ರೈತರು ಬಂದೂಕು ಹಿಡಿದರೆ ಅದಕ್ಕೆ ರಾಜಕಾರಣಿಗಳೇ ಕಾರಣ; ಶ್ರೀಪಾಲ್

By Kannadaprabha News  |  First Published Oct 15, 2022, 7:25 AM IST

ಎಲೆ ಚುಕ್ಕೆ ರೋಗಕ್ಕೆ ಪರಿಹಾರ, ಭೂತಾನ್‌ ದೇಶದಿಂದ ಅಡಕೆ ಆಮದು ರದ್ದುಗೊಳಿಸುವಂತೆ ಆಗ್ರಹಿಸಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಸಂಘ ಮತ್ತು ಹಸಿರು ಸೇನೆ, ಅಡಕೆ ಮಾರಾಟ ಸಹಕಾರ ಸಂಘಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.


ಶಿವಮೊಗ್ಗ (ಅ.15) : ಎಲೆ ಚುಕ್ಕೆ ರೋಗಕ್ಕೆ ಪರಿಹಾರ, ಭೂತಾನ್‌ ದೇಶದಿಂದ ಅಡಕೆ ಆಮದು ರದ್ದುಗೊಳಿಸುವಂತೆ ಆಗ್ರಹಿಸಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಸಂಘ ಮತ್ತು ಹಸಿರು ಸೇನೆ, ಅಡಕೆ ಮಾರಾಟ ಸಹಕಾರ ಸಂಘಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಸರ್ಕಾರ ಭೂತಾನ್‌ ದೇಶದಿಂದ 17 ಸಾವಿರ ಮೆಟ್ರಿಕ್‌ ಟನ್‌ ಅಡಕೆ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ. ಇದಕ್ಕೆ ಅಮದು ಸುಂಕದಿಂದ ವಿನಾಯಿತಿ ನೀಡಲಾಗಿದೆ. ಈ ಅಡಕೆ ಬರುವುದರಿಂದ ಸ್ಥಳೀಯ ಬೆಳೆಗಾರರಿಗೆ ಯಾವುದೆ ತೊಂದರೆ ಆಗುವುದಿಲ್ಲ ಎಂದು ಅಡಕೆ ಕಾರ್ಯಪಡೆ ಅಧ್ಯಕ್ಷ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಆದರೆ ಸ್ಥಳೀಯ ಮಾರುಕಟ್ಟೆಯಲ್ಲಿ ಅಡಕೆ ಧಾರಣೆ ಕುಸಿತವಾಗಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಅಡಿಕೆ ಬೆಳೆಗಾರರಿಗೆ ನೆರವಾಗಿ: ಸರ್ಕಾರಕ್ಕೆ ಎಚ್‌ಡಿಕೆ ಒತ್ತಾಯ

Tap to resize

Latest Videos

ಪ್ರತಿಭಟನೆಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಹೆಚ್‌.ಆರ್‌.ಬಸವರಾಜಪ್ಪ ಮಾತನಾಡಿ, ಭೂತಾನ್‌ ಅಡಕೆ ಆಮದು ನಿಲ್ಲಿಸಬೇಕು. ಎಲೆ ಚುಕ್ಕಿ ರೋಗಕ್ಕೆ ಔಷಧ ಒದಗಿಸಲು ರಾಜ್ಯ ಸರ್ಕಾರ .10 ಕೋಟಿ ಮಂಜೂರು ಮಾಡಿದೆ. ಇದನ್ನು .100 ಕೋಟಿಗೆ ಹೆಚ್ಚಳ ಮಾಡಬೇಕು. ಅಡಕೆಗೆ ವಿವಿಧ ರೋಗಗಳು ಬಾಧಿಸುತ್ತಿದ್ದು, ಅದರ ಸಂಶೋಧನೆಗೆ ಕೂಡಲೇ ಅಡಕೆ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಎಂದು ಆಗ್ರಹಿಸಿದರು. ಅಡಕೆ ಮಾರಾಟ ಸಹಕಾರ ಸಂಘಗಳ ಒಕ್ಕೂಟದ ಪಾಧಿಕಾರಿಗಳು, ವಿವಿಧೆಡೆಗಳ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

‘ರೈತಮಕ್ಕಳು ಬಂದೂಕು ಹಿಡಿದರೆ ರಾಜಕಾರಣಿಗಳೇ ಕಾರಣ’

ಹಿಂದೆ ಯಾವೆಲ್ಲ ಭಾಗದಲ್ಲಿ ನಕ್ಸಲರು ಬಂದೂಕು ಹಿಡಿದು ಓಡಾಡುತ್ತಿದ್ದರೋ, ಆ ಭಾಗದಲ್ಲಿ ಈಗ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. ಮುಂದೆ ಅವರ ಮಕ್ಕಳು ಬಂದೂಕು ಹಿಡಿದರೆ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಆ ಭಾಗದ ಜನಪ್ರತಿನಿಧಿಗಳೆ ಕಾರಣರಾಗುತ್ತಾರೆ ಎಂದು ವಕೀಲ ಕೆ.ಪಿ.ಶ್ರೀಪಾಲ್‌ ಎಚ್ಚರಿಸಿದರು.

ಭೂತಾನ್‌ ಅಡಕೆ ಆಮದಿನಿಂದ ವರ್ತಕರಿಗೆ ಹೆಚ್ಚು ಹೊಡೆತ ಬೀಳಲಿದೆ. ಸಣ್ಣ ರೈತರಿಗೆ ವಂಚನೆ ಮಾಡಿ, ಅಡಕೆ ಖರೀದಿಸಿ ಈಗ ಎಸಿ ರೂಮಿನಲ್ಲಿ ಕುಳಿತಿದ್ದಾರೆ. ರೈತರೊಂದಿಗೆ ವರ್ತಕರು ಬೀದಿಗಿಳಿಯಬೇಕು. ಆದರೆ, ಇವತ್ತಿನ ಹೋರಾಟಕ್ಕೆ ಆಹ್ವಾನಿಸಿದರೆ ಜ್ವರ ಎಂದು ಕಾರಣ ನೀಡುತ್ತಿದ್ದಾರೆ. ಬಿಜೆಪಿಯ ಭಯಕ್ಕೆ ಜ್ವರದ ನೆಪ ಹೇಳುತ್ತಿದ್ದಾರೆ ಎಂದು ಆಪಾದಿಸಿದರು.

ಸಾವಿರಾರು ಕೋಟಿ ರು. ಲೂಟಿ ಮಾಡಿದವರಿಗೆ ಮೋದಿ ಸರ್ಕಾರ ವೀಸಾ, ಪಾಸ್‌ಪೋರ್ಚ್‌ ಮಾಡಿಸಿ ವಿದೇಶಕ್ಕೆ ಕಳುಹಿಸಿದೆ. ಈಗ ರೈತರ ಹೊಟ್ಟೆಮೇಲೆ ಹೊಡೆಯುತ್ತಿದ್ದಾರೆ. ಮಲೆನಾಡು ಭಾಗದ ಸಂಸದರು, ಶಾಸಕರು, ಅಡಕೆ ಬೆಳೆಗಾರರ ಸಭೆ ಕರೆದು ಸಮಸ್ಯೆಗಳ ಕುರಿತು ಚರ್ಚೆ ಮಾಡಬೇಕು ಎಂದು ಆಗ್ರಹಿಸಿದರು.

ಮೂರು ಕಾಸಿನ ಬೆಲೆಯಿಲ್ಲ

ಅಡಕೆಯಿಂದ ಈ ಭಾಗದ ರೈತರಿಗೆ ಚೈತನ್ಯ ಮೂಡಿತ್ತು. ಆದರೆ ಆಮದು ಮಾಡಿಕೊಳ್ಳುವುದರಿಂದ ಬೆಲೆ ಕುಸಿತ ಉಂಟಾಗಲಿದೆ. ಇತ್ತ ಅಡಕೆ ಟಾಸ್‌್ಕಫೋರ್ಸ್‌ಗೆ ಮೂರು ಕಾಸಿನ ಬೆಲೆ ಇಲ್ಲ. ಅದರ ಅಧ್ಯಕ್ಷ ಆರಗ ಜ್ಞಾನೇಂದ್ರ ಸುಳ್ಳು ಹೇಳುವುದರಲ್ಲಿ ನಂಬರ್‌-1. ಅಡಕೆ ಆಮದು ಮಾಡಿಕೊಳ್ಳುವುದರಿಂದ ಸ್ಥಳೀಯ ಬೆಳೆಗಾರರಿಗೆ ಯಾವುದೆ ಸಮಸ್ಯೆ ಇಲ್ಲ ಅನ್ನುತ್ತಿದ್ದಾರೆ. ಸಾಗರದ ಶಾಸಕರು ಸಮಸ್ಯೆಯಾಗುತ್ತದೆ ಅನ್ನುತ್ತಿದ್ದಾರೆ. ಈ ಮೂಲಕ ರೈತರನ್ನು ಗೊಂದಲಕ್ಕೀಡು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ತೀ.ನಾ.ಶ್ರೀನಿವಾಸ್‌ ಆರೋಪಿಸಿದರು.

click me!