ಮಾನನಷ್ಟ ಮೊಕದ್ದಮೆ ಕೇಸ್‌ನಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯಗೆ ಹೈಕೋರ್ಟ್‌ ಬಿಗ್‌ ರಿಲೀಫ್‌!

Published : Nov 04, 2026, 04:15 PM IST
Siddaramaiah

ಸಾರಾಂಶ

2023ರ ಚುನಾವಣೆಗೂ ಮುನ್ನ ಕಾಂಗ್ರೆಸ್ ಬಿಡುಗಡೆ ಮಾಡಿದ್ದ 'ಕಮಿಷನ್ ರೇಟ್ ಕಾರ್ಡ್' ಜಾಹೀರಾತಿಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಈ ಮಹತ್ವದ ತೀರ್ಪು ನೀಡಿದೆ.

ಬೆಂಗಳೂರು (ನ.4): 2023ರ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಬಿಡುಗಡೆ ಮಾಡಿದ್ದ 'ಕಮಿಷನ್ ರೇಟ್ ಕಾರ್ಡ್' (Corruption Rate Card) ಜಾಹೀರಾತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ (Karnataka State BJP Unit) ಹೂಡಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್‌ (Karnataka High Court) ಬುಧವಾರ ವಜಾಗೊಳಿಸಿ ಆದೇಶಿಸಿದೆ: ಹೈಕೋರ್ಟ್‌ನ ಈ ಮಹತ್ವದ ತೀರ್ಪಿನಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಜಯ ಸಿಕ್ಕಂತಾಗಿದೆ.

ಕಳೆದ ವರ್ಷವಷ್ಟೇ ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ ತಡೆಯಾಜ್ಞೆ (Stay) ನೀಡಿದ್ದ ಹೈಕೋರ್ಟ್‌, ಇದೀಗ ಪ್ರಮುಖ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ (Justice M. Nagaprasanna) ಅವರಿದ್ದ ಏಕಸದಸ್ಯ ಪೀಠವು ಸಿದ್ಧರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿ, "ಅರ್ಜಿಯನ್ನು ಅನುಮತಿಸಲಾಗಿದೆ, ಪ್ರಕರಣವನ್ನು ರದ್ದುಗೊಳಿಸಲಾಗಿದೆ" ಎಂದು ತೀರ್ಪು ಪ್ರಕಟಿಸಿತು.

ಡಿ.ಕೆ. ಶಿವಕುಮಾರ್ ಹಾಗೂ ರಾಹುಲ್ ಗಾಂಧಿಗೂ ಸಿಕ್ಕಿತ್ತು ರಿಲೀಫ್

ಇದೇ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಜುಲೈ 4 ರಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಅಷ್ಟೇ ಅಲ್ಲದೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಸಲ್ಲಿಕೆಯಾಗಿದ್ದ ಕ್ರಿಮಿನಲ್ ವಿಚಾರಣೆಗೂ ಹೈಕೋರ್ಟ್ ಇದೇ ವರ್ಷದ ಜನವರಿಯಲ್ಲಿ ತಡೆಯಾಜ್ಞೆ ನೀಡಿತ್ತು. ಇದೀಗ ಸಿದ್ಧರಾಮಯ್ಯ ವಿರುದ್ಧದ ಅರ್ಜಿಯನ್ನೇ ಹೈಕೋರ್ಟ್ ಸಂಪೂರ್ಣವಾಗಿ ವಜಾಗೊಳಿಸಿದೆ.

ಬಿಜೆಪಿ ದಾಖಲಿಸಿದ್ದ ಪ್ರಕರಣದ ಹಿನ್ನೆಲೆ ಏನು?

2023 ರ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು (KPCC) ಸ್ಥಳೀಯ ಪತ್ರಿಕೆಗಳಲ್ಲಿ 'ಕಮಿಷನ್ ರೇಟ್ ಕಾರ್ಡ್' ಹೆಸರಿನಲ್ಲಿ ಜಾಹೀರಾತುಗಳನ್ನು ನೀಡಿ ಭಾರಿ ಪ್ರಚಾರ ನಡೆಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಬಿಜೆಪಿ ಘಟಕವು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿತ್ತು. 2023 ರಲ್ಲಿ ಮ್ಯಾಜಿಸ್ಟ್ರೇಟ್ ವಿಚಾರಣಾ ನ್ಯಾಯಾಲಯವು ಇದನ್ನು ವಿಚಾರಣೆಗೆ ತೆಗೆದುಕೊಂಡಿತ್ತು.

ಬಿಜೆಪಿ ತನ್ನ ದೂರಿನಲ್ಲಿ ಸರ್ಕಾರಿ ಇಲಾಖೆಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಹಾಗೂ ವರ್ಗಾವಣೆಗೆ ಬಿಜೆಪಿ ಸರ್ಕಾರವು ಇಂತಿಷ್ಟು 'ರೇಟ್‌ಗಳು' ಮತ್ತು 'ಕಮಿಷನ್‌ಗಳನ್ನು' ವಸೂಲಿ ಮಾಡುತ್ತಿದೆ ಎಂದು ಕಾಂಗ್ರೆಸ್ ನೀಡಿದ್ದ ಜಾಹೀರಾತುಗಳು ಸಂಪೂರ್ಣ ಸುಳ್ಳು. ಇವು ಆರೋಪಿಗಳ ಕಲ್ಪಿತ ಯೋಜನೆಯಾಗಿದ್ದು, ಬಿಜೆಪಿಯ ವರ್ಚಸ್ಸಿಗೆ ಭಾರಿ ಧಕ್ಕೆ ತಂದಿವೆ.

ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ಬಳಸುತ್ತಿದ್ದ ಪ್ರಸಿದ್ಧ 'ಡಬಲ್ ಇಂಜಿನ್ ಸರ್ಕಾರ' ಎಂಬ ಪದದ ಬದಲಾಗಿ ಕಾಂಗ್ರೆಸ್ ತನ್ನ ಪ್ರಚಾರದಲ್ಲಿ 'ಟ್ರಬಲ್ ಇಂಜಿನ್ ಸರ್ಕಾರ' (Trouble Engine Sarkar) ಎಂದು ಬಳಸಿತ್ತು. ಇದು ಬಿಜೆಪಿಯ ಹೆಸರು ಹಾಗೂ ಗೌರವಕ್ಕೆ ಧಕ್ಕೆ ತರುವ ಮತ್ತು ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ಅವಕಾಶಗಳನ್ನು ಕುಗ್ಗಿಸುವ ದುರುದ್ದೇಶದಿಂದ ಕೂಡಿದೆ ಎಂದು ಬಿಜೆಪಿ ಆರೋಪಿಸಿತ್ತು. ಆದರೆ, ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ಸಿದ್ಧರಾಮಯ್ಯ ಅವರ ವಿರುದ್ಧದ ಈ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ ತೀರ್ಪು ನೀಡಿದೆ.

PREV
Read more Articles on
click me!

Recommended Stories

ಕೆಜಿ ಹಳ್ಳಿ ಮೆಟ್ರೋ ಸ್ಟೇಷನ್‌ಗೆ ಅರೇಬಿಕ್ ಕಾಲೇಜು ಮೆಟ್ರೋ ನಿಲ್ದಾಣ ಎಂದು ಮರುನಾಮಕರಣ? ಸಿಎಂಗೆ ಜಮೀರ್‌ ಅಹ್ಮದ್‌ ಪತ್ರ
'ಪ್ರಾಣಿಗಳಲ್ಲ, ಪ್ರಯಾಣಿಕರ ಮೇಲೆ ದಯೆ ಇರಲಿ': ಬಡ ಜನರ ಹೊಟ್ಟೆ ಮೇಲೆ ಬಸ್‌ ಹತ್ತಿಸಿದ ಗ್ಯಾರಂಟಿ ಸರ್ಕಾರಕ್ಕೆ ಸಾರ್ವಜನಿಕರ ಹಿಡಿಶಾಪ!