ವಿದ್ಯಾವಂತರಾಗಿ ಅವಿದ್ಯಾವಂತರಂತೆ ಜೀವನ ಮಾಡಿದರೆ ಏನು ಪ್ರಯೋಜನ ಎಂದು ಹೈಕೋರ್ಚ್ ನ್ಯಾಯಾಧೀಶÜ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾ. ಬಿ. ವೀರಪ್ಪ ಮಾರ್ಮಿಕವಾಗಿ ಪ್ರಶ್ನಿಸಿದರು.
ತುಮಕೂರು : ವಿದ್ಯಾವಂತರಾಗಿ ಅವಿದ್ಯಾವಂತರಂತೆ ಜೀವನ ಮಾಡಿದರೆ ಏನು ಪ್ರಯೋಜನ ಎಂದು ಹೈಕೋರ್ಚ್ ನ್ಯಾಯಾಧೀಶÜ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾ. ಬಿ. ವೀರಪ್ಪ ಮಾರ್ಮಿಕವಾಗಿ ಪ್ರಶ್ನಿಸಿದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ , ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ತುಮಕೂರು ಹಾಗೂ ಸಿದ್ಧಗಂಗಾ ಮಠ ಸಹಾಯೋಗದಲ್ಲಿ ಸಿದ್ಧಗಂಗಾ ಮಠದ ಆವರಣದಲ್ಲಿ ಏರ್ಪಡಿಸಿದ್ದ ಮಕ್ಕಳಿಗಾಗಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಜ್ಞಾನ, ಮೌಢ್ಯಗಳನ್ನು ತೊಲಗಿಸಬೇಕಾದರೆ ಮೊದಲು ನಾವು ರಾಗಬೇಕು. ಜ್ಞಾನವನ್ನು ಯಾರೂ ಸಹ ಕದಿಯಲು ಸಾಧ್ಯವಿಲ್ಲ, ಭ್ರಷ್ಟಾಚಾರ ಈ ದೇಶದ ದೊಡ್ಡ ಪಿಡುಗು ಅದನ್ನು ಬೇರು ಸಮೇತ ಕಿತ್ತು ಹಾಕಲು ತಾವೆಲ್ಲರೂ ಪಣತೊಡಬೇಕು. ಬಾಲ್ಯ ವಿವಾಹ, ಭ್ರಷ್ಟಾಚಾರ, ದೇವದಾಸಿ ಪದ್ಧತಿ ಇತ್ಯಾದಿ ಸಾಮಾಜಿಕ ಪಿಡುಗುಗಳನ್ನು ತೊಡೆದುಹಾಕಬೇಕು ಎಂದರು.
ಸಮಾಜದಲ್ಲಿ ಕಾನೂನಿನ ಕೊರತೆಯಿಂದಾಗಿ ಅನೇಕ ತೊಡಕುಗಳು ಉಂಟಾಗಿ ಜೀವನವನ್ನು ಹಾಳು ಮಾಡಿಕೊಳ್ಳುವ ಪರಿಸ್ಥಿತಿ ಇದೆ. 3 ಲಕ್ಷ ಆದಾಯಕ್ಕಿಂತ ಕಡಿಮೆ ಇರುವ ಎಲ್ಲಾ ಹೆಣ್ಣು ಮಕ್ಕಳಿಗೂ ಉಚಿತ ಕಾನೂನು ನೆರವು ನೀಡಲಾಗುವುದು ಹಾಗೂ ದೌರ್ಜನ್ಯಕ್ಕೆ ಒಳಗಾದ, ಅತ್ಯಾಚಾರಕ್ಕೆ ಒಳಪಟ್ಟಹೆಣ್ಣುಮಕ್ಕಳಿಗೆ, ಆಸೀಡ್ ದಾಳಿಗೆ ಒಳಗಾದ ಹಾಗೂ ಬಾಲ್ಯವಿವಾಹ ಇವುಗಳಿಗೆ ಒಳಗಾದ ಹೆಣ್ಣುಮಕ್ಕಳಿಗೆ ಕಾನೂನಿನ ಮೂಲಕ ರಕ್ಷಣೆ ನೀಡಲಾಗುವುದು ಎಂದರು.
ಹಕ್ಕು, ಕರ್ತವ್ಯ ಅರಿಯಿರಿ:
ವಿದ್ಯಾರ್ಥಿಗಳು ನಮ್ಮ ಸಂವಿಧಾನ ನೀಡಿದ ಎಲ್ಲ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿದು ಅದರಂತೆ ಬಾಳಬೇಕು. ತಮ್ಮ ತಂದೆ-ತಾಯಿಗಳನ್ನು ವೃದ್ಧಾಪ್ಯದಲ್ಲಿ ವೃದ್ಧಾಶ್ರಮಗಳಿಗೆ ಬಿಡದೆ ಅವರನ್ನು ತಮ್ಮ ಮನೆಯಲ್ಲಿ ಸಾಕಿ ಸಲುಹಿ ಅವರ ಋುಣವನ್ನು ತೀರಿಸಬೇಕು. ಹಲವರ ಜೀವನದಲ್ಲಿ ಹಲವು ಕಾನೂನಿನ ತೊಡಕುಗಳಿವೆ ಎಂದರೆ ಅದಕ್ಕೆ ಮೂಲ ಕಾರಣ ಶಿಕ್ಷಣದ ಕೊರತೆ ಎಂದರು.
ಸಾನಿಧ್ಯ ವಹಿಸಿದ್ದ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗಸ್ವಾಮಿಗಳು ಮಾತನಾಡಿ, ಮಕ್ಕಳಿಗೆ ನ್ಯಾ.ಬಿ.ವೀರಪ್ಪನವರು ಮಾದರಿಯಾಗಿದ್ದಾರೆ. ಅವರ ಸಾಧನೆ ದೊಡ್ಡದು. ರೈತರಾಗಿ ಅವರು ಸವೆಸಿದ ಹಾದಿ ದೊಡ್ಡದು. ಸಾಮಾಜಿಕ ಪಿಡುಗುಗಳನ್ನು ಎಲ್ಲರೂ ತೊಡೆದುಹಾಕಬೇಕು. ಪ್ರತಿ ವಿದ್ಯಾರ್ಥಿಯು ಈ ನಿಟ್ಟಿನಲ್ಲಿ ಪಣತೊಡಬೇಕು. ಕಾನೂನಿನ ಜಾಗೃತಿ ಮೂಡಿಸಲು ಇದೇ ಮೊದಲ ಬಾರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಿದ್ಧಗಂಗಾ ವಸ್ತುಪ್ರದರ್ಶನದಲ್ಲಿ ವಸ್ತುಪ್ರದರ್ಶನವನ್ನು ಏರ್ಪಡಿಸಿದೆ. ಜನರಿಗೆ ಕಾನೂನು ಅರಿವು-ನೆರವಿನ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಕಾನೂನು ಅರಿತು ಜೀವನ ನಡೆಸಿ:
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಕೆ.ಬಿ.ಗೀತಾ, ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಸ್ಕಾರ ಕೊಟ್ಟರೆ ಅವರು ಉತ್ತಮ ಪ್ರಜೆಗಳಾಗಿ ಸಮಾಜದಲ್ಲಿ ಹೊರಹೊಮ್ಮುತ್ತಾರೆ. ಪ್ರತಿ ವಿದ್ಯಾರ್ಥಿಯು ಕಾನೂನನ್ನು ತಿಳಿದು ಅರಿತು ಜೀವನ ನಡೆಸಬೇಕೆಂದು ಕರೆ ನೀಡಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯದರ್ಶಿ ಜೈಶಂಕರ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಉಪ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಹಿರಿಯ ಸಿವಿಲ್ ನ್ಯಾಯಾಧೀಶ ನೂರುನ್ನೀಸ ಹಾಗೂ ತುಮಕೂರು ಜಿಲ್ಲಾ ವಕೀಲರ ಸಂಘ ಅಧ್ಯಕ್ಷ ದೊಡ್ಡಮನೆ ಗೋಪಾಲಗೌಡ ಇತರರಿದ್ದರು.
6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಕಾನೂನು ಸಲಹೆ ಹಾಗೂ ಉಚಿತ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸಿದ್ಧಗಂಗಾ ಮಠದಲ್ಲಿ 10 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಮಹೋನ್ನತವಾದ ಜವಾಬ್ದಾರಿಯನ್ನು ನಿರ್ವಹಿಸಲಾಗುತ್ತಿದೆ.
- ನ್ಯಾ. ಬಿ. ವೀರಪ್ಪ, ಹೈಕೋರ್ಚ್ ನ್ಯಾಯಾಧೀಶ