀ ಗವ್ಯೋತ್ಪನ್ನ ಪರಿವಾರದ ವತಿಯಿಂದ ಗಡಿಗ್ರಾಮ ಮೈಲನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ದೇಸೀ ಗೋತಳಿ ಹಾಗೂ ದೇಶೀಯ ಕೃಷಿ ಪದ್ಧತಿಯ ಉಳಿವು ಕಾರ್ಯಕ್ರಮವನ್ನು ದೇಸೀ ಗೋವಿಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕೌಟುಂಬಿಕ ಆರೋಗ್ಯ, ಅಭಿವೃದ್ಧಿ ಹಾಗೂ ನಶಿಸುತ್ತಿರುವ ದೇಸೀ ಗೋತಳಿ ಹಾಗೂ ಇವುಗಳ ಉತ್ಪನ್ನಗಳು ಮತ್ತು ದೇಸೀಯ ಕೃಷಿ ಆಹಾರ ಪದ್ಧತಿಯನ್ನು ಮರು ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಈ ವೇದಿಕೆಯನ್ನು ಪ್ರಾರಂಭಿಸಲಾಗಿದೆ. ಇತ್ತೀಚಿನ ಆಧುನಿಕ ತಾಂತ್ರಿಕ ಜಗತ್ತಿನಲ್ಲಿ ಈ ಹಿಂದೆ ಇದ್ದಂತಹ ಆರೋಗ್ಯ ಪದ್ಧತಿಗಳು ಮಾಯವಾಗುತ್ತಿದ್ದು, ಎಲ್ಲರೂ ಫಾಸ್ಟ್‌ಫುಡ್‌ನತ್ತ ಒಲವು ಬೆಳೆಸಿಕೊಂಡು ತಮ್ಮ ಆರೋಗ್ಯವನ್ನು ತಮ್ಮ ಕೈಯಾರೆ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಮಯದ ಅಭಾವ, ಒತ್ತಡದ ಜೀವನದಿಂದ ತಾಯಂದಿರು ಮಕ್ಕಳಿಗೆ ನೂಡಲ್ಸ್, ಮ್ಯಾಗಿಯಂತಹ ಆಹಾರಗಳನ್ನು ನೀಡುತ್ತಿದ್ದು ಇದು ಆರೋಗ್ಯದ ಮೇಲೆ ಕೆಟ್ಟಪರಿಣಾಮ ಬೀರುತ್ತಿದೆ. ಕ್ಷಣಿಕ ರುಚಿಗಾಗಿ ಆರೋಗ್ಯ ಹಾಳು ಮಾಡಿಕೊಳ್ಳದೆ ದೇಸೀ ಗೋ ತಳಿಗಳ ಉತ್ಪನ್ನಗಳನ್ನು ಸೇವನೆ ಮಾಡುವುದರಿಂದ ಸುದೀರ್ಘವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಿಂದಿನ ಕಾಲದ ಅಜ್ಜಿ, ಅಜ್ಜಂದಿರು ಗಟ್ಟಿಮುಟ್ಟಾಗಿರುವುದಕ್ಕೆ ಇದೇ ಕಾರಣವಾದ್ದರಿಂದ ದೇಸೀ ಗೋವುಗಳನ್ನು ರಕ್ಷಿಸುವುದರಿಂದ ಆರೋಗ್ಯಕ್ಕೂ ಒಳಿತಾಗಲಿದೆ ಎಂದರು.
ಕೆವಿಕೆಯ ಹಿರಿಯ ವಿಜ್ಞಾನಿ ಗೋವಿಂದೇಗೌಡ ಮಾತನಾಡಿ, ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಯ ಫಲವತ್ತತೆ ನಾಶವಾಗುತ್ತಿದ್ದು, ಇದರಿಂದ ಆರೋಗ್ಯಕ್ಕೂ ಕುತ್ತು ಬರಲಿದೆ. ಆದ್ದರಿಂದ ನಾಟಿ ಹಸು ಸಾಕುವುದರಿಂದ ಪರಿಸರ ಸಂರಕ್ಷಣೆ ಮತ್ತು ಆರೋಗ್ಯಕ್ಕೂ ಒಳಿತಾಗಲಿದೆ ಎಂದು ಸಾವಯವ ಕೃಷಿಯ ಮಹತ್ವ ಮತ್ತು ವಿನೂತನ ತಂತ್ರಜ್ಞಾನದಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಂಡು ಹೆಚ್ಚಿನ ಇಳುವರಿಯನ್ನು ಪಡೆಯುವ ಬಗ್ಗೆ ಮತ್ತು ದೇಶೀ ಗೋಸಂಪತ್ತಿನ ರಕ್ಷಣೆ, ಬಳಕೆ ಬಗ್ಗೆ ತಿಳಿಸಿಕೊಟ್ಟರು.
ನಿವೃತ್ತ ಅಧ್ಯಾಪಕ ರಾಜಣ್ಣ ಸಮಗ್ರ ಕೃಷಿ, ಸಹಜ ಕೃಷಿ ಹಾಗೂ ಆರ್ಥಿಕ ಸುಸ್ಥಿರತೆ ಬಗ್ಗೆ ತಿಳಿಸಿದರು. ರೈತ ಕೆರೆಗೋಡಿ ರಾಜಣ್ಣ ದೇಸೀ ಹಸು ಸಾಕುವ ತಮ್ಮ ಅನುಭವ ಹಂಚಿಕೊಂಡರು. ರೈತ ಮಲ್ಲಿಕಾರ್ಜುನ್ ಇಂದಿನ ಪೀಳಿಗೆ ನಗರದ ಕಡೆ ಮುಖಮಾಡದೆ ಗ್ರಾಮೀಣ ಬದುಕಿನಡೆಗೆ ಬರುವುದು ಅಗತ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಯೋಕರಾದ ಮೈಲನಹಳ್ಳಿ ರಾಜಣ್ಣ ಹಾಗೂ ಕುಟುಂಬದವರು, ಆರ್ಥಿಕ ಸಮಾಲೋಚಕರಾದ ಪಿ. ರೇಖಾ, ಭಾರತೀಯ ಕಿಸಾನ್ ಸಂಘದ ಶಂಕರಮೂರ್ತಿ, ಪ್ರಗತಿಪರ ರೈತ ತಡಸೂರು ಯೋಗಾನಂದ, ಗವ್ಯೋತ್ಪನ್ನ ತಯಾರಕರಾದ ನವೀನ, ಭಾರತಿ, ತ್ರಿವೇಣಿ, ಸಿದ್ದಗಂಗ ಸೇರಿದಂತೆ ರೈತರು ಭಾಗವಹಿಸಿದ್ದರು.
ಪಂಚಗವ್ಯದಿಂದ ಆರೋಗ್ಯ ವೃದ್ಧಿ: ಗುರೂಜಿ
ಚಿಕ್ಕನಾಯಕನಹಳ್ಳಿ ಗೋಶಾಲ ಪಾಲಕರಾದ ಗುರೂಜಿ ಮಾತನಾಡಿ, ಗೋಪಾಲಕರ ಮನೆಗಳಿಂದ ದೇಸೀ ಹಸುಗಳು ಆಚೆ ಹೋದ ಬೆನ್ನಲ್ಲೇ ವಿಚಿತ್ರ ರೋಗಗಳು ಮನೆ ಒಳಗೆ ಬಂದವು. ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ದೇಸೀ ಹಸುಗಳು ಹೆಚ್ಚು ಮಹತ್ವವಾಗಿದ್ದು ಇತ್ತೀಚಿನ ದಿನಗಳಲ್ಲಿ ದೇಸೀ ಹಸುಗಳನ್ನು ಸಾಕುವವರ ಸಂಖ್ಯೆ ಕಡಿಮೆಯಾಗುತ್ತಿದೆ. ದೇಸೀ ಹಸುವಿನ ಹಾಲಿನ ಸೇವನೆಯಿಂದ ಹಾಗೂ ಅವುಗಳ ಒಡನಾಟದಿಂದ ಮನಶಾಂತಿ ದೊರೆಯುತ್ತದೆ. ಪಂಚಗವ್ಯದಿಂದ ಮಾನವನ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗಲಿದೆ. ರೇಡಿಯೇಶನ್ನಿಂದ ರಕ್ಷಿಸಿಕೊಳ್ಳಲು ದೇಸೀ ಗವ್ಯೋತ್ಪನ್ನದ ಕೀ ಚೈನ್, ಗಣೇಶ ಇತರೆ ಮೂರ್ತಿಗಳು ಸಹಕಾರಿಯಾಗಿವೆ ಎಂದು ದೇಸೀ ಹಸುಗಳ ಗೋಮೂತ್ರ ಹಾಗೂ ಸಗಣಿಯಿಂದ ತಯಾರಿಸಿದ ವಿವಿಧ ಉತ್ಪನ್ನಗಳ ಪ್ರದರ್ಶನ ಹಾಗೂ ಉಪಯೋಗವನ್ನು ತಿಳಿಸಿಕೊಟ್ಟರು.