ಕೊಪ್ಪಳ: ಕೈಕೊಟ್ಟಮಳೆ, ನಗರಗಳತ್ತ ಗುಳೆ ಹೊರಟ ರೈತರು!

By Kannadaprabha News  |  First Published Jun 26, 2023, 5:20 AM IST

  ಮುಂಗಾರು ಮಳೆ ಕೈ ಕೊಟ್ಟಪರಿಣಾಮ ತಾಲೂಕಿನ ಚಿಕ್ಕ ತಾಂಡಾದ 300ಕ್ಕೂ ಹೆಚ್ಚು ಜನ ಮೈಸೂರು, ಮಂಡ್ಯ ಜಿಲ್ಲೆಗಳಿಗೆ ಗುಳೆ ಹೋಗಿದ್ದು, ತಾಂಡಾ ಜನರಿಲ್ಲದೇ ಬಿಕೋ ಎನ್ನುತ್ತಿದೆ.


ಎಂ. ಪ್ರಹ್ಲಾದ

ಕನಕಗಿರಿ (ಜೂ.26) :  ಮುಂಗಾರು ಮಳೆ ಕೈ ಕೊಟ್ಟಪರಿಣಾಮ ತಾಲೂಕಿನ ಚಿಕ್ಕ ತಾಂಡಾದ 300ಕ್ಕೂ ಹೆಚ್ಚು ಜನ ಮೈಸೂರು, ಮಂಡ್ಯ ಜಿಲ್ಲೆಗಳಿಗೆ ಗುಳೆ ಹೋಗಿದ್ದು, ತಾಂಡಾ ಜನರಿಲ್ಲದೇ ಬಿಕೋ ಎನ್ನುತ್ತಿದೆ.

Tap to resize

Latest Videos

undefined

ಈಗ ಇಲ್ಲಿ ಮುಂಗಾರು ಹಂಗಾಮಿನ ಚಟುವಟಿಕೆ ಕಾಣಿಸುತ್ತಿಲ್ಲ. ಹೊಲ, ತೋಟಗಳಲ್ಲಿನ ಕೊಳವೆಬಾವಿಯ ಅಂತರ್ಜಲ ಕುಸಿತಗೊಂಡಿದ್ದು, ಹತ್ತಿ ಪ್ಲಾಟ್‌ಗಳು ಹಾಳಾಗಿವೆ. ಪ್ರತಿ ಎಕರೆಗೆ .40ರಿಂದ 45 ಸಾವಿರ ನಷ್ಟವಾಗಿದೆ. ಕೃಷಿ ಚಟುವಟಿಕೆ ನಡೆಸೋಣ ಎಂದರೆ ಮಳೆಯಿಲ್ಲ. ಇಲ್ಲಿಯ ಜನಜೀವನ ನಡೆಸಲು ಕಷ್ಟವಾಗಿದೆ. ಈಗಾಗಲೇ ಬೋರ್‌ವೆಲ್‌ ನಂಬಿ ಹತ್ತಿ ಪ್ಲಾಟ್‌ಗೆ ಮುಂದಾಗಿದ್ದ ರೈತರಿಗೆ ಆರ್ಥಿಕ ಹೊಡೆತ ಬಿದ್ದಿದ್ದರಿಂದ ಗುಳೆ ಹೋಗುವುದು ಅನಿವಾರ್ಯವಾಗಿದೆ.

ಲಿಂಗಸುಗೂರು: ಗುಳೆ ಜನರ ಮೊಗ​ದಲ್ಲಿ ಕಳೆ ತಂದ ಖಾತ್ರಿ

ಕೂಲಿಗಾಗಿ ಅರಸಿ ಪ್ರತಿವರ್ಷ ತಾಂಡಾ ನಿವಾಸಿಗಳು ಗುಳೆ ಹೋಗುವುದು ಸಾಮಾನ್ಯವಾಗಿದೆ. 20 ದಿನಗಳ ಹಿಂದೆ ಸತತ ಎರಡು ವಾರ ತಾಂಡಾ ಜನಕ್ಕೆ ನರೇಗಾ ಕೆಲಸ ನೀಡಲಾಗಿದ್ದರೂ ಮತ್ತೆ ವಲಸೆ ಹೋಗಿದ್ದಾರೆ. ಇಲ್ಲಿಂದ ಮೈಸೂರು, ಮಂಡ್ಯದ ಕಡೆ ಹೋಗಿರುವ ಕಾರ್ಮಿಕರಿಗೆ ಕಬ್ಬು ಕಡಿಯುವ ಕೆಲಸ ಇಲ್ಲವಾಗಿದೆ. ಏಕೆಂದರೆ ಕೆಆರ್‌ಎಸ್‌ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಕೇವಲ ಕುಡಿಯಲು ಮಾತ್ರ ನದಿ ನೀರು ಉಪಯೋಗಿಸಲಾಗುತ್ತಿದೆ. ನದಿಯಿಂದ ಬೆಳೆಗೆ ನೀರು ಬಿಡದ ಕಾರಣ ಅನೇಕ ರೈತರ ಕಬ್ಬು ಹಾಳಾಗಿದೆ. ಇಲ್ಲಿಂದ ಗುಳೆ ಹೋದವರು ಅಲ್ಲಿ ಕೆಲಸವಿಲ್ಲದೇ ಕೈ ಕಟ್ಟಿಕುಳಿತಿದ್ದಾರೆ. ನೂರಕ್ಕೆ 50 ಜನರಿಗೆ ಮಾತ್ರ ಕೆಲಸ ಸಿಗುತ್ತಿದ್ದು, ಇನ್ನೂಳಿದವರು ಖಾಲಿ ಕೂರುವಂತಾಗಿದೆ. ದಿನವಿಡಿ ಕೆಲಸ ಮಾಡಿದರೆ .400 ಕೂಲಿ ಸಿಗುತ್ತಿದೆ ಎಂದು ಗ್ರಾಪಂ ಮಾಜಿ ಸದಸ್ಯ ಭೀಮಣ್ಣ ಲಮಾಣಿ ತಿಳಿಸಿದರು.

ಕಾರ್ಮಿಕರು ತಮ್ಮ ಗಂಟು ಮೂಟೆಯೊಂದಿಗೆ ಗುಳೆ ಹೋದ ಪಾಲಕರ ಜತೆ ಮಕ್ಕಳು ಕೂಡಾ ಹೋಗಿದ್ದಾರೆ. ಈ ಹಿಂದೆ ಗುಳೆ ಹೋದಾಗಲೂ ಮಕ್ಕಳನ್ನು ಶಾಲೆ ಬಿಡಿಸಿ ಕರೆದುಕೊಂಡು ಹೋಗಿದ್ದರು. ಈಗ ಅದು ಮತ್ತೆ ಮುಂದುವರಿದಿದ್ದು, ತಾಂಡಾದಲ್ಲಿ ಶಿಕ್ಷಣ ಕುಂಠಿತವಾಗಲು ಕಾರಣವಾಗಿದೆ.

ವಿಜಯಪುರ ತಾಂಡಾಗಳಲ್ಲಿ ವಿಶಿಷ್ಟ ಹಬ್ಬ, ವರ್ಷಕ್ಕೊಮ್ಮೆ ಮಾತ್ರ ಗಂಡು ಮಕ್ಕಳಿಗೆ ನಾಮಕರಣ!

ಮಳೆಯಿಲ್ಲದ ಕಾರಣ ತಾಂಡಾದ ಜನ ಮೈಸೂರು, ಮಂಡ್ಯಕ್ಕೆ ಗುಳೆ ಹೋಗಿದ್ದಾರೆ. ಟನ್‌ ಕಬ್ಬು ಕಡಿದು ಲೋಡ್‌ ಮಾಡಿದರೆ .400 ಕೂಲಿ ಸಿಗುತ್ತಿದೆ. 2 ವಾರ ನರೇಗಾ ಕೆಲಸ ನೀಡಿರುವ ಕಾರ್ಮಿಕರಿಗೆ ಅರ್ಧ ಕೂಲಿ ಹಣ ಪಾವತಿಸಿಲ್ಲ. ತಾಂಡಾ ಜನರ ಬದುಕು ದುಸ್ತರವಾಗಿದೆ. ಮಳೆ ಇಲ್ಲದ ಕಾರಣ ಹತ್ತಿ ಪ್ಲಾಟ್‌ ನಾಶವಾಗಿದ್ದು, ಅಧಿಕಾರಿಗಳು ತಾಂಡಾಕ್ಕೆ ಭೇಟಿ ನೀಡಿ, ಪರಿಶೀಲಿಸಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಕ್ರಮ ಕೈಗೊಳ್ಳಬೇಕು.

ಶಿವಪ್ಪ ಚವ್ಹಾಣ ತಾಂಡಾ ನಿವಾಸಿ

click me!