ಗ್ರಾಮೀಣ ಜನರ ಆರೋಗ್ಯ ಕಾಪಾಡಲು ಆರೋಗ್ಯ ಸಚಿವರು ಮುಂದಾಗಲಿ: ಎಚ್‌ಡಿಕೆ

By Govindaraj SFirst Published Dec 4, 2022, 7:40 PM IST
Highlights

ಗ್ರಾಮೀಣ ಜನರ ಆರೋಗ್ಯ ಕಾಪಾಡುವ ದೃಷ್ಠಿಯಿಂದ ಆರೋಗ್ಯ ಸಚಿವ ಸುಧಾಕರ್‌ ಡಿಎಚ್‌ಓಗಳ ಸಭೆ ಕರೆದು ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸಲಹೆ ನೀಡಿದರು.

ಮಧುಗಿರಿ (ಡಿ.04): ಗ್ರಾಮೀಣ ಜನರ ಆರೋಗ್ಯ ಕಾಪಾಡುವ ದೃಷ್ಠಿಯಿಂದ ಆರೋಗ್ಯ ಸಚಿವ ಸುಧಾಕರ್‌ ಡಿಎಚ್‌ಓಗಳ ಸಭೆ ಕರೆದು ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸಲಹೆ ನೀಡಿದರು. ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ನೀರಿನ ಸಂಪಿಗೆ ಬಿದ್ದ ಮಗುವಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದ ಆರೋಪ ಪ್ರಕರಣದ ಬಗ್ಗೆ ಮಧುಗಿರಿ ತಾಲೂಕಿನ ಗೊಂದಿಹಳ್ಳಿಯಲ್ಲಿ ಶನಿವಾರ ಪಂಚರತ್ನ ರಥ ಯಾತ್ರೆಯಲ್ಲಿ ಮಾತನಾಡಿದರು. 

ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇರೋದು ನನಗೆ ಗೊತ್ತು, ಆದರೂ ಇರುವ ಸಿಬ್ಬಂದಿ, ವೈದ್ಯರು ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಎಚ್ಚರಿಕೆ ನೀಡುವುದು ಅತ್ಯಗತ್ಯ ಎಂದ ಅವರು, ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡಬಾರದು. ಘಟನೆ ನಡೆದಾಗ ಅವರನ್ನು ಅಮಾನತ್ತು ಮಾಡಿ ಕಣ್ಣೋರೆಸಿ ಮತ್ತೆ ಅದೇ ಜಾಗಕ್ಕೆ ರಿವೋಕ್‌ ಮಾಡುವ ಕೆಲಸ ಬೇಡ. ಆಸ್ಪತ್ರೆಗೆ ಬರುವ ರೋಗಿಗಳನ್ನು ವೈದ್ಯರು ದೇವರಂತೆ ಕಂಡು ಚಿಕಿತ್ಸೆ ನೀಡಬೇಕು. ಆ ನಿಟ್ಟಿನಲ್ಲಿ ಆರೋಗ್ಯ ಸಚಿವರು ರಾಜ್ಯದ ಎಲ್ಲ ಡಿಎಚ್‌ ಓಗಳ ಸಭೆ ಕರೆದು ಇಂತಹ ಅಮಾನವೀಯ ಘಟನೆಗಳು ಸಂಭವಿಸಿದರೆ ಡಿಎಚ್‌ಓಗಳೇ ಹೊಣೆಗಾರರು ಎಂದು ಎಚ್ಚರಿಕೆ ಕೂಡುವಂತೆ ಕುಮಾರಸ್ವಾಮಿ ಸಲಹೆ ನೀಡಿದರು. 

JDS Pancharatna Rathayatra: ಮಧುಗಿರಿಯಲ್ಲಿ ಪಂಚರತ್ನ ಯಾತ್ರೆಗೆ ಅದ್ಧೂರಿ ಸ್ವಾಗತ

ಮಧುಗಿರಿ, ಕೊರಟಗೆರೆ ಕ್ಷೇತ್ರಗಳಲ್ಲಿ ಜೆಡಿಎಸ್‌ ಪಕ್ಷ ಸದೃಢವಾಗಿದ್ದು ಕಳೆದ ಬಾರಿಯ ಲೋಪ ಸರಿಪಡಿಸಿಕೊಂಡು ಈ ಸಲ ಜೆಡಿಎಸ್‌ ಗೆಲುವಿಗೆ ಶ್ರಮಿಸುವಂತೆ ಕಾರ್ಯಕರ್ತಗೆ ಕರೆ ನೀಡಿದರು. ಕಾಂಗ್ರೆಸ್‌ ಪಕ್ಷದಲ್ಲಿ ದಲಿತ ಸಿಎಂನ್ನು ಯಾರು ಮಾಡ್ತಾರೆ, ಎಲ್ಲಿಂದ ಮಾಡ್ತಾರೆ. ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿದ್ದಾಗಲೇ ಮಾಡಲಿಲ್ಲ, ಅವರು ಪಾರ್ಟಿ ಅಧ್ಯಕ್ಷರಾಗಿ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಹೊರಟಾಗ ಅವರನ್ನು ಜೆಡಿಎಸ್‌ನವರು ಸೋಲಿಸಿದ್ರ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಕಾಂಗ್ರೆಸ್‌ನವರೇ ಸೋಲಿಸಿದ್ರು ಅಂತ ಅವರೇ ಹೇಳ್ತಾರೆ, ಅವರು ಏನ್ಮಾಡ್ತಾರೆ ಅಂತ ನನಗೆ ಗೊತ್ತಿಲ್ಲ ಎಂದು ಡಾ.ಜಿ.ಪರಮೇಶ್ವರ್‌ ಹೆಸರೇಳದೆ ವ್ಯಂಗ್ಯವಾಡಿದರು. 

ಸಿಎಂ ಮತ್ತು ಮಹಾರಾಷ್ಟ್ರ ಸಚಿವರ ನಡುವಿನ ನಾಟಕ ಏನಿದೆ ಅಂತ ಅವರೇ ಉತ್ತರ ಕೊಡಬೇಕು. ಅವರು ನಮ್ಮವರೇ ಕನ್ನಡ ಭಾಷೆ ಮಾತನಾಡುವವರು, ಕರ್ನಾಟಕಕ್ಕೆ ನಮ್ಮನ್ನು ತೆಗೆದುಕೊಳ್ಳಿ ಅಂತ ಹೇಳ್ತಿದ್ದಾರೆ. ಸಾಂಗ್ಲಿ ಭಾಗದ 18-20 ಹಳ್ಳಿ ರೈತರು ಹಾಗೂ ಜನರ ಬೇಡಿಕೆ ಒಂದು ಭಾಗವಾಗಿದ್ದು, ಇವತ್ತು ಅಲ್ಲಿನ ಜನರ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿ, ಕರ್ನಾಟಕದಿಂದ ಕುಡಿವ ನೀರಿನ ವ್ಯವಸ್ಥೆ ಮಾಡಿ ಕೊಟ್ಟಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಪರಮೇಶ್ವರ್‌ ಅವರ ವಿಚಾರ ನಾನು ಹೇಳಲ್ಲ, ನಮ್ಮ ಅಭ್ಯರ್ಥಿ ಗೆಲ್ಲಬೇಕು. ನಾನು ರಾಜ್ಯ ಸರ್ಕಾರ ರಚಿಸಲು ಸ್ಪಷ್ಟಬಹುಮತ ಪಡಿಬೇಕು. ಅಂದ್ರೇ ನನ್ನ ಅಭ್ಯರ್ಥಿಗಳು ಗೆಲ್ಲಬೇಕು ಅಷ್ಠೇ ಎಂದರು. 

Ticket Fight: ತುಮಕೂರಲ್ಲಿ ಪ್ರಾಬಲ್ಯ ಮೆರೆಯಲು ಬಿಜೆಪಿ ರಣತಂತ್ರ

ಕೊರಟಗೆರೆ ಕ್ಷೇತ್ರದ ಗೊಂದಿಹಳ್ಳಿಯಲ್ಲಿ ಬಹಿರಂಗ ಸಭೆ ನಡೆಸಿ ನೇರವಾಗಿ ಜನರ ಜತೆ ಸಂವಾದ, ರೈತರ, ವ್ಯಾಪಾರಿಗಳ ಕಷ್ಟಆಲಿಸಿದರು. ಇದೇ ವೇಳೆ ಗೊಂದಿಹಳ್ಳಿಯ 30 ಅಡಿ ಎತ್ತರದ ಏಕಶಿಲಾ ವಿಗ್ರಹದ ಶ್ರೀ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿದರು. ತಗ್ಗಿಹಳ್ಳಿ ರಾಮಕೃಷ್ಣ ಆಶ್ರಮಕ್ಕೆ ಬೇಟಿ ನೀಡಿ ಆಶ್ರಮದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ನೆರವಿನ ಭರವಸೆ ನೀಡಿದರು. ರಥಯಾತ್ರೆಯಲ್ಲಿ ಜೆಡಿಎಸ್‌ ಜಿಲ್ಲಾಧ್ಯಕ್ಷ ಆರ್‌.ಸಿ.ಆಂಜಿನಪ್ಪ, ಮಾಜಿ ಶಾಸಕ ಸುಧಾಕರ್‌ಲಾಲ್‌, ಮುಖಂಡ ಮಹಾಲಿಂಗಪ್ಪ ಸೇರಿದಂತೆ ಅನೇಕರು ಇದ್ದರು.

click me!