
ಹುಬ್ಬಳ್ಳಿ: ಇದಾಗಲೇ ಹಲವು ಕಡೆಗಳಲ್ಲಿ ಗುಲಾಬಿ ಆಟೋ ಅರ್ಥಾತ್ ಪಿಂಕ್ ಆಟೋ ಯೋಜನೆ ಜಾರಿಗೊಳಿಸಿದೆ ಸರ್ಕಾರ. ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಮತ್ತು ಮಹಿಳೆಯರಿಗೆ ಸ್ವಾವಲಂಬನೆ ಕಲ್ಪಿಸಲು ಪರಿಚಯಿಸಲಾದ ವಿಶೇಷ ಗುಲಾಬಿ ಬಣ್ಣದ ಆಟೋರಿಕ್ಷಾ ಸೇವೆಯಾಗಿದೆ. ಮಹಿಳೆಯರಿಗೆ ಹಾಗೂ ಹೆಣ್ಣುಮಕ್ಕಳಿಗೆ ಪ್ರಯಾಣದ ವೇಳೆ ಸುರಕ್ಷತೆ ಒದಗಿಸುವುದು ಮತ್ತು ನಿರ್ಗತಿಕ/ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಉದ್ಯೋಗ ಹಾಗೂ ಸ್ವಾವಲಂಬನೆ ಕಲ್ಪಿಸುವುದು ಇದರ ಉದ್ದೇಶವಾಗಿದೆ. • ಕ್ಷಿಣ ಕನ್ನಡ ಜಿಲ್ಲೆಯಲ್ಲಿ 'ರೋಟರಿ ಜಿಲ್ಲೆ 3181' ವತಿಯಿಂದ 'ಸಖಿ' ಮಹಿಳಾ ಸಬಲೀಕರಣ ಅಭಿಯಾನದಡಿ ಪಿಂಕ್ ಇ-ಆಟೋಗಳನ್ನು (ವಿದ್ಯುತ್ ಆಟೋ) ವಿತರಿಸಲಾಗುತ್ತಿದೆ. ಮಹಿಳೆಯರಿಗೆ ಉಚಿತ ಚಾಲನಾ ತರಬೇತಿ ಮತ್ತು ಆಟೋ ಖರೀದಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಬೆಂಗಳೂರಿನಲ್ಲಿಯೂ ಮಹಿಳಾ ಆಟೋ ಚಾಲಕಿಯರ ಜೀವನಾಧಾರಕ್ಕಾಗಿ ಪ್ರಾಯೋಗಿಕವಾಗಿ ಪಿಂಕ್ ಇ-ಆಟೋಗಳನ್ನು ಚಾಲನೆಗೆ ತರಲಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದಲೂ ಮಹಿಳೆಯರಿಗಾಗಿ ಪಿಂಕ್ ಆಟೋ ಯೋಜನೆ ಜಾರಿಯಲ್ಲಿದೆ.
ರಾಜ್ಯ ಸರ್ಕಾರ ಇದಕ್ಕಾಗಿ ನಾಲ್ಕು ಕೋಟಿ ರೂಪಾಯಿಗಳನ್ನು ಮೀಸಲಿಟ್ಟರೂ ಮಹಿಳೆಯರು ಯಾಕೋ ಮುಂದೆ ಬರುತ್ತಿಲ್ಲ ಎಂದು ವರದಿಯಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ 'ಪಿಂಕ್ ಆಟೋ' ಯೋಜನೆಗೆ ಶುರುವಿನಲ್ಲಿಯೇ ಮಹಿಳೆಯರ ಅರ್ಥಾತ್ ಫಲಾನುಭವಿಗಳ ಕೊರತೆ ಎದುರಾಗಿದೆ. ಈ ಎರಡೂ ನಗರಗಳಲ್ಲಿ 82 ವಾರ್ಡ್‌ಗಳಿಗೆ ತಲಾ ಒಂದು ಪಿಂಕ್ ಆಟೋ ವಿತರಿಸಲು ಪಾಲಿಕೆ 4 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಸದ್ಯ ಹಲವರ ಒತ್ತಾಯದ ಮೇರೆಗೆ ಆರು ಮಹಿಳೆಯು ಆಟೋ ಚಾಲನೆಗೆ ಅರ್ಜಿ ಸಲ್ಲಿಸಿದ್ದಾರಷ್ಟೇ.
ಮಹಿಳೆಯರೇ ಆಟೋ ಚಾಲನೆ ಮಾಡುವುದರಿಂದ ವಿದ್ಯಾರ್ಥಿನಿಯರು, ಹಿರಿಯ ಮಹಿಳೆಯರು ಸೇರಿದಂತೆ ಮಹಿಳಾ ಪ್ರಯಾಣಿಕರಲ್ಲಿ ಸುರಕ್ಷತೆಯ ಭಾವನೆ ಹೆಚ್ಚಲಿದೆ ಎಂಬುದು ಯೋಜನೆಯ ಆಶಯ. ಅದೇ ರೀತಿ, ಆಟೋ ಚಾಲನೆಗೆ ಆಸಕ್ತಿ ಹೊಂದಿರುವ ಮಹಿಳೆಯರಿಗೆ ಸ್ವಂತ ಉದ್ಯೋಗದ ಅವಕಾಶ ಕಲ್ಪಿಸುವ ಮೂಲಕ ಅವರ ಕುಟುಂಬಗಳ ಆರ್ಥಿಕ ಸ್ಥಿತಿಗೂ ನೆರವಾಗುವ ಉದ್ದೇಶವಿದೆ. ಈ ಮಹಿಳೆಯರ ದಾಖಲೆಗಳನ್ನು ಸಂಬಂಧಿಸಿದ ವಲಯ ಕಚೇರಿಗಳಲ್ಲಿ ಸಲ್ಲಿಸುವಂತೆ ಮೇಯರ್ ಸೂಚನೆ ನೀಡಿದ್ದಾರೆ. ಅಗತ್ಯ ದಾಖಲೆಗಳ ಪರಿಶೀಲನೆ ಹಾಗೂ ಅರ್ಹತೆಯ ದೃಢೀಕರಣದ ಬಳಿಕ ಪಿಂಕ್ ಆಟೋಗಳನ್ನು ವಿತರಿಸುವ ನಿರೀಕ್ಷೆಯಿದೆ.
"ಮಹಿಳಾ ಸಬಲೀಕರಣದ ಉದ್ದೇಶದಿಂದ ಮಹಾನಗರ ಪಾಲಿಕೆ ಈ ಯೋಜನೆಯನ್ನು ಜಾರಿಗೆ ತಂದಿದೆ. ಮಹಿಳೆಯರು ಸ್ವಂತ ಉದ್ಯೋಗದ ಮೂಲಕ ಸ್ವಾವಲಂಬಿಗಳಾಗಬೇಕು ಎಂಬುದು ನಮ್ಮ ಆಶಯ. ಇದು ಉಚಿತ ಯೋಜನೆಯಾಗಿದ್ದು, ಮಹಿಳೆಯರಿಗೆ ಮಾತ್ರ ಆಟೋಗಳನ್ನು ವಿತರಿಸಲಾಗುತ್ತದೆ. ಆಟೋಗಳನ್ನು ಮಹಿಳೆಯರೇ ಚಾಲನೆ ಮಾಡುವುದು ಕಡ್ಡಾಯವಾಗಿದ್ದು, ಬೇರೆಯವರಿಗೆ ಹಸ್ತಾಂತರಿಸಲು ಅವಕಾಶವಿಲ್ಲ" ಎಂದಿದ್ದಾರೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ದುರ್ಗಮ್ಮ ಬಿಜವಾಡ.
ಈ ಕುರಿತು ಮಾಹಿತಿ ನೀಡಿರುವ, ಉತ್ತರ ಕರ್ನಾಟಕ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ, "ಹುಬ್ಬಳ್ಳಿ ನಗರದಲ್ಲಿ ಸುಮಾರು 17 ಸಾವಿರ ಆಟೋಗಳಿವೆ. ನಮ್ಮ ಸಂಘವು ಮಹಿಳೆಯರನ್ನು ಗುರುತಿಸಿ, ಅವರಿಗೆ ವಾಹನ ಚಾಲನಾ ಪರವಾನಗಿ ಕೊಡಿಸುವ ನಿಟ್ಟಿನಲ್ಲಿ ಸಹಕರಿಸುತ್ತಿದೆ. ಮಹಾನಗರ ಪಾಲಿಕೆ ಪಿಂಕ್ ಆಟೋ ಯೋಜನೆ ಜಾರಿಗೆ ತಂದಿದ್ದರೂ, ಅರ್ಜಿ ಸಲ್ಲಿಸುವವರು ಇಲ್ಲ ಎಂಬ ಕಾರಣಕ್ಕೆ ಮೀಸಲಿಟ್ಟ ಹಣವನ್ನು ವಾಪಸ್ ಕಳುಹಿಸುವ ಪರಿಸ್ಥಿತಿ ಎದುರಾಗಿತ್ತು" ಎಂದಿದ್ದಾರೆ.