ಕಾಫಿ, ಅಡಕೆ, ಮೆಣಸು ಬೆಳೆಗಳಿಗೆ ಅಪಾರ ಹಾನಿ| ತುಂಬಿ ಹರಿಯುತ್ತಿರುವ ತುಂಗಾ, ಭದ್ರಾ ಮತ್ತು ಹೇಮಾವತಿ ನದಿಗಳು| ನದಿ ಪಾತ್ರದ ತೋಟಗಳು ಜಲಾವೃತ| ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಸೇರಿದಂತೆ ಹಲವೆಡೆ ಭೂ ಕುಸಿತ| ಜನಜೀವನ ಅಸ್ತವ್ಯಸ್ತಗೊಳ್ಳುವುದರೊಂದಿಗೆ ಕೃಷಿಗೂ ಅಪಾರ ಹಾನಿ|
ಚಿಕ್ಕಮಗಳೂರು(ಆ.07): ಮಲೆನಾಡಿನಲ್ಲಿ ಇಂದೂ ಕೂಡ ಮಳೆ ಮುಂದುವರೆದಿದೆ. ಜಿಲ್ಲೆಯ ಶೃಂಗೇರಿ ತಾಲೂಕು ಕೇಂದ್ರ ಸಂಪರ್ಕದ ಎಲ್ಲಾ ರಸ್ತೆಗಳು ಜಲಾವ್ರತವಾಗಿವೆ. ಭಾರೀ ಮಳೆಯಿಂದ ಶೃಂಗೇರಿ - ಮಂಗಳೂರು, ಶೃಂಗೇರಿ- ಕೊಪ್ಪ, ಶೃಂಗೇರಿ- ಜಯಪುರ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಶೃಂಗೇರಿ ಪಟ್ಟಣದ ಗಾಂಧಿ ಮೈದಾನ, ಕುರುಬಗೇರಿ ಜಲಾವ್ರತವಾಗಿವೆ
undefined
ಇನ್ನು ಶೃಂಗೇರಿ ಪಟ್ಟಣದ ಮಠದ ಭೋಜನ ಹಾಲ್ ಒಳಗೆ ನೀರು ನುಗ್ಗಿದೆ. ನರಸಿಂಹ ವನಕ್ಕೆ ನೀರು ನುಗ್ಗಿದೆ. ಶ್ರೀ ಮ -ಮೆಣಸೆ ಸಂಪರ್ಕ ರಸ್ತೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಸಂಧ್ಯಾ ವಂದನ ಮಂಟಪ, ಕಪ್ಪೆ ಶಂಕರ ದೇವಾಲಯ ಮುಳುಗಡೆಯಾಗಿದೆ. ಇದರಿಂದ ಜನರು ಪಡಬಾರದ ಸಂಕಷ್ಟಗಳನ್ನ ಅನುಭವಿಸುವಂತಾಗಿದೆ.
ಮಹಾಮಳೆಗೆ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಗುಡ್ಡ ಕುಸಿತ
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ನಿನ್ನೆ(ಗುರುವಾರ) ಭಾರಿ ಗಾಳಿಯಿಂದ ಕೂಡಿದ ಮಳೆಯಿಂದ ಜಿಲ್ಲೆಯ ಜೀವನದಿಗಳಾದ ತುಂಗಾ, ಭದ್ರಾ ಮತ್ತು ಹೇಮಾವತಿ ನದಿಗಳು ತುಂಬಿ ಹರಿಯುತ್ತಿದ್ದು ನದಿ ಪಾತ್ರದ ತೋಟಗಳು ಜಲಾವೃತವಾಗಿವೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಸೇರಿದಂತೆ ಹಲವೆಡೆ ಭೂ ಕುಸಿತ ಉಂಟಾಗಿದ್ದು ಜನಜೀವನ ಅಸ್ತವ್ಯಸ್ತಗೊಳ್ಳುವುದರೊಂದಿಗೆ ಕೃಷಿಗೂ ಅಪಾರ ಹಾನಿಯಾಗಿದೆ.
ಮೂಡಿಗೆರೆ ಭಾಗದಲ್ಲಿ ಕಾಫಿಗಿಡಗಳಲ್ಲಿ ಬೆಳೆದು ನಿಂತಿದ್ದ ಕಾಫಿ ಹಣ್ಣುಗಳು, ಮೆಣಸು, ಅಡಕೆ ನೆಲಕ್ಕೆ ಉದುರಿವೆ. ತೋಟದಲ್ಲಿರುವ ಗಾಳಿಯ ಅಬ್ಬರಕ್ಕೆ ಸಿಲ್ವರ್ ಮರಗಳು, ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಬಿದ್ದಿದ್ದು ಕೊಪ್ಪ, ಶೃಂಗೇರಿ, ಮೂಡಿಗೆರೆಗಳಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ.
ಕಾರ್ಯಾಚರಣೆ:
ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಪ್ರಮುಖ ಸಂಪರ್ಕ ರಸ್ತೆ ಆಗಿರುವ ಚಾರ್ಮಾಡಿ ಘಾಟ್ ರಸ್ತೆಯ ಕೆಲವೆಡೆ ಬುಧವಾರ ರಾತ್ರಿ ಧರೆ ಕುಸಿದಿದ್ದು, ಇದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು. ಗುರುವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ನಿರಂತರವಾಗಿ ಸುರಿಯುವ ಮಳೆಯಲ್ಲಿಯೇ ಮಣ್ಣು ತೆರವುಗೊಳಿಸಿದರು. ಕಳೆದ ವರ್ಷ ಮಹಾಮಳೆಗೆ ಕುಸಿದಿದ್ದ ದುರ್ಗದಹಳ್ಳಿ ರಸ್ತೆಯಲ್ಲೂ ಗುಡ್ಡದ ಮಣ್ಣು ಕುಸಿದಿದ್ದು ತೆರವುಗೊಳಿಸಲಾಗಿದೆ. ಅದೇ ರೀತಿಯಲ್ಲಿ ತತ್ಕೋಳ, ಜಯಪುರ- ಶೃಂಗೇರಿ ರಸ್ತೆಯಲ್ಲಿ ಕುಸಿದಿದ್ದ ಧರೆ ಹಾಗೂ ಮರಗಳನ್ನೂ ತೆರವುಗೊಳಿಸಿ ಸಂಚಾರ ಸುಗಮಗೊಳಿಸಲಾಗಿದೆ.
ಭೂಕುಸಿತ: ಕೊಡಗು, ಚಿಕ್ಕಮಗಳೂರಿಗೆ ಸಚಿವ ಸೋಮಣ್ಣ, ಸಿ.ಟಿ. ರವಿ ದೌಡು
ಕೊಪ್ಪ ತಾಲೂಕಿನಲ್ಲಿ ಗಾಳಿ ಮಳೆಯಾರ್ಭಟ ಹೆಚ್ಚಿದ್ದು ಶ್ಯಾನುವಳ್ಳಿಯ ಕೊಡುರು ಶಾಲೆ ರಂಗಮಂದಿರದ ಛಾವಣಿ ಗಾಳಿಯ ರಭಸಕ್ಕೆ ಹಾರಿಹೋಗಿದೆ. ಶಾಲೆ ನಡೆಯದೇ ಇರುವುದರಿಂದಾಗಿ ಅನಾಹುತ ತಪ್ಪಿದೆ. ಅತ್ತಿಕೊಡಿಗೆ ವ್ಯಾಪ್ತಿಯಲ್ಲಿ ಧರೆ ಕುಸಿತಯುಂಟಾಗಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಅಪಾಯಕಾರಿ ಸ್ಥಿತಿಯಲ್ಲಿರುವ ಮನೆಯವರನ್ನು ತಾತ್ಕಾಲಿಕವಾಗಿ ತೆರವುಗೊಳಿಸಲಾಗಿದೆ.
ಹೊನ್ನಾಳಿ, ಹರಿಹರದಲ್ಲಿ ಮುಳುಗಡೆ ಭೀತಿ
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಗೆ ಮಧ್ಯ ಕರ್ನಾಟಕದ ಜೀವನದಿ ತುಂಗಭದ್ರಾ ನದಿ ಹರಿವು ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದ್ದು ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಹರಿಹರ ತಾಲೂಕಿನ ನದಿಪಾತ್ರದ 13 ಗ್ರಾಮಗಲು ಮುಳುಗಡೆ ಭೀತಿಯಲ್ಲಿವೆ.
ತುಂಗಭದ್ರಾ ನದಿಗೆ ಭದ್ರಾ ಡ್ಯಾಂನಿಂದ ಹೊರಹರಿವು ಹೆಚ್ಚುತ್ತಿದ್ದು, ಉಕ್ಕಡಗಾತ್ರಿ ಕ್ಷೇತ್ರದ ಒಂದು ಸಂಪರ್ಕ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಸಂಪರ್ಕ ಕಡಿತಗೊಂಡಿದೆ. ನದಿಪಾತ್ರದ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿರುವ ಜಿಲ್ಲಾಡಳಿತ ತುರ್ತು ಪರಿಸ್ಥಿತಿಯಲ್ಲಿ ಸಂಕಷ್ಟದಲ್ಲಿದ್ದವರ ನೆರವಿಗೆ ಧಾವಿಸಲು ಸರ್ವಸಿದ್ಥತೆಗಳನ್ನೂ ಮಾಡಿಕೊಂಡಿದೆ.