ಕಳೆದ ಮಳೆಗಾಲದಲ್ಲಿ ಮಳೆಯ ತೀವ್ರ ಕೊರತೆಯಾಗಿದ್ದ ಕೊಡಗಿಗೆ ಈ ಬಾರಿ ವಾಡಿಕೆಗಿಂತ 4 ಪರ್ಸೆಂಟ್ ಜಾಸ್ತಿ ಮಳೆಯಾಗುತ್ತದೆ ಎನ್ನುವ ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ಈಗಾಗಲೇ ನೀಡಿದೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಮೇ.22): ಕಳೆದ ಮಳೆಗಾಲದಲ್ಲಿ ಮಳೆಯ ತೀವ್ರ ಕೊರತೆಯಾಗಿದ್ದ ಕೊಡಗಿಗೆ ಈ ಬಾರಿ ವಾಡಿಕೆಗಿಂತ 4 ಪರ್ಸೆಂಟ್ ಜಾಸ್ತಿ ಮಳೆಯಾಗುತ್ತದೆ ಎನ್ನುವ ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ಈಗಾಗಲೇ ನೀಡಿದೆ. ಇದರ ನಡುವೆ ಭಾರತೀ ಭೂಗರ್ಭ ಇಲಾಖೆ ಕೊಡಗಿನಲ್ಲಿ ಈ ಬಾರಿ 70 ಕ್ಕೂ ಹೆಚ್ಚು ಸ್ಥಳಗಳಲ್ಲಿ ಭೂಕುಸಿತ ಆಗಬಹುದು ಎಂದು ಅಂದಾಜಿಸಿದೆಯಂತೆ. ಈ ಕುರಿತು ಕೊಡಗು ಜಿಲ್ಲಾಧಿಕಾರಿ ವೆಂಕಟ ರಾಜಾ ಅವರು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ ಕಳೆದ 10 ವರ್ಷಗಳ ಅಂಕಿಗಳ ಆಧಾರದಲ್ಲಿ ನೋಡುವುದಾದರೆ ಜಿಲ್ಲೆಯಲ್ಲಿ ಭೂಕುಸಿತದ ಜೊತೆಗೆ 100 ಪ್ರದೇಶಗಳಲ್ಲಿ ಪ್ರವಾಹದ ಭೀತಿಯೂ ಇದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.
ಇದು ಸದ್ಯದ ಮಟ್ಟಿಗೆ ಕೊಡಗಿಗೆ ತೀವ್ರ ಆತಂಕದ ವಿಷಯವೇ ಸರಿ. ಹೌದು! ಕಳೆದ 2018 ರಿಂದ 2021 ವರೆಗೆ ಜಿಲ್ಲೆಯಲ್ಲಿ ಎದುರಾದ ಭೂಕುಸಿತ ಮತ್ತು ಪ್ರವಾಹದಂತಹ ಪ್ರಾಕೃತಿಕ ವಿಪತ್ತುಗಳನ್ನು ಕೇಳಿದರೆ ಈಗಲೂ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿಬಿಡುತ್ತದೆ. ಅದನ್ನು ಎಂದಿಗೂ ಮರೆಯುವಂತಿಲ್ಲ. ಕಳೆದ ವರ್ಷದಲ್ಲಿ ಮಳೆಯ ತೀವ್ರ ಕೊರತೆ ಇತ್ತು. ಮಳೆಯ ಕೊರತೆಯಿಂದಾಗಿ ಜಿಲ್ಲೆಯ ರೈತರು ಅಷ್ಟೇ ಅಲ್ಲ ಎಲ್ಲಾ ವಿಭಾಗ ಜನರು ಸಾಕಷ್ಟು ನಷ್ಟ ಅನುಭವಿಸಿದ್ದರು. ಆದರೆ ಈ ಬಾರಿ ತೀವ್ರ ಮಳೆಯಿಂದಾಗಿ ಸಾಕಷ್ಟು ಸಮಸ್ಯೆ ಎದುರಾಗಲಿದೆ ಎನ್ನುವುದು ಜನರನ್ನು ಮತ್ತಷ್ಟು ಆತಂಕಕ್ಕೆ ದೂಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಮೀನಾ ಹತ್ಯೆ ಪ್ರಕರಣದ ವಿಚಾರಣೆಗೆ ವಿಶೇಷ ಪ್ರಾಸೀಕ್ಯೂಟರ್ ನೇಮಕ: ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವ ಪರಮೇಶ್ವರ್
ಅದರಲ್ಲೂ ಜಿಲ್ಲೆಯ ಐದು ತಾಲ್ಲೂಕುಗಳ 70 ಸ್ಥಳಗಳಲ್ಲಿ ಪ್ರವಾಹ ಭೂಕುಸಿತವಾಗುತ್ತದೆ ಎನ್ನುವ ವಿಷಯವಂತು ಭಯವನ್ನೇ ಸೃಷ್ಟಿವಂತಹ ಸಂಗತಿಯೇ ಸರಿ. ಇಡೀ ಜಿಲ್ಲೆ ಬಹುತೇಕ ಬೆಟ್ಟ ಗುಡ್ಡಗಳ ಪ್ರದೇಶಗಳಿಂದ ಕೂಡಿದ್ದು, ಅಲ್ಲೆಲ್ಲಾ ಜನವಸತಿ ಪ್ರದೇಶಗಳಿವೆ. ಅವುಗಳು ತೊಂದರೆಗೆ ಸಿಲುಕುವ ಸಾಧ್ಯತೆ ಇರಬಹುದು. ಹೀಗಾಗಿ ಅಂತಹ ಪ್ರದೇಶಗಳ ಮೇಲೆ ನಿಗಾವಹಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. 2018 ರಲ್ಲೂ ಕೂಡ ಬರೋಬ್ಬರಿ 36 ಗ್ರಾಮಗಳ ವ್ಯಾಪ್ತಿಯಲ್ಲಿ ಭೀಕರ ಭೂಕುಸಿತವಾಗಿತ್ತು. ನಂತರ ಅದು 2021 ರವರೆಗೆ ನಿರಂತರ ಮೂರು ವರ್ಷವೂ ಮುಂದುವರಿದಿತ್ತು.
ಪ್ರತೀ ವರ್ಷವೂ ನಡೆದಂತಹ ಭೂಕುಸಿತಗಳಲ್ಲಿ ಕನಿಷ್ಠ 10 ರಿಂದ 15 ಜನರು ಜೀವಂತ ಸಮಾಧಿಯಾದರು. ಪ್ರವಾಹ ಎದುರಾದ ಹಿನ್ನೆಲೆಯಲ್ಲಿ 60 ಕ್ಕೂ ಹೆಚ್ಚು ಗ್ರಾಮಗಳ ಸಂಪೂರ್ಣ ಮುಳುಗಡೆಯಾದವು. ಸಾವಿರಾರು ಕುಟುಂಬಗಳು ಮನೆ ಮಠಗಳನ್ನು ಕಳೆದುಕೊಳ್ಳಬೇಕಾಯಿತು. ಇದೀಗ ಈ ವರ್ಷವೂ ಭೂಕುಸಿತ ಪ್ರವಾಹ ಎದುರಾಗುತ್ತದೆ ಎನ್ನುವ ವಿಷಯ ಜನರನ್ನು ಆತಂಕಕ್ಕೆ ದೂಡಿದೆ. ಭಾರತೀಯ ಭೂಗರ್ಭಶಾಸ್ತ್ರ ಇಲಾಖೆ ಹಾಗೂ ಹವಾಮಾನ ಇಲಾಖೆಗಳ ಸೂಚನೆಯಂತೆ ಈಗಾಗಲೇ ಕೊಡಗು ಜಿಲ್ಲಾಡಳಿತ ಮಳೆಗಾಲದಲ್ಲಿ ಎದುರಾಗಬಹುದಾದ ಸಮಸ್ಯೆಗಳ ಎದುರಿಸಲು ಸಿದ್ಧತೆಯನ್ನು ಮಾಡಿಕೊಂಡಿದೆ.
Kodagu: ಮಹಿಳೆಯ ಕೊಂದಿದ್ದ ದಕ್ಷ ಹೆಸರಿನ ಒಂಟಿ ಸಲಗ ಸೆರೆ ಹಿಡಿದ ಅರಣ್ಯ ಇಲಾಖೆ!
ಎಲ್ಲಾ ಹಂತದಲ್ಲೂ ಅಧಿಕಾರಿಗಳ ಸಭೆ ನಡೆಸಿ ತಂಡಗಳನ್ನು ರಚಿಸಿದ್ದೇವೆ. ಈಗಾಗಲೇ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯ ತಂಡಗಳನ್ನು ಸಜ್ಜುಗೊಳಿಸಲಾಗಿದೆ. ಮೇ ತಿಂಗಳ ಅಂತ್ಯದಲ್ಲಿ ಎನ್ಡಿಆರ್ಎಫ್ ತಂಡವೂ ಜಿಲ್ಲೆಗೆ ಬರಲಿದೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಈ ಬಾರಿಯೂ ಭೂಕುಸಿತ ಪ್ರವಾಹ ಎದುರಾಗಲಿದೆ ಎನ್ನುವ ವಿಷಯ ಜಿಲ್ಲೆಯ ಜನತೆಯನ್ನು ಮತ್ತೆ ಆತಂಕಕ್ಕೆ ದೂಡಿದೆ.