ಡಾ.ಜಿ.ಪರಮೇಶ್ವರ್ ಕರ್ನಾಟಕದ ರಾಜಕಾರಣದಲ್ಲಿ ಉಂಟಾಗಿರುವ ಎಡ-ಬಲ ಕಂದಕ ತುಂಬಲಿ. ಈ ಕೆಲಸ ಮಾಡುವ ಹೊಣೆ ದಲಿತ ರಾಜಕಾರಣಿಗಳ ಮೇಲಿದ್ದು, ಪರಮೇಶ್ವರ್ ನಿಭಾಯಿಸಿ, ಸರ್ವ ಜನಾನುರಾಗಿಯಾಗಲಿ, ಸವ್ಯಸಾಚಿಯಾಗಲಿ, ಪ್ರಜಾಪ್ರಭುತ್ವ ಉಳಿಯಲಿ ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಆಶಿಸಿದರು.
ತುಮಕೂರು (ಏ.11): ಡಾ.ಜಿ.ಪರಮೇಶ್ವರ್ (Dr G Parameshwar) ಕರ್ನಾಟಕದ ರಾಜಕಾರಣದಲ್ಲಿ (Karnataka Politics) ಉಂಟಾಗಿರುವ ಎಡ-ಬಲ ಕಂದಕ ತುಂಬಲಿ. ಈ ಕೆಲಸ ಮಾಡುವ ಹೊಣೆ ದಲಿತ ರಾಜಕಾರಣಿಗಳ ಮೇಲಿದ್ದು, ಪರಮೇಶ್ವರ್ ನಿಭಾಯಿಸಿ, ಸರ್ವ ಜನಾನುರಾಗಿಯಾಗಲಿ, ಸವ್ಯಸಾಚಿಯಾಗಲಿ, ಪ್ರಜಾಪ್ರಭುತ್ವ ಉಳಿಯಲಿ ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ (Baraguru Ramchandrappa) ಆಶಿಸಿದರು. ತುಮಕೂರಿನ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ನೌಕರರ ಒಕ್ಕೂಟದ ಸಂಸ್ಥೆ ವತಿಯಿಂದ ಸಿದ್ಧಾರ್ಥ ಮೆಡಿಕಲ್ ಕಾಲೇಜು ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಪ್ರೊ.ಮಹದೇವ್ ಭರಣಿ ಸಂಪಾದಿತ ಡಾ.ಜಿ.ಪರಮೇಶ್ವರ ಗೌರವ ಗ್ರಂಥ ಸವ್ಯಸಾಚಿ (Savyasachi Book) ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಹುಪಾಲು ರಾಜಕಾರಣಿಗಳಿಗೆ ಇಲ್ಲದ ಸಜ್ಜನಿಕೆ, ಸೌಜನ್ಯ, ಮಾತಿನ ಮೇಲಿನ ಹಿಡಿತ, ಶೈಕ್ಷಣಿಕ ಪ್ರಬುದ್ಧತೆ, ಒರಟುತನವಿಲ್ಲದ ನಿಷ್ಟುರತೆ ಪರಮೇಶ್ವರ್ ಅವರಲ್ಲಿದೆ. ಹೀಗಾಗಿ ಪರಮೇಶ್ವರ್ ನಮಗೆಲ್ಲಾ ಮುಖ್ಯರಾಗುತ್ತಾರೆ. ಸಂಪಾದನೆ ಹೆಚ್ಚಿದಂತೆ ಸಂವೇದನೆ ಕಡಿಮೆಯಾಗುತ್ತದೆ. ಇದಕ್ಕೆ ಅಪವಾದ ಎಂಬಂತೆ ಪರಮೇಶ್ವರ್ ಇದ್ದಾರೆ. ಇಂತಹ ಪರಮೇಶ್ವರ್ ರಾಜಕಾರಣದ ಎಡ-ಬಲ ಕಂದಕ ತುಂಬಿ, ಸೌಹಾರ್ದತೆ, ಸಹಿಷ್ಣುತೆ ನೆಲೆಸಲು ನೇತೃತ್ವ ವಹಿಸಲಿ ಎಂದರು. 35 ಸಾವಿರಕ್ಕೂ ಹೆಚ್ಚು ಎಂಜಿನಿಯರ್‌ಗಳು, 6 ಸಾವಿರಕ್ಕೂ ಹೆಚ್ಚು ವೈದ್ಯರು, ಸಾವಿರಾರು ಶಿಕ್ಷಕರನ್ನು ನೀಡಿದ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಸಾಧನೆ ಅಗಾಧ. ತಳ ಸಮುದಾಯದಿಂದ ಬಂದ ಎಚ್.ಎಂ. ಗಂಗಾಧರಯ್ಯನವರು ಕಟ್ಟಕಡೆಯ ಪ್ರಜೆಗೆ ಶಿಕ್ಷಣ ತಲುಪಿಸುವ ಕೆಲಸ ಮಾಡಲು ಅಸ್ತಿಭಾರ ಹಾಕಿದ ಸಂಸ್ಥೆಯನ್ನು ಪುತ್ರ ಪರಮೇಶ್ವರ್ ಮುನ್ನಡೆಸುತ್ತಿದ್ದು, ಅವರ ಜೊತೆ ಪತ್ನಿ ಕನ್ನಿಕಾ ಪರಮೇಶ್ವರಿ ಅವರು ಸಹಕರಿಸುತ್ತಿರುವುದು ಗಮನಾರ್ಹ ಎಂದರು.
Karnataka Politics: ಕಾಂಗ್ರೆಸ್ ಸೇರುವ ಬಿಜೆಪಿಗರ ಪಟ್ಟಿ ಡಿಕೆಶಿ ಬಳಿ ಇದೆ: ಪರಂ
ಪರಮೇಶ್ವರ್ ರಾಜಕಾರಣಕ್ಕೆ ಬರುವುದಕ್ಕಿಂತಲೂ ಮುಂಚಿನಿಂದಲೂ ತಮಗೆ ಸ್ನೇಹಿತರು. ಸಣ್ಣ-ಪುಟ್ಟಆರೋಗ್ಯ ಸಮಸ್ಯೆ ಎದುರಾದರೂ ಮನೆಗೆ ಬಂದು ಯೋಗಕ್ಷೇಮ ವಿಚಾರಿಸುವ ಆತ್ಮೀಯ. ಪರಮೇಶ್ವರ್ ಜೊತೆ ಆತ್ಮೀಯರಾಗಿರುವುದರಿಂದಲೇ ತಮಗೆ ಎಂಎಲ್‌ಸಿ ಸದಸ್ಯತ್ವ ಸಿಗಲಿಲ್ಲ ಎಂಬ ಮಾತುಗಳು ಕೇಳಿ ಬಂದವು. ಆದರೆ 2 ಬಾರಿ ತಾವು ಎಂಎಲ್‌ಸಿ ಪದವಿಯನ್ನು ನಿರಾಕರಿಸಿದ್ದೆ ಎಂಬುದು ಬೇರೆ ವಿಷಯ. ಪದವಿಗಿಂತ ಸ್ನೇಹ-ಸಂಬಂಧ ದೊಡ್ಡದು ಎಂದು ನಂಬಿರುವ ವ್ಯಕ್ತಿ ನಾನು ಎಂದು ಬರಗೂರು ಹೇಳಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಕಾಂಗ್ರೆಸ್‌ಗೆ ಬರಬೇಕು. ಅದೇ ಕಾಂಗ್ರೆಸ್‌ನಲ್ಲಿರುವ ದಲಿತ ಪರಮೇಶ್ವರ್ ಉಪಮುಖ್ಯಮಂತ್ರಿಯಾಗಲು ಸಮ್ಮಿಶ್ರ ಸರ್ಕಾರ ಬರಬೇಕು. ಇದೊಂದು ವಿಪರ್ಯಾಸ. ಇದು ಭಾರತೀಯ ರಾಜಕೀಯದ ಪ್ರಶ್ನೆಯೂ ಹೌದು. ದಲಿತ ರಾಜಕಾರಣದ ಪ್ರಶ್ನೆಯೂ ಹೌದು ಎಂದು ಬರಗೂರು ಮಾರ್ಮಿಕವಾಗಿ ನುಡಿದರು.
ಪ್ರಜಾಪ್ರಭುತ್ವ ಉಳಿಯಲಿ: ಜಾತಿ, ಧರ್ಮದ ದ್ವೇಷ ಬಿತ್ತಿ, ನಾಯಕ, ಖಳ ನಾಯಕರನ್ನು ನಿರ್ಮಾಣ ಮಾಡುವ ಹುಸಿ ಬೌದ್ಧಿಕ ಕಾರ್ಖಾನೆಗಳ ನಡುವೆ ನಾವಿದ್ದೇವೆ. ಗಾಂಧಿ-ಅಂಬೇಡ್ಕರ್, ನೆಹರೂ- ಸರ್ದಾರ್ ಪಟೇಲ್ ನಡುವಿನ ಭಿನ್ನಾಭಿಪ್ರಾಯಗಳನ್ನೇ ದ್ವೇಷವೆಂಬಂತೆ ಚಿತ್ರಿಸಿ, ದ್ವೇಷದ ದ್ವೀಪವನ್ನೇ ನಿರ್ಮಾಣ ಮಾಡಲಾಗಿದೆ. ಆದರೆ ನೆಹರೂರನ್ನು ಹೊಗಳಿದ ಪಟೇಲರ ಮಾತುಗಳನ್ನೇ ಮರೆ ಮಾಚಿ, ಆ ಜನ್ಮ ವೈರಿಗಳಂತೆ ಚಿತ್ರಿಸಿ, ಸುಳ್ಳು ಪ್ರಚಾರ ನಡೆಸುವ ದ್ವೇಷದ ಕಾರ್ಖಾನೆಗಳ ನಡುವೆ ಜೀವಿಸುತ್ತಿದ್ದೇವೆ. ರಾಜ್ಯದಲ್ಲಿ ಧರ್ಮದ ಕಾರಣಕ್ಕಾಗಿ ಸಾಮರಸ್ಯ ಹಾಳು ಮಾಡಿ, ಕುವೆಂಪು ಹೇಳಿದ ಸರ್ವಜನಾಂಗದ ಶಾಂತಿಯ ತೋಟವನ್ನು ಧ್ವಂಸಗೊಳಿಸಲಾಗುತ್ತಿದೆ. ಧರ್ಮಗಳಿಗೆ ವಿವೇಕಾನಂದರು ಆದರ್ಶವಾಗಬೇಕು. ಸಹಿಷ್ಣುತೆ, ಸೌಹಾರ್ದತೆ ಕಾಪಾಡಿಕೊಂಡು, ನಾಗರ ನಾಲಿಗೆ ನಿರಾಕರಿಸಿ, ವಿಕಾರಾನಂದರನ್ನು ಹಿಂದಕ್ಕೆ ಸರಿಸಿ, ವಿವೇಕ ವೃದ್ಧಿಸಿ, ಪ್ರಜಾಪ್ರಭುತ್ವ ಉಳಿಯುವಂತಾಗಲಿ ಎಂದು ಬರಗೂರು ಹೇಳಿದರು. 1951ರಲ್ಲೇ ನಾನು ಪ್ರಧಾನ ಮಂತ್ರಿಯಲ್ಲ, ಜನರ ಸೇವಕ ಎಂದ ಪ್ರಥಮ ಪ್ರಧಾನಿ ಜವಾಹರ್‌ಲಾಲ್ ನೆಹರು ಅವರ ಸಾಧನೆ, ಸೇವೆಯನ್ನು ಸಮರ್ಥಿಸಿಕೊಳ್ಳಲು ಇಂದು ಕಾಂಗ್ರೆಸ್ ಮುಖಂಡರ ಬಳಿ ಎರಡು ಸಾಲುಗಳಿಲ್ಲದ ದುಸ್ಥಿತಿ ನಿರ್ಮಾಣವಾಗಿರುವುದು ಬೇಸರದ ಸಂಗತಿ ಎಂದರು.
ಆಡಿದ್ದನ್ನು ಮಾಡುತ್ತಾರೆ: ಸವ್ಯಸಾಚಿ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಮಾತನಾಡಿ, ಪರಮೇಶ್ವರ್ ಆಡಿದ್ದನ್ನು ಮಾಡುತ್ತಾರೆ, ಮಾಡಿದ್ದನ್ನು ಆಡುತ್ತಾರೆ. ನಾನು ಬಹಳ ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ. ಪರಮೇಶ್ವರ್ ಬೇರೆ ರಾಜಕಾರಣಿಗಳಂತೆ ಅಲ್ಲ. ನಾನು ಇಲ್ಲಿಗೆ ಈ ಗ್ರಂಥ ಬಿಡುಗಡೆ ಮಾಡಲು ಬಹಳ ಸಂತೋಷದಿಂದ ಬಂದಿದ್ದೇನೆ. ಈ ಗ್ರಂಥ ಬಹುತೇಕ ಶಿಕ್ಷಕರಿಂದ ತುಂಬಿದೆ. ಇದಕ್ಕೆ ಹೊರತಾದ ಪರಮೇಶ್ವರ್ ಅವರನ್ನು ಬಲ್ಲ. ಎಲ್ಲ ಕ್ಷೇತ್ರಗಳ ಜನತೆ ಬರೆದ ಮತ್ತೊಂದು ಉತ್ತಮ ಗ್ರಂಥ ಬಂದರೆ ಒಳ್ಳೆಯದು ಎಂದರು.
ಚಿಂತನೆಗಳು ಕಠಿಣವಾಗಿರುತ್ತವೆ: ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ಜಿ. ಪರಮೇಶ್ವರ್, ಶ್ರೀರಾಮನವಮಿಯ ದಿನ ತಮ್ಮ ಅಭಿನಂದನಾ ಗ್ರಂಥ ಬಿಡುಗಡೆಯಾಗಿದೆ. ಶ್ರೀರಾಮನನ್ನು ನ್ಯಾಯ, ಧರ್ಮ ಪರಿಪಾಲನೆಗಾಗಿ ಸ್ಮರಿಸುತ್ತೇವೆ. ಎಲ್ಲ ಧರ್ಮಗಳನ್ನು ಸತ್ಯ ಎಂದೇ ಭಾವಿಸಿರುವ ಹಿಂದೂ ಧರ್ಮದಿಂದ ಬಂದವರೇ ಆಗಿದ್ದೇವೆ ನಾವೆಲ್ಲಾ. ಸಹಿಷ್ಣುತೆ, ಸೌಹಾರ್ದತೆ, ಶಾಂತಿಯನ್ನು ಬಯಸುವ ದೇಶ ಭಾರತ ಎಂಬುದನ್ನು ಮರೆಯಲಾಗದು. ಡ್ರಾಯಿಂಗ್ ಟೀಚರ್ ಆಗಿದ್ದ ನಮ್ಮ ತಂದೆ ಗಂಗಾಧರಯ್ಯನವರು ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳನ್ನು ಅತ್ಯಂತ ಪರಿಶ್ರಮದಿಂದ ಕಟ್ಟಿಬೆಳೆಸಿದರು. ತಮ್ಮ ಅಣ್ಣ ಶಿವಪ್ರಸಾದ್ ಸತತ 30 ವರ್ಷಗಳ ಕಾಲ ಎಂಜಿನಿಯರಿಂಗ್, ಮೆಡಿಕಲ್ ಕಾಲೇಜು ಇತರೆ ಸಂಸ್ಥೆಗಳ ನಿಗಾವಹಿಸಿದರು ಎಂದು ಸ್ಮರಿಸಿದರು. ನಾನು ಬಹಳ ಸಾಫ್‌್ಟ ಎಂದು ಜನ ಹೇಳುತ್ತಾರೆ. ಸಮುದ್ರದ ನೀರು ಬಂಡೆಯನ್ನೇ ಸೀಳುತ್ತದೆ. ಕರಗಿಸಿ ಬಿಡುತ್ತವೆ ಎಂದ ಪರಮೇಶ್ವರ್ ತಾವು ಎಷ್ಟೇ ಸಾಫ್‌್ಟಆಗಿದ್ದರೂ, ತಮ್ಮ ಚಿಂತನೆಗಳು ಅಷ್ಟೇ ಕಠಿಣವಾಗಿರುತ್ತವೆ ಎಂದು ಮಾರ್ಮಿಕವಾಗಿ ನುಡಿದರು.
ಸಮಾರಂಭವನ್ನು ಇಂಡೋ ಶ್ರೀಲಂಕಾ ಇಂಟರ್‌ನ್ಯಾಷನಲ್ ಬುದ್ದಿಸ್ಟ್ ಅಸೋಸಿಯೇಷನ್‌ನ ಹೈಪ್ರೀಸ್ಟ್ ಡಾ.ಕೆ. ಸಿರಿ ಸುಮೇಧಾ ಥೇರಾ ಉದ್ಘಾಟಿಸಿ ಮಾತನಾಡಿದರು. ಸಮಾರಂಭದಲ್ಲಿ ಪರಮೇಶ್ವರ್ ಪತ್ನಿ ಕನ್ನಿಕಾ ಪರಮೇಶ್ವರಿ ಉಪಸ್ಥಿತರಿದ್ದರು. ಮಾಜಿ ಸಚಿವರಾದ ಸೊಗಡು ಶಿವಣ್ಣ, ಜಯಚಂದ್ರ, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪೂರ್ಣಕುಂಭದೊಂದಿಗೆ ಪರಮೇಶ್ವರ್ ದಂಪತಿಗಳನ್ನು ವೇದಿಕೆಗೆ ಕರೆತರಲಾಯಿತು. ಸಿದ್ಧಾರ್ಥ ನಗರದ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಬುದ್ಧಗೀತೆಯನ್ನು ಹಾಡಿದರು.
ವೀರಪ್ಪ ಮೊಯ್ಲಿ ಆತ್ಮಕಥನ ‘ನನ್ನ ಬೊಗಸೆಯ ಆಕಾಶ’ ಬಿಡುಗಡೆ
ಡಾ.ಜಿ.ಪರಮೇಶ್ವರ ಮತ್ತು ಕನ್ನಿಕಾ ಪರಮೇಶ್ವರಿ ಅವರು ಕಾರ್ಯಕ್ರಮಕ್ಕೂ ಮುನ್ನ ಅವರ ತಂದೆ-ತಾಯಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ವೇದಿಕೆ ಕಾರ್ಯಕ್ರಮಕ್ಕೆ ತೆರಳಿದರು. ಮಹಾರಾಷ್ಟ್ರ - ಕರ್ನಾಟಕದಿಂದ ಆಶ್ರಮಗಳಿಂದ ನಾಡಿನೆಲ್ಲೆಡೆ ಸುಮಾರು 15 ಕ್ಕೂ ಬೌದ್ಧಭಿಕ್ಕುಗಳಿಂದ ಡಾ.ಜಿ.ಪರಮೇಶ್ವರ ದಂಪತಿಗೆ ಆಶೀರ್ವಚನ ಮಾಡಿದರು. ಡಾ. ಕುರಿಯನ್ ಸ್ವಾಗತಿಸಿದರು. ಡಾ. ಆನಂದ್ ಸಂಸ್ಥೆಯ ಪ್ರಾಂಶುಪಾಲರು, ಶಿಕ್ಷಕರು ಇದ್ದರು. ಪ್ರೊ. ಮಹದೇವ್ ಭರಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇದಕ್ಕೂ ಮುನ್ನ ಸಂಗೀತಾ ಕಟ್ಟಿತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಶಂಕರ್ ಪ್ರಕಾಶ್, ಅಪರ್ಣ ಕಾರ್ಯಕ್ರಮ ನಿರೂಪಿಸಿದರು.
ಪರಮೇಶ್ವರ್ ರಾಷ್ಟ್ರನಾಯಕರಾಗಲಿ: ದಿಕ್ಸೂಚಿ ಭಾಷಣ ಮಾಡಿದ ಸಿದ್ದಾರ್ಥ ಸಂಸ್ಥೆಯ ಹಳೆಯ ವಿದ್ಯಾರ್ಥಿ ಹಾಗೂ ತುಮಕೂರು ರಾಮಕೃಷ್ಣಾಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ಸ್ವಾಮಿ, ಪರಮೇಶ್ವರ್ ಅವರನ್ನು ಎಲ್ಲ ಜಾತಿ, ಜನಾಂಗದವರೂ ಗೌರವಿಸುವವರೇ ಎಂದರೆ ಅತಿಶಯೋಕ್ತಿಯಲ್ಲ. ತಾವು ಕುಣಿಗಲ್‌ನಲ್ಲಿ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಹಳೆ ಹೈಸ್ಕೂಲ್ ವಿದ್ಯಾರ್ಥಿ ಹಾಗೂ ಸಿದ್ದಾರ್ಥ ಎಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಯೂ ಹೌದು. ಇದು ತಮಗೆ ಹೆಮ್ಮೆಯ ವಿಷಯ. ಗಂಗಾಧರಯ್ಯ ಹಾಗೂ ಅವರ ಪುತ್ರ ಪರಮೇಶ್ವರ್ ಅವರ ಜೊತೆಗಿನ ಸಂಬಂಧ, ಅವರು ತಮ್ಮ ಉಚಿತ ಶಿಕ್ಷಣಕ್ಕೆ ಸಹಕರಿಸಿದ್ದನ್ನು ಮೆಲುಕು ಹಾಕಿ, ಪರಮೇಶ್ವರ್ ರಾಷ್ಟ್ರನಾಯಕರಾಗಲಿ ಎಂದು ಹಾರೈಸಿದರು.