ಕಾಫಿನಾಡ ಮಲೆನಾಡು ಭಾಗದಲ್ಲಿ ಮಳೆ ಮುಂದುವರೆದಿದ್ದು, ಮಳೆ-ಗಾಳಿ ಅಬ್ಬರಕ್ಕೆ ವಾಹನಗಳು ನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸುತ್ತಿವೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು .
ಚಿಕ್ಕಮಗಳೂರು, (ಸೆಪ್ಟೆಂಬರ್.12) : ಕಾಫಿನಾಡು ಮಲೆನಾಡು ಭಾಗದಲ್ಲಿ ಮತ್ತೆ ಮಳೆಯ ಆರ್ಭಟ ಮುಂದುವರಿದೆ.ಚಾರ್ಮಾಟಿ ಘಾಟ್ ರಸ್ತೆಯಲ್ಲಿ ಮಳೆ ಗಾಳಿಗೆ ಸಾಲು ಸಾಲು ಅನಾಹುತಗಳು ಸಂಭವಿಸುತ್ತಿವೆ. ಒಂದಡೆ ಭೂ ಕುಸಿತ ಉಂಟಾದ್ರೆ ಮತ್ತೊಂದಡೆ ಕಾರುಗಳು ಮಳೆ-ಗಾಳಿ ಅಬ್ಬರಕ್ಕೆ ನಿಯಂತ್ರಣ ತಪ್ಪಿ ಡಿಕ್ಕಿಯಾಗಿವೆ.
ಚಾರ್ಮಾಟಿ ಘಾಟ್ ನಲ್ಲಿ ಭೂ ಕುಸಿತ
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿ ಸುತ್ತಮುತ್ತ ಮಳೆ ಮುಂದುವರೆದಿದ್ದು ಭಾರೀ ಮಳೆ-ಗಾಳಿಗೆ ಚಾರ್ಮಾಡಿ ಘಾಟಿಯಲ್ಲಿ ಭೂಕುಸಿತ ಉಂಟಾಗಿದೆ. ಕೊಟ್ಟಿಗೆಹಾರ ಸಮೀಪದ ಬಿದಿರುತಳ ಎಂಬ ಗ್ರಾಮದಲ್ಲಿ ರಸ್ತೆ ಬದಿಯ ಒಂದು ಭಾಗ ಕುಸಿದಿದ್ದು ಬಿದ್ದಿದ್ದು ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿದೆ.
ಅತಿವೃಷ್ಟಿಯಿಂದ ಚಿಕ್ಕಮಗಳೂರು ಜಿಲ್ಲೆಗೆ 391.57 ಕೋಟಿ ಹಾನಿ, ಮಳೆಗೆ ಒಟ್ಟು 6 ಮಂದಿ ಬಲಿ
ಚಾರ್ಮಾಡಿ ಘಾಟಿಯ ರಸ್ತೆಯ ಒಂದು ಬದಿ ಬೆಟ್ಟ-ಗುಡ್ಡಗಳಿಂದ ಕೂಡಿದ್ದರೆ, ಮತ್ತೊಂದು ಬದಿ ಆಳವಾದ ಪ್ರಪಾತದಿಂದ ಇದೆ. ಪ್ರಪಾತದ ಬಳಿ ರಸ್ತೆಯ ಮಣ್ಣು ಜರುಗಿದ್ದು ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿದೆ. ಆದರೆ, ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ಈ ಭಾಗದಲ್ಲಿ ಭಾರೀ ವಾಹನಗಳು ಸಂಚಾರ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗಿದೆ. ಆದರೆ, ಸ್ಥಳಕ್ಕೆ ಭೇಟಿ ನೀಡಿರುವ ಬಣಕಲ್ ಪೊಲೀಸರು ರಸ್ತೆ ಕುಸಿದಿರುವ ಜಾಗಕ್ಕೆ ಟೇಪ್ ಹಾಕಿ ಕಲ್ಲುಗಳನ್ನ ಅಡ್ಡವಿಟ್ಟಿದ್ದಾರೆ.
ಇನ್ನೂ ಚಾರ್ಮಾಡಿ ಘಾಟಿಯ 3ನೇ ತಿರುವಿನಲ್ಲಿ ಬೃಹತ್ ಮರ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಸುಮಾರು ಗಂಟೆಗೂ ಹೆಚ್ಚು ಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು. ರಸ್ತೆಗೆ ಮರ ಬಿದ್ದ ಪರಿಣಾಮ ಸುಮಾರು ಒಂದು ಕಿ.ಮೀ. ಹೆಚ್ಚು ಹೊತ್ತು ಟ್ರಾಫಿಕ್ ಜಾಮ್ ಆಗಿತ್ತು. ಆದರೆ, ಸ್ಥಳಿಯರು ಸರ್ಕಾರ ಮಳೆಗಾಲ ಮುಗಿಯುವವರೆಗೆ ಈ ಭಾಗದಲ್ಲಿ ಭಾರೀ ವಾಹನಗಳಿಗೆ ಸಂಚಾರವನ್ನ ಸಂಪೂರ್ಣ ನಿಷೇಧ ಹೇರಬೇಕೆಂದು ಆಗ್ರಹಿಸಿದ್ದಾರೆ.
Chikkamagaluru Rains; ಮಳೆ ಆರ್ಭಟಕ್ಕೆ ಮಲೆನಾಡು ತತ್ತರ, ಹಲವು ವರ್ಷಗಳ ನಂತರ ದಾಖಲೆಯ ಮಳೆ
ಮಳೆ-ಗಾಳಿ ಅಬ್ಬರಕ್ಕೆ ನಿಯಂತ್ರಣ ತಪ್ಪಿ ಅಪಘಾತ
ಮಳೆ-ಗಾಳಿಗೆ ಕಾರು ಚಾಲಕನ ನಿಯಂತ್ರಣ ತಪ್ಪಿ ಹೇಮಾವತಿ ನದಿಯ ದಡದವರೆಗೂ ಹೋಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಬಳಿ ನಡೆದಿದೆ. ಕಾರು ಮತ್ತಷ್ಟು ಸ್ವಲ್ಪ ಮುಂದೆ ಹೋಗಿದ್ದರೆ ನದಿಗೆ ಒಳಗೆ ಹೋಗುತ್ತಿತ್ತು. ಕಾರಿನ ಚಾಲಕ ತರುವೆ ಆದರ್ಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಟ್ಟಿಗೆಹಾರದಿಂದ ಮೂಡಿಗೆರೆಗೆ ಹೋಗುತ್ತಿದ್ದ ಬಿಜೆಪಿ ಮುಖಂಡ ತರುವೆ ಆದರ್ಶ್ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಮಳೆ ಹಾಗೂ ಗಾಳಿಗೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ.
ಕಾರಿನಲ್ಲಿ ಚಾಲಕ ಒಬ್ಬರೆ ಇದ್ದು ಯಾವುದೇ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಇನ್ನು ಚಾರ್ಮಾಡಿ ಘಾಟಿಯಲ್ಲಿ ಮಳೆ-ಗಾಳಿಯ ಅಬ್ಬರ ಮುಂದುವರೆದಿದ್ದು ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿವೆ. ಮಂಗಳೂರಿನಿಂದ ಚಿಕ್ಕಮಗಳೂರು ಕಡೆಗೆ ಬರುತ್ತಿದ್ದ ಕಾರು ಹಾಗೂ ಚಿಕ್ಕಮಗಳೂರು ಕಡೆಯಿಂದ ಮಂಗಳೂರಿಗೆ ಹೋಗುತ್ತಿದ್ದ ಎರಡು ಕಾರುಗಳು ಮಳೆ-ಗಾಳಿ ಅಬ್ಬರಕ್ಕೆ ನಿಯಂತ್ರಣ ತಪ್ಪಿ ಡಿಕ್ಕಿಯಾಗಿವೆ. ಒಂದು ಕಾರಿನಲ್ಲಿ ನಾಲ್ವರು, ಮತ್ತೊಂದು ಕಾರಿನಲ್ಲಿ ಇಬ್ಬರು ಇದ್ದು ಯಾವುದೇ ಅನಾಹುತ ಸಂಭವಿಸಿಲ್ಲ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.