Koppal: ಉಪನ್ಯಾಸಕರ ಕೈಲಿ ಚಾಕ್ ಪೀಸ್ ಬದಲು ಕಸಬರಿಗೆ: ಏನಿದು..?

By Girish GoudarFirst Published May 1, 2022, 12:07 PM IST
Highlights

*  ಗವಿಸಿದ್ದೇಶ್ವರ ಸ್ವಾಮೀಜಿಗಳ ಪ್ರೇರಣೆ
*  ಪಾಠ ಮಾಡೋಲು ಸೈ, ಕಸಬರಿಗೆ ಹಿಡಿದು ಕಸ ಗುಡಿಸೋಕು ಸೈ ಎಂದ ಉಪನ್ಯಾಸಕರು
*  ಕಾರ್ಮಿಕರ ದಿನಾಚರಣೆ ಹಿನ್ನಲೆಯಲ್ಲಿ ಉಪನ್ಯಾಸಕರು ಮಾಡಿದ ಸ್ವಚ್ಚತಾ ಕಾರ್ಯ ನಿಜಕ್ಕೂ ಮಾದರಿ
 

ವರದಿ: ದೊಡ್ಡೇಶ್ ಯಲಿಗಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಪ್ಪಳ

ಕೊಪ್ಪಳ(ಮೇ.01): ಚಾಕ್ ಪೀಸ್ ಹಿಡಿದು ಪಾಠ ಮಾಡುವುದು ಉಪನ್ಯಾಸಕರ ಕೆಲಸ. ಆದರೆ ಇಲ್ಲೊಂದು ಊರಲ್ಲಿ ಇಂದು ಉಪನ್ಯಾಸಕರು ಚಾಕ್ ಪೀಸ್ ಹಿಡಿಯುವ ಬದಲು ಕಸಬರಿಗೆ ಹಿಡಿದಿದ್ದರು. ಅರೇ ಇದೇನಪ್ಪ ಉಪನ್ಯಾಸಕರೇಕೆ ಕಸಬರಿಗೆ ಹಿಡಿದಿದ್ದರು ಅನ್ನೋ ಆಶ್ಚರ್ಯ ನಿಮಗೆ ಉಂಟಾಗದೆ ಇರದು. ಅದು ಗೊತ್ತಾಗಬೇಕಂದರೆ ಈ ವರದಿ ನೋಡಿ.

ಎಲ್ಲಿ ಉಪನ್ಯಾಸಕರ ಕೈಗೆ ಕಸಬರಿಗೆ ಬಂದಿರೋದು?

ತರಗತಿಗಳಲ್ಲಿ ಚಾಕ್ ಪಿಸ್ ಹಿಡಿದು ಗಂಟಗಟ್ಟಲೇ ಪಾಠ ಮಾಡುವ ಉಪನ್ಯಾಸಕರು(Lecturers) ಇಂದು ಕೈಯಲ್ಲಿ ಕಸಬರಿಗೆ, ಸಲಿಕೆ ಹಿಡಿದು ರಸ್ತೆಗೆ ಇಳಿದಿದ್ದರು. ಈ ರೀತಿಯಾಗಿ ಉಪನ್ಯಾಸಕರು ರಸ್ತೆಗೆ ಇಳಿದದ್ದು ಕೊಪ್ಪಳ ನಗರದ ಗವಿಮಠ ರಸ್ತೆಯಲ್ಲಿ.‌ಅಷ್ಟಕ್ಕೂ ಕಸಬರಿಗೆ ಹಿಡಿದವರೆಲ್ಲರೂ ಕೊಪ್ಪಳದ(Koppal) ಗವಿಸಿದ್ದೇಶ್ವರ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ(Gavisiddeshwara College) ಉಪನ್ಯಾಸಕರು ಹಾಗೂ ಕ್ಲರಿಕಲ್ ಸಿಬ್ಬಂದಿ. ಉಪನ್ಯಾಸಕರು ಹಾಗೂ ಕ್ಲರಿಕಲ್ ಸಿಬ್ಬಂದಿ ಸೇರಿ ಸುಮಾರು 50 ಕ್ಕೂ ಹೆಚ್ಚು ಜನರು ಇಂದು ಕಸಬರಿಗೆ ಹಾಗೂ ಸಲಿಕೆ ಹಿಡಿದು ರಸ್ತೆ ಸ್ವಚ್ಛಗೊಳಿಸುವ ಕೆಲಸ ಮಾಡಿದರು.

ಆ್ಯಸಿಡ್ ದಾಳಿಗೆ ಒಳಗಾದ ಯುವತಿಯ ನೆರವಿಗೆ ಧಾವಿಸಿದ ಸಚಿವ ಹಾಲಪ್ಪ ಆಚಾರ್

ಯಾವ ಕಾರಣಕ್ಕೆ ಕಸಗೂಡಿಸಿದರು

ಇಂದು ಮೇ 1, ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ(International Labor Day). ಇಡೀ ವಿಶ್ವವೇ ಇಂದು ಕಾರ್ಮಿಕರ ಸೇವೆಯನ್ನು ಗುರುತಿಸುವ ಹಾಗೂ ಗೌರವಿಸುವ ದಿನ. ವರ್ಷಪೂರ್ತಿ ಕಾರ್ಮಿಕರು ಪ್ರತಿನಿತ್ಯವೂ ಕಾರ್ಮಿಕರು ರಸ್ತೆ, ಚರಂಡಿ ಸ್ವಚ್ಛಗೊಳಿಸುವ, ಕಟ್ಟಡ ಕಟ್ಟುವ ಕೆಲಸ ಸೇರಿದಂತೆ ವಿವಿಧ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಈ ಹಿನ್ನಲೆಯಲ್ಲಿ ಕಾರ್ಮಿಕ ದಿನದ ಹಿನ್ನಲೆಯಲ್ಲಿ ಒಂದು ದಿನವಾದರೂ ಸಹ ಕಾರ್ಮಿಕರಿಗೆ ಗೌರವ ಸಲ್ಲಿಸುವ ಹಾಗೂ ಅವರ ಕಾರ್ಯಕ್ಕೆ ಬಿಡುವು ನೀಡುವ ಹಿನ್ನಲೆಯಲ್ಲಿ ಇಂದು ಗವಿಸಿದ್ದೇಶ್ವರ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಹಾಗೂ ಕ್ಲರಿಕಲ್ ಸಿಬ್ಬಂದಿಗಳು ಎಪಿಎಂಸಿ ಕಂಪೌಂಡ್ ನಿಂದ ಗವಿಮಠದವರೆಗಿನ ರಸ್ತೆಯ ಎರಡೂ ಬದಿಯಲ್ಲಿ ಕಸಗೂಡಿಸಿ,ಚಿಕ್ಕ ಚಿಕ್ಕ ಗಿಡ ಗಂಟಿಗಳನ್ನು ಸ್ವಚ್ಛಗೊಳಿಸಿವ ಕಾರ್ಯನಿರ್ವಹಿಸಿದರು.

ಗವಿಸಿದ್ದೇಶ್ವರ ಮಹಾಸ್ವಾಮಿಗಳ ಪ್ರೇರಣೆ

ಇನ್ನು ಗವಿಮಠ ಸೇರಿದಂತೆ ಮಠದ ಯಾವುದೇ ಅಂಗ ಸಂಸ್ಥೆಗಳಲ್ಲಿಯೂ ಸಹ ಯಾವುದೇ ಕೆಲಸಗಳು ಆಗಬೇಕೆಂದರೆ ಅದಕ್ಕೆ ಮೂಲ ಪ್ರೇರಣೆ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಅಂದರೆ ತಪ್ಪಾಗಲಿಕ್ಕಿಲ್ಲ. ಅದರಂತೆ ಇಂದೂ ಸಹ ಜರುಗಿದ ಸ್ವಚ್ಛತಾ ಕಾರ್ಯಕ್ಕೂ ಸಹ ಗವಿಸಿದ್ದೇಶ್ವರ ಸ್ವಾಮೀಜಿಗಳು ಪ್ರೇರಣೆ. ಕಾಲೇಜಿನ ರಸ್ತೆಯನ್ನು ಸ್ವಚ್ಛಗೊಳಿಸಲು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸೂಚನೆ ನೀಡುತ್ತಾರೆ. ಬಳಿಕ‌ಅವರು ಸೂಚನೆ ನೀಡಿ ಸುಮ್ಮನಾಗುವುದಿಲ್ಲ. ಬದಲಾಗಿ ಸ್ವತಃ ತಾವೇ ಉಪನ್ಯಾಸಕರು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದು ಅವರೂ ಸಹ ಉಪನ್ಯಾಸಕರ ಕಾರ್ಯಕ್ಕೆ ಕೈಜೋಡಿಸುತ್ತಾರೆ. 

ಕೊಪ್ಪಳದಲ್ಲಿ ಲ್ಯಾಟ್ರಿನ್ ಟ್ಯಾಂಕ್‌ನಲ್ಲಿಯೂ ಗೋಲ್ಮಾಲ್, ಶಿವ..ಶಿವ...

ಬೇರೆ ಸಂದರ್ಭದಲ್ಲಿಯೂ ರಸ್ತೆ ಸ್ವಚ್ಚಗೊಳಿಸಿದ್ದ ಉಪನ್ಯಾಸಕರು

ಇನ್ನು ಗವಿಸಿದ್ದೇಶ್ವರ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿ ಕೇವಲ ಇವತ್ತು ಮಾತ್ರ ರಸ್ತೆ  ಸ್ವಚ್ಛಗೊಳಿಸುವ ಕಾರ್ಯ ಮಾಡಿಲ್ಲ.‌ ಬದಲಾಗಿ ಈ ಹಿಂದೆಯೂ ಸಹ ರಸ್ತೆ ಸ್ವಚ್ಛಗೊಳಿಸುವ ಕಾರ್ಯ ಮಾಡಿದ್ದಾರೆ. ಈ ಹಿಂದೆ ಲಾಕ್‌ಡೌನ್ ಸಂದರ್ಭದಲ್ಲಿ ಹಾಗೂ ಪರಿಸರ ದಿನಾಚರಣೆ ಸಂದರ್ಭದಲ್ಲಿಯೂ ಸಹ ಕಸಬರಿಗೆ, ಸಲಿಕೆ ಹಿಡಿದು ರಸ್ತೆ ಸ್ವಚ್ಛಗೊಳಿಸುವ ಕಾರ್ಯ ಮಾಡಿದ್ದರು. 

ಒಟ್ಟಿನಲ್ಲಿ ಗವಿಸಿದ್ದೇಶ್ವರ ಸ್ವಾಮೀಜಿಗಳ(Gavisiddeshwara Swamiji) ಪ್ರೇರಣೆಯಿಂದ ಕೊಪ್ಪಳದ ಗವಿಸಿದ್ದೇಶ್ವರ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿ ಕಾರ್ಮಿಕರ ದಿನದ ಹಿನ್ನಲೆಯಲ್ಲಿ ಇದೀಗ ರಸ್ತೆ ಸ್ವಚ್ಛಗೊಳಿಸುವ ಕಾರ್ಯ ಮಾಡಿದ್ದಾರೆ. ಈ ಮೂಲಕ ನಾವು ಚಾಕ್ ಪೀಸ್ ಹಿಡಿದು ಪಾಠ ಮಾಡಲು ಸೈ, ಕಸಬರಿಗೆ ಹಿಡಿದು ಕಸ ಹೊಡೆಯಲು ಸೈ ಎಂದು ತೋರಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಕಾರ್ಮಿಕರ ದಿನಾಚರಣೆ ಹಿನ್ನಲೆಯಲ್ಲಿ ಉಪನ್ಯಾಸಕರು ಮಾಡಿದ ಸ್ವಚ್ಚತಾ ಕಾರ್ಯ ನಿಜಕ್ಕೂ ಮಾದರಿಯೇ ಸರಿ.
 

click me!