ಕೆಪಿಟಿಸಿಎಲ್‌ ರೈತರ ಜಮೀನು ಕಸಿಯುತ್ತಿದ್ದಾರೆ

By Kannadaprabha News  |  First Published Feb 23, 2023, 5:12 AM IST

  ಸರಕಾರದ ಯೋಜನೆಯ ಕಾಮಗಾರಿ ನಡೆಸುವ ವೇಳೆ ಜಮೀನಿನ ಮಾಲೀಕರ ಒಪ್ಪಿಗೆ ಪಡೆಯಬೇಕು ಎಂಬ ನಿಯಮವಿದ್ದರೂ, ಕೆಪಿಟಿಸಿಎಲ್‌ ವತಿಯಿಂದ ರೈತರ ಒಪ್ಪಿಗೆ ಪಡೆಯದೆ, ಪರಿಹಾರ ನೀಡದೆ ಪೊಲೀಸರ ಸಹಕಾರದೊಂದಿಗೆ ರೈತರನ್ನು ಬೆದರಿಸಿ, ವಿದ್ಯುತ್‌ ಲೈನ್‌ ಬದಲಾಯಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅಖಿಲ ಭಾರತ ಕಿಸಾನ್‌ ಸಭಾ ತುಮಕೂರು ಜಿಲ್ಲಾ ಸಂಚಾಲಕ ಗಿರೀಶ್‌ ಆರೋಪಿಸಿದರು.


 ತುಮಕೂರು :  ಸರಕಾರದ ಯೋಜನೆಯ ಕಾಮಗಾರಿ ನಡೆಸುವ ವೇಳೆ ಜಮೀನಿನ ಮಾಲೀಕರ ಒಪ್ಪಿಗೆ ಪಡೆಯಬೇಕು ಎಂಬ ನಿಯಮವಿದ್ದರೂ, ಕೆಪಿಟಿಸಿಎಲ್‌ ವತಿಯಿಂದ ರೈತರ ಒಪ್ಪಿಗೆ ಪಡೆಯದೆ, ಪರಿಹಾರ ನೀಡದೆ ಪೊಲೀಸರ ಸಹಕಾರದೊಂದಿಗೆ ರೈತರನ್ನು ಬೆದರಿಸಿ, ವಿದ್ಯುತ್‌ ಲೈನ್‌ ಬದಲಾಯಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅಖಿಲ ಭಾರತ ಕಿಸಾನ್‌ ಸಭಾ ತುಮಕೂರು ಜಿಲ್ಲಾ ಸಂಚಾಲಕ ಗಿರೀಶ್‌ ಆರೋಪಿಸಿದರು.

ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಮಕೂರು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್‌ ವಿದ್ಯುತ್‌ ಕಾಮಗಾರಿಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ನೀಡಿ ಒಂದು ತಿಂಗಳಿಗೂ ಹೆಚ್ಚು ಕಾಲ ಕಳೆದರೂ ಸಹ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಮಗಾರಿ ತಡೆಯಲು ಮುಂದಾದ ರೈತರ ಮೇಲೆ ಸುಳ್ಳು ಕೇಸ್‌ ದಾಖಲಿಸಿ, ರೈತರನ್ನು ಬೆದರಿಸುವ ತಂತ್ರಗಾರಿಕೆಯ ಜೊತೆಗೆ, ರೈತರ ಒಗ್ಗಟ್ಟು ಒಡೆಯುವ ಕೆಲಸವನ್ನು ಕೆಪಿಟಿಸಿಎಲ್‌ ಮತ್ತು ಪೊಲೀಸರು ಮಾಡುತ್ತಿದ್ದಾರೆ ಎಂದು ದೂರಿದರು.

Tap to resize

Latest Videos

ತುಮಕೂರು ಜಿಲ್ಲೆಯ ಹಾರೋನಹಳ್ಳಿ, ಕನೇನಹಳ್ಳಿ, ವಕ್ಕೋಡಿ ಗೊಲ್ಲರಹಟ್ಟಿ, ಕುಪ್ಪೂರು, ಮರಳೇನಹಳ್ಳಿ, ಊರುಕೆರೆ ಗ್ರಾಮದ ಹಲವು ಸರ್ವೆ ನಂಬರ್‌ಗಳಲ್ಲಿ ಬೃಹತ್‌ ವಿದ್ಯುತ್‌ ಕಾಮಗಾರಿಗಳನ್ನು ಕೆ.ಪಿ.ಟಿ.ಸಿ.ಎಲ್‌ ವತಿಯಿಂದ ರೈತರಿಗೆ ಯಾವುದೇ ಮುನ್ಸೂಚನೆ ನೀಡದೆ ವಿದ್ಯುತ್‌ ಲೈನ್‌ಗಳ ಬದಲಾವಣೆ ಮಾಡಲಾಗುತ್ತಿದೆ. ರೈತರಿಗೆ ಯಾವುದೇ ಭೂ ಪರಿಹಾರ, ಗಿಡ, ಮರಗಳಿಗೆ ಪರಿಹಾರ ನೀಡದೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಇದರಿಂದ ತಮ್ಮ ಜೀವನಕ್ಕಾಗಿ ಸಣ್ಣ, ಪುಟ್ಟಭೂಮಿ ನಂಬಿಕೊಂಡಿದ್ದ ದಲಿತರು, ಹಿಂದುಳಿದ ವರ್ಗದವರು, ಬಡವರಿಗೆ ಭೂಮಿ ಇಲ್ಲದಂತಾಗುತ್ತದೆ. ಅಲ್ಲದೆ ಪ್ರಸ್ತುತ ಈ ಭಾಗದಲ್ಲಿ ಪ್ರತಿ ಕುಂಟೆ ಜಮೀನು 10-15 ಲಕ್ಷ ಬೆಲೆ ಬಾಳುತ್ತಿದ್ದು, ಪರಿಹಾರ ನೀಡದೆ ಭೂಮಿಯಲ್ಲಿ ಕಾಮಗಾರಿ ನಡೆಸುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ ಎಂದು ಗಿರೀಶ್‌ ತಿಳಿಸಿದರು.

ಮನವಿ ಪತ್ರಕ್ಕೆ ಉತ್ತರವಿಲ್ಲ, ಬೆದರಿಕೆ ತಪ್ಪಿಲ್ಲ:

ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್‌ ವಿದ್ಯುತ್‌ ಕಾಮಗಾರಿಗಳಿಗೆ ಜಮೀನು ನೀಡಿರುವ ರೈತರ ಭೂಮಿಗೆ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸಿದ ಮನವಿ ಪತ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಇಂದನ ಸಚಿವರಿಗೆ ಜಿಲ್ಲಾಧಿಕಾರಿಗಳ ಮೂಲಕ ಜ. 24 ರಂದು ಸಲ್ಲಿಸಲಾಗಿದ್ದರೂ ಇದುವರೆಗೂ ಯಾವುದೇ ಉತ್ತರ ಬಂದಿಲ್ಲ. ಇದಕ್ಕೂ ಮುನ್ನ ಜ.16 ರಂದು ಸುಮಾರು 40 ಜನ ಸಹಿ ಹಾಕಿದ ಮನವಿ ಪತ್ರವನ್ನು ರೈತರ ನಿಯೋಗದೊಂದಿಗೆ ಖುದ್ದು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ನೀಡಲಾಗಿದೆ ಎಂದರು.

ಜಿಲ್ಲಾಡಳಿತ, ರಾಜ್ಯ ಬಿಜೆಪಿ ಸರಕಾರ ಕಾನೂನು ಬದ್ದವಾಗಿ ಜಮೀನಿನ ಮಾಲೀಕತ್ವ ಹೊಂದಿರುವ ರೈತರಿಗೆ ಯಾವುದೇ ಪರಿಹಾರ ನೀಡದೆ ವಿದ್ಯುತ್‌ಲೈನ್‌ ಎಳೆಯಲು ಸಂವಿಧಾನ ಬಾಹಿರವಾಗಿ ಪೊಲೀಸ್‌ ಬಲ ಬಳಸುತ್ತಿರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಭಾಗದಲ್ಲಿ ನಡೆದಿರುವ ಎತ್ತಿನಹೊಳೆ, ಹೇಮಾವತಿ ನಾಲಾ ಕಾಮಗಾರಿ, ಪವರಗ್ರಿಡ್‌, ರಸ್ತೆ, ಕೈಗಾರಿಕಾ ಕಾಮಗಾರಿಗಳಿಗೆ ಪರಿಹಾರ ನೀಡಲಾಗುತ್ತಿದೆ. ಆದರೆ ವಿದ್ಯುತ್‌ ಕಾಮಗಾರಿಗಳಿಗೆ ಪರಿಹಾರ ನೀಡದೆ ರೈತರನ್ನು ಶೋಷಣೆಗೆ ಒಳಪಡಿಸಲಾಗುತ್ತಿದೆ. ಹಾಗಾಗಿ ಸೂಕ್ತ ಪರಿಹಾರ ನೀಡಿ, ಕಾಮಗಾರಿ ನಡೆಸುವಂತೆ ಜಿಲ್ಲಾಡಳಿತಕ್ಕೆ ಮತ್ತು ಕೆಪಿಟಿಸಿಎಲ್‌ಗೆ ಸೂಕ್ತ ಆದೇಶ ನೀಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ಗಿರೀಶ್‌ ತಿಳಿಸಿದರು.

ಈ ಕೂಡಲೇ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ರೈತರ ಕಾನೂನುಬದ್ಧ ಭೂಮಿಗೆ ಭೂ ಪರಿಹಾರ ಮತ್ತು ಬದಲಿ ಭೂಮಿಬೇಕು. ಇಲ್ಲದಿದ್ದಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಗಿರೀಶ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಐಕೆಎಸ್‌ನ ಅಶ್ವಥನಾರಾಯಣ, ಗಂಗರಾಜು, ಗಂಗಣ್ಣ, ವೆಂಕಟೇಶ್‌,ಓಂಕಾರ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

---------

ಫೋಟೋ ಫೈಲ್‌ - 20 ಟಿಯುಎಂ 5

ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ಕಿಸಾನ್‌ ಸಭಾ ತುಮಕೂರು ಜಿಲ್ಲಾ ಸಂಚಾಲಕ ಗಿರೀಶ್‌ ಮಾತನಾಡಿದರು.

click me!