ಪ್ರತಿ ಮನೆಯಲ್ಲೂ ಕಿತ್ತೂರು ಚನ್ನಮ್ಮನಂಥ ವೀರ ನಾರಿ ಹುಟ್ಟಲಿ : ಶಿವಾನಂದ ಕಾಪಶಿ

By Kannadaprabha News  |  First Published Oct 24, 2022, 7:39 AM IST
  • ತಿ ಮನೆಯಲ್ಲೂ ಕಿತ್ತೂರು ಚನ್ನಮ್ಮನಂಥ ವೀರ ನಾರಿ ಹುಟ್ಟಲಿ
  • ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ವೀರರಾಣಿ ಮಹಿಳೆಯರಿಗೆ ಸ್ಫೂರ್ತಿ: ಶಿವಾನಂದ ಕಾಪಶಿ

ದಾವಣಗೆರೆ (ಅ.24) : ಬ್ರಿಟೀಷರ ಪಾಲಿಗೆ ಸಿಂಹಸ್ವಪ್ನವಾಗಿದ್ದ ವೀರ ರಾಣಿ ಕಿತ್ತೂರು ಚನ್ನಮ್ಮಂತಹ ಮಹಿಳೆಯರು ಪ್ರತಿ ಮನೆಯಲ್ಲೂ ಹುಟ್ಟಬೇಕು. ಹೆಣ್ಣು ಮಕ್ಕಳಿಗೆ ಇಂತಹ ವೀರನಾರಿಯರು ಸ್ಪೂರ್ತಿಯಾಗಬೇಕು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಕರೆ ನೀಡಿದರು.

ಚೆನ್ನಮ್ಮಳ ದಿಟ್ಟತನ ಮಹಿಳೆಯರು ಅಳವಡಿಸಿಕೊಳ್ಳಬೇಕು: ಕೆ.ಶ್ರೀನಿವಾಸ ಗೌಡ

Tap to resize

Latest Videos

ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಜಿಲ್ಲಾ ಘಟಕ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದಿಂದ ಹಮ್ಮಿಹೊಂಡಿದ್ದ ವೀರ ಮಾತೆ ಕಿತ್ತೂರು ಚನ್ನಮ್ಮ ವಿಜಯೋತ್ಸವದಲ್ಲಿ ಮಾತನಾಡಿದ ಅವರು, ಕಿತ್ತೂರು ಚನ್ನಮ್ಮನವರ ಬದುಕು, ಹೋರಾಟ ಅನನ್ಯ, ವೀರರಾಣಿಯ ದೇಶಪ್ರೇಮ ಎಲ್ಲರಿಗೂ ಅನುಕರಣೀಯ ಎಂದರು.

ನಮ್ಮ ನೆಲ ಅನ್ಯರ ಪಾಲಾಗದೆ ನಮಗೆ ಉಳಿಯಬೇಕೆಂಬ ಸಂಕಲ್ಪದೊಂದಿಗೆ ಹೋರಾಟ ನಡೆಸಿದ ದಿಟ್ಟಮಹಿಳೆ ಕಿತ್ತೂರು ಚನ್ನಮ್ಮ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ. ಹೆಣ್ಣು ಮಕ್ಕಳು ಯಾವ ಕ್ಷೇತ್ರದಲ್ಲೂ ಕಡಿಮೆ ಇಲ್ಲ. ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು. ಸ್ತ್ರೀಯರಿಗೆ ಅಂಥÜದ್ದೊಂದು ಅಗಾಧ ಶಕ್ತಿ ಇದೆ. ಮಹಿಳೆಯರು ಉನ್ನತ ಸ್ಥಾನಗಳನ್ನು ಅಲಂಕರಿಸುವ ಮೂಲಕ ಪುರುಷರಿಗೆ ಸಮಾನವಾಗಿ ದಾಪುಗಾಲಿಡುತ್ತಿದ್ದಾರೆ ಎಂದು ತಿಳಿಸಿದರು.

ಶಾಸಕ ಎಸ್‌.ಎ.ರವೀಂದ್ರನಾಥ ಮಾತನಾಡಿ, ಎರಡು ಶತಮಾನಗಳ ಹಿಂದೆ ಬ್ರಿಟೀಷರ ವಿರುದ್ಧ ಹೋರಾಡಿ, ನಮ್ಮೆಲ್ಲರಿಗೂ ಸ್ಪೂರ್ತಿಯಾಗಿರುವ ವೀರರಾಣಿ ಕಿತ್ತೂರು ಚನ್ನಮ್ಮನವರಂತೆ ಎಲ್ಲರೂ ಅನ್ಯಾಯ ಖಂಡಿಸಿ, ನ್ಯಾಯದ ಪರ ಹೋರಾಟ ಮಾಡಬೇಕು. ಬ್ರಿಟಿಷರ ವಿರುದ್ಧ ತಾಯ್ನೆಲದ ರಕ್ಷಣೆಗಾಗಿ ಕಿತ್ತೂರು ಚನ್ನಮ್ಮ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನಂತಹ ಅಪ್ರತಿಮ ಹೋರಾಟಗಾರರು ಹೋರಾಡಿದ ಇತಿಹಾಸದ ಹಿನ್ನೆಲೆಯ ನೆಲ ನಮ್ಮದು. ಇಂತಹ ಹೋರಾಟಗಾರರು ವಿದ್ಯಾರ್ಥಿ, ಯುವ ಜನರು, ಮಹಿಳೆಯರಿಗೆ ಸ್ಫೂರ್ತಿಯಾಗಬೇಕು ಎಂದು ಹೇಳಿದರು.

ರಾಜನಹಳ್ಳಿ ಸೀತಮ್ಮ ಪಿಯು ಕಾಲೇಜಿನ ಬೋಧಕಿ ಅರುಣಾಕುಮಾರಿ ಬಿರಾದಾರ್‌ ಮಾತನಾಡಿ, ಎಲ್ಲಿ ನಾರಿಯರನ್ನು ಗೌರವಿಸುತ್ತಾರೋ, ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬ ಮಾತಿದೆ. ಅದೇ ರೀತಿ ಧೂರ್ತ, ಕಪಟಿಗಳು, ಕುತಂತ್ರಿಗಳು, ಬಲಶಾಲಿಗಳಾದ ಬ್ರಿಟೀಷರಿಂದ ನಮ್ಮ ನೆಲ, ಜಲ, ಜನರ ರಕ್ಷಣೆ ಮಾಡಿದ ವೀರ ನಾರಿ ಕಿತ್ತೂರು ಚನ್ನಮ್ಮ ಇಂದಿನ ಎಲ್ಲ ಮಹಿಳೆಯರಿಗೂ ಸ್ಪೂರ್ತಿ. ಚನ್ನಮ್ಮನಲ್ಲಿದ್ದ ಛಲ, ಆತ್ಮವಿಶ್ವಾಸ, ಶೂರತ್ವ, ನಾಡು-ನುಡಿಯ ಮೇಲಿನ ಅಭಿಮಾನ ಎಲ್ಲವೂ ಯುವ ಜನಾಂಗಕ್ಕೆ ಆದರ್ಶಪ್ರಾಯ ಎಂದು ವಿವರಿಸಿದರು.

ಕಿತ್ತೂರು ಎಂಬ ಸಣ್ಣ ರಾಜ್ಯ ತಂತ್ರಜ್ಞಾನ, ಶಸ್ತ್ರಗಳ ಕೊರತೆ ಇದ್ದರೂ ಕಿತ್ತೂರು ಚನ್ನಮ್ಮ ಒಬ್ಬ ಮಹಿಳೆಯಾಗಿ ನಾಡು, ಜನರ ರಕ್ಷಣೆಗಾಗಿ, ಕನ್ನಡ ನಾಡಿನ ಉಳಿವಿಗಾಗಿ ಬ್ರಿಟೀಷರ ವಿರುದ್ಧ ಹೋರಾಡಿದ ಪ್ರಪ್ರಥಮ ಮಹಿಳೆಯಾಗಿದ್ದಾರೆ. ಅಂದೇ ಕಿತ್ತೂರು ಚನ್ನಮ್ಮನವರಿಗೆ ಉತ್ತಮ ಬೆಂಬಲ ಸಿಕ್ಕಿದ್ದರೆ, ಬ್ರಿಟಿಷರನ್ನು ದೇಶದಿಂದ ಓಡಿಸಲು 1947ರವರೆಗೆ ಕಾಯಬೇಕಿರಲಿಲ್ಲ. ಆದರೆ, ನಮ್ಮವರೇ ಮಾಡಿದ ಕುತಂತ್ರದ ಫಲವಾಗಿ ಮೋಸ, ವಂಚನೆಯಿಂದ ಬ್ರಿಟಿಷರ ದಾಳಿಗೆ ಸಿಲುಕುವ ಸಂದರ್ಭ ಬಂದಿತು ಎಂದು ವಿಷಾದಿಸಿದರು.

ಇಂದಿನಿಂದ 3 ದಿನ ಕಿತ್ತೂರು ಉತ್ಸವ: ಸಿಎಂ ಬೊಮ್ಮಾಯಿ ಚಾಲನೆ

ದೂಡಾ ಅಧ್ಯಕ್ಷ ಕೆ.ಎಂ.ಸುರೇಶ, ಮೇಯರ್‌ ಜಯಮ್ಮ ಗೋಪಿನಾಯ್ಕ, ಉಪ ಮೇಯರ್‌ ಗಾಯತ್ರಿ ಬಾಯಿ, ಎಸ್ಪಿ ಸಿ.ಬಿ.ರಿಷ್ಯಂತ್‌, ಜಿಪಂ ಸಿಇಓ ಡಾ.ಎ.ಚನ್ನಪ್ಪ, ಅಪರ ಡಿಸಿ ಪಿ.ಎನ್‌.ಲೋಕೇಶ, ಪಾಲಿಕೆ ಆಯುಕ್ತ ವಿಶ್ವನಾಥ ಪಿ.ಮುದಜ್ಜಿ, ಕನ್ನಡ ಮತ್ತು ಸಂಸ್ಕೃತಿ ಸಹಾಯಕ ನಿರ್ದೇಶಕ ರವಿಚಂದ್ರ, ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಸಿ.ಉಮಾಪತಿ, ಮಹಾಸಭಾ ಜಿಲ್ಲಾಧ್ಯಕ್ಷ ಅಶೋಕ ಇತರರು ಇದ್ದರು.

ಪಂಚಮಸಾಲಿ ಸಮಾಜದ ಮಹಿಳಾ ಘಟಕದಿಂದ ಕಿತ್ತೂರು ಚನ್ನಮ್ಮನ ಕುರಿತ ಲಾವಣಿ ಗೀತೆ ಹಾಡಲಾಯಿತು. ಪಂಚವಾಣಿ ಪತ್ರಿಕೆ ವಿಶೇಷ ಸಂಚಿಕೆ ಲೋಕಾರ್ಪಣೆಯಾಯಿತು. ಸಮಾಜದ ಮೂವರು ಮಹಿಳೆಯರಿಗೆ ಸನ್ಮಾನಿಸಲಾಯಿತು. ರಾಧ ಮತ್ತು ತಂಡ ಕಿತ್ತೂರು ರಾಣಿ ಚನ್ನಮ್ಮ ಕುರಿತ ನೃತ್ಯ ರೂಪಕ ಪ್ರದರ್ಶಿಸಿತು.

 

ಸರ್ಕಾರ ಸ್ಥಳೀಯ ಹೋರಾಟಗಾರರನ್ನು ಗುರುತಿಸಿ, ಅಂತಹವರ ಇತಿಹಾಸವನ್ನು ಪುಸ್ತಕಗಳ ಮೂಲಕ ಪ್ರಕಟಿಸುವುದು ಉತ್ತಮ. ಅಲ್ಲದೆ, ಮಹಾನ್‌ ವ್ಯಕ್ತಿಗಳನ್ನು ಯಾವುದೇ ಒಂದು ಜಾತಿ, ವರ್ಗಕ್ಕೆ, ಸಮುದಾಯಕ್ಕೆ ಸೀಮಿತಗೊಳಿಸದೆ, ಅಂತಹ ಸಾಧಕರು ತೋರಿದ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕು.

ಕೆ.ಎಂ.ಸುರೇಶ ಅಧ್ಯಕ್ಷರು, ದಾ-ಹ ನಗರಾಭಿವೃದ್ಧಿ ಪ್ರಾಧಿಕಾರ

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದರೂ ಆರ್ಥಿಕ, ಸಾಮಾಜಿಕ, ನೈತಿಕವಾಗಿ ಹಿಂದುಳಿದಿದ್ದೇವೆ. ಎಲ್ಲರೂ ವೈಜ್ಞಾನಿಕ ಮನೋಭಾವ ಮೈಗೂಡಿಸಿಕೊಂಡು, ಮುಂದೆ ಸಾಗಬೇಕು. ಸ್ತ್ರೀಯರ ಮೇಲೆ ನಡೆಯುವ ದೌರ್ಜನ್ಯ ಕೊನೆಗೊಳ್ಳಬೇಕು. ಐತಿಹಾಸಿಕ ಪ್ರಜ್ಞೆ ಕಡಿಮೆಯಾಗುವ ಈ ಕಾಲಘಟ್ಟದಲ್ಲಿ ಇತಿಹಾಸದ ಮನದಟ್ಟನ್ನು ಮಾಡಿಕೊಳ್ಳಬೇಕು.

-ಅರುಣಕುಮಾರಿ ಬಿರಾದಾರ,ಬೋಧಕಿ, ರಾಜನಹಳ್ಳಿ ಸೀತಮ್ಮ ಪಿಯು ಕಾಲೇಜು.

click me!