ಬೇಡಿಕೆಯಂತೆ ಪೂರೈಕೆಯಾಗದ ರೆಮ್‌ಡಿಸಿವಿರ್ ಇಂಜೆಕ್ಷನ್| ಬೇಕಾಗಿದ್ದು 1,100, ಪೂರೈಕೆಯಾಗಿದ್ದು ಕೇವಲ 600 ಇಂಜೆಕ್ಷನ್| ಕಲಬುರಗಿಯಲ್ಲಿ ಸೋಂಕಿನ ಜೊತೆಗೇ ಸಾವಿನ ದರದಲ್ಲೂ ಏರಿಕೆ ಕಾಣುತ್ತಿರೋದು ಎಲ್ಲರನ್ನು ಆತಂಕಕ್ಕೆ ದೂಡಿದೆ|
ಶೇಷಮೂರ್ತಿ ಅವಧಾನಿ
ಕಲಬುರಗಿ(ಏ.24): ಜಿಲ್ಲೆಯಲ್ಲಿ ಕೊರೋನಾ ಸಾವಿನ ಪ್ರಕರಣಗಳು ಏಕಾಏಕಿ ಹೆಚ್ಚುತ್ತಿವೆ. ಶ್ವಾಸಕೋಶದ ಸೋಂಕಿನ ತೀವ್ರ ತೊಂದರೆ, ಮದುಮೇಹ, ಎದೆಯ ತೊಂದರೆ ಎಂದು ಕೊರೋನಾ ಸಾವಿನ ಸರಣಿ ಹಿಗ್ಗುತ್ತಿರೋದು ಆತಂಕ ಮೂಡಿಸಿದೆ.
ಬೆಂಗಳೂರಿನಂತೆಯೇ ವೇಗದಲ್ಲಿರುವ ಸೋಂಕು ಕಳೆದ ಬಾರಿಗಿಂತ ಹೆಚ್ಚಿಗೆ ಜನರ ಬಲಿ ಪಡೆಯಲಾರಂಭಿಸಿರೋದೇ ಚಿಂತೆಗೀಡುಮಾಡಿದೆ. 2020ನೇ ಸಾಲಿನಲ್ಲಿ ಇಡೀ ದೇಶದಲ್ಲೇ ಮೊದಲ ಸಾವು ಕಲಬರಗಿಯಲ್ಲಾಗಿತ್ತು, ಇಡೀ ವರ್ಷ ಸೋಂಕಿನ ಸಾವುನೋವಿನ ಸರಣಿ 300ಕ್ಕೆ ಬಂದು ನಿಂತಿತ್ತು. ಆದರೀಗ ಕಳೆದ 1 ತಿಂಗಳಲ್ಲೇ ನೂರಕ್ಕೂ ಹೆಚ್ಚು ಸಾವು ಸಂಭವಿಸಿದ್ದು ಸಾವಿನ ಗ್ರಾಫ್ ಬಿಗ್ ಜಂಪ್ ಮಾಡಿದೆ. ಕಳೆದ 1 ವಾರದಲ್ಲೇ 40 ಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಇನ್ನಾದ್ರೂ ಕಲಬುರಗಿಯತ್ತ ಬರ್ತಾರಾ ಜಿಲ್ಲಾ ಉಸ್ತುವಾರಿ ಸಚಿವರು?
ಸಾವು ನೋವಿಗೇನು ಕಾರಣ:
ಕೊರೋನಾ ಸೋಂಕಿಗೆ ಅದೆಷ್ಟೇ ಜನ ತೆರೆದುಕೊಂಡರು ಪರವಾಗಿಲ್ಲ, ಸಾವು ನೋವಿನ ಪ್ರಮಾಣ ಹೆಚ್ಚಬಾರದೆಂಬುದು ಮಹತ್ವದ ಸಂಗತಿ. ಆದರೆ ಕಲಬುರಗಿಯಲ್ಲಿ ಸೋಂಕಿನ ಜೊತೆಗೇ ಸಾವಿನ ದರದಲ್ಲೂ ಏರಿಕೆ ಕಾಣುತ್ತಿರೋದು ಎಲ್ಲರನ್ನು ಆತಂಕಕ್ಕೆ ದೂಡಿದೆ. ಜಿಮ್ಸ್‌ನಲ್ಲಿರುವ ವೈದ್ಯರು, ದಾದಿಯರೂ ರೋಗಿಯ ಚಿಕಿತ್ಸೆಗೆ ಬರಲೇ ಇಲ್ಲ, ಅಲಕ್ಷತನ ತುಂಬ ಇದೆ ಎಂದು 2 ದಿನಗಳ ಹಿಂದಷ್ಟೇ ರೋಗಿಯ ಸಹೋದರರು, ಬಂಧುಗಳು ದೂರುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲಿ ರೆಮ್‌ಡಿಸಿವಿರ್ ಇಂಜೆಕ್ಷನ್ ಕೊರತೆ ಬಹುವಾಗಿ ಕಾಡುತ್ತಿದೆ ಎಂಬುದನ್ನು ವೈದ್ಯರೇ ಹೇಳುತ್ತಿದ್ದಾರೆ. ಸಿಟಿ ಸ್ಕ್ಯಾನ್‌ನಲ್ಲಿ ಕೌಂಟ್ 10ಕ್ಕಿಂತ ಕಮ್ಮಿಯಾಗಲ್ಲಿ ಅಂತಹವರಿಗೆ ರೆಮ್‌ಡಿಸಿವಿರ್ ಇಂಜೆಕ್ಷನ್ ನೀಡಲೇಬೇಕು. ಕಲಬುರಗಿಯಲ್ಲಿ ಇಂತಹ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದರೂ ಇಂಜೆಕ್ಷನ್ ಕೊರತೆ ಕಾಡುತ್ತಿದ್ದು ಇದೂ ಮರಣ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂಬ ಮಾತುಗಳಿವೆ.
ರೆಮ್‌ಡಿಸಿವೀರ್ ಇಂಜೆಕ್ಷನ್ ಬರ:
ಏ.20ರಂದು ರೆಮ್‌ಡಿಸಿವಿರ್ ಇಂಜೆಕ್ಷನ್ ಬೇಕೆಂದು ಇಲ್ಲಿಂದ ಔಷಧಿ ನಿಯಂತ್ರಕರ ಕಚೇರಿಯಿಂದ ಪ್ರಸ್ತಾವನೆ ಬೆಂಗಳೂರಿಗೆ ಹೋದರೂ ಸಮಯಕ್ಕೆ ಸರಿಯಾಗಿ ಅವು ಪೂರೈಕೆ. ಆಗುತ್ತಿಲ್ಲವೆಂಬುದೇ ದುರಂತ! ಈ ವಿಚಾರ ಸಭೆಯಲ್ಲಿ ಚರ್ಚೆಯಾಗುತ್ತದೆ, ಸಂಸದರು ವಾರ್ ರೂಮ್ ಹೋಗಿ ಇಂಜೆಕ್ಷನ್ ರವಾನೆಯಾಗುವಂತೆ ನೋಡಿಕೊಳ್ಳುತ್ತಾರೆ, ಅದೂ ಬೇಕಾಗಿದ್ದು 1100 ವಯಲ್, ಪೂರೈಕೆಯಾಗಿದ್ದು ಕೇವಲ 600 ವೈಯಲ್! ವೈದ್ಯಕೀಯ ತುರ್ತು ಸಂದರ್ಭ ಇದಾಗಿರುವಾಗ ಅಗತ್ಯ ಔಷಧಿ, ಇಂಜೆಕ್ಷನ್ ಪೂರೈಸೋದು ಸರ್ಕಾರದ ಜವಾಬ್ದಾರಿಯಾದರೂ ಆ ಕೆಲಸಕ್ಕೂ ಅವರಿವರ ಶಿಫಾಸರು ಬೇಕೆ? ಕಲಬುರಗಿ ಮಟ್ಟಿಗೆ ಇದು ಅನಿವಾರ್ಯವೆ? ರೋಗಿಗಳು ಸಾವು ನೋವಲ್ಲಿ ಒದ್ದಾಡುತ್ತಿರುವಾಗ ಇಂಜೆಕ್ಷನ್ ಪೂರೈಕೆ ಸರಿಯಾಗಿ ಆಗದೆ ಹೋದರೆ ಹೇಗೆ? ಎಂಬ ಮಾತುಗಳು ಕೇಳಿಬರುತ್ತಿವೆ.
ಕಲಬುರಗಿ: ಕಾರಿನಲ್ಲೇ ಮೃತಪಟ್ಟ ಕೊರೋನಾ ಸೋಂಕಿತ
ಎಕ್ಸಪೈರಿ ದಿನಾಂಕ ಮುಂದೂಡಿದ ಕಂಪನಿ:
ಕಲಬುರಗಿಯಲ್ಲಿ ರೆಮ್‌ಡಿಸಿವೀರ್ ಇಂಜೆಕ್ಷನ್ ಕಾಳಸಂತೆ ಹೆಚ್ಚುತ್ತಿದೆ. ಏತನ್ಮಧ್ಯೆ ಕಂಪನಿಯವರು ಈ ಇಂಜೆಕ್ಷನ್ ಎಕ್ಸಪೈರಿ ದಿನಾಂಕ 6 ತಿಂಗಳಕ್ಕೆ ಮುಂದೂಡಿ ಮಾಹಿತಿ ನೀಡಿದ್ದಾರೆಂದು ಇಲ್ಲಿನ ಎಡಿಸಿ ಗೋಪಾಲ ಬಂಡಾರಿ ಹೇಳಿದ್ದಾರೆ. ಹೀಗಾಗಿ ಇಂಜೆಕ್ಷನ್ ವಯಲ್‌ಗಳ ಮೇಲೆ ಅಚ್ಚಾಗಿದ್ದ ಎಕ್ಸಪೈರಿ ದಿನಾಂಕದ ಮೇಲೆ ಬದಲಾದ ದಿನಾಂಕದ ಸ್ಟಿಕ್ಕರ್ ಮೆತ್ತಲಾಗುತ್ತಿದೆ. ಇಂತಹ ಇಂಜೆಕ್ಷನ್ ವಯಲ್‌ಗಳೇ ಇದೀಗ ಎಲ್ಲೆಡೆ ಕಂಡು ಬರುತ್ತಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ಪರವಾಗಿಲ್ಲ ಎನ್ನಬಹುದಾದರೂ ಖಾಸಗಿಯಲ್ಲಿ ಚಿಕಿತ್ಸೆಗೆ ರೆಮ್ ಡಿಸಿವೀರ್ ಇಂಜೆಕ್ಷನ್ ಬೇಕೆಂದಾದರೆ ಕಾಳಸಂತೆಯಲ್ಲಿಯೇ ಅದನ್ನು 15 ರಿಂದ 18 ಸಾವಿರ ರು ತೆತ್ತು ಜನ ಖರೀದಿಸುವಂತಾಗಿದೆ.
ಆನ್‌ಲೈನ್‌ನಲ್ಲಿ ರೆಮ್‌ಡಿಸಿವೀರ್ ಪೂರೈಸಲಿ
ಕೊರೋನಾ ತುರ್ತು ಚಿಕಿತ್ಸೆಗೆ ರೆಮ್‌ಡೆಸಿವಿರ್ ಇಂಜೆಕ್ಷನ್ ಅತ್ಯಗತ್ಯವಾಗಿದ್ದು ಇದರ ಕಾಳಸಂತೆ ತಪ್ಪಿಸಲು ಸರ್ಕಾರ ಇದನ್ನು ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಲಿ. ಸೋಂಕಿತರ ಮೊಬೈಲ್ ನಂಬರ್‌ಗೆ ಈ ಇಂಜೆಕ್ಷನ್ ಖರೀದಿಸುವಂತಹ ಯೋಜನೆ ರೂಪಿಸಲಿ, ಇದರಿಂದ ಅಗತ್ಯವಿದ್ದವರಿಗೆ ಮಾತ್ರ ಇಂಜೆಕ್ಷನ್ ಲಭ್ಯವಾಗುತ್ತದೆ. ಕಾಳಸಂತೆ ತಪ್ಪಿಸಬಹುದೆಂದು ಯೂನೈಟೆಡ್ ಆಸ್ಪತ್ರೆ ವ್ಯವಸ್ಥಾಪಕ ಡಾ. ವಿಕ್ರಂ ಸಿದ್ದಾರೆಡ್ಡಿ ಹೇಳುತ್ತಾರೆ.