ನೆಗೆಟಿವ್ ಇದ್ದವರಿಂದಲೂ ಹಣ ವಸೂಲಿ: ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ| ಬಿಜೆಪಿಯ ರವಿಕುಮಾರ್ ಲೀಗಲ್ ನೋಟಿಸ್ ಕೊಟ್ಟಿದ್ದಾರಂತೆ. ನನಗಿನ್ನೂ ಬಂದಿಲ್ಲ. ನಾನು ಕಾಯ್ತಾ ಇದ್ದೀನಿ ಎಂದು ಡಿಕೆಶಿ|
ಬಳ್ಳಾರಿ(ಆ.07): ರಾಜ್ಯ ಸರ್ಕಾರ ನೆಗೆಟಿವ್ ಇದ್ದವರಿಗೆ ಪಾಸಿಟಿವ್ ತೋರಿಸಿ ಹಣ ವಸೂಲಿ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಹೆಣವನ್ನಿಟ್ಟುಕೊಂಡು ಹಣ ವಸೂಲಿ ಮಾಡುತ್ತಿರುವ ಪ್ರಕರಣಗಳು ರಾಜ್ಯದೆಲ್ಲೆಡೆ ನಡೆಯತ್ತಿವೆ. ಯಾವುದೇ ಸಚಿವರು ಆಸ್ಪತ್ರೆಗಳಿಗೆ ತೆರಳಿ ಅಲ್ಲಿನ ಸ್ಥಿತಿಗತಿ ವಿಚಾರಣೆ ಮಾಡಿಲ್ಲ. ಕೋವಿಡ್ ಪಾಸಿಟಿವ್, ನೆಗೆಟಿವ್ ವರದಿ ನೀಡುವ ವಿಚಾರದಲ್ಲೂ ಹಣದ ವ್ಯವಹಾರ ನಡೆದ ಬಗ್ಗೆ ವರದಿ ಬರುತ್ತಿದೆ. ಈ ಎಲ್ಲವನ್ನು ಜನತೆಯ ಮುಂದೆ ಇಡುತ್ತಿದ್ದೇವೆ. ನಂತರ ನ್ಯಾಯಾಂಗದ ಮೊರೆ ಹೋಗುತ್ತೇವೆ ಎಂದರು.
undefined
ಬಳ್ಳಾರಿ: ಕೊರೋನಾ ಸೋಂಕಿತರ ಜತೆ ಜನ್ಮದಿನ ಆಚರಿಸಿಕೊಂಡ ವೈದ್ಯ!
ಕೊರೋನಾ ಸೋಂಕಿತ ಬಡ ಹಾಗೂ ಮಧ್ಯಮ ವರ್ಗದ ಜನರು ನರಳುತ್ತಿದ್ದಾರೆ. ಅವರಿಗೆ ಸರಿಯಾದ ಚಿಕಿತ್ಸೆ ಸೌಕರ್ಯ ಒದಗಿಸುತ್ತಿಲ್ಲ. ನಾವು ಪಕ್ಷಭೇದ ಮರೆತು ಸಹಕಾರ ನೀಡಿದ್ದೇವೆ. ಆದರೆ, ಅವರು ತಮ್ಮ ಕರ್ತವ್ಯ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಮಾಜಿ ಮಂತ್ರಿಯೊಬ್ಬರ ಕೋವಿಡ್ ಚಿಕಿತ್ಸೆ ಬಿಲ್ 17 ಲಕ್ಷ ಆಗಿದೆ. ಮಂತ್ರಿಗಳ ಸ್ಥಿತಿಯೇ ಹೀಗಾದರೆ ಬಡವರ ಪಾಡೇನು ಎಂದು ಪ್ರಶ್ನಿಸಿದರು. ಕೋವಿಡ್ ಸಂದರ್ಭವನ್ನು ಸರಿಯಾಗಿ ನಿಭಾಯಿಸದ ಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿದೆ. ಮುಖ್ಯಮಂತ್ರಿಗಳು ಆಸ್ಪತ್ರೆಯಲ್ಲಿದ್ದುಕೊಂಡು ವರ್ಗಾವಣೆ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ದೂರಿದರು.
ಲೀಗಲ್ ನೋಟಿಸ್‌ಗೆ ಕಾಯ್ತಾ ಇದ್ದೀನಿ
ಬಿಜೆಪಿಯ ರವಿಕುಮಾರ್ ಲೀಗಲ್ ನೋಟಿಸ್ ಕೊಟ್ಟಿದ್ದಾರಂತೆ. ನನಗಿನ್ನೂ ಬಂದಿಲ್ಲ. ನಾನು ಕಾಯ್ತಾ ಇದ್ದೀನಿ’ ಎಂದು ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.‘ಲೀಗಲ್ ನೋಟಿಸ್ ಸಿದ್ದರಾಮಯ್ಯ ಅವರಿಗೆ ತಲುಪಿದೆಯೋ ಏನೋ ಗೊತ್ತಿಲ್ಲ. ನನಗಂತೂ ಇನ್ನೂ ಬಂದಿಲ್ಲ. ಪೋಸ್ಟ್‌ಮನ್‌ಗೂ ಫೋನ್ ಮಾಡಿ ಕೇಳಿದೆ. ಇನ್ನೂ ಬಂದಿಲ್ಲ ಸರ್ ಎಂದ್ರು. ಬಂದ್ರೆ ತಂದುಕೊಡ್ತೀನಿ ಅಂತ ಹೇಳಿದ್ದಾರೆ’ ಎಂದು ಟಾಂಗ್ ಕೊಟ್ಟರು.