ಇತ್ತೀಚೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ಈ ರೈಲು ಯೋಜನೆಯನ್ನು ಪ್ರಾರಂಭಿಸುವಂತೆ ಮನವಿ ಮಾಡಿದ್ದಾರೆ. ಇನ್ನು ವಿ.ಸೋಮಣ್ಣ ರೈಲ್ವೆ ಖಾತೆ ರಾಜ್ಯ ಸಚಿವರೂ ಆಗಿರುವುದರಿಂದ ಕೇಂದ್ರದ ಬಜೆಟ್‌ನಲ್ಲಿ ಈ ರೈಲು ಯೋಜನೆಗೆ ಹಸಿರು ನಿಶಾನೆ ದೊರೆಯಬಹುದೆಂದು ಚಾಮರಾಜನಗರ ಜಿಲ್ಲೆಯ ಸಾರ್ವಜನಿಕರಲ್ಲಿ ಆಶಾಭಾವನೆ ಮೂಡಿಸಿದೆ.
ವರದಿ - ಪುಟ್ಟರಾಜು. ಆರ್. ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ(ಜು.16): ಕಳೆದ ಎರಡುವರೆ ದಶಕಗಳಿಂದಲೂ ಒಂದಲ್ಲ ಒಂದು ಕಾರಣದಿಂದ ನೆನಗುದಿಗೆ ಬೀಳುತ್ತಿರುವ ಚಾಮರಾಜನಗರದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾಮರಾಜನಗರ ಹೆಜ್ಜಾಲ ರೈಲು ಮಾರ್ಗದ ಯೋಜನೆಗೆ ಇದೀಗ ಮರುಜೀವ ಬರತೊಡಗಿದೆ. ಜುಲೈ 23 ರಿಂದ ಆರಂಭವಾಗಲಿರುವ ಲೋಕಸಭಾ ಅಧಿವೇಶನದಲ್ಲಿ ಮಂಡನೆಯಾಗುವ ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ಹಸಿರು ನಿಶಾನೆ ದೊರೆಯುವ ಆಶಾ ಭಾವನೆ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.
undefined
ಗಡಿ ಜಿಲ್ಲೆ ಚಾಮರಾಜನಗರದಿಂದ ನೆರೆಯ ತಮಿಳುನಾಡಿನ ಮೆಟ್ಟುಪಾಳ್ಯಂಗೆ ರೈಲು ಮಾರ್ಗ ಹಲವು ದಶಕಗಳ ಕನಸಾಗಿತ್ತು. ಆದರೆ ಈ ರೈಲು ಮಾರ್ಗದಿಂದ ಸಾಕಷ್ಟು ಅರಣ್ಯನಾಶವಾಗಲಿದೆ, ವನ್ಯಜೀವಿಗಳಿಗೆ ಕಂಟಕವಾಗಲಿದೆ ಎಂಬ ಕಾರಣದಿಂದ ಅದು ರದ್ದಾಯಿತು. ಆದರೆ ಅದರ ಬದಲು ಅಂದಿನ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಚಾಮರಾಜನಗರದಿಂದ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಕೊಳ್ಳೇಗಾಲ, ಮಳವಳ್ಳಿ, ಕನಕಪುರ ಮಾರ್ಗ ಚಾಮರಾಜನಗರ ಹೆಜ್ಜಾಲ ರೈಲು ಯೋಜನೆಯನ್ನು ಘೋಷಿಸಿದ್ದರು. ಆದರೆ ಈ ಯೋಜನೆಯು ಸಹ ನೆನಗುದಿಗೆ ಬೀಳುತ್ತಲೆ ಬಂದಿದ್ದು ಇದೀಗ ಮರುಜೀವ ಬಂದಿದೆ. ಕಳೆದ ವರ್ಷ ರೈಲ್ವೆ ಇಲಾಖೆ ತನ್ನ ಹೊಸ ರೈಲು ಮಾರ್ಗಗಳಿಗೆ ಒಪ್ಪಿಗೆ ಸೂಚಿಸಿರುವ ಪಟ್ಟಿಯಲ್ಲಿ ಚಾಮರಾಜನಗರ ಹೆಜ್ಜಾಲ ಮಾರ್ಗವೂ ಇದೆ.
ಹುಲಿ ದಾಳಿ ಆತಂಕದಲ್ಲಿ ಗ್ರಾಮಸ್ಥರು: ಹಸು ಮೇಲೆ ದಾಳಿ, ವ್ಯಕ್ತಿ ಕಿರುಚಿಕೊಂಡ ಬೆನ್ನಲ್ಲೇ ಓಡಿ ಹೋದ ವ್ಯಾಘ್ರ
141 ಕಿಲೋ ಮೀಟರ್ ಅಂತರವಿರುವ ಈ ಮಾರ್ಗದ ನಕ್ಷೆಯನ್ನು ಸಹ ರೈಲ್ವೆ ಇಲಾಖೆ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿತ್ತು. ಇತ್ತೀಚೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ಈ ರೈಲು ಯೋಜನೆಯನ್ನು ಪ್ರಾರಂಭಿಸುವಂತೆ ಮನವಿ ಮಾಡಿದ್ದಾರೆ. ಇದರಿಂದ ಕೊಳ್ಳೇಗಾಲದ ಜನರ ಬಹುದಿನದ ಬೇಡಿಕೆ ಈಡೇರುವ ಸಮಯ ಬಂದಿದೆ. ಪ್ರತಿದಿನ ಕೊಳ್ಳೇಗಾಲದಿಂದ ರೇಷ್ಮೆ ವ್ಯಾಪಾರ ಸೇರಿದಂತೆ ವ್ಯಾಪಾರ ವಹಿವಾಟು ಮಾಡುವವರು ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸುವವರಿಗೆ ಸಂತಸದ ವಿಷಯವಾಗಿದ್ದು ಜೊತೆಗೆ ವಿ.ಸೋಮಣ್ಣ ಅವರು ರೈಲ್ವೆ ಖಾತೆ ರಾಜ್ಯ ಸಚಿವರೂ ಆಗಿರುವುದರಿಂದ ಕೇಂದ್ರದ ಬಜೆಟ್ ನಲ್ಲಿ ಈ ರೈಲು ಯೋಜನೆಗೆ ಹಸಿರು ನಿಶಾನೆ ದೊರೆಯಬಹುದೆಂದು ಜಿಲ್ಲೆಯ ಸಾರ್ವಜನಿಕರಲ್ಲಿ ಆಶಾಭಾವನೆ ಮೂಡಿಸಿದೆ.
ಹೆಜ್ಜಾಲದಿಂದ ಕನಕಪುರ, ಮಳವಳ್ಳಿ, ಕೊಳ್ಳೇಗಾಲ ಈ ರೈಲು ಮಾರ್ಗದ ಅನುಷ್ಠಾನಕ್ಕೆ 1700 ಎಕರೆ ಭೂಮಿ ಅಗತ್ಯವಾಗಿದ್ದು ರೈಲ್ವೇ ಇಲಾಖೆ 2016ರಲ್ಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ರಾಜ್ಯ ಸರ್ಕಾರವೇ ಭೂಸ್ವಾಧೀನ ಪಡಿಸಿಕೊಟ್ಟು ಇದಕ್ಕಾಗಿ ಬೇಕಾಗುವ 1500 ಕೋಟಿ ಅನುದಾನವನ್ನು ಸಹ ಭರಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದು ಈ ಬಾರಿ ಈ ಯೋಜನೆಯನ್ನು ಮಾಡಿಯೇ ತೀರಿಸುವುದಾಗಿ ಕೊಳ್ಳೆಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳುತ್ತಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಹೊಸ ಕೈಗಾರಿಕೆಗಳು ಒಂದೊಂದಾಗ ತಲೆ ಎತ್ತುತ್ತಿವೆ. ಕೈಗಾರಿಕಾ ಪ್ರದೇಶವೂ ವಿಸ್ತರಣೆಯಾಗುತ್ತಿದೆ. ಚಾಮರಾಜನಗರ ಹೆಜ್ಜಾಲ ರೈಲು ಮಾರ್ಗ ಅನುಷ್ಠಾನಗೊಂಡಲ್ಲಿ ಚಾಮರಾಜನಗರ ರಾಜಧಾನಿ ಬೆಂಗಳೂರಿಗೆ ಇನ್ನಷ್ಟು ಹತ್ತಿರವಾಗಲಿದೆ. ಕೈಗಾರಿಕೆಗಳ ಅಭಿವೃದ್ಧಿಗೂ ಇದು ಸಹಕಾರಿಯಾಗಲಿದೆ. ಕೊಳ್ಳೆಗಾಲ ಮಳವಳ್ಳಿ, ಕನಕಪುರ ಜನತೆಗು ಇದರಿಂದ ಅನುಕೂಲವಾಗಲಿದೆ.