ಕೇರಳ ಸೋಂಕಿತರು ದಾಖಲಾದರೆ ಖಾಸಗಿ ಆಸ್ಪತ್ರೆಗಳಿಗೇ ಲಾಕ್‌ಡೌನ್‌ ಭೀತಿ!

By Kannadaprabha NewsFirst Published Apr 8, 2020, 8:18 AM IST
Highlights

ತುರ್ತು ಆರೋಗ್ಯ ಸೇವೆಗೆ ಕೇರಳ- ಕರ್ನಾಟಕ ಗಡಿ ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ಆದೇಶ ನೀಡಿದೆ. ಈ ನಡುವೆ ಕೇರಳದ ಕಾಸರಗೋಡಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹಾಗೂ ಶಂಕಿತರು ಹೆಚ್ಚುತ್ತಲೇ ಇದ್ದಾರೆ. ಈಗ ಗಡಿ ಪ್ರದೇಶ ತೆರವಿನಿಂದ ತುರ್ತು ಚಿಕಿತ್ಸೆ ನೆಪದಲ್ಲಿ ಕೊರೋನಾ ಸೋಂಕಿತರು ಗಡಿಯೊಳಗೆ ಪ್ರವೇಶಿಸಿ ಖಾಸಗಿ ಆಸ್ಪತ್ರೆಗೆ ಧಾವಿಸಿದರೆ ಕರಾವಳಿ ಆಸ್ಪತ್ರೆಗಳು ಒಮ್ಮೆಗೆ ಬಾಗಿಲು ಮುಚ್ಚುವ ಪರಿಸ್ಥಿತಿ ತಲೆದೋರಲಿದೆ!

ಮಂಗಳೂರು(ಏ.08): ತುರ್ತು ಆರೋಗ್ಯ ಸೇವೆಗೆ ಕೇರಳ- ಕರ್ನಾಟಕ ಗಡಿ ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ಆದೇಶ ನೀಡಿದೆ. ಈ ನಡುವೆ ಕೇರಳದ ಕಾಸರಗೋಡಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹಾಗೂ ಶಂಕಿತರು ಹೆಚ್ಚುತ್ತಲೇ ಇದ್ದಾರೆ. ಈಗ ಗಡಿ ಪ್ರದೇಶ ತೆರವಿನಿಂದ ತುರ್ತು ಚಿಕಿತ್ಸೆ ನೆಪದಲ್ಲಿ ಕೊರೋನಾ ಸೋಂಕಿತರು ಗಡಿಯೊಳಗೆ ಪ್ರವೇಶಿಸಿ ಖಾಸಗಿ ಆಸ್ಪತ್ರೆಗೆ ಧಾವಿಸಿದರೆ ಕರಾವಳಿ ಆಸ್ಪತ್ರೆಗಳು ಒಮ್ಮೆಗೆ ಬಾಗಿಲು ಮುಚ್ಚುವ ಪರಿಸ್ಥಿತಿ ತಲೆದೋರಲಿದೆ!

ಕಾಸರಗೋಡಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹಾಗೂ ಸೋಂಕಿತರ ಸಂರ್ಪಕದಿಂದಾಗಿ ನಿಗಾದಲ್ಲಿ ಇರುವವರು ಹೆಚ್ಚುತ್ತಲೇ ಇರುವುದೇ ಈ ಭೀತಿಗೆ ಕಾರಣ. ಕಾಸರಗೋಡು ಗಡಿ ಪ್ರದೇಶಗಳಲ್ಲಿ ಸೋಂಕಿತರ ಸಂಪರ್ಕದಲ್ಲಿದ್ದು, ನಿಗಾದಲ್ಲಿ ಸರಿಯಾಗಿ ಇಲ್ಲದೆ ಇರುವುದೇ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಕಳವಳಕ್ಕೆ ಕಾರಣವಾಗಿದೆ. ಇಂತಹ ದಿಗಿಲು ಮೂಡಿಸುವ ಸಂಗತಿಯನ್ನು ಖಾಸಗಿ ಆಸ್ಪತ್ರೆಗಳ ತಜ್ಞ ವೈದ್ಯರುಗಳೇ ಬಹಿರಂಗಪಡಿಸಿದ್ದಾರೆ. ಗಡಿ ಪ್ರದೇಶದ ತೆರವು ವಿಚಾರದಲ್ಲಿ ದ.ಕ. ಜಿಲ್ಲಾಡಳಿತ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿ ವೈದ್ಯಕೀಯ ತಜ್ಞರು ಇದ್ದಾರೆ.

ದೇಶದಲ್ಲಿ 5000 ಮಂದಿಗೆ ವೈರಸ್‌, ಸಾವು 162ಕ್ಕೇರಿಕೆ!

ದ.ಕ. ಜಿಲ್ಲೆಯಲ್ಲಿ ಸುಮಾರು 50ಕ್ಕೂ ಅಧಿಕ ಖಾಸಗಿ ಆಸ್ಪತ್ರೆಗಳು ಇವೆ. ಈ ಆಸ್ಪತ್ರೆಗಳಿಗೆ ಕರೋನಾ ಸೋಂಕಿತರು ಅಪ್ಪಿತಪ್ಪಿ ಬಂದರೆ ಅವರನ್ನು ಎದುರಿಸುವ ಪರಿಸ್ಥಿತಿಯಲ್ಲಿ ಇಲ್ಲ. ಕೊರೋನಾದಂತಹ ಸೋಂಕಿತರು ಆಗಮಿಸಿದರೆ ಈ ಖಾಸಗಿ ಆಸ್ಪತ್ರೆಗಳು ಕೈಚೆಲ್ಲುವ ಸ್ಥಿತಿಯಲ್ಲಿವೆ ಎಂದು ವೈದ್ಯಕೀಯ ತಜ್ಞರುಗಳೇ ಕನ್ನಡಪ್ರಭಕ್ಕೆ ಹೇಳಿದ್ದಾರೆ.

ಏನಿದು ಗಂಭೀರ ಸಮಸ್ಯೆ?:

ತುರ್ತು ಚಿಕಿತ್ಸೆಯ ನೆಪದಲ್ಲಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಿಗೆ ಕಾಸರಗೋಡು ಜಿಲ್ಲೆಯ ಕೊರೋನಾ ಸೋಂಕಿತರು ಹಠಾತ್ತನೆ ಆಗಮಿಸಿದರೆ, ಪ್ರಥಮವಾಗಿ ಇರಬೇಕಾದ ಪಿ.ಪಿ.ಇ (ಸ್ವ ಸುರಕ್ಷಾ ಸಾಧನ) ಕಿಟ್‌ಗಳೇ ಇಲ್ಲ. ಇನ್ನು ಎನ್‌-95 ಮಾಸ್ಕ್‌ಗಳ ವಿಪರೀತ ಕೊರತೆ ಇದೆ. ದುಡ್ಡು ಕೊಟ್ಟರೂ ಮಾಸ್ಕ್‌ ಸಿಗದ ಪರಿಸ್ಥಿತಿ. ಶಂಕಿತ ರೋಗಿಗಳಲ್ಲಿ ಸೋಂಕು ದೃಢಪಡಿಸಲು ವೈರಾಣು ಪತ್ತೆ ಸಾಧನ ವೆನ್ಲಾಕ್‌ ಆಸ್ಪತ್ರೆ ಹೊರತು ಬೇರೆ ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ಇಲ್ಲ. ವೆನ್ಲಾಕ್‌ಗೆ ಸ್ಯಾಂಪಲ್‌ನ್ನು ಕಳುಹಿಸಬೇಕಾದರೆ, ಮೊದಲು ಸೋಂಕಿನ ಲಕ್ಷಣ ಗೊತ್ತಾಗಬೇಕು. ಕನಿಷ್ಠ 14 ದಿನಗಳ ಸಮಯ ಇರುತ್ತದೆ ಎಂಬ ತರ್ಕವನ್ನು ವೈದ್ಯಕೀಯ ತಜ್ಞರು ಮುಂದಿಡುತ್ತಿದ್ದಾರೆ.

ಇಂತಹ ಕ್ಲಿಷ್ಟಕರ ಸಂದರ್ಭಗಳಲ್ಲಿ ಕಾಸರಗೋಡಿನ ರೋಗಿಗಳು ಬಂದರೆ ಏನು ಮಾಡಬೇಕು ಎಂಬ ಸಂದಿಗ್ಧತೆಗೆ ಖಾಸಗಿ ಆಸ್ಪತ್ರೆಗಳು ಸಿಲುಕಿವೆ. ಇವೆಲ್ಲದರ ಮಧ್ಯೆ ಲಾಕ್‌ಡೌನ್‌ನಿಂದಾಗಿ ರೋಗಿಗಳಿಲ್ಲದೆ ಖಾಸಗಿ ಆಸ್ಪತ್ರೆಗಳು ಬಿಕೋ ಎನ್ನುತ್ತಿದ್ದು, ವೈದ್ಯರು, ಸಿಬ್ಬಂದಿಗೆ ವೇತನ ಕೊಡಲು ಪರದಾಡುವ ಸನ್ನಿವೇಶÜ ಸೃಷ್ಟಿಯಾಗಿದೆ ಎಂದು ಆಸ್ಪತ್ರೆಯ ಮುಖ್ಯಸ್ಥರೊಬ್ಬರು ಹೇಳುತ್ತಾರೆ.

ಆಸ್ಪತ್ರೆಗೇ ಲಾಕ್‌ಡೌನ್‌ ಭೀತಿ:

ಆಸ್ಪತ್ರೆಗೆ ದಾಖಲಾದವರಲ್ಲಿ ಶಂಕಿತ ಸೋಂಕು ಕಂಡುಬಂದರೆ, ಅಂತಹ ಖಾಸಗಿ ಆಸ್ಪತ್ರೆಯ ವೈದ್ಯರು, ದಾದಿಯರು ಪ್ರತ್ಯೇಕ ನಿಗಾದಲ್ಲಿ ಇರಬೇಕಾಗುತ್ತದೆ. ಅಷ್ಟೇ ಅಲ್ಲ, ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗವನ್ನೇ ತತ್ಕಾಲಕ್ಕೆ ಮುಚ್ಚುವ ಪರಿಸ್ಥಿತಿ ಬರಬಹುದು. ಸೋಂಕಿತರ ಪ್ರಮಾಣ ಜಾಸ್ತಿಯಾದರೆ ಇಡೀ ಆಸ್ಪತ್ರೆಯನ್ನೇ ಲಾಕ್‌ಡೌನ್‌ ಮಾಡುವಂತಹ ಸನ್ನಿವೇಶ ಬರುವುದನ್ನೂ ತಳ್ಳಿಹಾಕುವಂತಿಲ್ಲ ಎನ್ನುವ ಆತಂಕ ವ್ಯಕ್ತಪಡಿಸುತ್ತಾರೆ ವೈದ್ಯಕೀಯ ತಜ್ಞರು.

ಲಾಕ್‌ಡೌನ್‌: ಬತ್ತ ಕಟಾವಿಗೂ ಸಮಸ್ಯೆ, ಕಾರ್ಮಿಕರು ಸಿಗದೆ ಕಂಗಾಲಾದ ರೈತ!

ಸುಪ್ರೀಂ ಕೋರ್ಟ್‌ ಆದೇಶದಂತೆ ಕೇರಳದ ರೋಗಿಗಳಿಗೆ ತುರ್ತು ಚಿಕಿತ್ಸೆಗೆ ಗಡಿ ತೆರವುಗೊಳಿಸಿ ಇಲ್ಲಿಗೆ ಬರಲು ಅವಕಾಶ ನೀಡುವುದು ಅನಿವಾರ್ಯವಾಗಿದೆ. ಆದರೆ ಇದರಿಂದ ಕೊರೋನಾ ಸೋಂಕಿತರು ಆಗಮಿಸಿದರೆ, ಖಾಸಗಿ ಆಸ್ಪತ್ರೆಗಳನ್ನು ಪೂರ್ತಿ ಲಾಕ್‌ಡೌನ್‌ ಮಾಡುವ ಪರಿಸ್ಥಿತಿ ಬರಬಹುದು. ತುರ್ತು ಚಿಕಿತ್ಸೆ ನೆಪದಲ್ಲಿ ಎಲ್ಲ ರೋಗಿಗಳೂ ಆಗಮಿಸಿದರೆ, ಇಲ್ಲಿ ಕೂಡ ಆಸ್ಪತ್ರೆಗಳ ಪರಿಸ್ಥಿತಿ ವಿಷಮಿಸುವ ಸಾಧ್ಯತೆ ಇದೆ. ಇದಕ್ಕಾಗಿ ಹಲವು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮಂಗಳೂರು ತಜ್ಞ ವೈದ್ಯರ ಸಂಘಟನೆ ಅಧ್ಯಕ್ಷ ಡಾ. ಸಂದೀಪ್‌ ರೈ ತಿಳಿಸಿದ್ದಾರೆ.

-ಆತ್ಮಭೂಷಣ್‌

click me!