
ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ.
ಬಾಗಲಕೋಟೆ (ಅ.1) : ರಾಜ್ಯದ ಕೆಲವೆಡೆ ಚಿರತೆ ಪ್ರತ್ಯಕ್ಷವಾಗಿ ಅವಾಂತರ ಸೃಷ್ಟಿಸಿರುವ ಪ್ರಕರಣಗಳು ಬೆಳಕಿಗೆ ಬಂದಿರೋ ಬೆನ್ನಲ್ಲೆ ಬಾಗಲಕೋಟೆ ಜಿಲ್ಲೆಯ ಅನಗವಾಡಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಕರೊಬ್ಬರಿಗೆ ಚಿರತೆ ಕಾಣಿಸಿಕೊಂಡಿದೆ ಎಂಬ ಸುದ್ದಿಯಿಂದ ಇದೀಗ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಭೀತಿ ಶುರುವಾಗಿದೆ.
ಬೆಳಗಾವಿ ಆಯ್ತು, ಈಗ ಮೈಸೂರಲ್ಲಿ ಚಿರತೆ ಕಾಟ: ಸ್ಥಳೀಯರಿಗೆ ಆತಂಕ, ಕೇಂದ್ರೀಯ ವಿದ್ಯಾಲಯಗೆ ರಜೆ
ಈ ಮಧ್ಯೆ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ, ಪರೀಶಿಲನೆ ನಡೆಸಿದ್ದು, ಈ ಮಧ್ಯೆ ಚಿರತೆ ಸೆರೆಗಾಗಿ ಬಲೆ ಬೀಸಿದ್ದಾರೆ. ಜಿಲ್ಲೆಯ ಕೆಲವೆಡೆ ಚಿರತೆ ಪ್ರತ್ಯಕ್ಷವಾಗಿದೆ ಎಂಬ ಮಾತುಗಳು ಆಗಾಗ ಕೇಳಿ ಬರುತ್ತಿದ್ದವು. ಇತ್ತೀಚೆಗೆ ಬಾದಾಮಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಚಿರತೆ ಬಂದಿದೆ ಎಂಬ ಸುದ್ದಿ ಹಬ್ಬಿತ್ತು. ಇದರಿಂದ ಅಧಿಕಾರಿಗಳು ಅಲರ್ಟ್ ಆಗಿ ಸ್ಥಳಕ್ಕೆ ಹೋಗಿ ಬೋನ್ ಹಾಕಿದ್ರೂ ಚಿರತೆ ಪತ್ತೆಯಾಗಿರಲಿಲ್ಲ. ಆದ್ರೆ ಇದೀಗ ಇವುಗಳ ಮಧ್ಯೆ ಚಿರತೆ ಇರುವಿಕೆ ವಿಷಯ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.
ಏಕೆಂದರೆ ಹುಬ್ಬಳ್ಳಿ ಸೋಲ್ಹಾಪೂರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಅನಗವಾಡಿ ಗ್ರಾಮದ ಬಳಿ ಕಾರಿನಲ್ಲಿ ಹೊರಟಿದ್ದ ಅಮೀರ್ ಎಂಬುವವರಿಗೆ ಚಿರತೆ ಪ್ರತ್ಯಕ್ಷವಾಗಿದೆಯಂತೆ. ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಓಡಿ ಹೋಗಿದೆಯಂತೆ. ಇದನ್ನ ಕಣ್ಣಾರೆ ಕಂಡಿರೋ ಅಮೀರ್ ನೇರವಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ:
ಇನ್ನು ಚಿರತೆ ಪ್ರತ್ಯಕ್ಷವಾಗಿದೆ ಎಂಬ ಪ್ರತ್ಯಕ್ಷದರ್ಶಿಗಳ ಮಾಹಿತಿ ಬಂದದ್ದೇ ತಡ ಬೀಳಗಿ ತಾಲೂಕಿನ ಆರ್ಎಪ್ಓ ಹನಮಂತ ಡೋಣಿ ಅವರು ಅನಗವಾಡಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ಆರಂಭಿಸಿದರು. ಈ ವೇಳೆ ಕೆಲವೆಡೆ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಇದನ್ನು ಖಚಿತಪಡಿಸಿಕೊಂಡ ಆರ್ಎಪ್ಓ ಹನಮಂತ ಡೋಣಿ ತಕ್ಷಣ ಅಲರ್ಟ್ ಆದರು. ಸ್ಥಳೀಯರಿಂದ ಮಾಹಿತಿ ಪಡೆದಾಗ ವಾರದ ಹಿಂದೆಯಷ್ಟೇ ಗ್ರಾಮದ ಸಂತೋಷ ಎಂಬುವವರ ಹೊಲದಲ್ಲಿ ಸಹ ಕರುವಿನ ಮೇಲೆ ದಾಳಿಯಾಗಿರೋ ಬಗ್ಗೆ ಮಾಹಿತಿ ಪಡೆದರು. ಇದರಿಂದ ಚಿರತೆ ಸೆರೆ ಹಿಡಿಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮುಂಜಾಗ್ರತೆ ವಹಿಸಿದರು.
ಬೋನ್ ಸಹಿತ ಟ್ರ್ಯಾಪ್ ಕ್ಯಾಮೆರಾ ಅಳವಡಿಕೆ:
ಹೌದು. ಚಿರತೆ ಇದೆ ಎಂಬುದನ್ನು ಖಚಿತಡಡಿಸಿಕೊಂಡಿರುವ ಅರಣ್ಯ ಇಲಾಖೆಯ ಆರ್ಎಪ್ಓ ಹನಮಂತ ಡೋಣಿ ಗ್ರಾಮಕ್ಕೆ ತಮ್ಮ ಸಿಬ್ಬಂದಿಯೊಂದಿಗೆ ಚಿರತೆ ಸೆರೆ ಹಿಡಿಯುವ ಬೋನ್ ತೆಗೆದುಕೊಂಡು ಬಂದರು. ಚಿರತೆ ಹಿಡಿಯುವ ಬೋನ್ ಈ ಹಿಂದೆ ಕರುವಿನ ಮೇಲೆ ದಾಳಿ ಮಾಡಿದ್ದ ರೈತ ಸಂತೋಷ ಎಂಬುವವರ ಹೊಲದಲ್ಲಿ ಹಾಕುವ ವ್ಯವಸ್ಥೆ ಮಾಡಿದರು. ಈ ಮಧ್ಯೆ ಅನಗವಾಡಿ ಸೇರಿದಂತೆ ಚಿರತೆ ಓಡಾಡಿರಬಹುದು ಎಂಬ ಲೆಕ್ಕಾಚಾರ ಹೊಂದಿದ ಪ್ರದೇಶದಲ್ಲಿ ಟ್ರ್ಯಾಪ್ ಕ್ಯಾಮೆರಾ ಅಳವಡಿಕೆಗೆ ಅಧಿಕಾರಿಗಳು ಮುಂದಾದರು.
ಈ ಸಂದರ್ಭದಲ್ಲಿ ಮಾಹಿತಿ ನೀಡಿರುವ ಬೀಳಗಿ ಆರ್ಎಪ್ಓ ಹನಮಂತ ಡೋಣಿ ಅವರು, ಅನಗವಾಡಿ ಗ್ರಾಮದ ಸಮೀಪದ 200 ಮೀಟರ್ನಲ್ಲಿ ಅರಣ್ಯ ಪ್ರದೇಶವಿದ್ದು, ಈ ಕಾರಣದಿಂದ ಚಿರತೆ ಗ್ರಾಮದ ಬಳಿ ಬಂದಿರುವ ಸಾಧ್ಯತೆ ಇದ್ದು, ಇನ್ನು ಈ ಹಿಂದೆ ಕೆಲವು ವರ್ಷಗಳ ಹಿಂದೆಯೂ ಸಹ ಚಿರತೆ ಪ್ರತ್ಯಕ್ಷವಾಗಿತ್ತು, ಹೀಗಾಗಿ ಈಗಲೂ ಸಹ ಚಿರತೆ ಇರುವಿಕೆ ಅಲ್ಲಗಳೆಯೋದಿಲ್ಲ, ಈಗಾಗಲೇ ಚಿರತೆ ಸೆರೆಗಾಗಿ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
Haveri; ಚಿರತೆನಾ ನಾಯಿ ಅಂತ ತಿಳಿದು ಸುಮ್ಮನಾದ್ರು, ಎಸ್ಕೇಪ್ ಆಗಿ ಜನ್ರ ನಿದ್ದೆಗೆಡಿಸಿದೆ ಚಿರತೆ
ಅನಗವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗೃತಿ. ಚಿರತೆ ಇರುವಿಕೆ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿರುವ ಬೆನ್ನಲ್ಲೆ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಸಾರ್ವಜನಿಕರ ಸಭೆಯನ್ನ ಕರೆದರು. ಅಲ್ಲದೆ ಚಿರತೆ ಬಗ್ಗೆ ಯಾರಲ್ಲಾದರೂ ಮಾಹಿತಿ ಇದೆಯಾ ಎಂಬ ಬಗ್ಗೆ ಮಾಹಿತಿ ಪಡೆದರು. ನಂತರ ಗ್ರಾಮಸ್ಥರೊಂದಿಗೆ ಚರ್ಚಿಸಿ, ಯಾರೂ ಈ ಬಗ್ಗೆ ಭಯ ಬೀಳದೆ ರಾತ್ರಿ ಸಮಯದಲ್ಲಿ ಜಾಗೃತಿ ವಹಿಸುವಂತೆ ಸೂಚಿಸಿದರು. ರಾತ್ರಿ ಆದಷ್ಟು ಯಾರೂ ಸಹ ಒಂಟಿಯಾಗಿ ಓಡಾಡದೇ ಇರುವುದು, ಜಾನುವಾರಗಳನ್ನ ಮನೆಯ ಹೊರಗೆ ಬಿಡದೇ ಒಳಗೆ ಇರಿಸಿಕೊಳ್ಳುವುದು ಸೇರಿದಂತೆ ಕೆಲವೊಂದು ಜಾಗೃತಿ ವಹಿಸಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು.