
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಜ.01): ನ್ಯಾಯಾಲಯಗಳಲ್ಲಿ ಇರುವ ಬಿಬಿಎಂಪಿಗೆ ಸಂಬಂಧಿಸಿದ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥ ಪಡಿಸುವ ಸಲುವಾಗಿ ಮತ್ತು ವಲಯ ಆಯುಕ್ತರಿಗೆ ಕಾನೂನು ಸಲಹೆ ನೀಡುವ ಉದ್ದೇಶದಿಂದ ವಲಯಕ್ಕೆ ಒಬ್ಬ ‘ಕಾನೂನು ಅಧಿಕಾರಿ’ ನೇಮಿಸಲಾಗಿದೆ. ಹೈಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಬರೋಬ್ಬರಿ ಏಳು ಸಾವಿರಕ್ಕೂ ಅಧಿಕ ಬಿಬಿಎಂಪಿಗೆ ಸಂಬಂಧಿಸಿದ ಪ್ರಕರಣಗಳಿವೆ. ಈ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸುವುದು. ಜತೆಗೆ, ನ್ಯಾಯಾಲಯದಲ್ಲಿ ಪಾಲಿಕೆಗೆ ಹಿನ್ನಡೆ ಆಗದಂತೆ ಕ್ರಮ ವಹಿಸುವುದು. ವಲಯ ಆಯುಕ್ತರಿಗೆ ಕಾನೂನು ಸಲಹೆ ನೀಡುವ ಉದ್ದೇಶದಿಂದ ಬಿಬಿಎಂಪಿಯ ಎಂಟು ವಲಯಗಳಿಗೆ ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಅಥವಾ ನ್ಯಾಯವಾದಿಗಳನ್ನು ‘ವಲಯ ಕಾನೂನು ಅಧಿಕಾರಿ’ಯಾಗಿ ಒಂದು ವರ್ಷ ಅವಧಿಗೆ ನೇಮಿಸಲಾಗಿದೆ. ಶನಿವಾರದಿಂದ ವಲಯ ಕಾನೂನು ಅಧಿಕಾರಿಗಳು ಅಧಿಕಾರ ವಹಿಸಿಕೊಂಡಿದ್ದು, ಕಾರ್ಯ ಆರಂಭಿಸಿದ್ದಾರೆ.
ಅಧಿಕಾರ-ಕರ್ತವ್ಯಗಳು
ನ್ಯಾಯಾಲಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದು ಕಂಡಿಕೆವಾರು ಉತ್ತರ/ಟಿಪ್ಪಣಿ ಸಿದ್ಧಪಡಿಸುವುದು. ಜತೆಗೆ, ವಲಯ ವ್ಯಾಜ್ಯ ನಿರ್ವಹಣಾಧಿಕಾರಿಯ ಸಹಿ ಪಡೆದು ಕಾನೂನು ಕೋಶಕ್ಕೆ ಸಲ್ಲಿಸುವುದು. ಮಾಹಿತಿ ಹಕ್ಕು ಕಾಯ್ದೆ, ಮಾನವ ಹಕ್ಕುಗಳ ಆಯೋಗ, ಸಫಾಯಿ ಕರ್ಮಚಾರಿ ಆಯೋಗ, ಲೋಕಾಯುಕ್ತ ಮತ್ತು ಇತರೆ ಆಯೋಗಗಳಡಿಯಲ್ಲಿ ಬರುವ ವಿಷಯಗಳಿಗೆ ಸಂಬಂಧಿಸಿದಂತೆ ವಲಯ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವುದು. ಜತೆಗೆ ನಿಗದಿತ ಸಮಯಕ್ಕೆ ವಲಯ ಸಲ್ಲಿಸುವುದಕ್ಕೆ ಕ್ರಮ ವಹಿಸುವುದು.
ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಿಬಿಎಂಪಿ ಭರದ ಸಿದ್ಧತೆ
ನ್ಯಾಯಾಲಯದಲ್ಲಿ ಪಾಲಿಕೆಗೆ ಸಂಬಂಧಿಸಿದಂತೆ ದಾಖಲಾಗುವ ಪ್ರಕರಣಗಳ ಬಗ್ಗೆ ಅಧಿಕಾರಿಗಳಿಗೆ ವಿವರಿಸುವುದು. ನ್ಯಾಯಾಲಯಗಳ ನೀಡುವ ನಿರ್ದೇಶನಗಳನ್ನು ಕಾಲಮಿತಿಯೊಳಗೆ ಪಾಲಿಸುವ ಕುರಿತು ಸಂಬಂಧಪಟ್ಟಅಧಿಕಾರಿಗಳಿಗೆ ಮಾರ್ಗದರ್ಶ ನೀಡುವುದು. ನ್ಯಾಯಾಂಗ ನಿಂಧನೆಗೆ ಅವಕಾಶ ಆಗದಂತೆ ಕ್ರಮವಹಿಸುವುದು.
ಪಾಲಿಕೆ ಸ್ವತ್ತು ಸಂರಕ್ಷಣೆಗೆ ಕ್ರಮವಹಿಸುವುದು. ತಡೆಯಾಜ್ಞೆ ತೆರವಿಗೆ ಕ್ರಮವಹಿಸುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾಯ್ದೆಗಳ ಬಗ್ಗೆ ಕಾನೂನು ಅರಿವು ನೀಡುವುದು. ವಲಯಕ್ಕೆ ಸಂಬಂಧಪಟ್ಟಂತೆ ಎನ್‌ಜಿಟಿಯ ನಿರ್ದೇಶನ ಪಾಲನೆ ಮಾಡಿ ವರದಿ ಸಲ್ಲಿಸುವುದುಕ್ಕೆ ವಲಯ ವ್ಯಾಜ್ಯ ನಿರ್ವಹಣಾಧಿಕಾರಿಯೊಂದಿಗೆ ಸಮನ್ವಯ ಸಾಧಿಸುವ ಕಾರ್ಯ ನಿರ್ವಹಿಸಬೇಕಿದೆ.
ವಾರ್ಷಿಕ 76.80 ಲಕ್ಷ ವೆಚ್ಚ
ಎಂಟು ವಲಯ ಕಾನೂನು ಅಧಿಕಾರಿಗಳನ್ನು ಒಂದು ವರ್ಷದ ಅವಧಿಗೆ ತಾತ್ಕಾಲಿಕವಾಗಿ ನೇಮಕ ಮಾಡಲಾಗಿದೆ. ತಲಾ .60 ಸಾವಿರ ವೇತನ ಹಾಗೂ .15 ಸಾವಿರ ವಾಹನ ಭತ್ಯೆ ಸೇರಿದಂತೆ ಮಾಸಿಕ .80 ಸಾವಿರ ನಿಗದಿ ಪಡಿಸಲಾಗಿದೆ. ಎಂಟು ವಲಯ ಕಾನೂನು ಅಧಿಕಾರಿಗಳಿಗೆ ವಾರ್ಷಿಕ .76.80 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಈ ಕುರಿತು ಕೇಂದ್ರ, ರಾಜ್ಯ ಸರ್ಕಾರದಿಂದ ಆಕ್ಷೇಪಣೆ ಬಂದರೆ ಹುದ್ದೆ ರದ್ದುಪಡಿಸಲಾಗುವುದು.
ವಲಯ ಆಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದ್ದು, ನ್ಯಾಯಾಲಯದ ಆದೇಶ ಪಾಲನೆ ಹಾಗೂ ಪ್ರಮುಖ ಆದೇಶಗಳನ್ನು ಹೊರಡಿಸುವ ಜವಾಬ್ದಾರಿ ವಲಯ ಆಯುಕ್ತರಿಗೆ ಇರಲಿದೆ. ಅವರಿಗೆ ಕಾನೂನು ತಿಳುವಳಿಕೆ ನೀಡುವ ಉದ್ದೇಶದಿಂದ ವಲಯ ಕಾನೂನು ಅಧಿಕಾರಿಗಳನ್ನು ನೇಮಿಸಲಾಗಿದೆ ಅಂತ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.