ಹರಪನಹಳ್ಳಿ ಬಿಜೆಪಿ ಪದಗ್ರಹದಲ್ಲಿ ಭಿನ್ನಮತ ಸ್ಫೋಟ!

By Kannadaprabha News  |  First Published Mar 17, 2024, 5:13 PM IST

ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗುವ ದಿನದ ಸಂದರ್ಭದಲ್ಲಿಯೇ ಇಲ್ಲಿಯ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟವಾಗಿ ಮಾತಿನ ಚಕಮಕಿ, ವಾಗ್ವಾದ, ಗೊಂದಲ ಏರ್ಪಟ್ಟಿತು. ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಬಿಜೆಪಿ ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಈ ಘಟನೆಗೆ ಸಾಕ್ಷಿಯಾಯಿತು.


ಹರಪನಹಳ್ಳಿ (ಮಾ.17): ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗುವ ದಿನದ ಸಂದರ್ಭದಲ್ಲಿಯೇ ಇಲ್ಲಿಯ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟವಾಗಿ ಮಾತಿನ ಚಕಮಕಿ, ವಾಗ್ವಾದ, ಗೊಂದಲ ಏರ್ಪಟ್ಟಿತು. ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಬಿಜೆಪಿ ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಈ ಘಟನೆಗೆ ಸಾಕ್ಷಿಯಾಯಿತು.

ಬೆಳಗ್ಗೆ 11 ಗಂಟೆಗೆ ಪದಗ್ರಹಣ ಕಾರ್ಯಕ್ರಮ ನಿಗದಿಯಾಗಿತ್ತು. ಕೆಲವೊಂದು ಮುಖಂಡರು, ಕಾರ್ಯಕರ್ತರು ಕಲ್ಯಾಣ ಮಂಟಪದ ಹಾಲ್‌ನಲ್ಲಿ ಮುಂಚಿತವಾಗಿ ತೆರಳಿ ಆಸೀನರಾಗಿದ್ದರು. ಬೆಳಗ್ಗೆ 11.30ಕ್ಕೆ ಸರಿಯಾಗಿ ಬಿಜೆಪಿ ಕಾರ್ಯಕರ್ತರು, ಮುಖಂಡ ಜಿ. ನಂಜನಗೌಡ, ಮಂಡಲ ಅಧ್ಯಕ್ಷ ಕೆ. ಲಕ್ಷ್ಮಣ ಸೇರಿದಂತೆ ಇನ್ನು ಕೆಲವೊಂದು ಮುಖಂಡರು ಕಾರ್ಯಕರ್ತರು ಬೈಕ್‌ ರ್‍ಯಾಲಿ ಮೂಲಕ ಸಮಾರಂಭ ನಡೆಯುವ ಕಲ್ಯಾಣ ಮಂಟಪಕ್ಕೆ ಆಗಮಿಸಿದರು.

Latest Videos

undefined

ದೇಶದ ಅಭಿವೃದ್ಧಿ ಪ್ರಧಾನಿ ಮೋದಿ ಸರ್ಕಾರದ ಗ್ಯಾರಂಟಿ: ಸಂಸದ ಜಿ.ಎಂ.ಸಿದ್ದೇಶ್ವರ

ಆಗ ಮುಂಚಿತವಾಗಿಯೇ ಆಗಮಿಸಿದ್ದ ಮಾಜಿ ಶಾಸಕ ಜಿ. ಕರುಣಾಕರ ರೆಡ್ಡಿ ಬಣದವರೆನ್ನಲಾದ ಆರ್‌. ಲೋಕೇಶ, ಶಿಂಗ್ರಿಹಳ್ಳಿ ನಾಗರಾಜ ಸೇರಿದಂತೆ ಅನೇಕರು ಗೇಟಿನ ಶೆಟ್ಟರ್ಸ್ ಹಾಕಿ ಬಂದ್‌ ಮಾಡಿ ಸಿದ್ದೇಶ್ವರ ಗೋಬ್ಯಾಕ್‌ ಎಂದು ಕೂಗುತ್ತಾ ಪ್ರತಿಭಟನೆಗೆ ಇಳಿದರು.

ಈ ಸಂದರ್ಭದಲ್ಲಿ ಕರುಣಾಕರ ರೆಡ್ಡಿ ಬಣದವರಿಗೂ ಹಾಗೂ ಸಿದ್ದೇಶ್ವರ ಪರ ಮುಖಂಡ ಜಿ. ನಂಜನಗೌಡ, ಇತರರು ಕಲ್ಯಾಣ ಮಂಟಪದ ಒಳಗೆ ಹೋಗಲು ವಿಫಲ ಯತ್ನ ನಡೆಸಿದರು. ನೂಕಾಟ, ತಳ್ಳಾಟ, ವಾಗ್ವಾದ ಜರುಗಿತು.

ಸ್ವಲ್ಪ ಹೊತ್ತು ಹೀಗೆ ನಡೆದಾಗ ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಪತ್ನಿ ಲೋಕಸಭಾ ಕ್ಷೇತ್ರದ ಅಧಿಕೃತ ಅಭ್ಯರ್ಥಿ ಗಾಯತ್ರಿ, ಹರಿಹರ ಶಾಸಕ ಬಿ.ಪಿ. ಹರೀಶ, ಹಡಗಲಿ ಶಾಸಕ ಕೃಷ್ಣನಾಯ್ಕ ಮುಂತಾದ ಮುಖಂಡರು ಆಗಮಿಸಿದರು.

ಆಗಲೂ ಯಾರಿಗೂ ಒಳಗೆ ಬಿಡದೆ ಅಡ್ಡ ನಿಂತು ಪ್ರತಿಭಟನೆ ಮುಂದುವರಿಸಿದರು. ಈ ಸಂದರ್ಭದಲ್ಲಿ ಸಂಸದ ಸಿದ್ದೇಶ್ವರ ಕರುಣಾಕರ ರೆಡ್ಡಿ ಅವರಿಗೆ 10 ಬಾರಿ ದೂರವಾಣಿ ಕರೆ ಮಾಡಿದಾಗಲೂ ಸ್ವಿಚ್ ಆಫ್‌ ಆಗಿತ್ತು. ಬೆ‍ಳಗ್ಗೆ ಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ. ಶೀಘ್ರ ಭೇಟಿ ಮಾಡಿ ಕರುಣಾಕರ ರೆಡ್ಡಿ ಅವರನ್ನು ಇನ್ನೊಂದು ಕಾರ್ಯಕ್ರಮಕ್ಕೆ ಕರೆದುಕೊಂಡು ಬರುತ್ತೇನೆ, ಈ ರೀತಿ ಮಾಡುವುದು ಒಳ್ಳೆಯದಲ್ಲ ಎಂದು ಹೇಳಿದರೂ ರೆಡ್ಡಿ ಬಣದವರು ಒಳಗೆ ಬಿಡಲಿಲ್ಲ.

ಬಹಳ ಹೊತ್ತಿನ ನಂತರ ಅಂತಿಮವಾಗಿ ಸಂಸದ ಜಿ.ಎಂ. ಸಿದ್ದೇಶ್ವರ ಅಭ್ಯರ್ಥಿ ಗಾಯತ್ರಿ, ಬಿಜೆಪಿ ಶಾಸಕರು, ಮುಖಂಡರು ಹಿಂಬಾಗಿಲ ಮೂಲಕ ಕಲ್ಯಾಣ ಮಂಟಪ ಪ್ರವೇಶಿಸಿ ವೇದಿಕೆಯಲ್ಲಿ ಆಸೀನರಾದರು.

ಆಗ ವೇದಿಕೆಗೂ ನುಗ್ಗಿದ ಕರುಣಾಕರ ರೆಡ್ಡಿ ಬಣದ ಕಾರ್ಯಕರ್ತರು ವಾಗ್ವಾದಕ್ಕಿಳಿದರು. ಧಿಕ್ಕಾರ ಘೋಷಣೆ ಕೂಗಲು ಆರಂಭಿಸಿದರು. ಅಂತಹ ಗದ್ದಲದಲ್ಲಿಯೇ ಸಿದ್ದೇಶ್ವರ, ಅಭ್ಯರ್ಥಿ ಗಾಯತ್ರಿ ಮಾತನಾಡಿದರು.

ಕೊನೆಗೆ ಗದ್ದಲ ಜೋರಾದಾಗ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪೋಲೀಸರು ಕರುಣಾಕರ ರೆಡ್ಡಿ ಬಣದ ಕಾರ್ಯಕರ್ತರನ್ನು ಬಲವಂತವಾಗಿ ಹೊರಗೆ ಕಳುಹಿಸಿ ಬಾಗಲು ಸಮೀಪದ ಗೇಟ್ ಹಾಕಿದರು. ಸಿಪಿಐ ಸಾಬಯ್ಯ, ಪಿಎಸ್‌ಐ ಶಂಭುಲಿಂಗ ಹಿರೇಮಠ, ಕಿರಣಕುಮಾರ ಸಿಬ್ಬಂದಿ ಗಲಾಟೆ ತಹಬದಿಗೆ ತಂದರು.

ನಂತರ ಕಾರ್ಯಕ್ರಮ ಉದ್ಘಾಟನೆ ಹಾಗೂ ನೂತನ ಮಂಡಲ ಅಧ್ಯಕ್ಷ ಕೆ. ಲಕ್ಷ್ಮಣ ಅವರಿಗೆ ಧ್ವಜ ಹಸ್ತಾಂತರ ಜರುಗಿತು. ಸಿದ್ದೇಶ್ವರ, ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಇತರರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಮಲಗಿದ್ದಲ್ಲೇ ಹೆಣವಾದ ಅಣ್ಣ-ತಂಗಿ: ಸೂಸೈಡ್ ಅಂದ ಗಂಡ.. ಕೊಲೆ ಎಂದ ಮಗ..!

ಕರುಣಾಕರ ರೆಡ್ಡಿ ಬಣದ ಕಾರ್ಯಕರ್ತರಾಗಿ ಆರ್‌. ಲೋಕೇಶ, ತಾಪಂ ಮಾಜಿ ಸದಸ್ಯ ಶಿಂಗ್ರಿಹಳಿ ನಾಗರಾಜ, ಮನೋಜಕುಮಾರ ತಳವಾರ, ಜೋಗಿ ಬಸವರಾಜ, ಗೋಣೆಪ್ಪ ಚಿಗಟೇರಿ, ಬಿ.ಆರ್. ಕೊಟ್ರೇಶ, ಜಾತಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

click me!