ಮೀಸಲಾತಿಗೆ ವಿಳಂಬ ಮಾಡಿದರೆ ಸುವರ್ಣಸೌಧದಲ್ಲಿ ಲಿಂಗ ಪೂಜೆ: ಮೃತ್ಯುಂಜಯ ಸ್ವಾಮೀಜಿ

By Kannadaprabha NewsFirst Published Oct 26, 2023, 11:59 PM IST
Highlights

ಸರ್ಕಾರವು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಲು ವಿಳಂಬ ನೀತಿ ಅನುಸರಿಸಿದರೆ ಬೆಳಗಾವಿ ಸುವರ್ಣಸೌಧದ ಒಳಗೆ ಕುಳಿತು ಲಿಂಗಪೂಜೆ ಮಾಡಿ ಸರ್ಕಾರಕ್ಕೆ ಒತ್ತಡ ಹಾಕಲು ಸಿದ್ಧರಾಗಬೇಕಾಗುತ್ತದೆ ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಗಜೇಂದ್ರಗಡ (ಅ.26): ಸರ್ಕಾರವು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಲು ವಿಳಂಬ ನೀತಿ ಅನುಸರಿಸಿದರೆ ಬೆಳಗಾವಿ ಸುವರ್ಣಸೌಧದ ಒಳಗೆ ಕುಳಿತು ಲಿಂಗಪೂಜೆ ಮಾಡಿ ಸರ್ಕಾರಕ್ಕೆ ಒತ್ತಡ ಹಾಕಲು ಸಿದ್ಧರಾಗಬೇಕಾಗುತ್ತದೆ ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಪಟ್ಟಣದ ಜಿ.ಕೆ.ಬಂಡಿ ಗಾರ್ಡ್ ನಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಜಿಲ್ಲೆಯ ಅಸುಂಡಿ ಕ್ರಾಸ್‌ನಲ್ಲಿ ಅ. 30ರಂದು ನಡೆಯಲಿರುವ ಲಿಂಗಪೂಜೆಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಸಿದ್ದರಾಮಯ್ಯ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಭೇಟಿಯಾಗಿ ಮೀಸಲಾತಿ ಕುರಿತು ಮಾತನಾಡಿದಾಗ ಬಜೆಟ್ ಅಧಿವೇಶನದ ವರೆಗೆ ಸಮಯ ನೀಡಿ ಎಂದಿದ್ದರು. ಆದರೆ ಬಜೆಟ್ ಅಧಿವೇಶನ ಮುಗಿದು 4 ತಿಂಗಳು ಗತಿಸಿದ್ದರೂ ಸಿಎಂ ನಮ್ಮ ಬೇಡಿಕೆಯತ್ತ ಗಮನ ಹರಿಸುತ್ತಿಲ್ಲ.ಅವರಿಗೆ ಮತ್ತೆ ಭೇಟಿಯಾದರೆ ದೀಪಾವಳಿ, ಸಂಕ್ರಾಂತಿ ಇಲ್ಲವೇ ಲೋಕಸಭಾ ಚುನಾವಣೆ ಮುಗಿಯಲಿ ಎನ್ನಬಹುದು.ಚುನಾವಣೆಯಲ್ಲಿ ಗೆಲ್ಲಲು ಪಂಚಮಸಾಲಿ ಮತಗಳು ಬೇಕೇ ಬೇಕು.ಹೀಗಾಗಿ ಲೋಕಸಭಾ ಚುನಾವಣೆ ಒಳಗೆ ನ್ಯಾಯ ಸಮ್ಮತವಾದ 2ಎ ಮೀಸಲಾತಿಯನ್ನು ಪಂಚಮಸಾಲಿ ಸಮಾಜಕ್ಕೆ ನೀಡಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ನನಗೆ 61 ಮುಂದೆ 100 ಆದರು ನನ್ನ ಅಮ್ಮನೇ ನನ್ನ ದೇವರು: ಹುಲಿ ಉಗುರು ಸಂಕಟ ಬಿಚ್ಚಿಟ್ಟ ನಟ ಜಗ್ಗೇಶ್!

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಹಾಲುಮತ ಎಸ್‌ಟಿ ಹಾಗೂ ಕುಂಚಿಟಿಗ ಸಮುದಾಯವನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಲು ಸಿಎಂ ಸಿದ್ದರಾಮಯ್ಯ ಸರ್ಕಾರ ಶಿಫಾರಸ್ಸು ಮಾಡಿದ್ದು ಖುಷಿ ತಂದಿದೆ. ನಮಗೂ ಸಹ ರಾಜ್ಯದಲ್ಲಿ 2ಎ ಹಾಗೂ ಕೇಂದ್ರದಲ್ಲಿ ಒಬಿಸಿಗೆ ಸೇರಿಸುವಂತೆ ಒತ್ತಾಯಿಸುತ್ತಿದ್ದೇವೆ, ಹೊರತು ನಾವು ಯಾರ ವಿರುದ್ಧ ಅಥವಾ ಮತ್ತೊಬ್ಬರ ಹಕ್ಕನ್ನು ಕಸಿದಿಕೊಳ್ಳಲು ಹೋರಾಟ ನಡೆಸುತ್ತಿಲ್ಲ. ಪ್ರಸ್ತುತ ರಾಜ್ಯ ಸರ್ಕಾರದಲ್ಲಿ ಇಬ್ಬರು ಮಂತ್ರಿಗಳು ಸೇರಿ 11ಜನ ಶಾಸಕರು ವಿಧಾನ ಸಭೆಯಲ್ಲಿ ಗುಡುಗಿದರೆ ನಮ್ಮ ಬೇಡಿಕೆ ನೂರಕ್ಕೆ ನೂರುರಷ್ಟು ಈಡೇರಲಿದೆ ಎನ್ನುವ ವಿಶ್ವಾಸವಿದೆ.ಹೀಗಾಗಿ ಡಿ. 4 ರಿಂದ 15ರ ವರೆಗೆ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಯಲಿದೆ.ಹೀಗಾಗಿ ಅಧಿವೇಶನ ಆರಂಭವಾಗುವದರೊಳಗೆ ನಮ್ಮ ನ್ಯಾಯ ಸಮ್ಮತವಾದ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಅಸುಂಡಿ ಹೆದ್ದಾರಿಯಲ್ಲಿ ಲಿಂಗಪೂಜೆ ಮಾಡೋಣ ಎಂದರು.

ಬೆಂಗಳೂರಿಗೆ ರಾಮನಗರವನ್ನು ಸೇರಿಸಿದರೆ ರೈತರ ಕೃಷಿಭೂಮಿಗೆ ಸಂಚಕಾರ: ಅಶ್ವತ್ಥ ನಾರಾಯಣ

ಗಜೇಂದ್ರಗಡ-ಉಣಚಗೇರಿ ಪಂಚಮಸಾಲಿ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ಮಾತನಾಡಿ, ಸಮಾಜದ ಮಕ್ಕಳ ಭವಿಷ್ಯ ಭದ್ರಗೊಳಿಸುವ ಉದ್ಧೇಶದಿಂದ ಮೀಸಲಾತಿಗಾಗಿ ಆಗ್ರಹಿಸಿ ನಡೆಸುತ್ತಾ ಬಂದಿರುವ ಸ್ವಾಮೀಜಿ ಅವರ ಹೋರಾಟದಲ್ಲಿ ತಾಲೂಕಿನ ಸಮಾಜದ ಬಾಂಧವರು ಪಾಲ್ಗೊಳ್ಳುತ್ತಾ ಬಂದಿದ್ದೇವೆ, ಜಿಲ್ಲೆಯಲ್ಲಿ ನಡೆಯುವ ಹೋರಾಟ ಯಶಸ್ವಿಗೊಳಿಸಲು ಶ್ರಮಿಸುವದಾಗಿ ತಿಳಿಸಿದರು. ಟಿ.ಎಸ್. ರಾಜೂರ, ಈಶಣ್ಣ ಮ್ಯಾಗೇರಿ, ಮರಿಗೌಡ ಗುಂಡೆ ಮಾತನಾಡಿದರು.ಚಂಬಣ್ಣ ಚವಡಿ, ಕಳಕಪ್ಪ ಸಂಗನಾಳ, ಸುಭಾಸ ಮ್ಯಾಗೇರಿ, ಕಳಕಪ್ಪ ಅಬ್ಬಿಗೇರಿ, ಮುತ್ತಣ್ಣ ಮ್ಯಾಗೇರಿ, ವೀರೇಶ ಸಂಗಮದ, ಈರಣ್ಣ ಪಲ್ಲೇದ ಸೇರಿ ಇತರರು ಇದ್ದರು.

click me!