ಏಕಾಏಕಿ ಸಂಜೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಹಲವೆಡೆ ಸುರಿದ ಧಾರಾಕಾರ ಮಳೆಗೆ ರೈತರು ಕಂಗಾಲಾಗಿ ಹೋಗಿದ್ದಾರೆ. ತಾಲ್ಲೂಕಿನ ಅಡವಿಮಲ್ಲಾಪುರ ಗ್ರಾಮದ ಜಮೀನಿನಲ್ಲಿ ಕುರಿ ಮೇಯಿಸಲು ತೆರಳಿದ್ದ ರೈತರಿಗೆ ವರುಣ ದೇವ ಬಿಗ್ ಶಾಕ್ ಕೊಟ್ಟಿದ್ದಾನೆ.
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಮೇ.17): ಏಕಾಏಕಿ ಸೋಮವಾರ ಸಂಜೆ ಚಿತ್ರದುರ್ಗ (Chitradurga) ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಹಲವೆಡೆ ಸುರಿದ ಧಾರಾಕಾರ ಮಳೆಗೆ (Rain) ರೈತರು (Farmers) ಕಂಗಾಲಾಗಿ ಹೋಗಿದ್ದಾರೆ. ಅದರಲ್ಲಂತೂ ವರುಣನ ಸಿಡಿಲು (Thunderbolt), ಗುಡುಗು ಸಹಿತ ಆರ್ಭಟಕ್ಕೆ ರಾಸು ಜಾನುವಾರುಗಳು ನೆಲಕಪ್ಪಳಿಸಿ ಸಾವನ್ನಪ್ಪಿರೋ ದಾರುಣ ಘಟನೆ ನಡೆದಿರೋದು ರೈತರನ್ನ ಇನ್ನಷ್ಟು ಕಷ್ಟದ ಕೂಪಕ್ಕೆ ತಳ್ಳಿದಂತಿದೆ. ತಾಲ್ಲೂಕಿನ ಅಡವಿಮಲ್ಲಾಪುರ ಗ್ರಾಮದ ಜಮೀನಿನಲ್ಲಿ ಕುರಿ ಮೇಯಿಸಲು ತೆರಳಿದ್ದ ರೈತರಿಗೆ ವರುಣ ದೇವ ಬಿಗ್ ಶಾಕ್ ಕೊಟ್ಟಿದ್ದಾನೆ. ಸುಮಾರು 114, ಮೇಕೆಗಳು, 39 ಕುರಿಗಳು, 1 ಹಸು ಸಾವನ್ನಪ್ಪಿರೋ ಘಟನೆ ನಡೆದಿದೆ.
ನಿಜಕ್ಕೂ ರೈತನ ಕಣ್ಮುಂದೆಯೇ ಈ ಘಟನೆ ನಡೆದಿರೋದು ಬರ ಸಿಡಿಲು ಬಂದಂತಾಗಿದೆ. ಸಾವನ್ನಪ್ಪಿರೋ ನೂರಾರು ಜಾನುವಾರುಗಳು ರೈತ ಪಾಪಯ್ಯ, ಬಯ್ಯಣ್ಣ, ಹಾಗೂ ನಾಲ್ವರು ರೈತರಿಗೆ ಸೇರಿದವಾಗಿವೆ. ಎಂದಿನಂತೆ ನಿತ್ಯ ಕುರಿ, ಮೇಕೆಗಳನ್ನು ಮೇಯಿಸಲು ಜಮೀನಿಗೆ ತೆರಳಿದ್ದ ರೈತರು ಇಂತಹ ದುರ್ಘಟನೆ ತಮ್ಮ ಕಣ್ಣೆದೆರೇ ನಡೆಯುತ್ತದೆ ಎಂದು ಕನಸಲ್ಲಿಯೂ ಊಯಿಸಿರಲಿಲ್ಲ ಎಂದು ಕಣ್ಣೀರು ಹಾಕ್ತಿದ್ದಾರೆ. ಸರಿ ಸುಮಾರು 150ಕ್ಕೂ ಅಧಿಕ ಜಾನುವಾರುಗಳು ಏಕಕಾಲದಲ್ಲೇ ಸಾವನ್ನಪ್ಪಿರೋದಕ್ಕೆ ಲಕ್ಷಾಂತರ ರೂಪಾಯಿ ನಷ್ಟಕ್ಕೆ ರೈತರು ಸಿಲುಕಿದ್ದಾರೆ.
ಚಿತ್ರದುರ್ಗ: ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಮಾದರಿ ಶಾಲೆ ನಿರ್ಮಾಣ
ಅಷ್ಟೇ ಅಲ್ಲದೇ ಚಿಕ್ಕೇರಹಳ್ಳಿ ಗ್ರಾಮದ ರೈತ ಮಹಿಳೆ ಈರಮ್ಮ ಎಂಬಾಕೆಗೆ ಸೇರಿದ ಒಂದು ಎತ್ತು ಕೂಡ ಬರ ಸಿಡಿಲಿನ ಆರ್ಭಟಕ್ಕೆ ಸಿಲುಕಿ ಸಾವನ್ನಪ್ಪಿರೋದು ರೈತ ಮಹಿಳೆಯ ರೋಧನೆ ಹೇಳತೀರದು. ಇದರ ಜೊತೆಗೆ ಯಮರಾಯನಂತೆ ಬಂದ ಮಳೆರಾಯ ಅನೇಕ ರೈತರು ತಮ್ಮ ಜಮೀನುಗಳಲ್ಲಿ ಕುರಿ, ಮೇಕೆಗಳಿಗಂತ ಕಟ್ಟಿಸಿದ್ದ ಶೆಡ್‌ಗಳು ಹಾನಿಯಾಗಿದ್ದು, ಹಲವು ಪೀಠೋಪಕರಣಗಳ ನಾಶದಿಂದ ಸಾವಿರಾರು ನಷ್ಟ ಅನುಭವಿಸುತ್ತಿದ್ದಾರೆ. ಹೀಗೆ ದಿಢೀರನೇ ರೈತನಿಗೆ ಸಂಕಷ್ಟ ತಂದಿರೋ ವರುಣನ ಅರ್ಭಟ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ಈ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರಿಗೆ ಆಗಿರೋ ನಷ್ಟಕ್ಕೆ ಶೀಘ್ರವೇ ಪರಿಹಾರ ಒದಗಿಸಲಿ ಎಂಬುದು ಪ್ರತಿಯೊಬ್ಬರ ಆಶಯ.
ಕರಾವಳಿ ಸೇರಿ ರಾಜ್ಯದ ಹಲವೆಡೆ ಭಾರಿ ಮಳೆ, ಕೆಲ ಜಿಲ್ಲೆಗಳಲ್ಲಿ ರೆಡ್ ಅಲರ್ಟ್: ಭಾರತಕ್ಕೆ ನಿಗದಿತ ಸಮಯಕ್ಕೂ ಮೊದಲೇ ಮುಂಗಾರು ಪ್ರವೇಶವಾಗಿದೆ. ಇದರ ಪರಿಣಾಮ ದೇಶದ ಬಹುತೇಕ ರಾಜ್ಯಗಳಲ್ಲಿ ಮಳೆ ಅಬ್ಬರ ಆರಂಭಗೊಂಡಿದೆ. ಇದೀಗ ದಕ್ಷಿಣ ಕರ್ನಾಟಕದ ಹಲವು ಭಾಗದಲ್ಲಿ ಭಾರಿ ಮಳೆಯಾಗಿದೆ. ಕರಾವಳಿಯಲ್ಲಿ ಸುರಿದ ಭಾರಿ ಮಳೆಗೆ ವಿಟ್ಲ ಮಂಗಳೂರು ರಸ್ತೆ ಮುಳುಗಡೆಯಾಗಿದೆ. ಬೊಬ್ಬೆಕೇರಿ ಭಾಗದಲ್ಲಿ ನೆರೆ ನೀರು ಏರಿದ ಪರಿಣಾಮ ತಾಸುಗಟ್ಟಲೆ ಜಲಾವೃತಗೊಂಡಿದೆ. ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ವಾಹನ ಸವಾರರು ಪರದಾಡಿದರು. ರಸ್ತೆ ಕಾಮಗಾರಿ ಹಿನ್ನೆಲೆ ಚರಂಡಿಗಳಲ್ಲಿ ಮಳೆನೀರು ಹರಿಯಲು ಸ್ಥಳಾವಕಾಶವಿಲ್ಲದೇ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಣೆಮಂಗಳೂರು ನರಿಕೊಂಬು ಮಧ್ಯೆ ಮೊಗರ್ನಾಡಿನಲ್ಲಿ ಮರಗಳು ರಸ್ತೆಗಳುರುಳಿದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿದೆ.
Chitradurga: ಕಳೆದ ಒಂದು ತಿಂಗಳಿಂದ ಸಹ್ಯಾದ್ರಿ ಬಡಾವಣೆ ಜನರ ಗೋಳು ಕೇಳೋರಿಲ್ಲ!
ಇನ್ನು ಗಾಳಿ ಸಹಿತ ಮಳೆಯಿಂದ ಹಲವು ಮನೆಯ ಮೆಲ್ಚಾವಣಿಗಳು ಹಾರಿ ಹೋಗಿದೆ. ಭಾರಿ ಮಳೆ ಗಾಳಿಗೆ ಗ್ರಾಮೀಣ ಪ್ರದೇಶಗಳ ಜನ ಹೈರಾಣಾಗಿದ್ದಾರೆ. ದಕ್ಷಿಣ ಕನ್ನಡದ ಜಿಲ್ಲೆಯಾದ್ಯಂತ ನೂರಾರು ಎಕರೆ ಬೆಳೆ , ತೋಟಗಳು ಹಾಳಾಗಿದೆ. ಇಂದು ಸಂಜೆಯಿಂಂದಲೇ ಸುರಿಯುತ್ತಿರುವ ಗುಡುಗ ಸಹಿತ ಭಾರಿ ಮಳೆಗೆ ಹಲವು ಕಡೆ ವಿದ್ಯುತ್ ಕಂಬಗಳು ಧರೆಗುರುಳಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸೋಮವಾರ ಧಾರಾಕಾರ ಮಳೆಯಾಗಿದೆ. ದಿಢೀರನೆ ಸುರಿದ ಮಳೆಯಿಂದಾಗಿ ನಗರದ ಅನೇಕ ಕಡೆಗಳಲ್ಲಿ ಕೃತಕ ಪ್ರವಾಹದಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿತ್ತು.ಬೆಳಗ್ಗಿನಿಂದಲೇ ಜಿಲ್ಲೆಯ ಅನೇಕ ಕಡೆಗಳಲ್ಲಿ ಮಳೆ ಆರಂಭವಾಗಿದ್ದರೂ ಮಧ್ಯಾಹ್ನದವರೆಗೆ ಗಮನಾರ್ಹವಾಗಿ ಸುರಿದಿರಲಿಲ್ಲ. ಮಧ್ಯಾಹ್ನದ ಬಳಿಕ ದಿಢೀರನೆ ಗುಡುಗು ಸಿಡಿಲಿನೊಂದಿಗೆ ಆರಂಭವಾದ ಮಳೆ ಸಂಜೆವರೆಗೂ ಧಾರಾಕಾರವಾಗಿ ಸುರಿಯಿತು.