ವಾರಿಸುದಾರರಿಲ್ಲದ ಅನಾಥ ಶವಗಳ ವಿಲೇವಾರಿಗೆ ಉಡುಪಿ ನ್ಯಾಯಾಧೀಶೆ ಅನಾಥ ಶವಗಳಿಗೆ ಹೆಗಲು ಕೊಟ್ಟು ಮಾದರಿಯಾಗಿದ್ದಾರೆ.
ವರದಿ-ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ, (ಸೆಪ್ಟೆಂಬರ್.12):ಉಡುಪಿ ಜಿಲ್ಲೆಯ ಹಿರಿಯ ಸಿವಿಲ್ ನ್ಯಾಯಾಧೀಶೆ ಅನಾಥ ಶವಗಳ ಅಂತ್ಯಸಂಸ್ಕಾರಕ್ಕೆ ಸ್ವತಹ ತಾನೇ ಹೆಗಲುಕೊಟ್ಟು, ಮೂಡನಂಬಿಕೆಗಳನ್ಬು ಹೋಗಲಾಡಿಸುವುದರ ಜೊತೆಗೆ ಮಾನವೀಯತೆ ಮೆರೆದಿದ್ದಾರೆ., ಮಹಿಳಾ ಜಡ್ಜ್ ಮಾದರಿ ನಡೆ ಮೂಲಕ ನಾಗರಿಕರ ಮೆಚ್ಚುಗೆ ಪಡೆದಿದ್ದಾರೆ
ವಾರಿಸುದಾರರಿಲ್ಲದ ಅನಾಥ ಶವಗಳ ವಿಲೇವಾರಿ ಪೊಲೀಸ್ ಇಲಾಖೆಗೆ ದೊಡ್ಡ ತಲೆ ನೋವಾಗಿತ್ತು. ಅವಧಿ ಮುಗಿದ ನಂತರ ಉಡುಪಿ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಶವಗಳು ಹಾಗೆಯೇ ಬಾಕಿ ಉಳಿಯುತ್ತಿತ್ತು. ಆದರೆ ಉಡುಪಿ ಜಿಲ್ಲೆಯಲ್ಲಿ ಮಾನವೀಯ ಕಳಕಳಿಯ ಅನೇಕ ಸಮಾಜ ಸೇವಕರಿದ್ದಾರೆ. ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು, ಹಿರಿಯ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಮುಂತಾದವರು ಇಂತಹ ಅನಾಥ ಶವಗಳಿಗೆ ಅಂತ್ಯಸಂಸ್ಕಾರ ನಡೆಸುವ ಮೂಲಕ ಸರಕಾರದೊಂದಿಗೆ ಕೈಜೋಡಿಸಿ ಅನಾಥರಿಗೆ ಗೌರವಾನ್ವಿತ ಅಂತ್ಯ ಸಂಸ್ಕಾರದ ವ್ಯವಸ್ಥೆ ಕಲ್ಪಿಸುತ್ತಾ ಬಂದಿದ್ದಾರೆ.
undefined
ಮತ್ತಷ್ಟು ಉಡುಪಿ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದೀಗ ಸಮಾಜ ಸೇವಕರ ಈ ಪುಣ್ಯ ಕಾರ್ಯದಲ್ಲಿ ನ್ಯಾಯಾಧೀಶೆಯೊಬ್ಬರು ಕೈಜೋಡಿಸಿದ್ದಾರೆ, ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ನ್ಯಾಯಾಧೀಶೆ ಶರ್ಮಿಳಾ ಅವರು, ಜಿಲ್ಲಾ ನಾಗರಿಕ ಸಮಿತಿಯ ಪುಣ್ಯಕಾರದಲ್ಲಿ ಕೈ ಜೋಡಿಸಿದ್ದಾರೆ, ನಾಲ್ಕು ಅನಾಥ ಶವಗಳ ಅಂತ್ಯಸಂಸ್ಕಾರದ ವೇಳೆ ಸ್ವತಹ ಭಾಗವಹಿಸಿ ಜಾಗೃತಿ ಮೂಡಿಸಿದ್ದಾರೆ.
ಹೆಣ್ಣು ಮಕ್ಕಳು ಅಂತ್ಯ ಸಂಸ್ಕಾರದ ವೇಳೆ ರುದ್ರಭೂಮಿಗೆ ಹೋಗುವುದಿಲ್ಲ. ಹೇಗೆ ಹೋಗಬಾರದೆಂಬ ಮೂಢನಂಬಿಕೆಯು ಚಾಲ್ತಿಯಲ್ಲಿದೆ. ಆದರೆ ಮೂಢನಂಬಿಕೆಯನ್ನು ಹೋಗಲಾಡಿಸುವುದರ ಜೊತೆಗೆ ನ್ಯಾಯಧೀಶೆ ಶರ್ಮಿಳಾ ಅವರು ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದಾರೆ.
ಉಡುಪಿ ನಗರದ ಬೀಡಿನಗುಡ್ಡೆ ಭಾಗದಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನಾಗರಿಕ ಸಮಿತಿ ಹಾಗೂ ಕಾನೂನು ಸೇವೆ ಪ್ರಾಧಿಕಾರದಿಂದ ನಡೆದ ಸಾಮಾಜಿಕ ಕಾರ್ಯ ಎಲ್ಲರ ಮೆಚ್ಚುಗೆ ಪಡೆದಿದೆ. ಇನ್ನೊಂದು ವಿಶೇಷ ಏನಂದ್ರೆ ಬೀಡಿನಗುಡ್ಡೆಯ ಈ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸುವುದು ಕೂಡ ಓರ್ವ ಮಹಿಳೆ.
ಈ ವೇಳೆ ಮಾತನಾಡಿರುವ ನ್ಯಾಯಾಧೀಶೆ, ರುದ್ರ ಭೂಮಿಗೆ ಮಹಿಳೆಯರು ಹೋಗಬಾರದೆಂಬ ಕಟ್ಟುಪಾಡು ಕೇವಲ ಮೂಢನಂಬಿಕೆ. ಯಾರೂ ಇಂಥ ಸ್ಥಳಗಳಿಗೆ ಬರಲು ಹೆದರಬಾರದು.ಅನಾಥ ಶವಗಳಿಗೆ ಸಾರ್ವಜನಿಕರೂ ಹೆಗಲು ಕೊಡುವ ಮೂಲಕ ಯಾರೂ ಅನಾಥರಲ್ಲ ಎಂಬ ಜಾಗೃತಿ ಮೂಡಬೇಕು..ಮಹಿಳೆಯಾಗಿ ನಾನೇ ಈ ಸ್ಥಳಕ್ಕೆ ಬಂದು ಶವಗಳಿಗೆ ಹೆಗಲು ಕೊಟ್ಟಿದ್ದೇನೆ.ಹೀಗಾಗಿ ಎಲ್ಲರೂ ಅನಾಥ ಶವದ ಅಂತ್ಯ ಕ್ರಿಯೆಯಲ್ಲೂ ತೊಡಗುವ ಮೂಲಕ ಸಾಮಾಜಿಕ ಕಾರ್ಯ ಮೆರೆಯಬೇಕು ಎಂದು ಹೇಳಿದ್ದಾರೆ.
ಜಿಲ್ಲಾ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ಈವರೆಗೆ ಅನೇಕ ಅನಾಥ ಶವಗಳ ಅಂತ್ಯಸಂಸ್ಕಾರ ನಡೆಸಿದ್ದಾರೆ. ಈ ನಾಲ್ಕು ಶವಗಳ ಅಂತಿಮ ವಿಧಾನ ಪೂರೈಸುವ ಮೂಲಕ ಇನ್ನೂರು ಶವಗಳನ್ನು ವಿಧಿ ವಿಧಾನ ಸಹಿತ ಅಂತ್ಯಸಂಸ್ಕಾರ ಮಾಡಿದಂತಾಗಿದೆ
ನಾಲ್ಕು ಶವಗಳಿಗೆ ತಾನೂ ಹೆಗಲು ಕೊಟ್ಟ ನ್ಯಾಯಾಧೀಶೆಯ ನಡೆ ಒಂದು ಕ್ರಾಂತಿಕಾರಿ ನಿರ್ಧಾರ.ಮಹಿಳಾ ನ್ಯಾಯಾದೀಶೆಯ ಈ ನಡೆ ಸಮಾಜಕ್ಕೆ ಮಾದರಿ.ಇಂತಹ ಸ್ಥಳಕ್ಕೆ ಮಹಿಳೆಯರು ಬರುವುದಿಲ್ಲ. ನ್ಯಾಯಾದೀಶೆ ಈ ಕಾರ್ಯ ಮಾಡಿರುವುದರಿಂದ ಇನ್ನುಮುಂದೆ ಮಹಿಳೆಯರು ಬರುವ ಮನಸ್ಸು ಮಾಡಬೇಕು ನಿನ್ನ ನಿತ್ಯಾನಂದ ಒಳಕಾಡು ಹೇಳಿದ್ದಾರೆ.