ರಾಜ್ಯ ಸರ್ಕಾರ ಜಾರಿಗೊಳಿಸಿರುವ ಉಚಿತ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯಿಂದ ಆಟೋ ಚಾಲಕರು ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ. ದಿನೇ ದಿನೇ ವ್ಯಾಪಾರ-ವಹಿವಾಟು ಕುಂಠಿತಗೊಂಡು ಸಾಲದ ಶೂಲಕ್ಕೆ ಸಿಲುಕಿ ನರಳುತ್ತಿದ್ದಾರೆ ಎಂದು ಆಟೋ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಪ್ರತಾಪ್ ಮದಕರಿ ಹೇಳಿದರು.
ತುಮಕೂರು : ರಾಜ್ಯ ಸರ್ಕಾರ ಜಾರಿಗೊಳಿಸಿರುವ ಉಚಿತ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯಿಂದ ಆಟೋ ಚಾಲಕರು ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ. ದಿನೇ ದಿನೇ ವ್ಯಾಪಾರ-ವಹಿವಾಟು ಕುಂಠಿತಗೊಂಡು ಸಾಲದ ಶೂಲಕ್ಕೆ ಸಿಲುಕಿ ನರಳುತ್ತಿದ್ದಾರೆ ಎಂದು ಆಟೋ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಪ್ರತಾಪ್ ಮದಕರಿ ಹೇಳಿದರು.
ನಗರದ ಅಮಾನಿಕೆರೆ ಗಾಜಿನ ಮನೆ ಮುಂಭಾಗದ ನಿಲ್ದಾಣದ ಬಳಿ ಇರುವ ಜೈ ಮಾರುತಿ ಆಟೋ ನಿಲ್ದಾಣದ ಆಟೋ ಚಾಲಕರ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಸಂಬಂಧ ಕರೆದಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಾಗೂ ಸಂಬಂಧಪಟ್ಟಇಲಾಖೆ ಆಟೋಚಾಲಕರ ಕಡೆ ಗಮನಹರಿಸಿ ಆಟೋ ಚಾಲಕರ ರಕ್ಷಣೆಗೆ ಮುಂದಾಗಬೇಕು. ಅಲ್ಲದೆ, ತುಮಕೂರು ಜಿಲ್ಲೆಯಾದ್ಯಂತ ದಿನೇ ದಿನೇ ಆಟೋಗಳ ಸಂಖ್ಯೆ ಹೆಚ್ಚುತ್ತಿದ್ದು, ಹಲವಾರು ವರ್ಷಗಳಿಂದ ಆಟೋ ಚಾಲನೆಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಹಲವಾರು ಕುಟುಂಬಗಳು ಬೀದಿ ಪಾಲಾಗುವುದಲ್ಲದೆ, ಅಮಾಯಕ ನಿರುದ್ಯೋಗಿಗಳು ಆಟೋ ಚಾಲನೆಯನ್ನು ನಂಬಿ ಬಂದು ಸಾಲದ ಸುಳಿಯಲ್ಲಿ ಸಿಲುಕಿ ನರಳುವುದನ್ನು ನಿಲ್ಲಿಸಬೇಕಾಗಿದೆ. ಹಾಗಾಗಿ ತುಮಕೂರು ಜಿಲ್ಲೆಯಲ್ಲಿ ನೂತನವಾಗಿ ನೀಡುವ ಆಟೋ ಪರ್ಮಿಟ್ ನಿಲ್ಲಿಸದೇ ಹೋದಲ್ಲಿ ಜಿಲ್ಲಾಡಳಿತ ಆಟೋ ಚಾಲಕರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸ್ಮಾರ್ಚ್‌ಸಿಟಿ ನೆಪದಲ್ಲಿ ನೂರಾರು ಆಟೋ ನಿಲ್ದಾಣಗಳನ್ನು ಕಿತ್ತು ಹಾಕಿದ್ದು, ಆಟೋ ನಿಲ್ದಾಣಗಳನ್ನು ಪುನರ್ ನಿರ್ಮಾಣ ಮಾಡಬೇಕು ಹಾಗೂ ನೂತನವಾಗಿ ನಿರ್ಮಾಣವಾಗುತ್ತಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ವ್ಯವಸ್ಥಿತವಾಗಿ ಆಟೋ ನಿಲ್ದಾಣ ನಿರ್ಮಿಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಮಾತನಾಡಿ, ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಆಟೋ ಚಾಲಕರಿಗೆ ಕರೆ ನೀಡಿದರು.
ಪದಾಧಿಕಾರಿಗಳ ಆಯ್ಕೆ:
ಇದೇ ಸಂದರ್ಭದಲ್ಲಿ ಜೈ ಮಾರುತಿ ಆಟೋ ನಿಲ್ದಾಣಕ್ಕೆ ಅಧ್ಯಕ್ಷರಾಗಿ ಶಿವಕುಮಾರ್ ಪಿ., ಉಪಾಧ್ಯಕ್ಷರಾಗಿ ಮಂಜುನಾಥ್ ಡಿ., ಕಾರ್ಯದರ್ಶಿಯಾಗಿ ರಾಜಣ್ಣ, ಖಜಾಂಚಿಯಾಗಿ ದೊರೈರಾಜ್, ಸಂಘಟನ ಕಾರ್ಯದರ್ಶಿಯಾಗಿ ರಾಮಕೃಷ್ಣ ಆರ್., ಸಂಘಟನಾ ಕಾರ್ಯದರ್ಶಿಗಳಾಗಿ ನೂರುಲ್ಲಾ, ಮುಷೀರ್, ಮೋಹನ್, ಅಮ್ಜದ್ ಮತ್ತು ಅರಕೆರೆ ನಾಗರಾಜ್ ಇತರರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಕುಮಾರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫೈರೋಜ್ ಅನ್ವರ್‌ಖಾನ್, ಜೈ ಭೀಮ್ ಆಟೋ ನಿಲ್ದಾಣದ ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.