ತಾಲೂಕಿನಲ್ಲಿ ಸಾರ್ವಜನಿಕರಿಗೆ ಅನನುಕೂಲ ಆಗುವಂತಹ ಗಣಿಗಾರಿಕೆಗಳಿಗೆ ಅದರಲ್ಲೂ ರೈತರಿಗೆ ಅನ್ಯಾಯವಾಗುವಂತಹ ಗಣಿಗಾರಿಕೆಗೆ ಅವಕಾಶ ಕೋಡೊಲ್ಲ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
ಗುಡಿಬಂಡೆ (ಜು.03): ತಾಲೂಕಿನಲ್ಲಿ ಸಾರ್ವಜನಿಕರಿಗೆ ಅನನುಕೂಲ ಆಗುವಂತಹ ಗಣಿಗಾರಿಕೆಗಳಿಗೆ ಅದರಲ್ಲೂ ರೈತರಿಗೆ ಅನ್ಯಾಯವಾಗುವಂತಹ ಗಣಿಗಾರಿಕೆಗೆ ಅವಕಾಶ ಕೋಡೊಲ್ಲ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ತಾಲೂಕಿನ ದೊಡ್ಡನಂಚರ್ಲು ಗ್ರಾಮದ ಸ.ನಂ 287 ರಲ್ಲಿ ಆಂಧ್ರ ಮೂಲದ ವ್ಯಕ್ತಿಗೆ ಗಣಿಗಾರಿಕೆ ಅನುಮತಿ ಸಿಕ್ಕಿದ್ದು, ಅದೇ ಜಾಗದಲ್ಲಿ ಸುಮಾರು ವರ್ಷಗಳಿಂದ ಭೂಮಿ ಉಳುಮೆ ಮಾಡುತ್ತಿದ್ದ ರೈತರು ದರಕಾಸ್ತು ಯೋಜನೆಯಡಿ ಭೂ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದರು.
ಇದೀಗ ಗಣಿಗಾರಿಕೆ ನಡೆಸಲು ಆಂಧ್ರ ಮೂಲದವರು ಬಂದ ಹಿನ್ನೆಲೆಯಲ್ಲಿ ಅಲ್ಲಿ ರೈತರು ತಿರುಗಿ ಬಿದಿದ್ದರು. ಸ್ಥಳ ಪರಿಶೀಲನೆ ನಡೆಸಲು ಹೋದ ತಹಸೀಲ್ದಾರ್ ಮನೀಷಾ ರವರ ಬಳಿ ಅಲ್ಲಿನ ರೈತರು ಈ ಜಾಗ ಕಲ್ಲು ಗಣಿಗಾರಿಕೆ ನೀಡಬಾರದೆಂದು ಆಗ್ರಹಿಸಿದ್ದರು. ಈ ಕುರಿತು ಶಾಸಕರಿಗೂ ಸಹ ದೂರು ನೀಡಲಾಗಿತ್ತು. ಈ ಸಂಬಂಧ ಶಾಸಕ ಸುಬ್ಬಾರೆಡ್ಡಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಕ್ಕಿ ವಿಚಾರದಲ್ಲಿ ಸಿ.ಟಿ.ರವಿ ಯಾಕೆ ಮೈ ಪರಿಚಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ: ಸಚಿವ ಎಂ.ಸಿ.ಸುಧಾಕರ್
ಸ್ಥಳ ಮರುಪರಿಶೀಲನೆಗೆ ಸೂಚನೆ: ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ದೊಡ್ಡನಂಚರ್ಲು ಸ.ನಂ. 287 ರಲ್ಲಿ ಗೋಕಾಡಿದೆ. ಗೋಕಾಡನ್ನು ಕಲ್ಲು ಗಣಿಗಾರಿಕೆಗೆ ಮಂಜೂರು ಮಾಡಲು ಬರುವುದಿಲ್ಲ. ಈ ಹಿಂದೆ ಅಧಿಕಾರಿಗಳು ಯಾವ ರೀತಿ ಮಂಜೂರು ಮಾಡಿದ್ದಾರೆ ಎಂಬುದು ತನಿಖೆಯಾಗಬೇಕಿದೆ. ಈ ಕಾರಣದಿಂದ ನಾನು ಮತ್ತೊಮ್ಮೆ ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದೇನೆ.
ಸುಮಾರು ವರ್ಷಗಳಿಂದ ಈ ಭಾಗದಲ್ಲಿ ರೈತರು ಉಳುಮೆ ಮಾಡುತ್ತಿದ್ದಾರೆ. ಕಾನೂನಿನಂತೆ ಅವರಿಗೆ ಜಮೀನು ಮಂಜೂರು ಮಾಡಲಾಗುತ್ತದೆ. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದರು. ಇನ್ನೂ ಈ ಸಮಯದಲ್ಲಿ ತಹಸೀಲ್ದಾರ್ ಮನೀಷಾ, ಸರ್ವೆಯರ್ ಮಹೇಶ್, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನಾಗರಾಜು ಸೇರಿದಂತೆ ಆ ಭಾಗದ ರೈತರು ಹಾಜರಿದ್ದರು.
ಮುಂದಿನ ಪೀಳಿಗೆಗಾಗಿ ಪರಿಸರ ಸಂರಕ್ಷಿಸಿ: ಮರ, ಗಿಡಗಳನ್ನು ಉಳಿಸಿ ಬೆಳೆಸುವುದರ ಜೊತೆಗೆ ಪರಿಸರವನ್ನು ಸಂರಕ್ಷಣೆ ಮಾಡಿದಾಗ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ನೀಡಲು ಸಾಧ್ಯ ಇಲ್ಲದಿದ್ದರೆ ಇಡೀ ಮಾನವ ಕುಲಕ್ಕೆ ಮುಂದಿನ ದಿನಗಳಲ್ಲಿ ಗಂಡಾಂತರ ತಪ್ಪಿದ್ದಲ್ಲ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಮಿಟ್ಟೇಮರಿ ಗ್ರಾಮದ ಕಿತ್ತೂರು ರಾಣಿ ಚನ್ನಮ ಬಾಲಕಿಯರ ವಸತಿ ಶಾಲಾ ಆವರಣದಲ್ಲಿ ತಾಲೂಕು ಆಡಳಿತ, ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ವಲಯ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಅಯೋಜಿಸಿದ್ದ ವನ ಮಹೋತ್ಸವ ಕಾರ್ಯಕ್ರಮವನ್ನು ಸಸಿ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ವಾರ್ಷಿಕ 5 ಕೋಟಿ ಸಸಿ ನೆಡುವ ಗುರಿ: ಮರ ಗಿಡಗಳನ್ನು ಬೆಳೆಸಿ ಉಳಿಸುವುದು ಹಾಗೂ ಪರಿಸರವನ್ನು ಸಂರಕ್ಷಿಸಿ ಮುಂದಿನ ತಲೆಮಾರಿನ ಜನತೆಯ ಉಜ್ವಲ ಭವಿಷ್ಯವನ್ನು ರೂಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ 2023-24ನೇ ಸಾಲಿನಲ್ಲಿ ರಾಜ್ಯಾಧ್ಯಂತ ಅಂದಾಜು 5 ಕೋಟಿ ಸಸಿಗಳನ್ನು ನೆಡುವಂತಹ ಅರ್ಥಪೂರ್ಣ ಕಾರ್ಯಕ್ರಮ ಜಾರಿ ಮಾಡಿ ಜುಲೈ 1 ರಿಂದ 7 ರವರೆಗೆ ರಾಜ್ಯಾದ್ಯಾಂತ ವನ ಮಹೋತ್ಸವ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ನೀಡಿದೆ ಎಂದರು.
ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಎಂಪಿ ಟಿಕೆಟ್‌ಗೆ ಸ್ಪರ್ಧೆ ಪ್ರಾರಂಭ: ಗರಿಗೆದರಿದ ಆಕಾಂಕ್ಷಿಗಳ ಚಟುವಟಿಕೆ
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲಾ ಆವರಣದಲ್ಲಿ ಒಂದು ಸಾವಿರ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸಿ ಬೆಳೆಸುವಂತ ಜವಾಬ್ದಾರಿ ಇಲ್ಲಿನ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರಿಗೆ ವಹಿಸಲಾಗಿದೆ. ಇಲ್ಲಿನ ವಿದ್ಯಾರ್ಥಿಗಳು ತಲಾ ಒಂದೊಂದು ಗಿಡ ನೆಟ್ಟು ಅವುಗಳಿಗೆ ನಿಮ್ಮ ಹೆಸರನ್ನು ಇಡಿ, ಇದು ಸರ್ಕಾರಿ ಕಾರ್ಯಕ್ರಮ ಎಂದು ತಾತ್ಸಾರ ಮನೋಭಾವ ಸಲ್ಲದು, ಗಿಡ, ಮರಗಳನ್ನು ಸಂರಕ್ಷಣೆ ಕೇವಲ ಸರ್ಕಾರಕ್ಕೆ ಮಾತ್ರ ಸೀಮಿತವಲ್ಲ, ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯ ಎಂದರು.