ಹಲವು ವರ್ಷಗಳಿಂದ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅಂತಿಮ ಅವಕಾಶ

By Kannadaprabha News  |  First Published Nov 11, 2023, 9:35 AM IST

ಹಲವು ವರ್ಷಗಳಿಂದ ಅನುತ್ತೀರ್ಣಗೊಂಡಿರುವ 500 ಹೆಚ್ಚಿನ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅಂತಿಮ ಅವಕಾಶ ಕಲ್ಪಿಸಲು ಮೈಸೂರು ವಿಶ್ವವಿದ್ಯಾನಿಲಯವು ನಿರ್ಧರಿಸಿದೆ.


 ಮೈಸೂರು :  ಹಲವು ವರ್ಷಗಳಿಂದ ಅನುತ್ತೀರ್ಣಗೊಂಡಿರುವ 500 ಹೆಚ್ಚಿನ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅಂತಿಮ ಅವಕಾಶ ಕಲ್ಪಿಸಲು ಮೈಸೂರು ವಿಶ್ವವಿದ್ಯಾನಿಲಯವು ನಿರ್ಧರಿಸಿದೆ.

ಮಾನಸಗಂಗೋತ್ರಿ ವಿಜ್ಞಾನ ಭವನದ ಸಭಾಂಗಣದಲ್ಲಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಮೊದಲನೇ ಶಿಕ್ಷಣ ಮಂಡಳಿ ಸಾಮಾನ್ಯ ಸಭೆಯಲ್ಲಿ ಸ್ನಾತಕ, ಸ್ನಾತಕೋತ್ತರ ಪದವಿಗಳ ವ್ಯಾಸಂಗವನ್ನು ಪೂರೈಸಿ ವ್ಯಾಸಂಗದ ಎರಡು ಪಟ್ಟು ಅವಧಿಯ ನಂತರವೂ ಅನುತ್ತೀರ್ಣಗೊಂಡಿರುವ 500 ಹೆಚ್ಚು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಮತ್ತೊಂದು ಅವಕಾಶ ನೀಡಲು ನಿರ್ಧರಿಸಲಾಯಿತು.

Latest Videos

undefined

ಎಲ್ಲಾ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ವಾರ್ಷಿಕ ಹಾಗೂ ಸೆಮಿಸ್ಟರ್ ಪದ್ಧತಿ ಕೋರ್ಸ್ ಗಳು, ಬಿ.ಎಡ್, ಕಾನೂನು ಪದವಿಯ ಆರ್ ಆರ್ , ಸಿಎಸ್ ಎಸ್ ಮತ್ತು ಐಎಸ್ ಎಸ್ ಸ್ಕೀಂ, ಡಿಪ್ಲೊಮಾ ಸ್ನಾತಕೋತ್ತರ ಎಲ್ಲಾ ಕೋರ್ಸ್ ಗಳಿಗೆ ಅನ್ವಯವಾಗುವಂತೆ ಹಳೆಯ ಪಠ್ಯಕ್ರಮದ ರೀತಿಯಲ್ಲೇ ಪರೀಕ್ಷೆ ಬರೆಯಲು ಒಪ್ಪಿಗೆ ಸೂಚಿಸಲಾಯಿತು. ಅಲ್ಲದೆ, ಮತ್ತೊಂದು ಬಾರಿಗೆ ಪರೀಕ್ಷೆಗೆ ಅವಕಾಶ ಇಲ್ಲದ ಷರತ್ತು ವಿಧಿಸಿ ಅನುಮತಿ ನೀಡಲು ಸಮ್ಮತಿಸಲಾಯಿತು.

1 ವರ್ಷಕ್ಕೆ ಹೆಚ್ಚಳ:  ಘಟಿಕೋತ್ಸವ ವಿಳಂಬ ಅಥವಾ 6 ತಿಂಗಳೊಳಗೆ ಅಂತಿಮ ಪ್ರಮಾಣ ಪತ್ರ ಪಡೆಯಲು ವಿದ್ಯಾರ್ಥಿಗಳು ಎದುರಿಸುವ ತೊಂದರೆ ನಿವಾರಣೆಗೆ ತಾತ್ಕಾಲಿಕ ಪದವಿ ಪ್ರಮಾಣ ಪತ್ರದ ಮಾನ್ಯತೆಯನ್ನು 6 ತಿಂಗಳ ಬದಲು ಒಂದು ವರ್ಷದ ಅವಧಿಗೆ ವಿಸ್ತರಿಸಲು ಮೈಸೂರು ವಿವಿ ತೀರ್ಮಾನಿಸಲಾಯಿತು.

ಮೈಸೂರು ವಿವಿಯಲ್ಲಿ ನೀಡುವ ತಾತ್ಕಾಲಿಕ ಪದವಿ ಪ್ರಮಾಣ ಪತ್ರದ ಮಾನ್ಯತೆ ಅವಧಿಯು 6 ತಿಂಗಳಿಗೆ ಇರುತ್ತದೆ. ಘಟಿಕೋತ್ಸವ ವಿಳಂಬ ಮತ್ತು 6 ತಿಂಗಳಲ್ಲಿ ವಿದ್ಯಾರ್ಥಿಗಳು ತಮ್ಮ ಅಂತಿಮ ಪದವಿ ಪ್ರಮಾಣಪತ್ರಗಳನ್ನು ಪಡೆಯದಿದ್ದಾಗ ಎದುರಿಸುವ ತೊಂದರೆಗಳನ್ನು ನಿವಾರಿಸಲು ಒಂದು ವರ್ಷಕ್ಕೆ ವಿಸ್ತರಿಸಬಹುದೆಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಉನ್ನತ ಶಿಕ್ಷಣ ಇಲಾಖೆಗೆ ಮಾಡಿರುವ ಶಿಫಾರಸಿನಲ್ಲಿ ಹೇಳಿದ್ದನ್ನು ಮಂಡಿಸಲಾಯಿತು.

ಇದೇ ವೇಳೆ ವಿದೇಶಕ್ಕೆ ವ್ಯಾಸಂಗಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ದೊರೆಯದೆ ಇದ್ದಾಗ ರಾಜ್ಯಪಾಲರ ಕಚೇರಿಗೆ ತೆರಳಿ ದೂರು ನೀಡುವುದು, ಕುಲಪತಿಗಳ ಮೇಲೆ ಒತ್ತಡ ಹೇರುವ ಕಾರಣ ಒಂದು ವರ್ಷಕ್ಕೆ ವಿಸ್ತರಿಸುವುದು ಅಗತ್ಯವಿದೆ ಎಂದು ಕುಲಸಚಿವೆ ವಿ.ಆರ್. ಶೈಲಜಾ ವಿಷಯ ಮಂಡಿಸಿದರು. ಈ ಬಗ್ಗೆ ಚರ್ಚಿಸಿದ ಸದಸ್ಯರು ತಾತ್ಕಾಲಿಕ ಪ್ರಮಾಣ ಪತ್ರದ ಅವಧಿಗೆ ವಿಸ್ತರಣೆಗೆ ಒಪ್ಪಿಗೆ ಸೂಚಿಸಿದರು.

ದತ್ತಿ ಚಿನ್ನದ ಪದಕ ಪರಿಷ್ಕರಣೆಗೆ ಸಮಿತಿ:

ರ್‍ಯಾಕ್ ವಿಜೇತ ವಿದ್ಯಾರ್ಥಿಗಳಿಗೆ ದತ್ತಿನಿಧಿ ಚಿನ್ನದ ಪದಕ ನೀಡುವ ಕುರಿತು ಪ್ರಸ್ತುತ ದಿನಮಾನಕ್ಕೆ ಆಗುವ ಖರ್ಚು, ಆಯಾಯ ವಿಷಯಕ್ಕೆ ತಕ್ಕಂತೆ ಚಿನ್ನದ ಪದಕ ನೀಡುವ ಕುರಿತು ಪರಿಷ್ಕರಣೆ ಮಾಡಿ ಹಲವಾರು ಮಾರ್ಪಾಡುಗಳನ್ನು ಮಾಡುವ ಕುರಿತು ಸಮಿತಿ ರಚಿಸಲು ನಿರ್ಧರಿಸಲಾಯಿತು.

ದತ್ತಿ ನಿಧಿ ಸ್ಥಾಪನೆಗೆ 1 ಲಕ್ಷ ರೂ. ಠೇವಣಿ ಇಡುವ ಬಗ್ಗೆ ವಿಷಯ ಪ್ರಸ್ತಾಪ ಬಂದಾಗ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಪ್ರೊ. ಶ್ರೀಧರ್, ಯಾವ ವಿಷಯದಲ್ಲಿ ರ್ಯಾಂಕ್ ಪಡೆದವರಿಗೆ ಚಿನ್ನದ ಪದಕ ವಿತರಿಸಬೇಕೋ ಅದಕ್ಕೆ ನೀಡದೆ ಬೇರೆ ವಿಷಯದಲ್ಲಿ ರ್ಯಾಂಕ್ ಪಡೆದವರಿಗೂ ನೀಡಲಾಗುತ್ತಿದೆ. ಇದಲ್ಲದೆ, ಕೆಲವು ಕೋರ್ಸ್ ಗಳಲ್ಲಿ ರ್ಯಾಂಕ್ ಪಡೆದವರಿಗೆ ಕನಿಷ್ಠ ನಗದು ಬಹುಮಾನ ದೊರೆಯಲಿದೆ. ಹೀಗಾಗಿ, ವಿಶ್ವವಿದ್ಯಾನಿಲಯದಿಂದಲೇ ಚಿನ್ನದ ಪದಕ ನೀಡಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ವಿವಿಯಿಂದ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಕೊಡಬಹುದು ಹೊರತು ಚಿನ್ನದ ಪದಕ ಕೊಡಲು ಕಷ್ಟವಾಗಲಿದೆ. ದತ್ತಿ ಚಿನ್ನದ ಪದಕ ಬೇರೆಯವರ ಹೆಸರಿನಲ್ಲೂ ಇದ್ದರೂ ಮೈಸೂರು ವಿವಿಯಿಂದಲೇ ಪ್ರದಾನ ಮಾಡಿದಂತಾಗಲಿದೆ. ಈ ಬಗ್ಗೆ ವಿಸ್ತಾರವಾಗಿ ಚರ್ಚಿಸಿ ಪರಿಹಾರ ಕಂಡು ಹಿಡಿಯಲು ಸಮಿತಿ ರಚಿಸಲಾಗುವುದು ಎಂದು ತಿಳಿಸಿ ಚರ್ಚೆಗೆ ತೆರೆ ಎಳೆದರು.

ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಎಂ. ಮಹಾದೇವನ್, ಹಣಕಾಸು ಅಧಿಕಾರಿ ಕೆ.ಎಸ್. ರೇಖಾ ಹಾಗೂ ಶಿಕ್ಷಣ ಮಂಡಳಿ ಸದಸ್ಯರು ಇದ್ದರು.

click me!