Mandya : SM ಕೃಷ್ಣ ಕ್ಷೇತ್ರ ತೊರೆಯಲು ಇವರೆ ಕಾರಣ :ಡಿಸಿ ತಮ್ಮಣ್ಣ

Published : Oct 15, 2022, 05:47 AM ISTUpdated : Oct 15, 2022, 10:40 AM IST
Mandya  : SM ಕೃಷ್ಣ ಕ್ಷೇತ್ರ ತೊರೆಯಲು ಇವರೆ ಕಾರಣ  :ಡಿಸಿ ತಮ್ಮಣ್ಣ

ಸಾರಾಂಶ

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಮದ್ದೂರು ಕ್ಷೇತ್ರ ತೊರೆಯಲು ಅವರ ಬೆಂಬಲಿಗರೇ ಹೊರತು ಕ್ಷೇತ್ರದ ಜನರು ಕಾರಣರಲ್ಲ ಎಂದು ಶಾಸಕ ಡಿ.ಸಿ.ತಮ್ಮಣ್ಣ ಶುಕ್ರವಾರ ಹೇಳಿದರು.

  ಮದ್ದೂರು (ಅ.15):  ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಮದ್ದೂರು ಕ್ಷೇತ್ರ ತೊರೆಯಲು ಅವರ ಬೆಂಬಲಿಗರೇ ಹೊರತು ಕ್ಷೇತ್ರದ ಜನರು ಕಾರಣರಲ್ಲ ಎಂದು ಶಾಸಕ ಡಿ.ಸಿ.ತಮ್ಮಣ್ಣ ಶುಕ್ರವಾರ ಹೇಳಿದರು.

ಮದ್ದೂರು ವಿಧಾನಸಭಾ ಕ್ಷೇತ್ರದ ಕೆಸ್ತೂರು ಜಿಪಂ ವ್ಯಾಪ್ತಿಯ ಕೆಸ್ತೂರು, ತೊರೆ ಶೆಟ್ಟಹಳ್ಳಿ, ಕಂಪಲಾಪುರ, ಚಾಕನಕೆರೆ, ಮಾಚಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜೆಡಿಎಸ್‌ ಜನಸೇವಾ ಯಾತ್ರೆ ಅಂಗವಾಗಿ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದರು.

ಎಸ್‌.ಎಂ.ಕೃಷ್ಣ (SM Krishna ) ಅವರು ಮುಖ್ಯಮಂತ್ರಿಯಾಗಿದ್ದ (CM)  ವೇಳೆ ಅಭಿವೃದ್ಧಿ ವಿಚಾರದಲ್ಲಿ ಸಲಹೆ ಕೊಡುವವರಿಗಿಂತ ಅವರ ಹೆಸರಿನಲ್ಲಿ ಹಣ ಮಾಡುವ ಬೆಂಬಲಿಗರೇ ಹೆಚ್ಚಾಗಿದ್ದರು. ಇದರಿಂದ ಅವರ ಮೇಲೆ ಕ್ಷೇತ್ರದ ಜನರಿಗೆ ತಪ್ಪು ಅಭಿಪ್ರಾಯ ಮೂಡಿ ಬೇಸರಗೊಂಡ ಕೃಷ್ಣ ಅವರು ಮದ್ದೂರು ಕ್ಷೇತ್ರ ತೊರೆಯಲು ಪ್ರಮುಖ ಕಾರಣವಾಯಿತು ಎಂದರು.

ಹಳ್ಳಿಗಾಡಿನ ರಸ್ತೆ ಅಭಿವೃದ್ಧಿಯಾದರೇ ರೈತರ ಕೃಷಿ ಉತ್ಪನ್ನಗಳನ್ನು ಸಾಗಾಣಿಕೆ ಮಾಡಲು ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಬಜೆಚ್‌ನಲ್ಲಿ 300 ಕೋಟಿ ಬಿಡುಗಡೆ ಮಾಡಿದರು. ಆ ನಂತರ ಬೆಂಗಳೂರು- ಮೈಸೂರು ಹೆದ್ದಾರಿಯನ್ನು ನಾಲ್ಕು ಪಥದ ಹೆದ್ದಾರಿಯಾಗಿ ನಿರ್ಮಾಣ ಮಾಡುವ ಮೂಲಕ ಹೆದ್ದಾರಿ ಅದಕ್ಕೆ ಪಕ್ಕದ ಉದ್ಯಮ ಬೆಳೆಯುವ ಮೂಲಕ ಹಲವರ ಆರ್ಥಿಕ ಅಭಿವೃದ್ಧಿ ಸಹಾಯಕವಾಯಿತು ಎಂದರು.

ಈಗ ನಿರ್ಮಾಣವಾಗುತ್ತಿರುವ ದಶಪಥ ಹೆದ್ದಾರಿಯಿಂದ ಹೋಟೆಲ… ಉದ್ಯಮ ಹಾಗೂ ಸಣ್ಣ ಪುಟ್ಟವ್ಯಾಪಾರ ನಡೆಸುತ್ತಿದ್ದ ಜನರ ಜೀವನ ಇಂದು ಬೀದಿಗೆ ಬಿದ್ದಿದೆ. ಈಗಿರುವ ಹೆದ್ದಾರಿಯನ್ನೇ ಅಭಿವೃದ್ಧಿ ಪಡಿಸಿದ್ದಲ್ಲಿ ಯಾರ ಜೀವನಕ್ಕೂ ಧಕ್ಕೆಯಾಗುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸ್ಥಳೀಯ ಸಂಸ್ಥೆ ಹಾಗೂ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ಜನಪ್ರತಿನಿಧಿಗಳು ಹೆಚ್ಚಾಗಿದ್ದರು ಸಹ ಹಣದ ಆಮಿಷಕ್ಕೆ ಒಳಗಾಗಿ ನಮ್ಮ ಪಕ್ಷದ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಎನ್‌.ಅಪ್ಪಾಜಿಗೌಡ ಹಾಗೂ ಎಚ್‌.ಕೆ.ರಾಮು ಅವರನ್ನು ಸೋಲಿಸುವ ಮೂಲಕ ಪಕ್ಷ ದ್ರೋಹ ಮಾಡಿ ನಮ್ಮವರೇ ಅಭಿವೃದ್ಧಿಗೆ ಕಂಟಕಪ್ರಾಯರಾಗಿದ್ದಾರೆ ಎಂದು ಕಿಡಿಕಾರಿದರು.

ನಮ್ಮ ಜೆಡಿಎಸ್‌ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರಾದವರು ವಿರೋಧ ಪಕ್ಷಗಳು ಒಡ್ಡಿದ ಹಣದ ಆಮಿಷಕ್ಕಾಗಿ ತಮ್ಮ ತನವನ್ನು ಮಾರಾಟ ಮಾಡಿಕೊಂಡು ವಿಶ್ವಾಸ ಘಾತಕತನ ತೋರಿದ್ದಾರೆ. ಇಂತಹ ಪಕ್ಷ ದ್ರೋಹಿಗಳನ್ನು ನಂಬಿದರೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಮಾರಾಟ ಮಾಡುವುದಿಲ್ಲ ಎಂಬ ಗ್ಯಾರಂಟಿ ಏನು ಎಂದು ಪ್ರಶ್ನಿಸಿದರು.

ಮದ್ದೂರು ಕ್ಷೇತ್ರದ ಜನರು ಅಭಿವೃದ್ಧಿ ವಿಚಾರದಲ್ಲಿ ಹಗಲು ರಾತ್ರಿ ದುಡಿಯುವ ರಾಜಕಾರಣಿ ಬೇಕೆ ಅಥವಾ ಬುಡುಬುಡಿಕೆ ಅಲ್ಲಾಡಿಸಿಕೊಂಡು ಅಭಿಮಾನಿ ಸಂಘ ಕಟ್ಟಿಕೊಂಡು ಹಣದ ಹೊಳೆ ಹರಿಸುವ ರಾಜಕಾರಣಿ ಬೇಕೆ ಎನ್ನುವುದನ್ನು ಕ್ಷೇತ್ರದ ಜನರ ವಿವೇಚನೆಗೆ ಬಿಡುವುದಾಗಿ ತಿಳಿಸಿದರು.

ಮುಂದಿನ ದಿನಗಳಲ್ಲಿ ಮದ್ದೂರು ಕ್ಷೇತ್ರವನ್ನು ಮತ್ತಷ್ಟುಅಭಿವೃದ್ಧಿ ಪಡಿಸುವ ಕನಸಿನೊಂದಿಗೆ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಯಾಗಿದ್ದೇನೆ. ಕ್ಷೇತ್ರದ ಮತದಾರರು ತಮ್ಮ ತನವನ್ನು ಹಣಕ್ಕಾಗಿ ಮಾರಾಟ ಮಾಡಿಕೊಳ್ಳದೆ ಅಭಿವೃದ್ಧಿಗೆ ಕೈ ಜೋಡಿಸುತ್ತಾರೆ ಎಂದು ಶಾಸಕ ತಮ್ಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ದೇವರಾಜ…, ಡಿಸಿಸಿ ಬ್ಯಾಂಕ್‌ ಮಾಜಿ ನಿರ್ದೇಶಕ ಹೋನ್ನೆಗೌಡ, ಜೆಡಿಎಸ್‌ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಳಿಯಪ್ಪ, ಜಿಪಂ ಮಾಜಿ ಸದಸ್ಯ ಕೆ.ರವಿ, ಗ್ರಾ.ಪಂ ಅಧ್ಯಕ್ಷರಾದ ರವಿ, ಜಗದೀಶ್‌, ಮಾಜಿ ಸದಸ್ಯ ಆನಂದ… ಮುಖಂಡರಾದ ಹೂತಗೆರೆ ದಿಲೀಪ್‌ ಕುಮಾರ್‌, ಸಾಗರ್‌, ಹೇಮಂತ್‌ ಮತ್ತಿತ್ತರರು ಇದ್ದರು.

 ಕೃಷ್ಣ ಕ್ಷೇತ್ರ ತೊರೆಯಲು ಬೆಂಬಲಿಗರೇ ಕಾರಣ - ಡಿ.ಸಿ.ತಮ್ಮಣ್ಣ

PREV
Read more Articles on
click me!

Recommended Stories

ರೈತರಿಗೆ ಅನುಕೂಲ ಮಾಡುವುದೇ ಗುರಿ: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್
ದಾವಣಗೆರೆ ಮಹಿಳೆಯನ್ನ ಕಚ್ಚಿಕೊಂದ 2 ರಾಟ್‌ವೀಲರ್ ನಾಯಿಗಳು ಜನರ ಹಲ್ಲೆಯಿಂದ ಸಾವು; ಶ್ವಾನಗಳ ಮಾಲೀಕ ಬಂಧನ