ಪಶು ವೈದ್ಯಕೀಯ ಇಲಾಖೆಗೆ ಸಿಬ್ಬಂದಿ ಕೊರತೆ..!

By Kannadaprabha NewsFirst Published Oct 27, 2022, 8:00 AM IST
Highlights

ಪಾಲಿಕ್ಲಿನಿಕ್‌ ಸೇರಿದಂತೆ ಇಲಾಖೆಯಲ್ಲಿ ಶೇ. 50ರಷ್ಟು ಹುದ್ದೆಗಳು ಖಾಲಿ, ವೈದ್ಯರು, ತಾಂತ್ರಿಕ ಸಿಬ್ಬಂದಿ, ಡಿ ದರ್ಜೆ ಹುದ್ದೆಗಳು ಖಾಲಿ

ಧಾರವಾಡ(ಅ.27):  ಹವಾಮಾನ ಬದಲಾದಂತೆ ಕಾಲ-ಕಾಲಕ್ಕೆ ಜಾನುವಾರುಗಳಿಗೆ ಹೊಸ ಹೊಸ ರೋಗಗಳು ಕಾಡುತ್ತಿವೆ. ಇದರಿಂದ ದೊಡ್ಡ ಸಂಖ್ಯೆಯಲ್ಲಿ ಜಾನುವಾರುಗಳು ಮೃತಪಡುತ್ತಿವೆ. ಆದರೆ, ಅವುಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಜೀವ ಉಳಿಸಬೇಕಾದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಗೆ ವೈದ್ಯರ ಕೊರತೆ ಎದುರಾಗಿದೆ. ಧಾರವಾಡ ಜಿಲ್ಲೆಗೆ ಮಂಜೂರಾದ ಹುದ್ದೆಗಳ ಪೈಕಿ ಶೇ. 50ರಷ್ಟುಹುದ್ದೆಗಳು ಭರ್ತಿಯಾಗದೇ ಇರುವುದು ವ್ಯವಸ್ಥೆಗೆ ಹಿಡಿದ ಕನ್ನಡಿ.

ಜಿಲ್ಲೆಯಲ್ಲಿ ಇಲಾಖೆಗೆ ಸರ್ಕಾರ ಮಂಜೂರು ಮಾಡಿರುವ 449 ಹುದ್ದೆಗಳ ಪೈಕಿ 229 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, 220 ಹುದ್ದೆಗಳು ಖಾಲಿ ಇವೆ. ಅವುಗಳಲ್ಲೂ ಸಹ ಬೇರೆ ಬೇರೆ ಇಲಾಖೆ ಹಾಗೂ ಶಾಸಕರ, ಮಂತ್ರಿಗಳ ಆಪ್ತ ಸಹಾಯಕ ಹುದ್ದೆಗೆ ನಿಯೋಜನೆಯಾಗಿದ್ದಾರೆ. ವೈದ್ಯರು, ಪರಿವೀಕ್ಷಕರು ಹಾಗೂ ಇತರ ಸಿಬ್ಬಂದಿ ಕೊರತೆಯಿಂದ ಜಿಲ್ಲೆ ಜಾನುವಾರುಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದಂತಾಗಿದೆ. ಲಸಿಕೆ ಅಭಿಯಾನ, ಸಭೆಗಳಿಗೆ ಹಾಜರಾಗಿ ಜನಪ್ರತಿನಿಧಿಗಳಿಗೆ ಮಾಹಿತಿ ಒದಗಿಸುವುದು, ಆಕಸ್ಮಿಕವಾಗಿ ಜಾನುವಾರು ಮೃತಪಟ್ಟರೆ ಮಹಜರು ನಡೆಸಿ ವರದಿ ನೀಡುವುದು ಸೇರಿ ವಿಮೆ ದೃಢೀಕರಣ ಕೆಲಸವನ್ನು ವೈದ್ಯರು ಮಾಡಬೇಕಿದೆ. ಆದರೆ ಆ ಹುದ್ದೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ಖಾಲಿ ಇರುವುದರಿಂದ ಕಾಲುಬಾಯಿ ಜ್ವರ, ಚರ್ಮ ಗಂಟು ರೋಗ ಹಾಗೂ ಇತರ ಕಾಯಿಲೆಗಳ ನಿಯಂತ್ರಣ ಸವಾಲಿನ ಕೆಲಸವಾಗಿದೆ.

Latest Videos

ಈಶ್ವರಪ್ಪ ಬಾಯ್‌ಬಿಟ್ರೆ ಶಿವಮೊಗ್ಗದಲ್ಲಿ ಗಲಭೆ ಸೃಷ್ಟಿಯಾಗುತ್ತೆ: ಸಿ.ಎಂ.ಇಬ್ರಾಹಿಂ ಆರೋಪ

ಯಾವವ ಹುದ್ದೆ ಖಾಲಿ:

ಇಲಾಖೆಯ ಮಾಹಿತಿ ಪ್ರಕಾರ ಪಾಲಿಕ್ಲಿನಿಕ್‌ ಉಪನಿರ್ದೇಶಕರ ಹುದ್ದೆ, ಮುಖ್ಯ ಪಶು ವೈದ್ಯಾಧಿ​ಕಾರಿ (ವಿಸ್ತರಣೆ), ಮುಖ್ಯ ಪಶು ವೈದ್ಯಾಧಿ​ಕಾರಿ (ಆಸ್ಪತ್ರೆ) 3 ಹುದ್ದೆ, ಮುಖ್ಯ/ಹಿರಿಯ ಪಶು ವೈದ್ಯಾ​ಧಿಕಾರಿ (ವಿಸ್ತರಣೆ) 5, ಹಿರಿಯ/ಪಶು ವೈದ್ಯಾ​ಧಿಕಾರಿ 19, ಜಾನುವಾರು ಅಭಿವೃದ್ಧಿ ಅ​ಧಿಕಾರಿಗಳು 2, ಬೆರಳಚ್ಚುಗಾರ, ಜಾನುವಾರು ಅ​ಧಿಕಾರಿಗಳು 3, ಹಿರಿಯ ಪಶುವೈದ್ಯಕೀಯ ಪರೀಕ್ಷಕರು 12, ಪಶುವೈದ್ಯಕೀಯ ಪರೀಕ್ಷಕರು 19, ಕಿರಿಯ ಪಶುವೈದ್ಯಕೀಯ ಪರೀಕ್ಷಕರು 26, ಎಕ್ಸರೇ-ಟೆಕ್ನೀಷಿಯನ್‌ 1, ವಾಹನ ಚಾಲಕರು 5, ಡಿ ದರ್ಜೆ 119, ಡಿ ದರ್ಜೆ (ಪಾಲಿಕ್ಲಿನಿಕ್‌) 3 ಸೇರಿ ಒಟ್ಟು 220 ಹುದ್ದೆಗಳು ಖಾಲಿ ಇವೆ.

ಪಾಲಿ ಕ್ಲಿನಿಕ್‌ಗೂ ಕೊರತೆ:

ಸಿಬ್ಬಂದಿ ಕೊರತೆಯಿಂದ ಕೆಲವೆಡೆ 2ರಿಂದ 3 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳನ್ನು ಒಬ್ಬರೇ ನಿರ್ವಹಿಸುವ ಸ್ಥಿತಿ ಇದೆ. ಇಂತಹ ಕಡೆಗಳಲ್ಲಿ ರೈತರ ಸಮಸ್ಯೆಗೆ ಸ್ಪಂದಿಸಲು ತೆರಳುವಾಗ ಆಸ್ಪತ್ರೆಗೆ ಬೀಗ ಹಾಕುವುದು ಅನಿವಾರ್ಯ. ಅದೇ ಸಮಯದಲ್ಲಿ ಬೇರೆ ರೈತರು ಜಾನುವಾರು ತಂದರೆ ವೈದ್ಯರ ದಾರಿ ಕಾಯಲೇಬೇಕು. ಇನ್ನು ಕೆಲ ವರ್ಷಗಳ ಹಿಂದಷ್ಟೇ ಉದ್ಘಾಟನೆಗೊಂಡ ಪಾಲಿ ಕ್ಲಿನಿಕ್‌ಗೂ ಸಿಬ್ಬಂದಿ ಕೊರತೆ ಎದುರಾಗಿದೆ. ಸುಸಜ್ಜಿತ ಕಟ್ಟಡದಲ್ಲಿ ಆರಂಭವಾದ ಕ್ಲಿನಿಕ್‌ಗೆ ಉಪ ನಿರ್ದೇಶಕರ ನೇಮಕವಾಗಿಲ್ಲ. ಡಿ ದರ್ಜೆ ಸಿಬ್ಬಂದಿ ಕೊರತೆ ಇದ್ದ ಪರಿಣಾಮ ಮೂಳೆ ಮುರಿತದಂತಹ ಪ್ರಕರಣದಲ್ಲಿ ಎಕ್ಸ್‌ರೇಗೆ ಬೇರೆ ಕಡೆ ಕಳುಹಿಸುವಂತಾಗಿದೆ. ಪಾಲಿಕ್ಲಿನಿಕ್‌ನ 3 ವಿಭಾಗದಲ್ಲಿ ತಜ್ಞರ ಕಾರ್ಯ ನಿರ್ವಹಣೆಯಿಂದ ಅನುಕೂಲ ಆಗಿದೆ. ಕ್ಲಿನಿಕ್‌ಗೆ 4 ಡಿ ದರ್ಜೆ ಸಿಬ್ಬಂದಿ ಹುದ್ದೆಯಿದ್ದು, ಒಂದೇ ಭರ್ತಿ ಆಗಿದೆ. ಎಕ್ಸ್‌ರೇ ಹಾಗೂ ಪ್ರಯೋಗಾಲಯಕ್ಕೆ ಸಿಬ್ಬಂದಿ ಬೇಕಿದ್ದು, ವಾಹನ ಚಾಲಕ ಹುದ್ದೆ ಸಹ ಖಾಲಿ ಇದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಧಾರವಾಡದಲ್ಲಿ ಎಲ್ಲೆಂದರಲ್ಲಿ ಅಂದರ್ ಬಾಹರ್: ಶಾಲೆಗಳೇ ಪುಂಡ ಪೋಕರಿಗಳ ಟಾರ್ಗೆಟ್‌..!

ಇಲಾಖೆಯಲ್ಲಿ ಶೇ. 50ರಷ್ಟು ಹುದ್ದೆಗಳು ಖಾಲಿ ಇರುವುದರಿಂದ ಜಾನುವಾರುಗಳಿಗೆ ಕಾಡುತ್ತಿರುವ ರೋಗ ತಡೆಗೆ ಹಿನ್ನಡೆಯಾಗಲಿದೆ. ಸರ್ಕಾರ ಕೂಡಲೇ ಹುದ್ದೆಗಳನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡುವ ಮೂಲಕ ವೈದ್ಯರ ಒತ್ತಡ ಕಡಿಮೆ ಮಾಡಬೇಕು. ಜತೆಗೆ ಜಾನುವಾರುಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗುವಂತೆ ಮಾಡಬೇಕು ಎನ್ನುವುದು ಶಿಬಾರಗಟ್ಟಿರೈತ ವಿಠ್ಠಲ ಸುಂಕದ ಆಗ್ರಹ.

ಪಶುಸಂಗೋಪನೆ ಇಲಾಖೆಯಲ್ಲಿ ಶೇ. 50ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಕೆಲ ಸಮಯದಲ್ಲಿ ರೈತರಿಗೆ ಸಮರ್ಪಕ ಸೇವೆ ನೀಡಲು ವಿಳಂಬವಾಗುತ್ತಿದ್ದರೂ, ವೈದ್ಯರು ಉತ್ತಮ ಸೇವೆ ನೀಡುತ್ತಿದ್ದಾರೆ. ಸರ್ಕಾರ ನೇಮಕಾತಿ ಪ್ರಕ್ರಿಯೆ ನಡೆಸಿದ್ದು, ಕೆಲ ದಿನಗಳಲ್ಲೇ ಸಿಬ್ಬಂದಿ ಕೊರತೆ ನೀಗುವ ನಿರೀಕ್ಷೆ ಇದೆ ಅಂತ ಪಶು ಸಂಗೋಪನ ಇಲಾಖೆ ಉಪ ನಿರ್ದೇಶಕ ಉಮೇಶ ಕೊಂಡಿ ತಿಳಿಸಿದ್ದಾರೆ. 
 

click me!