ಹಾವೇರಿ ತಾಲೂಕಿನ ಹಾವನೂರ ಮತ್ತು ಶಾಕಾರ ಗ್ರಾಮಗಳ ಮಧ್ಯೆ ತುಂಗಭದ್ರಾ ನದಿಗೆ ಸೇತುವೆ ನಿರ್ಮಿಸುವಂತೆ ಹಾಂವಶಿ ಮತ್ತು ಶಾಕಾರ ಗ್ರಾಮಗಳ ಪ್ರಾಥಮಿಕ ಶಾಲೆಯ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಗುತ್ತಲ (ಆ.15) : ಹಾವೇರಿ ತಾಲೂಕಿನ ಹಾವನೂರ ಮತ್ತು ಶಾಕಾರ ಗ್ರಾಮಗಳ ಮಧ್ಯೆ ತುಂಗಭದ್ರಾ ನದಿಗೆ ಸೇತುವೆ ನಿರ್ಮಿಸುವಂತೆ ಹಾಂವಶಿ ಮತ್ತು ಶಾಕಾರ ಗ್ರಾಮಗಳ ಪ್ರಾಥಮಿಕ ಶಾಲೆಯ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಸುಮಾರು 50 ವರ್ಷಗಳಿಂದ ನಮ್ಮ ಪೂರ್ವಜರು ಮತ್ತು ನಮ್ಮ ಪಾಲಕರು ನಿರಂತರವಾಗಿ ಸೇತುವೆ ನಿರ್ಮಾಣ ಮಾಡುವಂತೆ ಹೋರಾಟ ಮಾಡುತ್ತಾ ಬಂದಿದ್ದಾರೆ. ರಾಜ್ಯ, ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದಾರೆ. ಆದರೆ ಈ ವರೆಗೆ ಸೇತುವೆ ನಿರ್ಮಾಣವಾಗಿಲ್ಲ ಎಂದು ಪತ್ರದಲ್ಲಿ ವಸ್ತುಸ್ಥಿತಿ ವಿವರಿಸಿದ್ದಾರೆ.
undefined
ಧಾರವಾಡ: ಕಲುಷಿತ ನೀರು ಪೂರೈಕೆ ಪತ್ತೆ ಹಚ್ಚಿದ ರೋಬೋಟ್!
ಈ ಹಿಂದೆ ಮುಖ್ಯಮಂತ್ರಿ, ಶಾಸಕರು, ಸಚಿವರು, ಸಂಸದರು, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಸೀಲ್ದಾರರಿಗೂ ಹಲವು ಬಾರಿ ಮನವಿ ಮಾಡಲಾಗಿದೆ. ಸಂಬಂಧಪಟ್ಟವಿವಿಧ ಇಲಾಖೆ ಅಧಿಕಾರಿಗಳಿಗೂ ಪತ್ರ ಬರೆಯಲಾಗಿದೆ. 2023ರ ವಿಧಾಸಭೆಯ ಚುನಾವಣೆ ಬಹಿಷ್ಕರಿಸಲು ನಿರ್ಧಾರ ಮಾಡಲಾಗಿತ್ತು. ಆ ಸಂದರ್ಭದಲ್ಲಿ ತಹಸೀಲ್ದಾರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹೋರಾಟಗಾರರ ಮನವೊಲಿಸಿ ಹೋರಾಟಗಾರರ ಮನವಿಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದ ಆನಂತರ ಹೋರಾಟ ವಾಪಸ್ ಪಡೆಯಲಾಗಿತ್ತು. ಸರ್ಕಾರ ಮತ್ತು ಅಧಿಕಾರಿಗಳು ಹೋರಾಟಗಾರರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿದ್ದಾರೆ ಎಂದು ಮಕ್ಕಳು ಆರೋಪಿಸಿದ್ದಾರೆ.
ಹಾಂವಶಿ ಮತ್ತು ಶಾಖಾರ ಹಾವೇರಿ ಜಿಲ್ಲೆಯ ಕೊನೆಯ ಗ್ರಾಮಗಳಾಗಿದ್ದು, ಕೂಗಳತೆ ದೂರದ ಊರಿಗೆ 20 ಕಿ.ಮೀ. ಸುತ್ತುವರಿಯಬೇಕಾಗಿದೆ. ಪ್ರೌಢಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಚಿಕಿತ್ಸಾಲಯ, ಪದವಿ ಶಿಕ್ಷಣ, ಸೌಕರ್ಯ, ಬ್ಯಾಂಕ್ ಸೌಲಭ್ಯ, ಮೂಲಭೂತ ಸೌಲಭ್ಯದಿಂದ ಎರಡು ಗ್ರಾಮಗಳೂ ವಂಚಿತಗೊಂಡಿವೆ. ತುಂಗಭದ್ರಾ ನದಿಯ ದಡದ ಆ ಕಡೆ ವಿಜಯನಗರ ಜಿಲ್ಲೆಯ ಗಡಿಹದ್ದಿಗೆ ಇರುವ ಹಾವೇರಿ ಜಿಲ್ಲೆಯ ಎರಡು ಗ್ರಾಮಗಳನ್ನು ಸರ್ಕಾರ ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ವಿವರಿಸಿದ್ದಾರೆ.
ಪ್ರಾಥಮಿಕ ಶಿಕ್ಷಣದ ಆನಂತರ ವಿದ್ಯಾರ್ಥಿನಿಯರಿಗೆ ದೂರದ ಊರಿಗೆ ವಿದ್ಯಾಭ್ಯಾಸಕ್ಕೆ ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಸೇತುವೆ ನಿರ್ಮಾಣವಾದರೆ ಅರ್ಧ ಕಿಮೀ ಕ್ರಮಿಸಿ ಹೈಸ್ಕೂಲ್ ಶಿಕ್ಷಣ ಪಡೆಯಬಹುದು. ಆದರೆ ಈಗ ಪ್ರೌಢ ಶಿಕ್ಷಣಕ್ಕೆ 10ರಿಂದ 15 ಕಿ.ಮೀ. ದೂರ ಹೋಗಬೇಕಾಗುತ್ತದೆ ಎನ್ನುವ ಕಾರಣಕ್ಕೆ ನಮ್ಮ ಶಿಕ್ಷಣವನ್ನು ಮೊಟಕುಗೊಳಿಸಬೇಕಾದ ಅನಿವಾರ್ಯತೆ ಎದುರಾಗಬಹುದು ಎಂದು 7ನೇ ತರಗತಿಯ ವಿದ್ಯಾರ್ಥಿನಿ ರೂಪಾ ‘ಕನ್ನಡಪ್ರಭ’ದ ಎದುರು ಅಳಲು ತೋಡಿಕೊಂಡರು.
ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತಗೊಳ್ಳುವುದು ಬೇಡ ಎನ್ನುವ ಉದ್ದೇಶದಿಂದ ನಾವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇವೆ ನಮ್ಮ ಪತ್ರಕ್ಕೆ ಸ್ಪಂದಿಸಿ ಸೇತುವೆ ನಿರ್ಮಿಸಿಕೊಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಹಾವೇರಿ: ತುಂಗಭದ್ರಾ, ವರದೆಯ ಅಬ್ಬರ: ಹೆಚ್ಚಿದ ಪ್ರವಾಹ, ಪರದಾಡಿದ ಗರ್ಭಿಣಿ
ಹಾವನೂರ ಶಾಕಾರ ಮಧ್ಯೆ ಸೇತುವೆ ನಿರ್ಮಾಣವಾದರೆ 6 ಕಿ.ಮೀ. ಪ್ರಯಾಣ ಮಾಡಿ ಪಿಯು ಕಾಲೇಜು ತಲುಪಬಹುದು. ಆದರೆ ಪ್ರಸ್ತುತವಾಗಿ 26 ಕಿ.ಮೀ. ದೂರ ಸುತ್ತುವರಿದು ಕಾಲೇಜಿಗೆ ಹೋಗಬೇಕು. ಸರಿಯಾದ ಸಮಯಕ್ಕೆ ತಲುಪುವುದು ಕಷ್ಟ.
ಭರಮಜ್ಜ ಬೋರಗಲ್ಲಪ್ಪನವರ ದ್ವಿತಿಯ ಪಿಯುಸಿ ವಿದ್ಯಾರ್ಥಿ
ನೀರಾವರಿ ಹಾಗೂ ಲೋಕೋಪಯೋಗಿ ಇಲಾಖೆಯ ಸಂಪರ್ಕದಲ್ಲಿದ್ದೇನೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಎದುರು ಮತ್ತೊಮ್ಮೆ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿ ಸೇತುವೆ ನಿರ್ಮಾಣಕ್ಕೆ ಅನುದಾನ ಪಡೆಯುತ್ತೇನೆ.
ರುದ್ರಪ್ಪ ಲಮಾಣಿ, ವಿಧಾಸಭೆಯ ಉಪಸಭಾಧ್ಯಕ್ಷರು, ಹಾವೇರಿ ಶಾಸಕರು