ಕಳಸದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಕನ್ನಡ ಶಾಲೆ ಉಳಿಸಲು ಸರ್ಕಾರ ಮುಂದಾಗಲಿ, ಚಟ್ನಳ್ಳಿ ಮಹೇಶ್‌

By Kannadaprabha News  |  First Published Feb 28, 2023, 9:11 AM IST

ಕಸ್ತೂರಿ ರಂಗನ್‌ ವರದಿಯ ಭೂತ, ಅಡಕೆ ಬೆಳೆಗೆ ಚುಕ್ಕೆ ರೋಗ ಇಂತವುಗಳಿಂದ ಮಲೆನಾಡ ಕೃಷಿಕರಲ್ಲಿ ತಲ್ಲಣ ಉಂಟಾಗಿದೆ. ತೆಂಗಿನ ಬೆಲೆ ಕುಸಿತದಿಂದ ಬಯಲು ಸೀಮೆ ರೈತರ ಆತಂಕ, ಇಂತಹ ಸಂಕಷ್ಟಗಳಿಂದ ರೈತರನ್ನು ಪಾರು ಮಾಡುವ ಸಂಕಲ್ಪ ಮಾಡಬೇಕಿದೆ: ಸಮ್ಮೇಳನಾಧ್ಯಕ್ಷ ಚಟ್ನಳ್ಳಿ ಮಹೇಶ್‌ 


ಕಳಸ(ಫೆ.28): ಪಾಠೋಪಕರಣ, ಪೀಠೋಪಕರಣ, ಆಟೋಪಕರಣ ಸಹಿತ ಮೂಲಭೂತ ಸೌಕರ್ಯಗಳೊಂದಿಗೆ ಆಧುನಿಕ ಸ್ಪರ್ಶ ನೀಡಿ ಎಲ್ಲಾ ಕನ್ನಡ ಶಾಲೆಗಳನ್ನು ಉಳಿಸಲು ಸರ್ಕಾರ ಮುಂದಾಗಬೇಕು ಎಂದು ಜಿಲ್ಲಾ ಸಮ್ಮೇಳನಾಧ್ಯಕ್ಷ ಚಟ್ನಳ್ಳಿ ಮಹೇಶ್‌ ಹೇಳಿದರು. ಕಳಸದಲ್ಲಿ ಸೋಮವಾರ ನಡೆದ 18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದ ಅವರು, ಕಸ್ತೂರಿ ರಂಗನ್‌ ವರದಿಯ ಭೂತ, ಅಡಕೆ ಬೆಳೆಗೆ ಚುಕ್ಕೆ ರೋಗ ಇಂತವುಗಳಿಂದ ಮಲೆನಾಡ ಕೃಷಿಕರಲ್ಲಿ ತಲ್ಲಣ ಉಂಟಾಗಿದೆ. ತೆಂಗಿನ ಬೆಲೆ ಕುಸಿತದಿಂದ ಬಯಲು ಸೀಮೆ ರೈತರ ಆತಂಕ, ಇಂತಹ ಸಂಕಷ್ಟಗಳಿಂದ ರೈತರನ್ನು ಪಾರು ಮಾಡುವ ಸಂಕಲ್ಪ ಮಾಡಬೇಕಿದೆ. ಭಾಷೆ, ನೆಲ, ಜಲ, ಕಲೆ, ಸಾಹಿತ್ಯ, ಸಂಸ್ಕೃತಿ ಪರ ಆಯೋಜಿಸುವ ಕನ್ನಡದ ಕೆಲಸಗಳಿಗೆ ಸರ್ಕಾರ ಧನ ಸಹಾಯ ನೀಡಬೇಕಿದೆ ಎಂದರು.

1ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಶೇಕಡಾ ಹತ್ತೋ ಇಪ್ಪತ್ತೋ ಉದ್ಯೋಗ ಮೀಸಲು ಎಂದು ಆದೇಶ ಮಾಡಿ ನೋಡಿ, ಆದಾವ ಕನ್ನಡ ಶಾಲೆಗಳು ಮುಚ್ಚುತ್ತವೆ. ಅದ್ಹೇಗೆ ಕನ್ನಡದ ವೈಭವ ರಾರಾಜಿಸುತ್ತದೆ. ಇಂತಹ ಇಚ್ಛಾಸಕ್ತಿ ಆಳುವವರಲ್ಲಿ ಅರಳಲಿ ಎಂದರು.

Tap to resize

Latest Videos

ಕಾಮಗಾರಿ ವಿಳಂಬ: ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಚಿವ ಸೋಮಣ್ಣ

ಬದುಕಿಗೆ ಬೇಕಾದ ನಿಖರ ಮತ್ತು ನಿಶ್ಚಿತ ದಾರಿಯನ್ನು ಬಾಳಿಗೆ ಬೇಕಾದ ಬೆಳಕನ್ನು, ಮುನ್ನಡೆಯಲು ಬೇಕಾದ ಸ್ಪೂರ್ತಿಯನ್ನು, ಕ್ರಿಯಾಶೀಲತೆಗೆ ಬೇಕಾದ ಚೇತನವನ್ನು, ಪರಿವರ್ತನೆಗೆ ಬೇಕಾದ ಹೊಸ ಆಯಾಮವನ್ನು ಕೊಡಬಲ್ಲ ಶಕ್ತಿ ಸಾಹಿತ್ಯಕ್ಕೆ ಇದೆ. ನೊಂದು ಬೆಂದ ಜೀವಕ್ಕೆ ಭರವಸೆಯ ಹದ ನೀಡುವ ಮಧು ತುಂಬಿದ ಕೊಡ ಈ ಸಾಹಿತ್ಯ ಬಿಂದಿಗೆ. ಸಭ್ಯ ಬದುಕಿಗೆ ಅಗತ್ಯವಿರುವ ವಿಧಾನ, ಸಂವಿಧಾನ, ಸಂಧಾನ, ಅನುಸಂಧಾನ, ಸಮಾಧಾನ ಎಲ್ಲವೂ ದೊರೆಯುವುದು ಸಾಹಿತ್ಯದಿಂದಲೇ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್‌ ಮಾತನಾಡಿ, ಹೊಸ ತಾಲೂಕುಗಳಲ್ಲಿ ಸಮ್ಮೇಳನಗಳನ್ನು ನಡೆಸುವ ಮೂಲಕ ಸಮ್ಮೇಳನದಲ್ಲಿ ಬಹಿರಂಗ ಅಧಿವೇಶನದಲ್ಲಿ ತಾಲೂಕಿನ ಅಭಿವೃದ್ಧಿಗೆ ಪೂರಕವಾದ ನಿರ್ಣಯಗಳನ್ನು ಕೈಗೊಂಡು ಸರ್ಕಾರದ ಗಮನವನ್ನು ಸೆಳೆಯಲಾಗುವುದು. ಕನ್ನಡ ಭಾಷೆಯ ಅಭಿವೃದ್ಧಿಗೆ ಕನ್ನಡ ಸಾಹಿತ್ಯ ಪರಿಷತ್ತು ಕಂಕಣಬದ್ಧವಾಗಿದೆ. ವಿಚಾರ ಪೂರಕವಾದ ಗೋಷ್ಠಿಗಳು ಕನ್ನಡಿಗರನ್ನು ಚಿಂತನೆಗೆ ಹಚ್ಚಲಿದ್ದು, ಸಮ್ಮೇಳನದ ಕನ್ನಡ ಮಯ ವಾತಾವರಣ ಕನ್ನಡಾಭಿಮಾನ ಹೆಚ್ಚಲು ಪೂರಕವಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತರಾದ ಡಾ. ಜಿ. ಭೀಮೇಶ್ವರ ಜೋಷಿ, ಎಲ್ಲರನ್ನೂ ತಲುಪುವ ಸಾಹಿತ್ಯ ಶ್ರೇಷ್ಠ ಸಾಹಿತ್ಯ. ಕನ್ನಡದ ನೆಲ, ಜಲ, ಸಂಸ್ಕೃತಿಯನ್ನು ಬೆಳೆಸುವ ಶಕ್ತಿ ಸಾಹಿತ್ಯಕ್ಕಿದೆ. ಸಾಹಿತ್ಯ ಸೃಜನಶೀಲವಾಗಬೇಕು, ಜೀವನ್ಮುಖಿಯಾಗಬೇಕು ಎಂದು ಹೇಳಿದರು.

ಚಿಕ್ಕಮಗಳೂರು: ಮುಳ್ಳುಹಂದಿ ಶಿಕಾರಿಗೆ ಹೋಗಿದ್ದ ಕಾರ್ಮಿಕರು; ಸುರಂಗದೊಳಗೆ ಸಿಲುಕಿ ಸಾವು!

ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡಿ, ಕನ್ನಡದ ಕೆಲಸ ಒಬ್ಬರ ಕೆಲಸವಲ್ಲ. ಅದು ಸಾಂಘೀಕ ಕೆಲಸ. ಕನ್ನಡದ ಶ್ರೀಮಂತ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ. ಕನ್ನಡ ಭಾಷೆಯನ್ನು ಬಳಸುವುದರಿಂದ ಕನ್ನಡ ಬೆಳೆಯುತ್ತದೆ. ಕನ್ನಡ ಭಾಷಾಭಿಮಾನ ಮಕ್ಕಳಲ್ಲಿ ಬೆಳೆಸುವ ಅಗತ್ಯವಿದೆ. ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಭಾಷೆಗಿದೆ. ಕಳಸದ ಗ್ರಾಮೀಣ ಪ್ರದೇಶಗಳಲ್ಲಿ ಸಮಸ್ಯೆಗಳು ಜೀವಂತವಾಗಿದ್ದು, ಸಮ್ಮೇಳನದಲ್ಲಿ ಆ ಸಮಸ್ಯೆಗಳ ಬಗ್ಗೆ ನಿರ್ಣಯ ಕೈಗೊಂಡು ಸರ್ಕಾರದ ಗಮನ ಸೆಳೆಯಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷರಾದ ಕೆ.ಕೆ ಬಾಲಕೃಷ್ಣ ಭಟ್‌, ಕೋಶಾಧ್ಯಕ್ಷರಾದ ಕೆ.ಸಿ ಧರಣೇಂದ್ರ, ಕಾರ್ಯಾಧ್ಯಕ್ಷರಾದ ಎಂ.ಎ ಶೇಷಗಿರಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಡಾ. ರಾಜಪ್ಪ ದಳವಾಯಿ, ಕಳಸ ಉಪ ತಹಸೀಲ್ದಾರ್‌ ಹೇಮಂತ್‌ ಕುಮಾರ್‌, ಕಸಾಪ ಕಳಸ ತಾಲೂಕು ಅಧ್ಯಕ್ಷ ಆ.ರಾ. ಸತೀಶ್ಚಂದ್ರ, ಕಳಸ ಸಹಕಾರ ಸಂಘದ ಅಧ್ಯಕ್ಷರಾದ ಜಿ.ಕೆ ಮಂಜಪ್ಪಯ್ಯ, ಶ್ರೀಕ್ಷೇತ್ರ ಹೊರನಾಡಿನ ರಾಜಲಕ್ಷ್ಮಿ ಬಿ. ಜೋಷಿ, ಕಸಾಪ ಮಹಿಳಾ ಘಟಕ ಅಧ್ಯಕ್ಷೆ ಮಮ್ತಾಜ್‌ ಬೇಗಂ, ದೀಪಕ್‌ ದೊಡ್ಡಯ್ಯ ಉಪಸ್ಥಿತರಿದ್ದರು.

click me!