ಸ್ವಾರ್ಥ, ಪ್ರತಿಷ್ಠೆ ಬಿಟ್ಟು ಒಳ್ಳೆ ಮಾರ್ಗದಲ್ಲಿ ಅನುಸರಿಸಿ: ಸಚಿವ ಅಶ್ವತ್ಥನಾರಾಯಣ್‌

By Govindaraj S  |  First Published Dec 4, 2022, 10:42 PM IST

ಶೈಕ್ಷಣಿಕ ಸುಧಾರಣೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜವಾಬ್ದಾರಿ ಸ್ಥಾನದಲ್ಲಿ ಇರುವ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ್‌ ತಿಳಿಸಿದರು. 


ಮೈಸೂರು (ಡಿ.04): ಶೈಕ್ಷಣಿಕ ಸುಧಾರಣೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜವಾಬ್ದಾರಿ ಸ್ಥಾನದಲ್ಲಿ ಇರುವ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ್‌ ತಿಳಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್‌ ಭವನದಲ್ಲಿ ನಡೆದ ಉನ್ನತ ಶಿಕ್ಷಣದಲ್ಲಿ ಸುಶಾಸನ-ಪರಿಕಲ್ಪನೆ ಮತ್ತು ಅನುಷ್ಠಾನ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜವಾಬ್ದಾರಿ ಸ್ಥಾನದಲ್ಲಿ ಇರುವ ಉಪನ್ಯಾಸಕರು, ಪ್ರಾಧ್ಯಾಪಕರು, ಡೀನ್‌ಗಳು, ಸಿಂಡಿಕೇಟ್‌ ಸದಸ್ಯರು, ಅಕಾಡೆಮಿ ಕೌನ್ಸಿಲ್‌ ಸದಸ್ಯರು ಎಲ್ಲರೂ ತಮ್ಮ ಸ್ವಾರ್ಥ, ಪ್ರತಿಷ್ಠೆಗಳನ್ನು ಬಿಡಬೇಕು. 

ಸುಧಾರಣೆಗಳನ್ನು ಅನುಷ್ಠಾನಗೊಳಿಸಲು, ವ್ಯವಸ್ಥೆಯನ್ನು ಉತ್ತಮ ರೀತಿಯಲ್ಲಿ ಕೊಂಡೊಯ್ಯಲು ಒಳ್ಳೆಯ ಮಾರ್ಗದಲ್ಲಿ ಹೆಜ್ಜೆಯಿಡುವ ಕೆಲಸವನ್ನು ಒಟ್ಟಾಗಿ ಮಾಡಬೇಕು ಎಂದರು. ನಾಡು, ದೇಶ, ವ್ಯಕ್ತಿಗಳನ್ನು ಸದೃಢ ಮಾಡುವ ಹಿನ್ನೆಲೆಯಲ್ಲಿ ಉತ್ತಮವಾದ ಭವಿಷ್ಯವನ್ನು ರೂಪಿಸುವ ದೃಷ್ಟಿಯಿಂದ ಎಲ್ಲರ ಶ್ರಮಕ್ಕೆ ಪ್ರತಿಫಲ ಸಿಗಬೇಕು. ಉತ್ತಮ ಜ್ಞಾನಿಗಳು ಆಗಬೇಕು, ಸಾಧಕರು ಆಗಬೇಕು, ಉತ್ತಮ ಕೌಶಲ್ಯಗಳನ್ನು ಪಡೆಯಬೇಕು. ಇದೆಲ್ಲ ಆಗಬೇಕು ಎಂದರೇ ಒಂದು ಒಳ್ಳೆಯ ವ್ಯವಸ್ಥೆಯಾಗಬೇಕು. ಈ ನಿಟ್ಟಿನಲ್ಲಿ ಮಾಡಲಾಗುವ ಸುಧಾರಣೆಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು. ಇದಕ್ಕಾಗಿ ಜವಾಬ್ದಾರಿ ಸ್ಥಾನದಲ್ಲಿ ಇರುವ ಎಲ್ಲರ ಯೋಚನೆಗಳು ಒಂದೇ ಆಗಿರಬೇಕು ಎಂದು ಕಿವಿಮಾತು ಹೇಳಿದರು.

Latest Videos

undefined

ಸಿದ್ರಾಮುಲ್ಲಾಖಾನ್‌ ಅಂತ ಹೆಸರು ಬದಲಿಸಿ: ಸಚಿವ ಅಶ್ವತ್ಥ್‌ ನಾರಾಯಣ

ಹೊಣೆಗಾರಿಕೆ, ಪಾರದರ್ಶಕತೆ, ದಕ್ಷತೆ ಮಾತನಾಡಿದರೆ ಮಾತ್ರ ಸಾಲದು, ಈ ನಿಟ್ಟಿನಲ್ಲಿ ಎಲ್ಲರ ಮನಸ್ಸುಗಳು ಒಗ್ಗೂಡಬೇಕು. ಒಂದು ವ್ಯವಸ್ಥೆಯಲ್ಲಿ ಸಂಘರ್ಷಗಳೇ ಹೆಚ್ಚಾದರೆ, ಸುಧಾರಣೆಗಳನ್ನು ಅನುಷ್ಠಾನಗೊಳಿಸುವುದು ಕಷ್ಟವಾಗಲಿದೆ. ಸ್ವಾರ್ಥಗಳು, ಪ್ರತಿಷ್ಠೆಗಳೇ ಸಮಸ್ಯೆಯಾಗಿ ಸಂಘರ್ಷಗಳಿಗೆ ಕಾರಣವಾಗಿ ಬಿಡುತ್ತದೆ ಎಂದರು. ಶಿಕ್ಷಣಕ್ಕೆ ಆದ್ಯತೆ ನೀಡುವ ನಿಟ್ಟನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಸ್ಥಾಪನೆ ಮಾಡಿರುವ ಮೈಸೂರು ವಿವಿಯಲ್ಲಿ ವಿದ್ಯಾಭ್ಯಾಸ ಮಾಡುವುದೇ ಭಾಗ್ಯವಾಗಿದೆ. ನ್ಯಾಕ್‌ ಅಕ್ರೆಡಿಷನ್‌ ಪಡೆದ ಪ್ರಥಮ ವಿವಿ ಇದಾಗಿದ್ದು, ಉತ್ಕೃಷ್ಟಸಂಸ್ಥೆಯಾಗಿದೆ. ಇದು ಇನ್ನು ಶ್ರೇಷ್ಠ ಮಟ್ಟಕ್ಕೆ ಹೋಗಬೇಕು. 

ಈ ನಿಟ್ಟಿನಲ್ಲಿ ವಿವಿಯ ಶೈಕ್ಷಣಿಕ ಸುಧಾರಣೆ, ಸಂಬಂಧ ಮತ್ತು ಅಭಿವೃದ್ಧಿ ಆಗಬೇಕು. ಸರ್ಕಾರ ಕೂಡ ಈ ನಿಟ್ಟಿನಲ್ಲಿ ಅವಲೋಕನಗಳನ್ನು, ಸುಧಾರಣೆಗಳನ್ನು ಮಾಡಲು ಸದಾ ಸಿದ್ಧವಿದೆ ಎಂದರು. ಸುಶಾಸನದ ಮಾಸವನ್ನ ರಾಜ್ಯದ ಪ್ರತಿ ಶಿಕ್ಷಣ ಸಂಸ್ಥೆ ಹಾಗೂ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಆಚರಿಸಲಾಗುತ್ತಿದೆ. ಈ ಮೂಲಕ ಉನ್ನತ ಶಿಕ್ಷಣದಲ್ಲಿ ಸುಧಾರಣೆ ತರುವ ಸಂಕಲ್ಪ ಮಾಡೋಣ. ಸುಶಾಸನ ಇದು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿ ನಡೆಯಬೇಕು. ತಂತ್ರಜ್ಞಾನದ ಅಳವಡಿಕೆ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ಬರಬೇಕು. ಸುಶಾಸನ ಆಗಬೇಕೆಂದರೆ ಗುಣಮಟ್ಟದ ಶಿಕ್ಷಣ ಅಗತ್ಯ. ಹೀಗಾಗಿ ಎನ್‌ಇಪಿ ಅನುಷ್ಠಾನದ ಮೂಲಕ ಉನ್ನತ ಶಿಕ್ಷಣದಲ್ಲಿ ಸುಧಾರಣೆ ತರುತ್ತೇವೆ ಎಂದರು.

ಸಮಾಜದ ಭವಿಷ್ಯ ಮತ್ತು ಗುಣಮಟ್ಟ ನಿರ್ಧಾರವಾಗುವುದೇ, ನಿಮ್ಮಿಂದ ನಿಮ್ಮ ಶಿಕ್ಷಣ ಮಟ್ಟದಿಂದ. ಶೇ.10 ಮಂದಿ ಸ್ವ ಸಾಮರ್ಥ್ಯ, ಪರಿಶ್ರಮ, ಅಭ್ಯಾಸದಿಂದ ಕಲಿತು ಸಾಧನೆ ಮಾಡುತ್ತಾರೆ. ಉಳಿದವರು ಏನೋ ಕಲಿತರೆ ಆಯಿತು, ಪದವಿ ಸರ್ಟಿಫಿಕೇಟ್‌ ಸಿಕ್ಕರೆ ಮುಗಿಯಿತು ಎಂಬ ಮನೋಭಾವನೆ ಒಳ್ಳೆಯದಲ್ಲ. ಕಲಿಯುವಾಗಲೇ ಕಲಿಯಬೇಕು. ಈ ವಿಷಯದಲ್ಲಿ ಹೊಂದಾಣಿಕೆಯಾಗಬಾರದು. ಇಂತಹ ಮನಸ್ಥಿತಿಯನ್ನು ತೆಗೆದು ಹಾಕಬೇಕು. ಎನ್‌ಇಪಿ ಶಿಕ್ಷಣ ನೀತಿ ಬಗ್ಗೆಯೂ ತಿಳಿದುಕೊಳ್ಳಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು: ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಉತ್ತಮ ಆಡಳಿತ ವ್ಯವಸ್ಥೆಯಿಂದ ಗುಡ್‌ ಗವರ್ನೆನ್ಸ್‌ ಆಗುತ್ತದೆ. ಇಂತಹ ಗುಡ್‌ ಗವರ್ನೆನ್ಸ್‌ಗೆ ನಮ್ಮ ನಾಲ್ವಡಿ ಕೃಷ್ಣರಾಜ ಒಡೆಯರ್‌ಗಿಂತ ಉದಾಹರಣೆ ಬೇಕಿಲ್ಲ. ಪ್ರಜ್ಞಾಪ್ರಭುತ್ವಕ್ಕೆ ನೀರೆರೆದವರೇ ಅವರು. ವಿಶ್ವವಿದ್ಯಾನಿಲಯಗಳು ಹೆಚ್ಚಾದಂತೆ ಅವುಗಳ ಗುಣಮಟ್ಟಮತ್ತು ಅಭಿವೃದ್ಧಿಯೂ ಹೆಚ್ಚಾಗಬೇಕು. ತಮ್ಮ ಸ್ಥಾನಮಾನಗಳನ್ನು ಕಾಪಾಡಿಕೊಂಡು, ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂದರು.

ಶಾಸಕ ಎಲ್‌. ನಾಗೇಂದ್ರ, ಚಾಣಕ್ಯ ವಿವಿ ಕುಲಪತಿ ಪ್ರೊ. ಯಶವಂತ ಡೋಂಗ್ರೆ, ವಿಶ್ರಾಂತ ಕುಲಪತಿ ಪ್ರೊ.ಎಸ್‌.ಎನ್‌. ಹೆಗ್ಡೆ, ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ಹಲಸೆ, ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ.ಎಚ್‌. ರಾಜಶೇಖರ್‌, ಕುಲಸಚಿವ ವಿ.ಆರ್‌. ಶೈಲಜಾ, ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ. ಜ್ಞಾನಪ್ರಕಾಶ್‌, ಹಣಕಾಸು ಅಧಿಕಾರಿ ಡಾ. ಸಂಗೀತಾ ಗಜಾನನ ಭಟ್‌ ಇದ್ದರು.

ಕೆಂಪೇ​ಗೌ​ಡರಿಗೆ 'ಪ್ರತಿಮೆ' ಗೌರವ ಸಮರ್ಪಣೆ: ಸಚಿವ ಅಶ್ವತ್ಥ್‌ ನಾರಾಯಣ

ನಮ್ಮ ಜವಾಬ್ದಾರಿಯಲ್ಲಿ ಮತ್ತು ಅಧಿಕಾರದಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ರಾಷ್ಟ್ರೀಯ ಶಿಕ್ಷಣ ನೀತಿಯ ಆದೇಶದಂತೆ ಇನ್ನಷ್ಟುಸುಧಾರಣೆಗಳನ್ನು ತರಲು ಮುಂದಿನ ದಿನಗಳಲ್ಲಿ ಎಲ್ಲ ತಜ್ಞರೊಂದಿಗೆ ಸಮಾಲೋಚನೆ ಮಾಡಲಾಗುವುದು. ಈಗಾಗಲೇ 15 ಹೊಸ ವಿವಿಗಳನ್ನು ಸ್ಥಾಪಿಸಲಾಗಿದ್ದು, ಕಾರ್ಯಾರಂಭ ಮಾಡಬೇಕಿದೆ. ಅಗತ್ಯವಿದ್ದರೆ ಇನ್ನಷ್ಟುವಿವಿಗಳ ಸ್ಥಾಪನೆಗೂ ಕ್ರಮ ವಹಿಸಲಾಗುವುದು.
- ಡಾ.ಸಿ.ಎನ್‌. ಅಶ್ವತ್ಥನಾರಾಯಣ್‌, ಉನ್ನತ ಶಿಕ್ಷಣ ಸಚಿವ

click me!