ಬಳ್ಳಾರಿಯಿಂದ ಚಿತ್ರದುರ್ಗಕ್ಕೆ ನಡೆದುಕೊಂಡೇ ಹೊರಟ 70 ವರ್ಷದ ವೃದ್ಧ| ಚಿತ್ರದುರ್ಗದಲ್ಲೂ ವೃದ್ಧನಿಗೆ ಇರಲು ನೆಲೆಯಿಲ್ಲ. ದೇವಸ್ಥಾನಗಳು, ಅಲ್ಲಿಂದ ಹೊರ ಹಾಕಿದರೆ ಬೀದಿಬದಿಯಲ್ಲಿ ವಾಸ| ಕುಟುಂಬ ಸದಸ್ಯರಿದ್ದರೂ, ಯಾರೂ ನೋಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕಾಗಿಯೇ ಇವರು ಯಾರೊಂದಿಗೆ ಉಳಿಯದೆ ಒಬ್ಬರೇ ಅಲೆಮಾರಿಯಾಗಿ ತಿರುಗಾಡುತ್ತಿರುವ ವೃದ್ಧ|
ಬಳ್ಳಾರಿ(ಜೂ.10): ಬಸ್ ಸೌಕರ್ಯವಿಲ್ಲದ ಹಾಗೂ ಬಸ್‌ಗೆ ನೀಡಲು ಹಣವೂ ಇಲ್ಲದ ಕಾರಣ ಸುಮಾರು 70 ವರ್ಷದ ವೃದ್ಧರೊಬ್ಬರು ಬಳ್ಳಾರಿಯಿಂದ ಚಿತ್ರದುರ್ಗಕ್ಕೆ ನಡೆದುಕೊಂಡೇ ಹೊರಟಿದ್ದಾರೆ!
ನಡೆಯಲು ಶಕ್ತಿಯಿಲ್ಲದಂತೆ ತೋರುವ ಇವರು ಹೆಗಲ ಮೇಲೊಂದು ಬಟ್ಟೆ ಗಂಟು ಹೊತ್ತು ಕೈಯಲ್ಲೊಂದು ಕೋಲು ಹಿಡಿದು ಚಿತ್ರದುರ್ಗದತ್ತ ಪಯಣ ಬೆಳೆಸಿದ್ದಾರೆ. ಬಳ್ಳಾರಿಯಿಂದ ಕೂಡ್ಲಿಗಿ ಮಾರ್ಗವಾಗಿ ಚಿತ್ರದುರ್ಗಕ್ಕೆ ಹೋಗುತ್ತಿದ್ದ ವೃದ್ಧನನ್ನು ವಾರದ ಹಿಂದೆ ದಾರಿ ಹೋಕರು ಮಾತನಾಡಿಸಿದಾಗ ಇವರು ಹೇಳಿದ್ದಿಷ್ಟು.
ನನ್ನ ಹೆಸರು ಅನಂತರಾಮು. ನನ್ನದು ಶೃಂಗೇರಿ ಬಳಿಯ ಕೊಪ್ಪ. ನನಗೆ ಮಕ್ಕಳಿದ್ದಾರೆ. ಸಂಬಂಧಿಕರಿದ್ದಾರೆ. ಯಾರೂ ನೋಡುತ್ತಿಲ್ಲ. ಸದ್ಯ ಚಿತ್ರದುರ್ಗದಲ್ಲಿಯೇ ಇದ್ದೇನೆ. ಲಾಕ್‌ಡೌನ್‌ಗೂ ಮುನ್ನ ಬಳ್ಳಾರಿಗೆ ಆಗಮಿಸಿದ್ದು, ಈಗ ಚಿತ್ರದುರ್ಗಕ್ಕೆ ಹೋಗುತ್ತಿದ್ದೇನೆ. ಅಲ್ಲಿಯೇ ಏನಾದರೂ ಕೆಲಸ ಸಿಕ್ಕರೆ ಮಾಡುತ್ತೇನೆ. ಊಟಕ್ಕೆ ಏನು ಮಾಡಿಕೊಂಡಿದ್ದೀರಾ? ಎಂಬ ಪ್ರಶ್ನೆಗೆ ಈ ವೃದ್ಧ, ದಾರಿಯಲ್ಲಿ ಯಾರೂದರೂ ಒಂದಷ್ಟು ಏನಾದರೂ ತಿನ್ನಲು ಕೊಟ್ಟರೆ ತಿಂದುಕೊಳ್ಳುತ್ತೇನೆ. ಇಲ್ಲದಿದ್ದರೂ ಅದೂ ಇಲ್ಲ. ಹೇಗೋ ನಡೆದು ಹೋಗಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರಲ್ಲದೆ, ಬಸ್ ಇಲ್ಲದೆ ನಡೆದುಕೊಂಡು ಹೋಗುವುದು ಅನಿವಾರ್ಯವಾಗಿದೆ ಎಂದಿದ್ದಾರೆ.
ಒಂದೇ ವಾರದಲ್ಲಿ ಕೊರೋನಾ ಸೋಂಕು ಗೆದ್ದು ಬಂದ ಕೊಟ್ಟೂರು ಠಾಣೆಯ ಮುಖ್ಯಪೇದೆ..!
ಚಿತ್ರದುರ್ಗದಲ್ಲೂ ಇವರಿಗೆ ಇರಲು ನೆಲೆಯಿಲ್ಲ. ದೇವಸ್ಥಾನಗಳು, ಅಲ್ಲಿಂದ ಹೊರ ಹಾಕಿದರೆ ಬೀದಿಬದಿಯಲ್ಲಿ ಉಳಿದುಕೊಳ್ಳುತ್ತಾರೆ. ಕುಟುಂಬ ಸದಸ್ಯರಿದ್ದರೂ, ಯಾರೂ ನೋಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕಾಗಿಯೇ ಇವರು ಯಾರೊಂದಿಗೆ ಉಳಿಯದೆ ಒಬ್ಬರೇ ಅಲೆಮಾರಿಯಾಗಿ ತಿರುಗಾಡುತ್ತಿರುವುದಾಗಿ ಈ ವೃದ್ಧ ಹೇಳಿಕೊಂಡಿದ್ದಾರೆ.
ಲಾಕ್‌ಡೌನ್ ಮುಂಚೆ ಇವರು ಬಳ್ಳಾರಿಗೆ ಬಂದು ನಗರದಲ್ಲಿಯೇ ಉಳಿದುಕೊಂಡಿದ್ದರು. ಅವರಿವರು ನೀಡಿದ ಆಹಾರ ಉಂಡು ಜೀವನ ನಡೆಸುತ್ತಿದ್ದರು. ಅನ್ನಕ್ಕಾಗಿ ಅಲೆದಾಟ ನಡೆಸಿರುವ ಈ ವೃದ್ಧ ಇದೀಗ ಚಿತ್ರದುರ್ಗಕ್ಕೆ ತೆರಳಲು ಮುಂದಾಗಿದ್ದು, ವೃದ್ಧರಿಗೆ ಬಸ್ ಪ್ರಯಾಣ ಅವಕಾಶ ಇಲ್ಲದ ಕಾರಣ 133 ಕಿಮೀ ನಡೆದುಕೊಂಡೇ ಹೊರಟಿದ್ದಾರೆ.