
ಬೀದರ್(ಜೂ.20): ಸದ್ಯ ಕೇಂದ್ರದಿಂದ ಪಡಿತರ ಮೂಲಕ 5 ಕೆಜಿ ಅಕ್ಕಿ ವಿತರಿಸಲಾಗುತಿದ್ದು, ಚುನಾವಣೆಯಲ್ಲಿ ಹೇಳಿದಂತೆ ಸಿದ್ರಾಮಯ್ಯ ಅವರು ಬಡವರಿಗೆ ಇನ್ನು 10 ಕೆಜಿ ಸೇರಿಸಿ ಒಟ್ಟು 15 ಕೆಜಿ ಕೊಡಲಿ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.
ಅವರು ಸೋಮವಾರ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2013-2014ರಲ್ಲಿ ಸಿದ್ರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಕೇಂದ್ರದಲ್ಲಿ ಅವರದ್ದೆ ಯುಪಿಎ ಸರ್ಕಾರ ಇತ್ತು. ಆಗ ಹೆಚ್ಚುವರಿ ಅಕ್ಕಿ ಕೊಡಲ್ಲ ಎಂದು ಹೇಳಿದ್ದನ್ನು ನೆನಪಿಸಲಿ. ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳುವಂತಹ ನಾಯಕರಾಗಿದ್ದು, ಸುಮ್ಮನೆ ಕೇಂದ್ರದತ್ತ ಬೊಟ್ಟು ಮಾಡುತಿದ್ದಾರೆ. ಷರತ್ತು ರಹಿತ ಇಷ್ಟುದೊಡ್ಡ ಯೋಜನೆಗಳನ್ನು ಜನರಿಗೆ ಕೊಡಲು ಸಾಧ್ಯವೇ ಎಂದರು.
ಸಿದ್ದರಾಮಯ್ಯ ಅವರ ಬೇಜವಾಬ್ದಾರಿ ಹೇಳಿಕೆಗಳನ್ನು ಜನರು ಗಮನಿಸುತಿದ್ದಾರೆ. ಮುಂದಿನ ದಿನಗಳಲ್ಲಿ ನಿಮ್ಮ ಗ್ರಾಫ್ ಕೆಳಗೆ ಬಿಳುತ್ತದೆ ಎಂದರು. ಮೋದಿ ಅವರ 5 ಕೆಜಿ, ಸಿದ್ರಾಮಯ್ಯನವರ 10 ಕೆಜಿ ಸೇರಿಸಿ ಒಟ್ಟು 15 ಕೆಜಿ ಅಕ್ಕಿ ಕೊಡಲಿ. ಇದನ್ನು ಬಿಟ್ಟು ಬರೀ ಹೇಳಿಕೆಗಳನ್ನು ನೀಡುತಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ: ಅಶೋಕ್ ಖೇಣಿ
ಓಲೈಕೆ ರಾಜಕೀಯಕ್ಕೆ ಕೈ ಹಾಕಿದ್ದಾರೆ:
ಸಿದ್ರಾಮಯ್ಯ ಸರ್ಕಾರ ಧರ್ಮಾಂತರ ಕುರಿತು ಸಮಾಜಲ್ಲಿ ಅಶಾಂತಿ ನಿರ್ಮಾಣವಾಗುವ ಕೆಲಸಕ್ಕೆ ಕೈ ಹಾಕಿ ಓಲೈಕೆ ರಾಜಕೀಯಕ್ಕೆ ಮುಂದಾಗಿದ್ದಾರೆ. ಧರ್ಮಾಂತರದಲ್ಲಿ ಒತ್ತಾಯಪೂರ್ವಕ ಕಾಯ್ದೆ ಇದೆ. ಆದರೆ ಕೆಟ್ಟಆಲೋಚನೆಗಳಿಂದಲೆ ದೇಶವನ್ನು ಮತ್ತೆ ವೈಚಾರಿಕವಾಗಿ ಛಿದ್ರಗೊಳಿಸುವ ಕೆಲಸ ಮಾಡತಿದ್ದಾರೆ.
ರಾಹುಲ್ ಗಾಂಧಿ ಇಚ್ಛೆಯಂತೆ ಶಾಂತಿಯುತ ರಾಜ್ಯವನ್ನು ಅಶಾಂತಿ ಕಡೆ ದೂಡುತಿದ್ದಾರೆ. ಹಿಂದಿನ ಸರ್ಕಾರ ಪಠ್ಯ ಪುಸ್ತಕಗಳಲ್ಲಿ ಮಹಾನರ ಚರಿತ್ರೆಯನ್ನು ಮಕ್ಕಳಿಗೆ, ಯುವ ಪೀಳಿಗೆಗೆ ತಿಳಿಸಿತು. ಆದರೆ ಇವರು ದುರದ್ದೇಶದಿಂದ ಅದನ್ನು ತೆಗೆದು ಹಾಕುತ್ತಿದ್ದಾರೆ. ಏನೆ ಆಗಲಿ ಕಾಂಗ್ರೆಸ್ ನಿಯತ್ತು ಸರಿಯಲ್ಲ. ಅಖಂಡ ಭಾರತ ಇರುವುದು ಇವರಿಗೆ ಹಿಡಿಸಲ್ಲ ಎಂದರು.
ರೈತ ಆತ್ಮಹತ್ಯೆ: ಕುಟುಂಬಗಳಿಗೆ ಪರಿಹಾರ ವಿಳಂಬವಾಗದಂತೆ ಈಶ್ವರ್ ಖಂಡ್ರೆ ಖಡಕ್ ಸೂಚನೆ
5 ವರ್ಷ ನಾನೇ ಸಿಎಂ ಇರುತ್ತೇನೆ ಎಂದು ಜನರಿಗೆ ಹೇಳಲಿ:
ಸರ್ಕಾರ ರಚನೆಯಾಗತ್ತಲೆ ಒಬ್ಬೊಬ್ಬ ಸಚಿವರು ಸಿದ್ದರಾಮಯ್ಯ ಅವರು 5 ವರ್ಷ ಇರುತ್ತಾರೆ ಎಂದು ಹೇಳುತ್ತಿದ್ದಾರೆ, ಇಂತಹ ಹೇಳಿಕೆಗಳು ಕೇಳಿ ಸಾಕಾಗಿದೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನದಲ್ಲಿ 5 ವರ್ಷ ನಾನೇ ಇರುತ್ತೇನೆ. ಇಲ್ಲವೋ ನಮ್ಮಲ್ಲಿ ಹೊಂದಾಣಿಕೆ ಆಗಿದೆ ಎಂದು ಜನರಿಗೆ ತಿಳಿಸಬೇಕು. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ಮಧ್ಯೆ ಆಗಿರುವ ಒಪ್ಪಂದವನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ ದರ ಕೂಡ ಹಿಂಪಡೆಯಲಿ:
ರಾಜ್ಯದಲ್ಲಿ ಜನರಿಗೆ ಉಚಿತ ವಿದ್ಯುತ್ ಕೊಡುವ ನೆಪದಲ್ಲಿ ಹೆಚ್ಚಿಸಿದ ವಿದ್ಯುತ್ ದರವನ್ನು, ಮತಾಂತರ ಕಾಯ್ದೆ ಹಿಂಪಡೆದಂತೆ ವಿದ್ಯುತ್ ದರ ಕೂಡ ಹಿಂಪಡೆಯಲು ನಿಮಗೆ ಅಧಿಕಾರ ಇದೆ. ಇದನ್ನು ಮಾಡಲಿ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಬುಡಾ ಮಾಜಿ ಅಧ್ಯಕ್ಷ ಬಾಬುವಾಲಿ, ಪಕ್ಷದ ಮುಖಂಡರಾದ ಅರಹಂತ ಸಾವಳೆ, ರಾಜಶೇಖರ ನಾಗಮೂರ್ತಿ, ಶ್ರಿನಿವಾಸ ಚೌಧರಿ, ರಾಜು ಬಿರಾದಾರ ಇದ್ದರು.