ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಇನ್ನೊಂದು ವಾರದಲ್ಲಿ ಪರಿಹಾರ ನೀಡದಿದ್ದರೆ ನಮ್ಮ ಭೂಮಿಯನ್ನು ಮರಳಿ ಸ್ವಾಧೀನಕ್ಕೆ ಪಡೆದುಕೊಳ್ಳುತ್ತೇವೆ ಎಂದು ಹೆದ್ದಾರಿ ನಿರ್ಮಾಣಕ್ಕೆ ಭೂಮಿ ನೀಡಿರುವ ತಾಲೂಕಿನ ತಿಟ್ಟಮಾರನಹಳ್ಳಿ ರೈತರು ಎಚ್ಚರಿಕೆ ನೀಡಿದ್ದಾರೆ.
ಚನ್ನಪಟ್ಟಣ (ಆ.20): ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಇನ್ನೊಂದು ವಾರದಲ್ಲಿ ಪರಿಹಾರ ನೀಡದಿದ್ದರೆ ನಮ್ಮ ಭೂಮಿಯನ್ನು ಮರಳಿ ಸ್ವಾಧೀನಕ್ಕೆ ಪಡೆದುಕೊಳ್ಳುತ್ತೇವೆ ಎಂದು ಹೆದ್ದಾರಿ ನಿರ್ಮಾಣಕ್ಕೆ ಭೂಮಿ ನೀಡಿರುವ ತಾಲೂಕಿನ ತಿಟ್ಟಮಾರನಹಳ್ಳಿ ರೈತರು ಎಚ್ಚರಿಕೆ ನೀಡಿದ್ದಾರೆ. ತಾಲೂಕಿನ ತಿಟ್ಟಮಾರನಹಳ್ಳಿ ಬಳಿ ಹಾದುಹೋಗಿರುವ ಬೆಂ-ಮೈ ಎಕ್ಸ್‌ಪ್ರೆಸ್ ಹೈವೇಗೆ ಭೂಮಿ ನೀಡಿರುವ ಹಲವಾರು ರೈತರಿಗೆ ಎರಡನೇ ಹಂತದ ಭೂ ಸ್ವಾಧೀನ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಶೀಘ್ರವಾಗಿ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.
ಪರಿಹಾರ ಸಿಕ್ಕಲ್ಲ: ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಬಳಿ ಬೆಂ-ಮೈ ಎಕ್ಸ್‌ಪ್ರೆಸ್ ವೇ ಕೆಳ ಸೇತುವೆ ಸಂಪರ್ಕ ಹಾಗೂ ಸವೀರ್‍ಸ್ ರಸ್ತೆ ಅಗಲೀಕರಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹೆಚ್ಚುವರಿ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಹಲವಾರು ವರ್ಷಗಳು ಕಳೆದರೂ ಸಹ ಈ ರೈತರಿಗೆ ಭೂ ಸ್ವಾಧೀನ ಪರಿಹಾರ ನೀಡಿಲ್ಲ. ಪರಿಹಾರ ಕೊಡುವ ಭರವಸೆ ನೀಡಿ ರೈತರ ಜಮೀನು ವಶಪಡಿಸಿಕೊಂಡು ಕಾಮಗಾರಿ ನಡೆಸಿ, ರಸ್ತೆ ಉದ್ಘಾಟನೆಯಾಗಿ ಹಲವಾರು ದಿನಗಳಾದರೂ, ರೈತರಿಗೆ ಯಾವುದೇ ಪರಿಹಾರ ಕೊಟ್ಟಿಲ್ಲವೆಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮನಗರದ ಜಲದಾಹ ನೀಗಿಸಲಿದೆ ನೆಟ್ಕಲ್ ಯೋಜನೆ!
ನಿರ್ಲಕ್ಷ್ಯಕ್ಕೆ ಆಕ್ರೋಶ: ತಾಲೂಕಿನ ತಿಟ್ಟಮಾರನಹಳ್ಳಿ ಬಳಿ ಕುಣಿಗಲ್ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಅಂಡರ್ ಪಾಸ್ ನಿರ್ಮಿಸುವ ಉದ್ದೇಶದಿಂದ ಮಾಜಿ ಜಿಪಂ ಸದಸ್ಯ ಟಿ.ಪಿ.ಪುಟ್ಟಸಿದ್ದೇಗೌಡರಿಗೆ ಸೇರಿದ ಸರ್ವೇ ನಂ. 360,61ರ ಭೂಮಿಯನ್ನು ಬಳಸಿಕೊಳ್ಳಲಾಗಿದೆ. ಕಾಮಗಾರಿ ಮುಕ್ತಾಯ ಮಾಡಬೇಕಾದರೆ ಹಾಗೂ ಅಂಡರ್ ಪಾಸ್ ಸಂಪರ್ಕಕ್ಕೆ ಈ ಭೂಮಿ ಅನಿವಾರ್ಯವಾಗಿದ್ದು, ಹೆದ್ದಾರಿ ಪ್ರಾಧಿಕಾರ ಸೇರಿದಂತೆ ಸಂಬಂಧಿಸಿದ ಹಲವರ ಮನವಿ ಮೇರೆಗೆ ಹಾಗೂ ಈ ಭಾಗದ ಸಾರ್ವಜನಿಕರ ಅನೂಕೂಲದ ಉದ್ದೇಶದಿಂದ ಭೂ ಮಾಲೀಕರು ತಮ್ಮ ಭೂಮಿಯಲ್ಲಿ ಅಂಡರ್ಪಾಸ್ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ನಡೆಯಲು ಅವಕಾಶ ನೀಡಿದ್ದರು.
ಈ ಮಧ್ಯೆ ಪರಿಹಾರ ವಿಳಂಬವಾದ ಹಿನ್ನೆಲೆಯಲ್ಲಿ ಭೂ ಮಾಲೀಕರು ತಮ್ಮ ಜಮೀನನ್ನು ಸುಪರ್ದಿಗೆ ಪಡೆಯಲು ನಿರ್ಧರಿಸಿದರು. ಆದರೆ, ಮುಂದಾಗುವ ಸಮಸ್ಯೆಯನ್ನು ಅರಿತು ಎಚ್ಚೆತ್ತ ಪೊಲೀಸ್ ಇಲಾಖೆ, ಹೆದ್ದಾರಿ ಪ್ರಾಧಿಕಾರಕ್ಕೆ ಪರಿಹಾರದ ಹಣ ನೀಡಲೂ ಮೂರು ತಿಂಗಳ ಕಾಲಾವಕಾಶ ಕೊಡಿಸಲಾಗುತ್ತು. ಆದರೆ, ಈ ಭರವಸೆ ಕೊಟ್ಟು ವರ್ಷ ಸಮೀಪಿಸುತ್ತಿದ್ದರೂ ಇದುವರೆಗೂ ಯಾವುದೇ ಪರಿಹಾರದ ಹಣ ಬಿಡುಗಡೆಯಾಗಿಲ್ಲ.
ತಮಿಳುನಾಡಿನ ಹೊಸೂರು ಉದ್ಧಾರ ಆಗಲು ಎಚ್‌ಡಿಕೆ ಕಾರಣ: ಸಂಸದ ಡಿ.ಕೆ.ಸುರೇಶ್
ಅಲೆದಾಡಿಸುತ್ತಿರುವ ಅಧಿಕಾರಿಗಳು: ಚನ್ನಪಟ್ಟಣದಿಂದ ಕುಣಿಗಲ್ ಮುಖ್ಯರಸ್ತೆಗೆ ಸಂಪರ್ಕಕ್ಕೆ ಪುಟ್ಟಸಿದ್ದೇಗೌಡರ ಭೂಮಿ ಸೇರಿದಂತೆ ಕೆಲವರ ಭೂಮಿ ಅತ್ಯಾವಶ್ಯಕವಾಗಿದೆ. ಭೂಮಾಲೀಕರು ಅಧಿಕಾರಿಗಳ ಮೇಲಿನ ಭರವಸೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಇಷ್ಟುದಿನ ಕಾದಿದ್ದರು. ಆದರೆ, ಪರಿಹಾರದ ಹಣ ಬಿಡುಗಡೆಗೆ ಅಲೆದಾಡಿಸುತ್ತಿರುವ ಅಧಿಕಾರಿಗಳ ನಡೆಯಿಂದ ಬೇಸತ್ತಿರುವ ಭೂಮಿ ಕಳೆದುಕೊಂಡ ರೈತರು ಇನ್ನೊಂದು ವಾರದ ಗಡುವು ನೀಡಿದ್ದು, ಅಷ್ಟರಲ್ಲಿ ಪರಿಹಾರದ ನೀಡದಿದ್ದರೆ, ಭೂಮಿಯನ್ನು ಪುನಃ ಸ್ವಾಧೀನ ಪಡಿಸಿಕೊಳ್ಳುವುದಾಗಿ ರೈತರಾದ ರಘು, ಬಾಬು, ಪ್ರಭಾಕರ್ ಎಚ್ಚರಿಕೆ ನೀಡಿದ್ದಾರೆ.